Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮಿತಿಮೀರಿದ ಸ್ಪರ್ಧೆ, ಆಕಾಂಕ್ಷೆ-ನಿರೀಕ್ಷೆಗಳೇ ಒತ್ತಡಗಳ ಮೂಲ: ಡಾ.ಪಿ.ವಿ.ಭಂಡಾರಿ

ಕಾಂತಾವರ (ಬೆಳುವಾಯಿ) ಇಂದು ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರನ್ನೂ ಒತ್ತಡವು ಬಾಧಿಸುತ್ತಿದ್ದು, ಸರ್ವವ್ಯಾಪಿಯಾಗಿರುವ ಈ ಒತ್ತಡದ ನಿರ್ವಹಣೆ ಬಗ್ಗೆಯೇ ಇಂದು ಆದ್ಯತೆ ನೀಡಬೇಕಾಗಿದೆ. ಇನ್ನೊಬ್ಬರೊಂದಿಗೆ ನಮ್ಮನ್ನು ಹೋಲಿಸಿಕೊಳ್ಳುವುದು, ನಮ್ಮ ಇತಿಮಿತಿಯನ್ನು ದಾಟಿ ಸ್ಪರ್ಧೆಗಿಳಿಯುವುದು ಮತ್ತು ಮಿತಿಮೀರಿದ ಆಕಾಂಕ್ಷೆ, ನಿರೀಕ್ಷೆಗಳೇ ನಮ್ಮ ಎಲ್ಲಾ ಮಾನಸಿಕ ಒತ್ತಡಗಳಿಗೆ ಮೂಲ ಕಾರಣಗಳಾಗಿವೆ ಎಂದು ಉಡುಪಿ ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಸ್ಮಾರ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಮತ್ತು ಖ್ಯಾತ ಮನೋವಿಜ್ಞಾನಿಗಳೂ ಆದ ಡಾ.ಪಿ.ವಿ.ಭಂಡಾರಿ ಅವರು ಹೇಳಿದರು.

ಕಾಂತಾವರದ ಕನ್ನಡ ಭವನದಲ್ಲಿ ಜನವರಿ 28ರಂದು ಅಲ್ಲಮಪ್ರಭು ಪೀಠದಿಂದ ನಡೆದ ‘ಅನುಭವದ ನಡೆ ಅನುಭಾವದ ನುಡಿ’ 73ನೇ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಒತ್ತಡ ಮತ್ತು ಸಮಾಜ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಡಾ.ಭಂಡಾರಿ ಮಾತನಾಡಿದರು.

ಹೆತ್ತವರು ಮತ್ತು ಶಿಕ್ಷಕರು ಈಗ ಬಾಲ್ಯದಲ್ಲಿಯೇ ಮಕ್ಕಳ ಮೇಲೆ ಇಲ್ಲದ ಒತ್ತಡವನ್ನು ಹಾಕುತ್ತಿದ್ದಾರೆ. ಶಾಲೆಗಳೆಲ್ಲ ಅಂಕಗಳನ್ನು ತಯಾರಿಸುವ ಯಂತ್ರಗಳಾಗಿವೆಯೇ ವಿನಹ ಮಕ್ಕಳ ಭಾವನೆಗಳಿಗೆ ಅಲ್ಲಿ ಬೆಲೆಯೇ ಇರುವುದಿಲ್ಲ. ಶಿಕ್ಷಕರು ಹುಡುಕುವುದು ಮಕ್ಕಳ ತಪ್ಪುಗಳನ್ನೇ ಹೊರತು, ಪ್ರತೀ ಮಗುವಿನಲ್ಲಿರುವ ವಿಶೇಷ ಶಕ್ತಿಯನ್ನು ಯಾರೂ ಗಮನಿಸುವುದಿಲ್ಲ. ಗಮನಿಸಿದರೂ ಹೆತ್ತವರು, ಶಿಕ್ಷಕರು ಅದನ್ನು ಪ್ರೋತ್ಸಾಹಿಸುವುದಿಲ್ಲ. ಹೀಗಾಗಿ ಹೆತ್ತವರು ಮತ್ತು ಶಿಕ್ಷಕರ ಆಕಾಂಕ್ಷೆಗಳಿಗೆ ಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ಪಿ.ವಿ.ಭಂಡಾರಿ ತಿಳಿಸಿದರು.

ಹದಿಹರೆಯ ಒಂದು ವಿಚಿತ್ರವಾದ ವಯಸ್ಸು. ಕ್ರಾಂತಿಕಾರಿ ಮನೋಭಾವ, ಕುತೂಹಲ, ಪ್ರಯೋಗಶೀಲತೆ, ಆಕರ್ಷಣೆಗಳೆಲ್ಲ ಸಹಜ. ಆದರೆ ಇವೆಲ್ಲ ಹೆಚ್ಚಾದರೂ ಕೂಡಾ ಅದು ಖಿನ್ನತೆಗೆ ದಾರಿಯಾಗುತ್ತದೆ. ಇಂದು ಹದಿಮೂರರಿಂದ ಹತ್ತೊಂಭತ್ತು ವರ್ಷದೊಳಗಿನ ಯುವಜನರು ಒತ್ತಡ, ಖಿನ್ನತೆಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಈ ಸಂಖ್ಯೆ ಏರುತ್ತಲೇ ಹೋಗುತ್ತಿರುವುದು ಖಿನ್ನತೆಯ ದುಷ್ಪರಿಣಾಮವನ್ನು ಸೂಚಿಸುತ್ತಿದೆ. ಮಧ್ಯ ವಯಸ್ಸಿನಲ್ಲಿ ಕೌಟುಂಬಿಕವಾಗಿಯೂ ಈಗ ಸಣ್ಣಪುಟ್ಟ ಕಾರಣಗಳಿಗಾಗಿ ಸಂಬಂಧಗಳು ಮುರಿದು ಬೀಳುತ್ತಿವೆ. ಇದರ ಜೊತೆಗೆ ವೃದ್ಧರು, ಸಲಿಂಗಿಗಳು, ತೃತೀಯ ಲಿಂಗಿಗಳು ಕೂಡಾ ವಿಭಿನ್ನ ರೀತಿಯ ಒತ್ತಡಗಳಿಂದ ಬಳಲುತ್ತಿರುತ್ತಾರೆ ಎಂದವರು ಆತಂಕ ವ್ಯಕ್ತಪಡಿಸಿದರು.

ಮೂಢನಂಬಿಕೆ ಮತ್ತು ಒತ್ತಡಕ್ಕೆ ಬಹಳ ನಿಕಟ ಸಂಬಂಧವಿದ್ದು, ಎಲ್ಲಾ ಧರ್ಮಗಳಲ್ಲಿರುವ ಮೂಢನಂಬಿಕೆಗಳನ್ನು ತ್ಯಜಿಸಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಕುಟುಂಬ ವೈದ್ಯರೊಂದಿಗೆ ಎಲ್ಲ ಸಮಸ್ಯೆಗಳನ್ನು ಮುಚ್ಚಿಡದೆ ಹೇಳಿಕೊಳ್ಳುವುದು, ಪ್ರತಿದಿನ ಒಂದು ಗಂಟೆಯಾದರೂ ವ್ಯಾಯಾಮಕ್ಕಾಗಿ ವ್ಯಯಿಸುವುದು, ಕಾಯಿಲೆಗಳನ್ನು ಜೋಪಾನವಾಗಿ ಆರೈಕೆ ಮಾಡಿಕೊಳ್ಳುತ್ತಾ ದಿನದಲ್ಲಿ ಹತ್ತು ನಿಮಿಷವಾದರೂ ಧ್ಯಾನ ಅಥವಾ ಸುಮ್ಮನಿದ್ದು ಬಿಟ್ಟರೆ ಒತ್ತಡಗಳನ್ನು ಸುಲಭವಾಗಿ ನಿರ್ವಹಿಸಬಹುದು ಎಂದು ಡಾ.ಪಿ.ವಿ.ಭಂಡಾರಿ ತಿಳಿಸಿರು.

ಡಾ.ಭಂಡಾರಿಯವರನ್ನು ಇದೇ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಅಲ್ಲಮಪ್ರಭು ಪೀಠದ ಪ್ರಧಾನ ನಿರ್ದೇಶಕರಾದ ಡಾ.ನಾ.ಮೊಗಸಾಲೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಯಶೋಧರ್.ಪಿ.ಕರ್ಕೇರಾ ವಂದಿಸಿದರು. ಪೀಠದ ನಿರ್ದೇಶಕರಾದ ಕಲ್ಲೂರು ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ಬಾಬು ಶೆಟ್ಟಿ ನಾರಾವಿ ಅಲ್ಲಮನ ವಚನಗಳನ್ನು ಹಾಡಿದರು.

Leave a Reply

Your email address will not be published. Required fields are marked *