Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಸಿದ್ಧೇಶ್ವರ ಸ್ವಾಮೀಜಿಯಂಥವರು ಸನ್ಯಾಸಿಗಳಿಗೆ ಮಾದರಿಯಾಗಬೇಕು

* ಶ್ರೀರಾಮ ದಿವಾಣ

# ಸನ್ಯಾಸಿಗಳು, ಸ್ವಾಮೀಜಿಗಳು, ಮಠಾಧೀಶರು, ಸಾಧು ಸಂತರು ಹೇಗಿರಬಾರದು ಎನ್ನುವುದಕ್ಕೆ ಅನೇಕ ಮಂದಿ ಸಿಗುತ್ತಾರೆ. ಹೇಗಿರಬೇಕು ಎನ್ನುವುದಕ್ಕೆ ಮಾತ್ರ ಕೆಲವೇ ಕೆಲವು ಮಂದಿ ಸಿಗುತ್ತಾರೆ. ವಿಜಯಪುರ (ಬಿಜಾಪುರ)ದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿಯವರು ಸನ್ಯಾಸಿಗಳು ಹೇಗಿರಬೇಕು ಎನ್ನುವುದಕ್ಕೆ ತಾಜಾ ಉದಾಹರಣೆಯಾಗಿದ್ದಾರೆ. ಇವರಂಥವರು ಇನ್ನೂ ಕೆಲವರು ಇದ್ದಾರೆ ಎನ್ನುವುದೇ ಸಮಾಧಾನ.

ಸಿದ್ಧೇಶ್ವರ ಸ್ವಾಮೀಜಿಗಳಿಗೆ, ಭಾರತ ಸರಕಾರದ ಪ್ರತಿಷ್ಠಿತ ಮತ್ತು ಅತ್ಯುನ್ನತ ಪದ್ಮ ಪ್ರಶಸ್ತಿಗಳಲ್ಲಿ ಒಂದಾದ ‘ಪದ್ಮಶ್ರೀ’ ಪ್ರಶಸ್ತಿ ಘೋಷಣೆಯಾಯಿತು. ಘೋಷಣೆಯಾದ ಮರುದಿನವೇ ‘ನಾನೊಬ್ಬ ಸನ್ಯಾಸಿ, ನನಗಿದರಲ್ಲಿ ಆಸಕ್ತಿಯೂ ಇಲ್ಲ, ಅಗತ್ಯವೂ ಇಲ್ಲ’ ಎಂದು ಹೇಳಿ ಪ್ರಶಸ್ತಿಯನ್ನು ಗೌರವಪೂರ್ವಕವಾಗಿಯೇ ನಿರಾಕರಿಸಿದರು. ಸಿದ್ಧೇಶ್ವರ ಸ್ಮಾಮೀಜಿಯಂಥವರು ಸನ್ಯಾಸಿಗಳಿಗೆ ಮಾದರಿಯಾಗಬೇಕು.

ಪ್ರಸ್ತುತ ಸನ್ಯಾಸಿಗಳೆನೆಸಿಕೊಂಡವರು, ಸ್ವಾಮೀಜಿಗಳೆನಿಸಿಕೊಂಡವರು ಪ್ರಶಸ್ತಿ, ಸನ್ಮಾನ ಸಹಿತ ಎಲ್ಲಾ ರೀತಿಯ ಬಿರುದು ಬಾವಲಿಗಳನ್ನು, ಗೌರವ ಪುರಸ್ಕಾರಗಳನ್ನು, ಆಡಂಬರ, ಅದ್ದೂರಿತನಗಳನ್ನು ಪಡೆಯಲು, ಅನುಭವಿಸಲು ಹಾತೊರೆಯುತ್ತಿರುವುದು, ನಾ ಮುಂದು ತಾ ಮುಂದು ಎಂದು ಲಾಬಿ ನಡೆಸುತ್ತಿರುವುದು, ಹಪಹಪಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇಂಥ ಸಮಯದಲ್ಲಿ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿಗಳ ‘ನಡೆ’ ಮಾದರಿಯಾದುದು. ಈ ನಡೆ ಇತರ ಮಠಾಧೀಶರಿಗೆ ಪಾಠವಾಗಬೇಕು.

ಸನ್ಯಾಸ ಎಂದರೆ ತ್ಯಾಗ. ಸರ್ವ ಸಂಗ ಪರಿತ್ಯಾಗ. ಕಾಮ, ಕ್ರೋದ, ಮದ, ಮತ್ಸರ, ಸ್ವಾರ್ಥ ರಹಿತ ಜೀವನ ಮಾರ್ಗ. ಮಾತು ಸಹ ಅಹಿಂಸೆಯಿಂದ ಕೂಡಿರಬೇಕು. ಸತ್ಯ, ಶಾಂತಿ, ಪ್ರಾಮಾಣಿಕತೆ, ವೇದಧ್ಯಯನ, ಜ್ಞಾನಗಳಿಕೆ, ಧ್ಯಾನ-ತಪಸ್ಸು ನಿತ್ಯ ಕರ್ಮಗಳಾಗಿರಬೇಕು. ತರ್ಕ-ಕುತರ್ಕ, ತಂತ್ರ-ಕುತಂತ್ರ-ಪ್ರತಿತಂತ್ರ, ದ್ರೋಹ ಇತ್ಯಾದಿಗಳನ್ನು ಸನ್ಯಾಸಿಗಳು ಯೋಚಿಸಲೇಬಾರದು. ಹೆಣ್ಣು, ಹೊನ್ನು, ಮಣ್ಣು ಇವುಗಳು ಕನಸಲ್ಲೂ ಬರಬಾರದು. ಸುಳ್ಳು ಹೇಳುವುದು ಎಂದರೆ ಅದು ಅಕ್ಷಮ್ಯ.

ಸನ್ಯಾಸ ಸ್ವೀಕರಿಸುವ ಮೊದಲು ಸನ್ಯಾಸಿಯಾಗುವವರು ತಮ್ಮ ಹೆತ್ತವರಿಗೆ ಪಿಂಡ ಬಿಟ್ಟು ಬರುತ್ತಾರೆ. ಅಂದರೆ, ಇನ್ನು ಮುಂದೆ ತನಗೆ ತಂದೆ ತಾಯಿಗಳಿಲ್ಲ, ಅವರು ಇಹಲೋಕ ತ್ಯಜಿಸಿದ್ದಾರೆ ಎಂದು ಇದರ ಅರ್ಥ. ಆದರೆ, ಇಂದು ಸನ್ಯಾಸಿಗಳ ಮಠಗಳಲ್ಲಿ ಸನ್ಯಾಸಿಗಳ ಜೊತೆಗೆ ಇರುವವರೇ ಅವರ ತಂದೆ, ತಾಯಿ, ಅಣ್ಣ, ತಮ್ಮ, ಬಂಧುಗಳು. ಕೇವಲ ಇರುವುದಷ್ಟೇ ಅಲ್ಲ. ಮಠಗಳಲ್ಲಿನ ಬಹುತೇಕ ಆಯಕಟ್ಟಿನ ಅಧಿಕಾರದ ಹುದ್ದೆಗಳಲ್ಲಿ ಇರುವವರು ಇವರೇ. ಸನ್ಯಾಸಿಗಳ ಪೂರ್ವಾಶ್ರಮದ ತಂದೆ, ಅಣ್ಣ, ತಮ್ಮ, ಬಂಧುಗಳು. ಮಠಗಳಲ್ಲಿ ಸಂಗ್ರಹವಾಗುವ ಎಲ್ಲಾ ರೀತಿಯ ಸಂಪತ್ತು (ಹಣ, ಚಿನ್ನ, ಬಟ್ಟೆ ಇತ್ಯಾದಿ) ಪೂರ್ವಾಶ್ರಮದ ಬಂಧುಗಳ ಖಜಾನೆ ಸೇರುತ್ತವೆ. ಇವರನ್ನು ನಾವು ಸನ್ಯಾಸಿಗಳು, ಸ್ವಾಮೀಜಿಗಳು ಎನ್ನುತ್ತೇವೆ. ಇನ್ನೂ ವಿಶೇಷವೆಂದರೆ, ಕೆಲವೊಮ್ಮೆ ಮಠದ ಉತ್ತರಾಧಿಕಾರಿಗಳಾಗುವುದು ಸಹ ಇವರ ಅನಧಿಕೃತ ಮಗನೇ. ತಪ್ಪಿದರೆ ಬಂಧುಗಳು.

ಸನ್ಯಾಸದಲ್ಲಿ ಹಲವು ವಿಧಗಳಿವೆ. ಗೃಹಸ್ಥರಾದ ಬಳಿಕ ಸನ್ಯಾಸಿಯಾದವರು ಮತ್ತು ವಿವಾಹ ಪೂರ್ವ ಸನ್ಯಾಸಿಯಾದವರು. ವಿವಾಹಪೂರ್ವ ಸನ್ಯಾಸಿಗಳಾದವರು, ಬಾಲ್ಯ ಸನ್ಯಾಸಿಗಳು ವಿವಾಹವಾಗುವ ಕ್ರಮವಿಲ್ಲ. ಅಂದರೆ, ಅಧಿಕೃತವಾಗಿ ವಿವಾಹವಾಗುವುದಿಲ್ಲ ಅಷ್ಟೆ. ಬಾಲ್ಯ ಸನ್ಯಾಸಿಗಳು, ವಿವಾಹಪೂರ್ವ ಸನ್ಯಾಸಿಗಳಾದ ಸ್ವಾಮೀಜಿಗಳು, ಮಠಾಧೀಶರು, ಶ್ರೀಪಾದಂಗಳವರು, ತೀರ್ಥರು ಅಧಿಕೃತವಾಗಿ ವಿವಾಹಿತರಲ್ಲವಾದರೂ, ಇಂಥವರಲ್ಲಿ ಹಲವರು ಅನಧಿಕೃತವಾಗಿ ಹೆಂಡಿರನ್ನು ಮಾಡಿಕೊಂಡಿರುತ್ತಾರೆ. ಬಹಿರಂಗಕ್ಕೆ ಇವರು ಅವಿವಾಹಿತರು, ಹೀಗೆ ಅವಿವಾಹಿತ ಮಠಾಧೀಶರಿಗೆ ಮಕ್ಕಳು ಇದ್ದು, ಈ ಮಕ್ಕಳು ತಮ್ಮ ಮಕ್ಕಳು ಎಂದು ಗೊತ್ತಾಗದಂತೆ ಗೌಪ್ಯತೆಯನ್ನು ಕಾಯ್ದುಕೊಂಡಿರುತ್ತಾರೆ. ‘ಏಕಾಂತ ಸೇವೆ’ ಎಂಬ ಹೆಸರಲ್ಲಿ ಅನೈತಿಕ ದಂಧೆಯನ್ನೂ ನಾಚಿಕೆಯಿಲ್ಲದೆ ಇಂದು ಮಾಡಲಾಗುತ್ತಿದೆ. ಅನೈತಿಕವನ್ನು ನೈತಿಕವೆಂಬಂತೆ ಸ್ವಯಂ ಪರಿವರ್ತಿಸಿಕೊಂಡಿರುವುದು ಒಂದು ಹೊಸ ವಿಪರ್ಯಾಸದ ವಿಷಯವಾಗಿದೆ. ಹಾಲಿ ಬಹುತೇಕ ಮಠಾಧೀಶರು ರಾಜಕೀಯ ಪ್ರಭಾವಶಾಲಿಗಳೂ, ಆರ್ಥಿಕ ಶ್ರೀಮಂತರೂ ಆಗಿರುವುದರಿಂದ ಇಂಥವರ ಬೇಕು ಬೇಡಗಳನ್ನು ಶಿರಸಾವಹಿಸಿ ಈಡೇರಿಸಿಕೊಡುವವರೂ ಸಮಾಜದಲ್ಲಿ ಸಾಕಷ್ಟು ಮಂದಿ ಇದ್ದೇ ಇರುತ್ತಾರೆ.

ಸನ್ಯಾಸ ಸ್ವೀಕಾರದ ವಾರ್ಷಿಕೋತ್ಸವ, ಪೀಠವೇರಿದ ವಾರ್ಷಿಕೋತ್ಸವ ಹೀಗೆ ತರಹೇವಾರಿ ಆಚರಣೆಗಳನ್ನು ಆಚರಿಸುವುದರಲ್ಲಿ, ವಜ್ರ ಕವಚ, ಚಿನ್ನದ ಕವಚ, ಚಿನ್ನದ ರಥ, ನವರತ್ನ ರಥ, ಚಿನ್ನದ ಗೋಪುರ ಇತ್ಯಾದಿಗಳ ಹೆಸರಲ್ಲಿ, ಬೇರೆ ಬೇರೆ ಕಟ್ಟಡಗಳನ್ನು ನಿರ್ಮಿಸುವ ಹೆಸರಿನಲ್ಲಿ ಉದ್ಯಮಿಗಳಿಂದ, ಶ್ರೀಮಂತರಿಂದ ಲಕ್ಷಗಳ ಲೆಕ್ಕದಲ್ಲಿ ಹಣ ಸಂಗ್ರಹಿಸುವಲ್ಲಿ ಇಂಥ ಸ್ವಾಮೀಜಿಗಳು ಎತ್ತಿದ ಕೈ. ಒಂದರ್ಥದಲ್ಲಿ ಇವರೆಲ್ಲರೂ ಭಿಕ್ಷಕುರೆ. ರಸ್ತೆ ಬದಿಯಲ್ಲಿ ಕುಳಿತು ಭಿಕ್ಷೆ ಬೇಡುವವರು ಹೊಟ್ಟೆಗಾಗಿ ಭಿಕ್ಷೆ ಬೇಡುತ್ತಾರೆ. ಮಠಾಧೀಶರು ಸಂಪತ್ತಿನ ಸಂಗ್ರಹಕ್ಕಾಗಿ, ತಮ್ಮ ಮಠವೆಂಬ ಉದ್ಯಮದ ಅಭಿವೃದ್ಧಿಗಾಗಿ, ಪ್ರಸಿದ್ಧಿ-ಪ್ರತಿಷ್ಠೆಗಾಗಿ ಭಿಕ್ಷೆ ಬೇಡುತ್ತಾರೆ, ಇಷ್ಟೇ ವ್ಯತ್ಯಾಸ.

ಇಂಥದ್ದರಲ್ಲೆಲ್ಲ ಇರುವಷ್ಟು ಆಸಕ್ತಿ, ಇಂಥ ಸ್ವಾಮೀಜಿಗಳಿಗೆ ಚಾತುರ್ಮಾಸ ಆಚರಿಸುವುದರಲ್ಲಿ ಮಾತ್ರ ಇರುವುದಿಲ್ಲ. ಹೆಸರೇ ಸೂಚಿಸುವಂತೆ ‘ಚಾತುರ್ಮಾಸ’ ಎಂದರೆ, ನಾಲ್ಕು ತಿಂಗಳು ಎಂದರ್ಥ. ಸನ್ಯಾಸಿಗಳು, ಸನ್ಯಾಶ್ರಮದ ಪ್ರಕಾರ ಪ್ರತೀ ವರ್ಷದಲ್ಲಿ ನಾಲ್ಕು ತಿಂಗಳ ಕಾಲ ‘ಚಾತುರ್ಮಾಸ’ವನ್ನು ಆಚರಿಸಬೇಕು. ಆದರೆ, ಈಗ ಯಾವ ಸ್ವಾಮೀಜಿಗಳು ನಾಲ್ಕು ತಿಂಗಳ ‘ಚಾತುರ್ಮಾಸ’ ಆಚರಿಸುತ್ತಾರೆ ಹೇಳಿ ? ಒಂದು ‘ಪಾಕ್ಷಿಕ’ (೧೫ ದಿನ)ವನ್ನು ‘ಒಂದು ತಿಂಗಳು’ ಎಂದು ಭಾವಿಸಿಕೊಂಡು ‘ನಾಲ್ಕು ಪಾಕ್ಷಿಕ’ವನ್ನು ‘ನಾಲ್ಕು ತಿಂಗಳು’ ಎಂದು ಪರಿಗಣಿಸಿಕೊಂಡು ‘ಚಾತುರ್ಮಾಸ’ ಆಚರಿಸುವುದಂತೆ ! ಇನ್ನು ಮುಂದಕ್ಕೆ ‘ಒಂದು ವಾರ’ (೭ ದಿನ)ವನ್ನು ‘ಒಂದು ತಿಂಗಳು’ ಎಂದು ಭಾವಿಸಿಕೊಂಡು ‘ನಾಲ್ಕು ವಾರ’ಗಳನ್ನು ‘ನಾಲ್ಕು ತಿಂಗಳು’ ಎಂದು ಪರಿಗಣಿಸಿಕೊಂಡು ‘ಚಾತುರ್ಮಾಸ’ ಆಚರಿಸುವ ಕಾಲ ಬಂದರೂ ಆಶ್ಚರ್ಯವಿಲ್ಲ.

ಕಲೆ, ಸಂಸ್ಕೃತಿಯ ಹೆಸರಲ್ಲಿ ನಡೆಯುವ ಸರಸ ಸಲ್ಲಾಪಗಳ ಕಥೆಗಳಿಂದ ಕೂಡಿದ ನೃತ್ಯ, ಯಕ್ಷಗಾನವೇ ಮುಂತಾದವುಗಳನ್ನು ಚಾತುರ್ಮಾಸದ ಅವಧಿಯಲ್ಲಿಯೂ ವೀಕ್ಷಿಸಿ ಕಣ್ಮನಗಳನ್ನು ತಣಿಸಿಕೊಳ್ಳುವ ಸನ್ಯಾಸಿಗಳೇ ಇಂದು ನಮ್ಮ ನಡುವೆ ಕಂಡುಬರುತ್ತಿರುವುದು ವಿಷಾದನೀಯವೇ ಸರಿ. ಆಧುನಿಕ ಸನ್ಯಾಸಿಗಳು ದೇವಸ್ಥಾನಗಳನ್ನು, ಮಠಗಳನ್ನು, ಪೀಠಗಳನ್ನು ಸುಲಭಕ್ಕೆ ದಕ್ಕಿಸಿಕೊಳ್ಳುವ ಸ್ವಂತ ಉದ್ಯಮವೆಂದು ಪರಿಗಣಿಸಿರುವುದೇ ಇಂಥ ಎಲ್ಲಾ ದುರಂತಗಳಿಗೆ ಕಾರಣವೆಂದರೆ ತಪ್ಪಾಗಲಾರದು. ಇಂಥವರಲ್ಲಿ ಹಲವರಿಗೆ ಪ್ರಚಾರದ ತೆವಲು ಬೇರೆ !

ವಾಸ್ತವವಾಗಿ ಹೇಳುವುದಾದರೆ, ಸನ್ಯಾಸಿಗಳಲ್ಲಿ ಹೆಚ್ಚಿನವರೂ ಸನ್ಯಾಶ್ರಮಕ್ಕೆ ಅಪಚಾರ ಎಸಗುವವರೇ ಆಗಿದ್ದಾರೆ. ನಿಜವಾದ ಸನ್ಯಾಸಿಗಳು ನೂರಕ್ಕೆ ಒಬ್ಬರಷ್ಟೇ ಸಿಗಬಹುದು. ವೇದಗಳು ನಾಲ್ಕು ಆಶ್ರಮಗಳನ್ನು ಹೇಳಿದೆ. ಬ್ರಹ್ಮಚರ್ಯಾಶ್ರಮ, ಗೃಹಸ್ಥಾಶ್ರಮ, ವಾನಪ್ರಸ್ಥಾಶ್ರಮ ಮತ್ತು ಸನ್ಯಾಶಾಶ್ರಮ. ಮೊದಲ ಮೂರು ಆಶ್ರಮಗಳನ್ನು ಸ್ವೀಕರಿಸಿದ ಬಳಿಕ, ಅನುಭವಿಸಿದ ಬಳಿಕ ಸನ್ಯಾಶಾಶ್ರಮ ಸ್ವೀಕಾರವೇ ಸರಿಯಾದ ಕ್ರಮವಾಗಿದೆಯೇ ಹೊರತು ಬಾಲ ಸನ್ಯಾಸವಾಗಲೀ, ವಿವಾಹಪೂರ್ವ ಸನ್ಯಾಶಾಶ್ರಮ ಸ್ವೀಕಾರವಾಗಲೀ ಎಲ್ಲವೂ ವೇದ ವಿರುದ್ದವೂ, ಸನ್ಯಾಶಾಶ್ರಮಕ್ಕೆ ಎಸಗುವ ಅಪಚಾರವೂ ಆಗಿದೆ.

ಇಂಥ ಧರ್ಮ ವಿರೋಧಿಗಳ ನಡುವೆ, ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿಯಂಥವರು ಇರುವುದು ತುಸು ನೆಮ್ಮದಿಯ ವಿಷಯವಾಗಿದ್ದು, ಆಶಾವಾದಕ್ಕೆ ಕಾರಣವಾಗುತ್ತದೆ. ವರದಳ್ಳಿ ಶ್ರೀಧರ ಸ್ವಾಮಿಯಂಥವರು ಹಾಗೂ ಶಿರಡಿ ಸಾಯಿಬಾಬಾ, ವಜ್ರೇಶ್ವರಿಯ ಸ್ವಾಮಿ ನಿತ್ಯಾನಂದರು, ಅಕ್ಕಲಕೋಟೆ ಮಹಾರಾಜರೇ ಮೊದಲಾದ ಅವಧೂತ ಪರಂಪರೆಯ ಸ್ವಾಮಿಗಳನ್ನು ನಾವು ಆದರ್ಶವಾಗಿ, ಸದ್ಗುರುಗಳನ್ನಾಗಿ ಕಾಣುವುದು ಸೂಕ್ತವಾಗಿದೆ, ಯೋಗ್ಯವಾಗಿದೆ.

 

 

 

Leave a Reply

Your email address will not be published. Required fields are marked *