Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಫೆಬ್ರವರಿ 18: ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ 15 ಸಹಿತ 18 ಕೃತಿಗಳ ಬಿಡುಗಡೆ, ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ, ಏಕವ್ಯಕ್ತಿ ಪ್ರದರ್ಶನ

ಕಾಂತಾವರ (ಬೆಳುವಾಯಿ): ನಾಡಿನ ಪ್ರಸಿದ್ಧ ಮತ್ತು ಏಕಮೇವಾದ್ವಿತಿಯ ‘ಕನ್ನಡ ಸಂಘ ಕಾಂತಾವರ’ ಇದರ ಆಶ್ರಯದಲ್ಲಿ ಫೆಬ್ರವರಿ 18 ಆದಿತ್ಯವಾರದಂದು ಬೆಳಗ್ಗೆಯಿಂದ ಸಂಜೆವರೆಗೆ ಕಾಂತಾವರದ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನದಲ್ಲಿ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ, ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ 15 ಮತ್ತು ಇತರ ನೂತನ ಮೂರು ಕೃತಿಗಳ ಸಹಿತ ಒಟ್ಟು 18 ನೂತನ ಕೃತಿಗಳ ಬಿಡುಗಡೆ ಹಾಗೂ ಏಕವ್ಯಕ್ತಿ ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳೊಂದಿಗೆ ಮುದ್ದಣ ಸಾಹಿತ್ಯೋತ್ಸವ ಜರುಗಲಿದೆ.

ಬೆಳಗ್ಗೆ ಗಂಟೆ 10ಕ್ಕೆ ಬೆಂಗಳೂರಿನ ಹಿರಿಯ ರಂಗಕರ್ಮಿಗಳಾದ ಶ್ರೀಪತಿ ಮಂಜನಬೈಲು ಸಾಹಿತ್ಯೋತ್ಸವವನ್ನು ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ, ಸಾಹಿತ್ಯ ಕಲಾಪೋಷಕರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು 2017ನೇ ಸಾಲಿನ ‘ಮುದ್ದಣ ಕಾವ್ಯ ಪ್ರಶಸ್ತಿ’ಯನ್ನು ಖ್ಯಾತ ಕವಯಿತ್ರಿ ಶ್ರೀಮತಿ ಜ್ಯೋತಿ ಗುರುಪ್ರಸಾದ್ ಅವರಿಗೆ ಪ್ರದಾನಿಸಿ, ಪ್ರಶಸ್ತಿ ಪುರಸ್ಕೃತ ನೂತನ ಕೃತಿ ‘ಜಟಾಯು ಪಕ್ಷಿಗೆ ಶ್ರದ್ಧಾಂಜಲಿ’ಯನ್ನು ಬಿಡುಗಡೆಗೊಳಿಸಲಿದ್ದಾರೆ. ಜ್ಯೋತಿ ಗುರುಪ್ರಸಾದ್ ಅವರು ಉಪಸ್ಥಿತರಿರಲಿದ್ದಾರೆ.

ಮೂಲತಹ ಟಿ.ನರಸೀಪುರದವರಾದ ಜ್ಯೋತಿ ಗುರುಪ್ರಸಾದ್ ಅವರು ಪ್ರಸ್ತು ಕಾರ್ಕಳ ನಿವಾಸಿಯಾಗಿದ್ದಾರೆ. ‘ಚುಕ್ಕಿ’, ಮಾಯಾಪೆಟ್ಟಿಗೆ’, ‘ವರನಂದಿ ಪ್ರತಿಮೆ’ (ಕವನ ಸಂಕಲನಗಳು) ಅಂಕಣ ಬರೆಹಗಳ ಸಂಕಲನವೇ ಮೊದಲಾದ ಸಂಕಲನಗಳನ್ನು ಪ್ರಕಟಿಸಿರುವ ಜ್ಯೋತಿ ಗುರುಪ್ರಸಾದ್ ಅವರಿಗೆ ‘ಡಾ.ಹಾ.ಮಾ.ನಾಯಕ ಪ್ರಶಸ್ತಿ’, ಕಡೆಂಗೋಡ್ಲು ಪ್ರಶಸ್ತಿ’, ‘ಸಾಹಿತ್ಯ ಸೇತು ಪ್ರಶಸ್ತಿ’, ‘ನೀಲಗಂಗಾ ಪ್ರಶಸ್ತಿ’, ‘ಅಮ್ಮ ಪ್ರಶಸ್ತಿ’, ‘ಲೇಖಕಿ ಪ್ರಶಸ್ತಿ’, ‘ಗೀತಾ ದೇಸಾಯಿ ದತ್ತಿ ಪ್ರಶಸ್ತಿ’, ‘ನಿರತ ಸಾಹಿತ್ಯ ಪ್ರಶಸ್ತಿ’, ‘ಉಗ್ರಾಣ ಸಾಹಿತ್ಯ ಪ್ರಶಸ್ತಿ’, ‘ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಪ್ರಶಸ್ತಿ’ ಮುಂತಾದ ಪ್ರಶಸ್ತಿಗಳು ಲಭಿಸಿವೆ. ಇವರ ಕವನಗಳು ಹಿಂದಿ, ಇಂಗ್ಲೀಷ್ ಮತ್ತು ಮಲೆಯಾಳ ಭಾಷೆಗಳಿಗೆ ಅನುವಾದವಾಗಿವೆ. ಜ್ಯೋತಿ ಗುರುಪ್ರಸಾದ್ ಅವರು ಆಕಾಶವಾಣಿಯ ‘ಬಿ’ ಹೈಗ್ರೇಡ್ ನಾಟಕ ಕಲಾವಿದೆಯೂ ಆಗಿದ್ದಾರೆ.

ಕಾರ್ಯಕ್ರಮದಲ್ಲಿ, ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ ನೂತನ 15 ಕೃತಿಗಳನ್ನು ಹಿರಿಯ ಸಾಹಿತಿಗಳಾದ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ಬಿಡುಗಡೆಗೊಳಿಸಲಿದ್ದಾರೆ. ಇದಲ್ಲದೆ, ವಿಶೇಷ ಮೂರು ನೂತನ ಕೃತಿಗಳನ್ನು ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಂ.ಉಡುಪ ಅವರು ಬಿಡುಗಡೆಗೊಳಿಸಲಿದ್ದಾರೆ. ನಾಡಿನ ಹಿರಿಯ ರಾಜಕೀಯ ಮುತ್ಸದ್ಧಿ, ಸಂಸ್ಕೃತಿ ಚಿಂತಕರಾದ ಧಾರವಾಡದ ಚಂದ್ರಕಾಂತ ಬೆಲ್ಲದ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಬಿಡುಗಡೆಯಾಗಲಿರುವ ‘ನಾಡಿಗೆ ನಮಸ್ಕಾರ’ದ ಕೃತಿಗಳು: ‘ಡಾ.ರಾಮದಾಸ್ ಪೈ ಮಣಿಪಾಲ’ (ಲೇಖಕರು: ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ), ‘ಹುರುಳಿ ಭೀಮ ರಾವ್’ (ಲೇ: ಡಾ.ಬಿ.ಜನಾರ್ದನ ಭಟ್), ‘ಡಾ.ಎ.ವಿ.ಬಾಳಿಗಾ’ (ಲೇ:ಡಾ.ಪಿ.ವಿ.ಭಂಡಾರಿ, ನಾಗರಾಜಮೂರ್ತಿ), ‘ಗುರುರಾಜ ಸನಿಲ್’ (ಲೇ:ಡಾ.ಗಣನಾಥ ಎಕ್ಕಾರು), ‘ಪಾತಾಳ ವೆಂಕಟ್ರಮಣ ಭಟ್’ (ಲೇ:ನಾ.ಕಾರಂತ ಪೆರಾಜೆ), ‘ಸೂರ್ಯನಾರಾಯಣ ಚಡಗ’ (ಲೇ:ಶಾರದಾ ಭಟ್), ‘ಡಾ.ಪಾದೆಕಲ್ಲು ವಿಷ್ಣು ಭಟ್’ (ಲೇ: ಡಾ.ಎಸ್.ಆರ್.ಅರುಣ ಕುಮಾರ್), ‘ಎಸ್.ಆರ್.ಹೆಗ್ಡೆ’ (ಲೇ:ಇಂದಿರಾ ಹೆಗ್ಡೆ), ‘ಮಂಟಪ ಪ್ರಭಾಕರ ಉಪಾಧ್ಯ’ (ಲೇ: ದೀವಿತ್ ಎಸ್.ಕೆ.ಪೆರಾಡಿ), ‘ಪದ್ಮಾ ಶೆಣೈ’ (ಲೇ: ನಳಿನಾಕ್ಷಿ ಉದಯರಾಜ್), ‘ಕಾರ್ಕಡ ಮಹಾಬಲೇಶ್ವರ ಆಚಾರ್ಯ’ (ಲೇ:ರತ್ನಾವತಿ ಜೆ.ಆಚಾರ್ಯ), ‘ಎಂ.ಬಿ.ಕುಕ್ಯಾನ್’ (ಲೇ: ಈಶ್ವರ ಅಲೆವೂರು), ‘ರಂಗಕರ್ಮಿ ಕೆ.ಕೆ.ಸುವರ್ಣ’ (ಲೇ: ಡಾ.ಭರತ್ ಕುಮಾರ್ ಪೊಲಿಪು), ‘ಮಾಜಿ ಶಾಸಕ ದೂಮಪ್ಪ’ (ಲೇ: ರಮಾನಾಥ ಕೋಟೆಕಾರು) ಮತ್ತು ‘ಪುತ್ತೂರು ನಾಡಹಬ್ಬ ಸಮಿತಿ’ (ಲೇ: ಪ್ರೊ.ಹರಿನಾರಾಯಣ ಮಾಡಾವು).

ಬಿಡುಗಡೆಗೊಳ್ಳಲಿರುವ 3 ವಿಶೇಷ ಕೃತಿಗಳು: ಡಾ.ಬಿ.ಜನಾರ್ದನ ಭಟ್ ಅವರ ಬರೆಹಗಳ ಕುರಿತಾದ ಲೇಖನ ಸಂಪುಟ ‘ಬಹುತ್ವ: ಅಂತರಂಗ ಮತ್ತು ಬಹಿರಂಗ’, ಪ್ರಸಿದ್ಧ ಪತ್ರಕರ್ತ ಪ.ಗೋಪಾಲಕೃಷ್ಣ ಅವರ ‘ಅನುಭವ ಮತ್ತು ಅನುಭಾವಗಳ ನಡುವೆ’, ಹಾಗೂ ಪ್ರೊ.ಸಿದ್ದು ಯಾಪಲಪರವಿ ಮತ್ತು ಕಾವ್ಯಶ್ರೀ ಅವರ ಜುಗಲ್ಬಂದಿ ಕವನ ಸಂಕಲನ ‘ಪಿಸುಮಾತುಗಳ ಜುಗಲ್’.

ಮಧ್ಯಾಹ್ನ ಗಂಟೆ 2ರಿಂದ ಶ್ರೀಮತಿ ಭ್ರಮರಿ ಶಿವಪ್ರಕಾಶ್ ಅವರಿಂದ ಏಕವ್ಯಕ್ತಿ ಪ್ರಸ್ತುತಿ ‘ಪಾಂಚಾಲಿ ಮತ್ತು ಪ್ರೊ.ಉದ್ಯಾವರ ಮಾಧವ ಆಚಾರ್ಯ ನಿರ್ದೇಶನದಲ್ಲಿ ‘ಯಕ್ಷ ಭರತ ನೃತ್ಯ ಸಂಗಮ’ ಪ್ರದರ್ಶನಗೊಳ್ಳಲಿದೆ.

 

 

 

 

 

 

 

Leave a Reply

Your email address will not be published. Required fields are marked *