Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

‘ಉಡುಪಿಬಿಟ್ಸ್ ಶತಮಾನದ ಶಕ್ತಿ’ ಪಿ.ಆರ್.ಭಂಡಾರ್ಕರ್ ಇನ್ನಿಲ್ಲ: ಒಂದು ನುಡಿನಮನ

  • ಶ್ರೀರಾಮ ದಿವಾಣ

# ಸೋಮವಾರ (ಜನವರಿ 12, 2018) ಸಂಜೆ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಕುಳಿತು ಡಿವಿಜಿಯವರ ವರಪುತ್ರ ಡಾ.ಬಿ.ಜಿ.ಎಲ್.ಸ್ವಾಮಿಯವರು ಬರೆದ ‘ಹಸುರು ಹೊನ್ನು’ (ವಸಂತ ಪ್ರಕಾಶನ ಬೆಂಗಳೂರು, 3ನೇ ಮುದ್ರಣ: 2016, ಪುಟಗಳು: 420, ಬೆಲೆ: ರೂ.295) ಪುಸ್ತಕ ಓದುತ್ತಿದ್ದೆ. ಒಪ್ಪಿಕೊಂಡು ಮಾಡಬೇಕಾಗಿದ್ದ ಕೆಲಸವೊಂದರ ನೆನಪಾಯಿತು. ಆತ್ಮೀಯರಿಬ್ಬರ ಪರವಾಗಿ ಹಿರಿಯ ಗ್ರಾಹಕ ನ್ಯಾಯವಾದಿ ಪಿ.ಆರ್.ಭಂಡಾರ್ಕರ್ ಅವರ ಮೊಬೈಲ್‌ಗೆ ಕರೆ ಮಾಡಿದೆ. ಅವರು ಕರೆ ಸ್ವೀಕರಿಸಿಲಿಲ್ಲ. ಬಳಿಕ ಅವರ ಅಸಿಸ್ಟೆಂಟ್ ಯುವ ಉತ್ಸಾಹಿ ನ್ಯಾಯವಾದಿ ವಿವೇಕಾನಂದ ಮಲ್ಯರ ಮೊಬೈಲ್‌ಗೆ ಕರೆ ಮಾಡಿದೆ. ಆಗಬೇಕಾದ ಗ್ರಾಹಕ ಪರ ಪ್ರಕರಣದ ಬಗ್ಗೆ ಮಾತಾಡಿದೆ. ಕೊನೆಗೆ, ‘ಭಂಡಾರ್ಕರ್ ಈಗ ಎಲ್ಲಿದ್ದಾರೆ ? ಇಲ್ಲೇ ಇದ್ದಾರಾ ? ಮದರಾಸಿನಲ್ಲಿದ್ದಾರಾ ? ಮಾತಾಡದೆ 2-3 ತಿಂಗಳಾಯಿತು’ ಎಂದು ಹೇಳಿದೆ. ಅಂದೇ ನಿಮಗೆ ಕಾಲ್ ಮಾಡಿದೆ, ನೀವು ಕಾಲ್ ರಿಸೀವ್ ಮಾಡಲಿಲ್ಲ. ಅವರು ಗಣರಾಜ್ಯೋತ್ಸವದ ದಿನ ಹೋಗಿಬಿಟ್ಟರು’ ಎಂದು ಬಿಡಬೇಕೇ ? ನನಗೆ ಅನಿರೀಕ್ಷಿತ ಆಘಾತ, ವಿಷಾದವನ್ನು ಕೊಟ್ಟಿತು.

ಪಿ.ಆರ್.ಭಂಡಾರ್ಕರ್ ಅವರು ನಮ್ಮ ನಾಡಿನ ಶ್ರೇಷ್ಠ ನ್ಯಾಯವಾದಿಗಳಲ್ಲಿ ಒಬ್ಬರು. ಅತ್ಯಂತ ಪ್ರಾಮಾಣಿಕರು, ಸತ್ಯಸಂಧರು, ವೃತ್ತಿಯಲ್ಲಿ ದಕ್ಷರು, ನೇರ ನಡೆನುಡಿಯ ನಿಷ್ಠುರವಾದಿಗಳು ಮತ್ತು ಸರಳ ವ್ಯಕ್ತಿತ್ವದ ಸಹೃದಯರು. ನನಗೆ ಅತ್ಯಾಪ್ತರು, ಆತ್ಮೀಯರು. ನನ್ನಲ್ಲಿ ಇವರಿಟ್ಟಿದ್ದ ನಂಬಿಕೆ, ವಿಶ್ವಾಸ, ತೋರಿಸಿದ ಪ್ರೀತಿ ಎಂದೂ ಮರೆಯಲಾಗದ್ದು. ಕೊನೆಕಾಲದಲ್ಲಿ ಇವರನ್ನು ಕಂಡು ಮಾತನಾಡಲಾಗಲಿಲ್ಲವಲ್ಲ ಎಂಬ ಕೊರಗು ಈಗ ನನ್ನನ್ನು ಕಾಡುತ್ತಿದೆ.

ಉಡುಪಿ ನಿವಾಸಿಯಾಗಿದ್ದ ಪಿ.ರಾಮಚಂದ್ರ ಭಂಡಾರ್ಕರ್ ಅವರು ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿ ನಿವೃತ್ತರಾದವರು. ವಿವಿಧ ಬ್ರಾಂಚ್‌ಗಳಲ್ಲಿ ಮ್ಯಾನೇಜರ್ ಆಗಿಯೂ, ಬ್ಯಾಂಕ್‌ನ ವಿಜಿಲೆನ್ಸ್ ಸ್ಕ್ವಾಡ್‌ನ ಮುಖ್ಯಸ್ಥರಾಗಿಯೂ ಸಮರ್ಥವಾಗಿ ಕರ್ತವ್ಯ ನಿರ್ವಹಿಸಿದವರು. ಬ್ಯಾಂಕಿಂಗ್ ಕ್ಷೇತ್ರದಿಂದ ನಿವೃತ್ತರಾದ ಬಳಿಕ ಗ್ರಾಹಕರ ಪರವಾಗಿ ಪ್ರಕರಣಗಳನ್ನು ಪಡೆದುಕೊಂಡು ಗ್ರಾಹಕ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿ ನ್ಯಾಯದ ಪರವಾಗಿ, ಗ್ರಾಹಕರ ಪರವಾಗಿ ವಾದಿಸಲಾರಂಭಿಸಿದವರು. ತಾವು ವಾದಿಸಿದ ಬಹುತೇಕ ಪ್ರಕರಣಗಳಲ್ಲಿಯೂ ಭಂಡಾರ್ಕರ್ ಅವರು ತಮ್ಮ ಕ್ಲೈಂಟ್ ಆಗಿರುವ ಗ್ರಾಹಕರಿಗೆ ನ್ಯಾಯ ಮತ್ತು ಅತೀ ಹೆಚ್ಚು ಪರಿಹಾರವನ್ನು ದೊರಕಿಸಿಕೊಡುವಲ್ಲಿ ಯಶಸ್ವಿಯಾದವರು. ಇದು ಅವರ ಸಾಮರ್ಥ್ಯ ಮತ್ತು ಗ್ರಾಹಕ ಪರವಾದ ಕಾಳಜಿಗೆ ಸಾಕ್ಷಿಯಾಗಿದೆ.

ಉಡುಪಿ ಜಿಲ್ಲೆಯಾಗುವ ಮೊದಲು ಉಡುಪಿ ಮತ್ತು ಮಂಗಳೂರು ಎರಡೂ ಕಡೆಗಳಲ್ಲಿಯೂ ಗ್ರಾಹಕ ನ್ಯಾಯಾಲಯಗಳಲ್ಲಿ ವಾದಿಸುತ್ತಿದ್ದರು. ಹಿರಿಯ ನಾಗರಿಕರಾಗಿದ್ದರೂ, ಪ್ರತೀ ದಿನ ಎಂಬಂತೆ ಉಡುಪಿ-ಮಂಗಳೂರು ನಡುವೆ ಬಸ್‌ನಲ್ಲಿ ಪ್ರಯಾಣಿಸಿ ವಾದಿಸುವುದೆಂದರೆ ಅದೊಂದು ಸಾಹಸವೇ ಆಗಿತ್ತು ದಶಕದ ಹಿಂದೆ. ಅತೀವ ಕಾಳಜಿ ಇದ್ದರೆ ಮಾತ್ರವೇ ಇದು ಸಾಧ್ಯವಾಗುವಂಥದ್ದು.

ಬೆಳಗ್ಗೆಯಿಂದ ಸಂಜೆವರೆಗೂ ಯಾರೇ ಬರಲಿ, ಯಾರೇ ಹೋಗಲಿ, ಯಾರನ್ನೇ ಭೇಟಿಯಾಗಲೀ ಅದೇ, ಗ್ರಾಹಕರಿಗಾದ ಅನ್ಯಾಯ ಮತ್ತು ಗ್ರಾಹಕರಿಗೆ ಸಿಕ್ಕಿದ ನ್ಯಾಯದ ವಿಷಯವೇ ಭಂಡಾರ್ಕರ್ ಅವರ ಮಾತಿಗೆ ವಸ್ತು. ರಾತ್ರಿ ಮಲಗುವಾಗಲೂ ಅದೇ ಯೋಚನೆ. ಬಳಕೆದಾರರ ವೇದಿಕೆಯಲ್ಲೂ ಕೆಲಕಾಲ ಕೆಲಸ ಮಾಡಿ ಕೊನೆಗೆ ಭಿನ್ನಾಭಿಪ್ರಾಯದ ಕಾರಣಕ್ಕೆ ಆ ವ್ಯವಸ್ಥೆಯಲ್ಲಿ ಉಳಿದುಕೊಳ್ಳದೆ ರಾಜೀನಾಮೆ ನೀಡಿ ಹೊರ ಬಂದವರು. ಮಾತ್ರವಲ್ಲ, ಸ್ವಲ್ಪ ಸಮಯ ಬಸ್ರೂರು ಬಳಕೆದಾರರ ವೆದಿಕೆಯ ರವೀಂದ್ರನಾಥ ಶ್ಯಾನುಭಾಗ್‌ರವರ ಜೊತೆಗೆ ಅವರ ನ್ಯಾಯಯುತವಾದ ಕೆಲಸಗಳಿಗೆ ಹೆಗಲಿಗೆ ಹೆಗಲಾಗಿ ಪ್ರತ್ಯಕ್ಷ ಸಹಕಾರ ನೀಡಿದವರು ಭಂಡಾರ್ಕರ್.

ಅಗಲುವುದಕ್ಕಿಂತ ಒಂದೆರಡು ವರ್ಷ ಮೊದಲು ಮದರಾಸಿನಲ್ಲಿರುವ ಮಗಳ ಮನೆಯಲ್ಲಿ ಇರಲು ನಿರ್ಧರಿಸಿದ್ದರು. ಆದರೆ, ಹಾಗೆ ಮದರಾಸಿನಲ್ಲಿದ್ದರೂ, ತಿಂಗಳಿಗೊಮ್ಮೆ ಒಂದು ವಾರದ ಮಟ್ಟಿಗಾದರೂ ಉಡುಪಿಗೆ ಬಂದು ಇಲ್ಲಿ ಗ್ರಾಹಕ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಪರವಾಗಿ ವಾದಿಸುವುದು, ಪ್ರಕರಣಗಳನ್ನು ಪಡೆಯುವುದು, ಅಸಿಸ್ಟೆಂಟ್ ಅಡ್ವಕೇಟ್ ವಿವೇಕಾನಂದ ಮಲ್ಯರಿಗೆ ಸಲಹೆ, ಸೂಚನೆ ಕೊಡುತ್ತಾ, ಮಾರ್ಗದರ್ಶನ ಮಾಡುತ್ತಾ ಲವಲವಿಕೆಯಿಂದಲೇ ಇದ್ದವರು ನಮ್ಮ ಭಂಡಾರ್ಕರ್ ಎನ್ನುವುದು ಅವರಲ್ಲಿದ್ದ ಅಪಾರ ಕಾಳಜಿಗೆ ದ್ಯೋತಕವಾಗಿದೆ. ಮಾತ್ರವಲ್ಲ, ಅವರ ಜೀವನೋತ್ಸಾಹಕ್ಕೆ ಉದಾಹರಣೆಯಾಗಿದೆ.

ನನ್ನ ಮೇಲೆ ಅವರೆಷ್ಟು ವಿಶ್ವಾಸ ಇರಿಸಿದ್ದರೆಂದರೆ, ಮದರಾಸಿನಲ್ಲಿ ಮಗಳ ಮನೆಯಲ್ಲಿರುವಾಗಲೂ, ಹದಿನೈದು ದಿನಕ್ಕೊಮ್ಮೆಯಾದರೂ ನನಗೆ ಸುಧೀರ್ಘ ಪತ್ರ ಬರೆಯುತ್ತಿದ್ದರು. ಪತ್ರದ ಜೊತೆಗೆ ಪತ್ರಿಕೆಗಳ ಆಯ್ದ ವರದಿಗಳು ಮತ್ತು ಲೇಖನಗಳ ಪೇಪರ್ ಕಟ್ಟಿಂಗ್ಸ್‌ಗಳು ಇರುತ್ತಿದ್ದವು. ಮುಖತಾಃ ಮಾತಾಡುವಾಗ ಚರ್ಚಿಸುತ್ತಿದ್ದಂತೆಯೇ, ಅನೇಕ ವಿಚಾರಗಳನ್ನು ಪತ್ರಗಳಲ್ಲಿಯೂ ಚರ್ಚಿಸುತ್ತಿದ್ದರು. ದೂರವಿದ್ದರೂ ದೂರವಾಣಿ ಮೂಲಕ ನಿರಂತರವಾಗಿ ಸಂಪರ್ಕ ಇಟ್ಟುಕೊಂಡಿರುತ್ತಿದ್ದರು. ಅವರು ಬರೆದ ಬಹುತೇಕ ಪತ್ರಗಳನ್ನೂ ಸಂಗ್ರಹಿಸಿಟ್ಟುಕೊಂಡಿದ್ದೇನೆ. ಅವುಗಳೆಲ್ಲವೂ ಅಮೂಲ್ಯವಾದವುಗಳು ಎಂಬುದೇ ನನ್ನ ಭಾವನೆ.

www.udupibits.in ಸಂಸ್ಥೆಗೆ ಐದು ವರ್ಷಗಳಾದಾಗ ‘ಉಡುಪಿಬಿಟ್ಸ್ ಶತಮಾನದ ಶಕ್ತಿ’ ಎಂಬ ವಾರ್ಷಿಕ ಗೌರವಾರ್ಪಣೆಯನ್ನು ಪ್ರತೀ ವರ್ಷ ಒಬ್ಬರಿಗೆ ನೀಡುವ ಮೂಲಕ ಜೀವಶ್ರೇಷ್ಠ ಸಾಧಕರನ್ನು ಗುರುತಿಸಲು ನಿರ್ಧರಿಸಿ, ಇದಕ್ಕೆ ಮೊದಲು ಆಯ್ಕೆ ಮಾಡಿದ ವ್ಯಕ್ತಿಯೂ ನಮ್ಮ ಪಿ.ಆರ್.ಭಂಡಾರ್ಕರ್ ಅವರೇ ಆಗಿದ್ದರು. ನಮ್ಮ ಗೌರವಾರ್ಪಣೆಯನ್ನು ಮಾನಸಿಕವಾಗಿ ಪೂರ್ಣ ಮನಸ್ಸಿನಿಂದಲೇ ಸ್ವೀಕರಿಸಿದ್ದ ಅವರು, ಒಂದು ನಿರ್ಧಿಷ್ಟ ಕಾರಣಕ್ಕೆ (ಆ ಕಾರಣ ಏನು ಎಂಬುದು ಇಲ್ಲಿ ಬೇಡ) ಆ ಸಂಬಂಧವಾದ ಸನ್ಮಾನವನ್ನಾಗಲೀ, ಫಲಕವನ್ನಾಗಲೀ ಸ್ವೀಕರಿಸಲಿಲ್ಲ. ‘ಅದೆಲ್ಲ ಬೇಡ’ ಎಂದರು.

ಭಂಡಾರ್ಕರ್ ಅವರು ಮದರಾಸಿಗೆ ಹೋಗುವ ಸಂದರ್ಭದಲ್ಲಿ ಅವರಲ್ಲಿದ್ದ, ಅವರು ಬಹಳ ಜೋಪಾನವಾಗಿ ಸಂಗ್ರಹಿಸಿಟ್ಟಿದ್ದ ಕೆಲವು ಗ್ರಾಹಕ ಸಂಬಂಧವಾಗಿರುವ ಅಮೂಲ್ಯ ದಾಖಲೆಗಳನ್ನು, ಆದೇಶಗಳನ್ನು, ಪುಸ್ತಕಗಳನ್ನು, ಪತ್ರಿಕೆಗಳನ್ನು ನನಗೆ ಕೊಟ್ಟರು. ಮಾತ್ರವಲ್ಲ, ಅವರು ಚಂದದಾರಾಗಿದ್ದ ಮಂಗಳೂರಿನ ಬಿ.ಎಂ.ಇಚ್ಲಂಗೋಡುರವರ ‘ಮೀಡಿಯಾ ಟೈಮ್ಸ್ ಕನ್ನಡ ಪುಸ್ತಕ ಮಾಲಿಕೆ’ಯನ್ನು ನನ್ನ ಹೆಸರಿಗೆ ವರ್ಗಾಯಿಸಿದರು. ಇದೊಂದು ಶ್ರೇಷ್ಠ ಗ್ರಾಹಕ ಪರವಾದ ಪತ್ರಿಕೆ. ಗ್ರಾಹಕರ ಬಗ್ಗೆ ನಾನು ತೋರಿಸುತ್ತಿದ್ದ ಕಾಳಜಿಯೇ ಅವರು ನನ್ನ ಮೇಲೆ ವಿಶೇಷ ಪ್ರೀತಿ ತೋರಿಸಲು ಕಾರಣವಾಗಿರಬಹುದು ಎಂದರೆ ತಪ್ಪಿಲ್ಲ.

ಗ್ರಾಹಕ ವ್ಯಾಜ್ಯಗಳ ಬಗ್ಗೆ ಅವರಿಗಿದ್ದ ಆಸಕ್ತಿ ಮತ್ತು ಕಾಳಜಿ ಅಪಾರವಾದುದು. ಅವರಿಗವರೇ ಸಾಟಿ, ಅವರಾತ್ಮಕಿದೋ ನಮನ.

Leave a Reply

Your email address will not be published. Required fields are marked *