Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ದೇಶದ ಇಂದಿನ ದುಸ್ಥಿತಿಗೆ ಓದಿನ ಕೊರತೆಯೇ ಕಾರಣ: ಮುದ್ಣಣ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ 10 ಸಹಿತ 13 ಕೃತಿಗಳನ್ನು ಬಿಡುಗಡೆಗೊಳಿಸಿ ಡಾ.ಏರ್ಯ ವಿಷಾದ

ಕಾಂತಾವರ (ಬೆಳುವಾಯಿ): ಆದಿಕವಿ ಪಂಪ ಮಾನವ ಕುಲ ವಂದೇ ವಲಂ ಎಂದರು. ಅಂದಿನ ಆ ಪರಿಸ್ಥಿತಿ ಇಂದಿಲ್ಲ. ದೇಶದ ಇಂದಿನ ದುಸ್ಥಿತಿಗೆ ಓದಿನ ಕೊರತೆ ಮತ್ತು ಸಂಸ್ಕೃತಿ ಚಿಂತನೆಯಲ್ಲಿ ಕಳಪೆತನವೇ ಕಾರಣವಾಗಿದೆ. ಓದಿನಿಂದ ಮಾತ್ರ ಸರಿಯಾದ ಅರಿವು ಮೂಡಲು ಸಾಧ್ಯ ಎಂದು ಹಿರಿಯ ಸಾಹಿತಿ, ಸಂಸ್ಕೃತಿ ಚಿಂತಕರಾದ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ಹೇಳಿದರು.

ಕಾಂತಾವರ ಕನ್ನಡ ಸಂಘ ಕಾಂತಾವರದ ಕೆ.ಬಿ.ಜಿನರಾಜ ಹೆಗಡೆ ಸ್ಮಾರಕ ಕನ್ನಡ ಭವನದಲ್ಲಿ ಫೆಬ್ರವರಿ 18ರಂದು ಆಯೋಜಿಸಿದ ಮುದ್ದಣ ಸಾಹಿತ್ಯೋತ್ಸವದಲ್ಲಿ, ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ ಏಳು ಕೃತಿ ಮತ್ತು ಇತರ ಮೂರು ವಿಶೇಷ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

‘ನಾಡಿಗೆ ನಮಸ್ಕಾರ’ ಗ್ರಂಥ ಮಾಲೆಯಲ್ಲಿ ಪ್ರಕಟಿಸಲಾದ ಡಾ.ಎ.ವಿ.ಬಾಳಿಗ (ಲೇಖಕರು: ಡಾ.ಪಿ.ವಿ.ಭಂಡಾರಿ ಹಾಗೂ ನಾಗರಾಜಮೂರ್ತಿ), ಡಾ.ರಾಮದಾಸ ಎಸ್.ಪೈ ಮಣಿಪಾಲ (ಲೇ: ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ), ಪಾತಾಳ ವೆಂಕಟ್ರಮಣ ಭಟ್ (ಲೇ:ನಾ.ಕಾರಂತ ಪೆರಾಜೆ), ಪದ್ಮಾ ಶೆಣೈ (ಲೇ: ನಳಿನಾಕ್ಷಿ ಉದಯರಾಜ್), ಮಂಟಪ ಪ್ರಭಾಕರ ಉಪಾಧ್ಯ (ಲೇ: ದೀವಿತ್ ಎಸ್.ಕೆ.ಪೆರಾಡಿ), ಸೂರ್ಯ ನಾರಾಯಣ ಚಡಗ (ಲೇ: ಶಾರದಾ ಭಟ್), ಪುತ್ತೂರು ನಾಡಹಬ್ಬ ಸಮಿತಿ (ಲೇ: ಪ್ರೊ. ಹರಿನಾರಾಯಣ ಮಾಡಾವು), ಡಾ.ಪಾದೆಕಲ್ಲು ವಿಷ್ಣು ಭಟ್ (ಡಾ.ಎಸ್.ಆರ್.ಅರುಣ ಕುಮಾರ್), ಎಸ್.ಆರ್.ಹೆಗ್ಡೆ (ಲೇ: ಇಂದಿರಾ ಹೆಗ್ಡೆ), ಎಂ.ಬಿ.ಕುಕ್ಯಾನ್ (ಲೇ: ಈಶ್ವರ ಅಲೆವೂರು) ಮತ್ತು ಇತರ ಮೂರು ವಿಶೇಷ ಕೃತಿಗಳಾದ ಡಾ.ಬಿ.ಜನಾರ್ದನ ಭಟ್ ಅವರ ಬರಹಗಳ ಕುರಿತಾದ ಲೇಖನ ಸಂಪುಟ ‘ಬಹುತ್ವ: ಅಂತರಂಗ ಮತ್ತು ಬಹಿರಂಗ’, ಪ್ರಸಿದ್ಧ ಪತ್ರಕರ್ತ ಪ.ಗೋಪಾಲಕೃಷ್ಣ ಅವರ ‘ಅನುಭವ ಮತ್ತು ಅನುಭಾವಗಳ ನಡುವೆ’, ಪ್ರೊ.ಸಿದ್ದು ಯಾಪಲಪರವಿ ಹಾಗೂ ಕಾವ್ಯಶ್ರೀ ಅವರ ‘ಪಿಸುಮಾತುಗಳ ಜುಗಲ್’ ಎಂಬ ಒಟ್ಟು 13 ನೂತನ ಕೃತಿಗಳನ್ನು ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಬಿಡುಗಡೆಗೊಳಿಸಿದರು.

ಇಂಗ್ಲೀಷ್ ಒಂದು ದುರ್ಬಲ ಭಾಷೆಯಾಗಿದೆ. ಆದರೆ, ಪ್ರಸ್ತುತ ಹೆತ್ತವರಿಗೆ ತಮ್ಮ ಮಕ್ಕಳು ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತರೆ ಮಾತ್ರ ಸ್ವರ್ಗ ಪ್ರಾಪ್ತಿ ಎಂಬ ಭಾವನೆಯಿದೆ. ಸಮೃದ್ಧವೂ, ಸುಲಭವೂ, ಸರಳವೂ, ಸುಂದರವೂ ಆದ ಕನ್ನಡ ಭಾಷೆಯ ಮೇಲೆ ಅಭಿಮಾನ ರಹಿತವಾಗಿರುವುದು ಒಂದು ಕಡೆಯಾದರೆ, ಭಾರತೀಯ ಕ್ರೀಡೆಯನ್ನು ಕಡೆಗಣಿಸಿ, ವಿದೇಶಿ ಕ್ರೀಡೆಯಾದ ಕ್ರಿಕೆಟನ್ನು ನೆಚ್ಚಿಕೊಂಡಿರುವುದು ಮತ್ತೊಂದು ಕಡೆ. ಇದಕ್ಕೆಲ್ಲ ದಾಸ್ಯ ಪ್ರವೃತ್ತಿಯೇ ಕಾರಣವೆಂದು ಡಾ.ಏರ್ಯ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಿರಿಯ ರಾಜಕೀಯ ಮುತ್ಸದ್ದಿ, ಸಂಸ್ಕೃತಿ ಚಿಂತಕರಾದ ಧಾರವಾಡದ ಚಂದ್ರಕಾಂತ ಬೆಲ್ಲದ್ ಅವರು, ಮೌಲ್ಯಾಧಾರಿತ ರಾಜಕಾರಣ ಇಂದಿಲ್ಲ. ಜನರು ಪ್ರಭುಗಳಾಗುವ ಬದಲಾಗಿ ಜನಪ್ರತಿನಿಧಿಗಳೇ ಪ್ರಭುಗಳಾಗಿದ್ದಾರೆ. ಇಂಥ ಜನಪ್ರತಿನಿಗಳ ಶಾಸಕಾಂಗ ಮತ್ತು ಕಾರ್ಯಾಂಗ ಒಟ್ಟು ಸೇರಿಕೊಂಡು ಕೆಟ್ಟ ಸಮಾಜವನ್ನು ನಿರ್ಮಿಸಿದೆ. ಸಜ್ಜನರ ಸಹಿತ ಸಮಾಜ ಮೌನವಹಿಸಿದೆ. ಇಂಥ ಸಂದಿಗ್ದ ಪರಿಸ್ಥಿತಿಯಲ್ಲಿ ಎಲ್ಲರಿಗೂ ಬಾಯಿಕೊಡುವ, ಎಲ್ಲರ ಧ್ವನಿಯಾಗುವ ಕೆಲಸವನ್ನು ಸಾಹಿತಿಗಳಾದವರು ಮಾಡಬೇಕು, ವ್ಯವಸ್ಥೆಯನ್ನು ಪ್ರಶ್ನಿಸುವಂಥ ಮನೋಭಾವನೆಯನ್ನು ಎಲ್ಲರಲ್ಲೂ ಮೂಡಿಸುವಂತಾಗಬೇಕು ಎಂದರು.

ಕಿತ್ತಳೆ ಹಣ್ಣ ಮಾರಾಟ ಮಾಡಿ ಹಳ್ಳಿಯಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಹರೆಕಳ ಹಸನಬ್ಬರಂಥವರನ್ನು ಮತ್ತು ಪ್ರಮಾಣಿಕರನ್ನು ಸರಕಾರ ಮತ್ತು ಸಂಘ ಸಂಸ್ಥೆಗಳು ಸನ್ಮಾನಿಸುವಂಥಾಗಬೇಕೇ ಹೊರತು ರಾಜಕಾರಣಿಗಳನ್ನು ಸನ್ಮಾನಿಸುವಂತಾಗಬಾರದು ಎಂದು ಬೆಲ್ಲದ್ ತಿಳಿಸಿದರು.

ಕಸಾಪ ಮಾಜಿ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಪ್ರಸಿದ್ಧ ಕವಿ ಶ್ರೀಮತಿ ಜ್ಯೋತಿ ಗುರುಪ್ರಸಾದ್ ಅವರಿಗೆ ‘ಮುದ್ದಣ ಕಾವ್ಯ ಪ್ರಶಸ್ತಿ’ಯನ್ನು ಪ್ರಧಾನಿಸಿ, ಪ್ರಶಸ್ತಿ ಪುರಸ್ಕೃತ  ಕವನ ಸಂಕಲನವನ್ನು ಬಿಡುಗಡೆಗೊಳಿಸಿದರು. ಗುರುಪ್ರಸಾದ್ ಅವರು ಉಪಸ್ಥಿತರಿದ್ದರು.

ಹಿರಿಯ ರಂಗಕರ್ಮಿ ಶ್ರೀಪತಿ ಮಂಜನಬೈಲು ಕಾರ್ಯಕ್ರಮವನ್ನು ಉದ್ಘಾಟಿಸಿದರು. ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ ಸಂಪಾದಕರಾದ ಡಾ.ಬಿ.ಜನಾರ್ದನ ಭಟ್, ಕವಿ ಪ್ರೊ.ಸಿದ್ದು ಯಾಪಲಪರವಿ, ‘ನಾಡಿಗೆ ನಮಸ್ಕಾರ’ ಗ್ರಂಥ ಮಾಲೆಯ ಕೃತಿಕಾರರಾದ ಡಾ.ಪಿ.ವಿ.ಭಂಡಾರಿ, ಇಂದಿರಾ ಹೆಗ್ಡೆ, ನಳಿನಾಕ್ಷಿ ಉದಯರಾಜ್, ಪ್ರೊ.ಹರಿನಾರಾಯಣ ಮಾಡಾವು, ನಾ.ಕಾರಂತ ಪೆರಾಜೆ, ಡಾ.ಎಸ್.ಆರ್.ಅರುಣ ಕುಮಾರ್, ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ, ದೀವಿತ್ ಎಸ್.ಕೆ.ಪೆರಾಡಿ, ಪುತ್ತೂರು ನಾಡಹಬ್ಬ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು. ಗ್ರಂಥಮಾಲೆಯಲ್ಲಿ ಮೊದಲ ಬಾರಿಗೆ ಕೃತಿ ಬರೆದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಡಾ.ಎ.ವಿ.ಬಾಳಿಗರ ಕುರಿತು ಕೃತಿ ರಚಿಸಿದ ಡಾ.ಪಿ.ವಿ.ಭಂಡಾರಿ ಮತ್ತು ನಾಗರಾಜಮೂರ್ತಿ ಹಾಗೂ ಡಾ.ರಾಮದಾಸ ಪೈ ಕುರಿತು ಕೃತಿ ರಚಿಸಿದ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಇವರಿಗೆ ಸನ್ಮಾನ.

ಪಾತಾಳ ವೆಂಕಟ್ರಮಣ ಭಟ್ ಕುರಿತು ಕೃತಿ ರಚಿಸಿದ ನಾ.ಕಾರಂತ ಪೆರಾಜೆ ಇವರಿಗೆ ಸನ್ಮಾನ.

ಸದಾನಂದ ನಾರಾವಿ ಸ್ವಾಗತಿಸಿದರು. ಡಾ.ನಾ.ಮೊಗಸಾಲೆ ಪ್ರಸ್ತಾವನೆಗೈದರು. ಬಾಬು ಶೆಟ್ಟಿ ನಾರಾವಿ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ಬಳಿಕ, ಹಿರಿಯ ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ ರಚಿಸಿ ನಿರ್ದೇಶಿಸಿದ  ‘ಪಾಂಚಾಲಿ’ ಎಂಬ ಏಕ ವ್ಯಕ್ತಿ ಪ್ರದರ್ಶನ ‘ಯಕ್ಷ-ಭರತ ಸಂಗಮ’ವನ್ನು ಶ್ರೀಮತಿ ಭ್ರಮರಿ ಶಿವಪ್ರಕಾಶ್ ಅವರು ಪ್ರದರ್ಶಿಸಿದರು.

Leave a Reply

Your email address will not be published. Required fields are marked *