Realtime blog statisticsweb statistics
udupibits.in
Breaking News
ಉಡುಪಿ: ನೌಕರರಿಗೆ ಕಿರುಕುಳ ಆರೋಪ- ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ್ ಐತಾಳ್ ಅಮಾನತಿಗೆ ಶ್ರೀರಾಮ ದಿವಾಣ ಒತ್ತಾಯ

ಮೊಟ್ಟೆಯಿಂದ ಹೊರಬಂತು 17 ನೀರು ಹಾವಿನ ಮರಿಗಳು

# ತಾರೀಖು: 15-01-2018ರಂದು ಉಡುಪಿಯ ಕಲ್ಮಾಡಿ ಎಂಬಲ್ಲಿನ ಮನೆಯೊಂದರ ಅಂಗಳದ ಅಂಚಿನಲ್ಲಿದ್ದ ಗೋಣಿಚೀಲದ ರಾಶಿಯಡಿಯಲ್ಲಿ, ನೀರು ಹಾವಿನ 17 ಮೊಟ್ಟೆಗಳು ದೊರೆತವು. ಅವನ್ನು ತಂದು ಕಾವಿಗಿಡಲಾಗಿ, 19-02-2018ರಂದು ರಾತ್ರಿ ಎಲ್ಲ ಮೊಟ್ಟೆಗಳೊಡೆದು ಮರಿಗಳು ಜನಿಸಿದುವು.

ಮರಿಗಳ ಉದ್ದ: 17ರಿಂದ 19 ಸೆಂಟಿಮೀಟರ್, ಬೆಳೆಯುವ ಗರಿಷ್ಠ ಉದ್ದ: ಸುಮಾರು 150 ಸೆಂಟಿಮೀಟರ್, ಕನ್ನಡ ಹೆಸರು: ಚೌಕಳಿ ನೀರು ಹಾವು, ನೀರೊಳ್ಳೆ. ತುಳುವಿನಲ್ಲಿ: ಒಲ್ಲೆ, ನೀರೊಲ್ಲೆ. ಇಂಗ್ಲೀಷ್: ಚೆಕ್ಕರ್ಡ್ ಕೀಲ್ ಬ್ಯಾಕ್ ವಾಟರ್ ಸ್ನೇಕ್.(Checkered keel back water snake) ವೈಜ್ಞಾನಿಕ ಹೆಸರು: ಜ಼ೆನೋಕ್ರೋಪಿಸ್ ಪಿಸ್ಕೇಟರ್(Xenochropis piscatar).

ಜಲವಾಸಿಗಳಾದ ಈ ವಿಷರಹಿತ ಹಾವುಗಳು, ಸೊಳ್ಳೆ, ಅವುಗಳ ಮೊಟ್ಟೆ, ಮರಿಗಳು, ಕಪ್ಪೆ, ಗೋದಮೊಟ್ಟೆ ಮತ್ತು ಅನೇಕ ಜಾತಿಯ ಕ್ರಿಮಿ ಕೀಟಗಳನ್ನು ಭಕ್ಷಿಸುತ್ತ ಜೀವಿಸುವುದರಿಂದ ಡೆಂಗ್ಯು, ಮಲೇರಿಯಾದಂಥ ಸಾಂಕ್ರಾಮಿಕ ರೋಗ ರುಜಿನಗಳಿಂದ ನಾವು ಸದಾ ರಕ್ಷಣೆ ಪಡೆಯುತ್ತಿರುತ್ತೇವೆ.

ಈ ಹಾವುಗಳು ಬಾವಿ, ಹಳ್ಳ ಕೊಳಗಳಲ್ಲಿ ವಾಸ ಮಾಡುವುದರಿಂದ, ಅಂಥ ನೀರಿನ ಮೂಲಗಳು ಸದಾ ಶುದ್ಧವಾಗಿರುತ್ತವೆ. ಆದ್ದರಿಂದ, ಇಂಥ ಮೂಕ ಜೀವಜಂತುಗಳನ್ನು ಸದಾ ನಮ್ಮ ಸುತ್ತಮುತ್ತ ಬದುಕಲು ಬಿಡುವಂಥ ಜವಾಬ್ದಾರಿ ನಮ್ಮೆಲ್ಲರಿಗೂ ಇದೆ. ಬಹುತೇಕರಿಗೆ ತಿಳಿದಂತಹ ಒಂದು ಸಂಗತಿಯೆಂದರೆ, ಭಾರತದ ವನ್ಯಜೀವಿ ಕಾಯ್ದೆಯಲ್ಲಿ ಶೆಡ್ಯೂಲ್ 1ರಲ್ಲಿ ಸೇರ್ಪಡೆಗೊಂಡಿರುವ ಈ ಹಾವುಗಳನ್ನು 1972ರಲ್ಲಿ ಸಂರಕ್ಷಿತ ಉರಗಗಳೆಂದು ಪರಿಗಣಿಸಲಾಗಿದೆ. ಇವನ್ನು ಹಿಂಸಿಸುವುದು, ಕೊಲ್ಲುವುದು ಅಕ್ಷಮ್ಯ ಅಪರಾಧವಾಗುತ್ತದೆ. ಇನ್ನು ಮುಂದೆ ನಾವು ಈ ಸುಂದರ ಪ್ರಥ್ವಿಯಲ್ಲಿ ನೆಮ್ಮದಿಯಿಂದ ಬಾಳಬೇಕಾದರೆ ಬರಿಗಣ್ಣಿಗೆ ಕಾಣಿಸದ ಸೂಕ್ಷ್ಮಾಣುವಿನಿಂದ ಹಿಡಿದು ಅಳಿದುಳಿದಿರುವ ತಿಮಿಂಗಿಲದವರೆಗೆ ಸಕಲ ಜೀವರಾಶಿಗಳೂ ನಮ್ಮೊಂದಿಗೆ ಇರಲೇಬೇಕಾದ ಅನಿವಾರ್ಯತೆ ಇದೆ ಎನ್ನುತ್ತವೆ ವೈಜ್ಞಾನಿಕ ಸಂಶೋಧನೆಗಳು. ಹಾಗಾಗಿ ಮೂಕಜೀವರಾಶಿಗಳ ಪಾಲಿಗೆ ಸದಾ ರಕ್ಷಕರಾಗಿ ಬಾಳೋಣ.

  • ಗುರುರಾಜ್ ಸನಿಲ್, ಉರಗ ತಜ್ಞರು, ಉಡುಪಿ. ಮೊಬೈಲ್: 8494948844, 9845083869.

Leave a Reply

Your email address will not be published. Required fields are marked *