Realtime blog statisticsweb statistics
udupibits.in
Breaking News
# ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಮಲಾದೇವಿ ಚಟ್ಟೋಪಾಧ್ಯಾಯ ಹೆಸರಿಡಲು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಪತ್ರಕರ್ತ ಅಮ್ಮೆಂಬಳ ಆನಂದರಿಂದ ಸಿಎಂ ಕುಮಾರಸ್ವಾಮೀಗೆ ಮನವಿ.

ಮೊದಲ ತುಳು ಪತ್ರಿಕೆ ‘ತುಳುಸಿರಿ’ ಪ್ರಕಟಿಸಿದ ಅಮ್ಮೆಂಬಳ ಬಾಳಪ್ಪ ಹೆಸರಲ್ಲಿ ದತ್ತಿನಿಧಿ ಸ್ಥಾಪಿಸಲು ಡಾ.ಅಣ್ಣಯ್ಯ ಕುಲಾಲ್ ಒತ್ತಾಯ: ಮಂಗಳೂರಲ್ಲಿ ಬಾಳಪ್ಪ 96ನೇ ಜನ್ಮದಿನಾಚರಣೆ

ಮಂಗಳೂರು: ಸ್ವಾತಂತ್ರ್ಯ ಹೋರಾಟಗಾರರಾಗಿ, ಕಾರ್ಮಿಕ ನಾಯಕರಾಗಿ ಜನಾನುರಾಗಿಯಾಗಿಯಾದ ಡಾ//ಅಮ್ಮೆಂಬಳ ಬಾಳಪ್ಪ ಅವರು ‘ತುಳು ಸಿರಿ’ ಎಂಬ ಹೆಸರಿನಲ್ಲಿ ಮೊತ್ತ ಮೊದಲು ತುಳು ಮಾಸಿಕವನ್ನು ಹೊರತಂದವರು. ಇವರ ಹೆಸರಿನಲ್ಲಿ ದತ್ತಿ ನಿಧಿಯೊಂದನ್ನು ಸ್ಥಾಪಿಸಿ ಪ್ರತೀ ವರ್ಷ ಸ್ಮರಣೀಯವಾದ ಕಾರ್ಯಕ್ರಮವನ್ನು ನಡೆಸುವ ಕೆಲಸವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘ (ರಿ) ಇದರ ಕಾರ್ಯಾಧ್ಯಕ್ಷರಾದ ಡಾ.ಅಣ್ಣಯ್ಯ ಕುಲಾಲ್ ಅವರು ಅಕಾಡೆಮಿ ಅಧ್ಯಕ್ಷರಾದ ಎ.ಸಿ.ಭಂಡಾರಿ ಅವರ ಸಮಕ್ಷಮದಲ್ಲಿ ಅಕಾಡೆಮಿಯನ್ನು ಆಗ್ರಹಿಸಿದರು.

‘ಸ್ವಾತಂತ್ರ್ಯಯೋಧ ಡಾ//ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನ (ರಿ)’ದ ವತಿಯಿಂದ ಅಮ್ಮೆಂಬಳ ಬಾಳಪ್ಪನವರ 96ನೇ ಜನ್ಮ ದಿನಾಚರಣೆ ಅಂಗವಾಗಿ ಮಂಗಳೂರು ಪೊಲೀಸ್ ಲೇನ್ ನ ನಾಸಿಕ್ ಬಿ.ಎಚ್.ಬಂಗೇರ ಸಭಾ ಭವನದಲ್ಲಿ ಫೆಬ್ರವರಿ 23ರಂದು ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎ.ಸಿ.ಭಂಡಾರಿಯವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಅಮ್ಮೆಂಬಳ ಬಾಳಪ್ಪ ಅವರು ಒಬ್ಬರು ಮಹಾ ಮಾನವತಾವಾದಿ. ಭೂ ಮಸೂದೆ ಜಾರಿಯಾದಾಗ ಭೂ ನ್ಯಾಯ ಮಂಡಳಿ ಸದಸ್ಯರಾಗಿ ಬಡವರ ಪರವಾಗಿ ಭೂಮಿ ಪಡೆದುಕೊಳ್ಳಲು ಬೇಕು ಬೇಕಾದ ಎಲ್ಲಾ ಕೆಲಸಗಳನ್ನೂ ಮಾಡಿಕೊಡುವ ಮೂಲಕ ಅನೇಕ ಮಂದಿ ರೈತರಿಗೆ ಭೂಮಿಯನ್ನು ಒದಗುವಂತೆ ಪ್ರಾಮಾಣಿಕವಾಗಿ, ಅಹೋರಾತ್ರಿ ಶ್ರಮಿಸಿದವರು ಬಾಳಪ್ಪರು ಎಂದು ಎ.ಸಿ.ಭಂಡಾರಿಯವರು ಬಾಳಪ್ಪನವರ ಆ ಕಾಲದ ಜೀವನ ಮತ್ತು ಸಾಧನೆಯನ್ನು ಕೊಂಡಾಡಿದರು.

ಗಣಪತಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ, ಲೇಖಕಿ ಪ್ರೊ.ಚಂದ್ರಕಲಾ ನಂದಾವರ, udupibits.in ಜಾಲತಾಣದ ಸಂಪಾದಕರಾದ ಶ್ರೀರಾಮ ದಿವಾಣ ಹಾಗೂ ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘ (ರಿ)ದ ಅಧ್ಯಕ್ಷರಾದ ಸುಜೀರ್ ಶ್ರೀಧರ್ ಕುಡುಪು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಡಾ//ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ, ಹಿರಿಯ ಸಮಾಜವಾದಿ ಹೋರಾಟಗಾರ, ಪತ್ರಕರ್ತ ಅಮ್ಮೆಂಬಳ ಆನಂದ ಅವರು ಅಧ್ಯಕ್ಷತೆ ವಹಿಸಿದ್ದರು.

ಪ್ರತಿಷ್ಠಾನದ ಕಾರ್ಯದರ್ಶಿ ಉಮೇಶ್ ಪಿ.ಕೆ. ಸ್ವಾಗತಿಸಿರು. ಟ್ರಸ್ಟಿ ಡಿ.ಎಂ.ಕುಲಾಲ್ ಪ್ರಸ್ತಾವನೆಗೈದರು. ಟ್ರಸ್ಟಿ ದಾಮೋದರ ಬಿ.ಎಂ. ವಂದನಾರ್ಪಣೆ ಸಲ್ಲಿಸಿದರು. ಭೋಜ ಸರಳಪಾದೆ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ರೇಣುಕಾ ಪ್ರಾರ್ಥಿಸಿದರು.

Leave a Reply

Your email address will not be published. Required fields are marked *