Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ವೇದ, ಹಿಂದೂಗಳು ಮತ್ತು ಮಹರ್ಷಿ ದಯಾನಂದ ಸರಸ್ವತಿ ಬಗ್ಗೆ…

‘ದೀರ್ಘವಾದ ಅಂಧಕಾರಗಳು ನಾಲ್ಕೆಡೆಯಿಂದಲೂ ನಮ್ಮನ್ನು ಆವರಿಸದಿರಲಿ’: ಪರಿಶುದ್ಧ ಜ್ಞಾನಕ್ಕಾಗಿ ಸರ್ವಶ್ರೇಷ್ಠ ಪ್ರಾರ್ಥನೆ

# ಮಾನವ ಜಗತ್ತು ಈ ರೂಪಕ್ಕೆ ಬಂದಾಗಿನಿಂದ ಆರಂಭಿಸಿ ಈವರೆಗೆ ಲಕ್ಷ ಲಕ್ಷಾಂತರ ವರ್ಷಗಳಿಂದ ಅದೆಷ್ಟೋ ಪ್ರಾರ್ಥನೆಗಳನ್ನು ತನ್ನ ಸೃಷ್ಟಿಕರ್ತನ ಮುಂದೆ ಮಂಡಿಸುತ್ತಾ ಬಂದಿದ್ದಾನೆ; ಅದೆಷ್ಟೋ ವರದಾನಗಳಿಗಾಗಿ ಸೆರಗೊಡ್ಡಿ ತಲೆಬಾಗಿದ್ದಾನೆ. ಆದರೆ, ಮಾನವ ಅಂತಃಕರಣದ ಅಂತರತಮದಿಂದ ಹೊರಟ ”ಮಾ ನೋ ದೀರ್ಘಾ ಅನಭಿನಶನ್ ತಮಿಸ್ರಾಃ” ಎಂಬ ಋಗ್ವೇದಿಯ ಉದ್ಗಾರದ ಭವ್ಯತೆ ಮತ್ತು ವೈಶಾಲ್ಯದ ಮುಂದೆ ಅವನ ಉಳಿದೆಲ್ಲಾ ಕೋರಿಕೆಗಳೂ ಅಲ್ಪವಾಗಿಯೇ ತೋರುತ್ತವೆ. ”ಓ ಜ್ಯೋತಿರ್ಮಯ ! ದೀರ್ಘವಾದ ಅಂಧಕಾರಗಳು ನಾಲ್ಕೆಡೆಯಿಂದಲೂ ನಮ್ಮನ್ನು ಆವರಿಸದಿರಲಿ” ಎಂಬ ಈ ಒಂದು ಕಾಮನೆಯಲ್ಲಿ ಮಾನವ ಮಸ್ತಿಷ್ಕದಲ್ಲಿ ಮೂಡಬಹುದಾದ ಸಮಸ್ತ ಸತ್ಕಾಮನೆಗಳೂ ಅಡಕವಾಗಿವೆ.

ಬೆಳಕು ಬೇಕೆಂದು ಬಯಸುವುದು ಬುದ್ಧಿವಂತನಿಗೆ ಸಹಜವೇ ಸರಿ. ಆದರೆ, ಜೀವನ ಕೇವಲ ಪ್ರಕೃತಿಯ ಕ್ರೀಡಾರಂಗವಲ್ಲ; ಜೀವನದಲ್ಲಿ ಪ್ರಕೃತಿಯ ಪಾತ್ರಕ್ಕಿಂತ ಮಿಗಿಲಾಗಿ ಜೀವಾತ್ಮನ ಪಾತ್ರವಿದೆ. ಪ್ರಕೃತಿ ಜೀವಾತ್ಮನ ಜಾಗತಿಕ ವ್ಯವಹಾರಗಳಿಗೆ ನೆರವಾಗುವ ಸಲಕರಣೆಗಳನ್ನು ಮಾತ್ರ ಒದಗಿಸುತ್ತದೆ. ಜೀವನ ನಿರ್ವಾಹದ ಸಮಸ್ತ ಭರವೂ ಬಿದ್ದಿರುವುದು ಜೀವಾತ್ಮನ ಮೇಲೆಯೇ. ಆದಕಾರಣ, ಮಾನವನ ಆತ್ಮ ಹಂಬಲಿಸುವುದು ಕೇವಲ ಪ್ರಾಕೃತಿಕ ಪ್ರಕಾಶಕ್ಕಾಗಿ ಅಲ್ಲ; ಬೇಕೆಂದು ಬೇಡದಿದ್ದರೂ ಬೆಳಕು ಸೂರ್ಯ ಚಂದ್ರ ನಕ್ಷತ್ರಾದಿಗಳಿಂದ ತಾನಾಗಿಯೇ ಬಂದು ಬಂದು ಬಾಳಿಗೆ ಬೆರೆಯುತ್ತಿರುತ್ತದೆ. ಆದುದರಿಂದ, ಮಾನವ ”ದೀರ್ಘಾಂಧಕಾರಗಳು ಕವಿದು ಬಾರದಿರಲಿ” ಎಂದು ಜಗತ್ಕರ್ತನಲ್ಲಿ ಮೊರೆಯಿಡುವಾಗ, ಅವನ ಅಭಿಪ್ರಾಯ ಭೌತಿಕ ಪ್ರಕಾಶದ ಅಭಾವ ಉಂಟಾಗದಿರಲಿ ಎಂದಲ್ಲ; ಅದಕ್ಕಿಂತ ಆಳವಾದ ಮತ್ತೊಂದು ಕಾಮನೆ ಅವನ ಅಂತರಂಗದಲ್ಲಿ ಉದ್ಬವಿಸುತ್ತಿರುತ್ತದೆ. ಭೌತಿಕವಾದ ಪ್ರಕಾಶಕ್ಕಿಂತ ಮೇಲ್ಮಟ್ಟದಲ್ಲಿ, ಮತ್ತೊಂದು ಪ್ರಕಾಶವಿದೆ. ಅದು ಅಧ್ಯಾತ್ಮಿಕ ಪ್ರಕಾಶ. ತಿಳಿಮಾತಿನಲ್ಲಿ ಅದನ್ನು ಪರಿಶುದ್ಧ ಜ್ಞಾನವೆನ್ನುತ್ತಾರೆ. ಪರಿಶುದ್ಧ ಜ್ಞಾನದ ಅಭಾವವೇ ಅಧ್ಯಾತ್ಮಿಕ ಅಂಧಕಾರ. ಅಮಾವಾಸ್ಯೆಯ ನಡುರಾತ್ರಿಯ ಗಾಢಾಂಧಕಾಕಾರವಾದರೂ ಆದೀತು; ಅಧ್ಯಾತ್ಮಿಕ ಅಂಧಕಾರ, ದಟ್ಟವಾದ ಅಜ್ಞಾನ ಯಾರಿಗೂ ಬೇಡ. ಕಣ್ಮುಂದೆ ಕವಿದ ಕತ್ತಲನ್ನು ಕತ್ತರಿಸಿ ಕೊಡಹಲು ಕಷ್ಟವಷ್ಟಿಲ್ಲ. ಆದರೆ ಆತ್ಮನಿಗಡಿಸಿದ ಅಸಹ್ಯವಾದ ಅಂಧಕಾರವನ್ನು, ಅರಿವಿನ ಅಭಾವದಿಂದ ಆಕಾರವೆತ್ತಿ ಬರುವ ಅಜ್ಞಾನದ ಅಥ-ಇತಿಗಳಿಲ್ಲದ ಅಂಧಕಾರವನ್ನು ಅಳಿಸಿ ಹಾಕುವುದು ಅತಿ ಕಷ್ಟಸಾಧ್ಯ. ಆದೇ ಕಾರಣದಿಂದ, ಅಜ್ಞಾನಾಂಧಕಾರದ ನಿವಾರಣೆಗಾಗಿ ಮಾಡಲ್ಪಡುವ ಪ್ರಾರ್ಥನೆಯೇ ಸರ್ವಶ್ರೇಷ್ಠ ಪ್ರಾರ್ಥನೆ ಎಂದು ಎಂದು ನಾವು ಸಾರಿ ಹೇಳಿರುವುದು.

ನಮ್ಮ ಧರ್ಮದಲ್ಲಿ ಗಾಯತ್ರಿಗಿರುವ ಗೌರವಗರಿಮೆ ಮತ್ತಾವ ಮಂತ್ರಕ್ಕಿದೆ ? ಅಥರ್ವ ವೇದದಲ್ಲಿ ಗಾಯತ್ರಿಯನ್ನು ”ವೇದಮಾತಾ” ಎಂದು ಹೇಳಿದೆ. ಅದಕ್ಕೇಕೆ ಅಷ್ಟು ಮಹತ್ತ್ವ ? ಕಾರಣವಿಷ್ಟೇ; ಧನ-ಕನಕ ವಸ್ತು ವಾಹನಾದಿ ಅಷ್ಟೈಶ್ವರ್ಯಗಳಿಗಾಗಿ ಅಲ್ಲ, ”ಧಿಯಃ” ಎಂದರೆ ಬುದ್ದಿ ಮತ್ತು ಕರ್ಮಗಳ ಪ್ರಚೋದಕನ ರೂಪದಲ್ಲಿ ಪರಮಾತ್ಮನನ್ನು ಅಲ್ಲಿ ಸ್ಮರಿಸಿ, ಆ ಜಗದುತ್ಪಾದಕನಾದ ಜ್ಯೋತಿರ್ಮಯನ ಪಾಪ ನಿವಾರಕ ಜ್ಯೋತಿಯ ಧಾರಣೆಗಾಗಿ ಮಾಡಿರುವ ಸಂಕಲ್ಪ ಆ ಮಂತ್ರದಲ್ಲಿ ಅಭಿವ್ಯಕ್ತವಾಗಿದೆ. ಭಗವಂತನ ವರಣೀಯ ತತ್ತ್ವ; ಪರಿಶುದ್ಧ ಜ್ಞಾನ ಪ್ರಕಾಶ. ಅದರ ಧಾರಣದಿಂದ ಬುದ್ಧಿಗೆ ಮತ್ತು ಕರ್ಮಕ್ಕೆ ಪ್ರಚೋದನೆ ಪ್ರಾಪ್ತವಾಗುವುದರಲ್ಲಿ ಸಂದೇಹವಾದರೂ ಏನಿದೆ ? ಆರ್ಯರು ಅನಾದಿ ಕಾಲದಿಂದಲೂ ಪರಮಪಿತನಿಂದ ಬೇಡಿಕೊಳ್ಳುತ್ತಿದ್ದ ಈ ಜ್ಯೋತಿ ಪ್ರಕಾಶವಲ್ಲ. ಅದು ನಿರ್ಮಲಬೋಧದ್ಯುತಿಯೇ ಎಂಬ ಮಾತಿಗೆ ಋಗ್ವೇದದಲ್ಲಿನ ಈ ಮಂತ್ರ ಸಾಕ್ಷಿಯಾಗಿದೆ. ‘ಅಹಮಿದ್ದಿಪಿತುಃಪರಿ ಮೇಧಾಮೃತಸ್ಯ ಜಗ್ರಭ ! ಅಹಂ ಸೂರ್ಯ ಇವಾಜನಿ !!’ (೮-೬-೧೦) ”ನಾನಿಂದು ಸತ್ಯ ಸ್ವರೂಪನಾದ ಜಗತ್ಪಿತನ ಮೇಧಾಬಲವನ್ನು ಜ್ಞಾನ ಶಕ್ತಿಯನ್ನು ಪಡೆದುಕೊಂಡಿದ್ದೇನೆ. ನಾನು ಸೂರ್ಯನಂತೆ ಮೆರಗಹತ್ತಿದ್ದೇನೆ” ಅಹುದು. ಜ್ಞಾನ ಪ್ರಕಾಶದಿಂದ ತನ್ನ ಅಂತರಂಗವನ್ನು ಬೆಳಗಿಕೊಂಡ ಮಾನವ. ಮರ್ತ್ಯಲೋಕದಲ್ಲಿ ಸೂರ್ಯನಂತೆ ಮಿರುಮಿರುಗುತ್ತಾ ಮೆರೆಯುವುದರಲ್ಲಿ ಸಂದೇಹವೇ ಇಲ್ಲ.

ಅಧ್ಯಾತ್ಮಕ್ಕೆ ಬೆನ್ನುಮಾಡಿದಾಗ ಮಾನವನ ಪತನ ಆರಂಭವಾಯಿತು

ಎಂದಿನವರೆಗೆ ಮಾನವ ಜಾತಿ ಗಾಯತ್ರಿಗೆ ಶರಣಾಗಿದ್ದಿತೋ, ಗಾಯತ್ರಿಯ ಅರ್ಥವನ್ನು ಬಾಳಿಗಿಳಿಸಿಕೊಂಡಿದ್ದಿತೋ, ಅಂದಿನವರೆಗೆ ಮಾನವ ಸಮಾಜದಲ್ಲಿ ಸುಖ ಶಾಂತಿಗಳ ಸಾಮ್ರಾಜ್ಯವಿತ್ತು. ಆದರೆ, ಯಾವ ದುರ್ದಿನ ಮಾನವನ ನಾಲಿಗೆಯಿಂದ ಸಾರ್ವಭೌಮ ಸರ್ವೋತ್ಕೃಷ್ಟ ಸಿದ್ಧಾಂತ ಸಾರುವ ಗಾಯತ್ರಿ ನುಸುಳಿಹೋಗಿ, ಮತ ಮತಾಂತರಗಳ ಸಾವಿರಾರು ದೇವಿ ದೇವತೆಯರ ಸ್ತೋತ್ರಗಳು ಸುಳಿಯ ಹತ್ತಿದವೋ, ಎಂದಿನಿಂದ ಮಾನವ ಅಧ್ಯಾತ್ಮಿಕ ಜ್ಯೋತಿಯ ಕಡೆಗೆ ಬೆನ್ನು ಮಾಡಿ ಮತ ಮತಾಂತರಗಳ ಅಂಧಕಾರದಲ್ಲಿ ತಡವುತ್ತಾ ಮುಗ್ಗರಿಸುತ್ತಾ ನಡೆಯಲಾರಂಭಿಸಿದನೋ, ಅಂದಿನಿಂದಲೇ ಅವನ ಪತನ ಆರಂಭವಾಯಿತು. ಸಾವಿತ್ರೀಪತೀತರಾದ ವ್ರಾತ್ಯರೇ-ಗಾಯತ್ರಿಯ ಗರಿಷ್ಠವಾದ ಗದ್ದುಗೆಯಿಂದ ಜಾರಿಬಿದ್ದು ಪಥಭ್ರಷ್ಟ ಮಾನವರೇ ಧರ್ಮದ ವೈಶಾಲ್ಯಕ್ಕೆ ಸೊನ್ನೆ ಸುತ್ತಿ, ಅದಕ್ಕೆ ಸಂಪ್ರದಾಯದ ಸಂಕುಚಿತ ರೂಪವಿತ್ತು, ಅಖಂಡ ಮಾನವ ಜಾತಿಯನ್ನು ಖಂಡಖಂಡವಾಗಿ ಕತ್ತರಿಸಿ, ಜಗತ್ತಿನ ಶಾಂತಿಯನ್ನು ಕಲಕಿದರು.

ಜ್ಞಾನಜ್ಯೋತಿಯಿದ್ದಲ್ಲಿ ಧರ್ಮ; ಇಲ್ಲದೆಡೆ ಅಧರ್ಮ

ಅನಾದಿನಿಧನಾನಿತ್ಯಾವೇದವಾಣಿ ಜಗತ್ತಿಗಿತ್ತ ಅಮೂಲ್ಯ ವರದಾನ ಗಾಯತ್ರಿ; ”ನಿನ್ನ ಬುದ್ಧಿಯಲ್ಲಿ ಜ್ಞಾನಜ್ಯೋತಿ ಮೂಡಲಿ, ನಿನ್ನ ಕರ್ಮದಲ್ಲಿ ಜ್ಞಾನ ಪ್ರತಿಬಿಂಬಿತವಾಗಲಿ” ಎಂಬ ಗಾಯತ್ರಿ ಸಂದೇಶದಲ್ಲಿ ಮಾನವ ಜೀವನದ ಸಾಫಲ್ಯ ಸನ್ನಿಹಿತವಾಗಿದೆ. ಸ್ವತಃ ಬೆಳಕರಿಯದ ಬರಡುಬುದ್ಧಿ ಬೇರಾರ ಬಾಳಿಗೆ ತಾನೇ ಬೆಳಕನ್ನು ಬಸಿಯಬಲ್ಲದು ? ”ಆರ್ಯಾ ಜ್ಯೋತಿರಗ್ರಾಃ” ”ಜ್ಯೋತಿಯನ್ನು ಮುಂದಿಟ್ಟು ನಡೆವವರೇ ಆರ್ಯರು” ಎಂಬ ವೇದವಾಕ್ಯದಲ್ಲಿಯೂ ಕಂಡುಬರುವುದು ಜ್ಞಾನಜ್ಯೋತಿಯ ಉಗ್ಗಡಣೆಯೇ. ಜ್ಞಾನಜ್ಯೋತಿಯಿದ್ದಲ್ಲಿಯೇ ಧರ್ಮ; ಅದು ಇಲ್ಲದೆಡೆ ಕೇವಲ ಅಧರ್ಮವೇ.

ಧರ್ಮದ ಆಧಾರಶಿಲೆ ಪರಿಶುದ್ಧ ಜ್ಞಾನ; ಸಂಪ್ರದಾಯದ ತಳಹದಿ ಪಕ್ಷಪಾತ

ಧರ್ಮಕ್ಕೂ, ಸಂಪ್ರದಾಯಕ್ಕೂ ಇರುವ ವ್ಯತ್ಯಾಸ, ಜ್ಯೋತಿಗೂ ಅಂಧಕಾರಕ್ಕೂ ಇರುವ ವ್ಯತ್ಯಾಸಕ್ಕಿಂತ ಯಾವ ರೀತಿಯಲ್ಲಿಯೂ ಕಡಿಮೆಯಿಲ್ಲ. ಜ್ಯೋತಿಯಿರುವೆಡೆ ಪ್ರತಿಯೊಂದು ವಸ್ತುವೂ ತನ್ನ ತನ್ನ ರೂಪದಲ್ಲೇ ಕಂಡು ಬರುತ್ತದೆ. ಅಂಧಕಾರ ಕವಿದಾಗ ಎಲ್ಲದಕ್ಕೂ ಒಂದೇ ರೂಪ ! ಹಾಗೆಯೇ ಧರ್ಮದಲ್ಲಿ ಸತ್ಯಾಸತ್ಯ ವಿವೇಚನೆಗೆ ಅವಕಾಶವಿದೆ. ಸಂಪ್ರದಾಯದಲ್ಲಿ ಸತ್ಯಕ್ಕೆಷ್ಟು ಬೆಲೆಯೋ, ಅಸತ್ಯಕ್ಕೂ ಅಷ್ಟೇ ಬೆಲೆ. ಧರ್ಮವು ಜ್ಞಾನ ಜ್ಞಾನಜ್ಯೋತಿಯಿಂದ ಮಾನವನ ಅಂತರಂಗವನ್ನು ಬೆಳಗಿ ವಿಶಾಲಗೊಳಿಸಿದರೆ, ಸಂಪ್ರದಾಯ ಹೃದಯದ ತುಂಬ ಮತೀಯ ಪಕ್ಷಪಾತದ ಅಂಧಕಾರವನ್ನು ತುಂಬಿ, ಅದನ್ನು ಸಂಕುಚಿತವಾಗಿ ಮಾಡಿಬಿಡುತ್ತದೆ. ಧರ್ಮದ ಆಧಾರಶಿಲೆ ಪರಿಶುದ್ಧ ಜ್ಞಾನ; ಸಂಪ್ರದಾಯದ ತಳಹದಿ ಪಕ್ಷಪಾತ. ಜಗತ್ತಿನಲ್ಲಿ ಸಂಪ್ರದಾಯ ಪ್ರವರ್ತಕರೇನೋ ಅಸಂಖ್ಯರಾಗಿ ಹೋಗಿದ್ದಾರೆ; ಬಂದ ಬಂದವರೆಲ್ಲಾ ಒಂದೊಂದು ಸಂಪ್ರದಾಯದ ಸೈನ್ಯವನ್ನೂ ಬಿಟ್ಟು ಹೋಗಿದ್ದಾರೆ. ಈ ಸಾಂಪ್ರದಾಯಿಕ ಸೈನ್ಯಗಳ ಸೀಮಾತೀತ ಸಂಘರ್ಷದ ಸಾಂಕ್ರಾಮಿಕ ಪರಿಣಾಮವಾಗಿ, ಜನತೆಗೆ ಧರ್ಮದಲ್ಲಿಯೇ ನಂಬಿಕೆಯಿಲ್ಲದಂತಾಗಿದೆ. ಪ್ರತಿಯೊಂದು ಸಂಪ್ರದಾಯವೂ ಒಂದು ಧರ್ಮವೆಂದೇ ಪರಿಗಣಿತವಾದ ಕಾರಣ, ಒಂದು ವಿಶಾಲ ಸಾರ್ವಭೌಮ ಧರ್ಮದ ಕಲ್ಪನೆಯಳಿದು, ನೂರಾರು ಧರ್ಮಗಳ ಕಲ್ಪನೆ ಮೂಡಿ, ಧಾರ್ಮಿಕ ಕ್ಷೇತ್ರದಲ್ಲಿಯೂ ಕಿತ್ತಾಟ ಆರಂಭವಾಗಿ ಹೋಯಿತು. ಇಪ್ಪತ್ತೆಂಟು ಧರ್ಮಗಳಾದ ಮೇಲೆ, ನೂರಾರು ದೇವರುಗಳೂ ನೂರಾರು ಸ್ವರ್ಗಗಳೂ ಬೇಡವೇ ?

ಮಹರ್ಷಿ ದಯಾನಂದರು ಜನ್ಮವೆತ್ತಿ, ಬೆಳೆದು, ಬಲಿದು, ತಮ್ಮ ಕಾರ್ಯವನ್ನಾರಂಭಿಸಿದ ಕಾಲದ ಕಡೆ ನಾವು ದೃಷ್ಟಿ ಬೀರಿದಾಗ, ನಮಗೆ ಕಂಡು ಬರುವುದು ಇದೇ ಸ್ಥಿತಿ. ಧರ್ಮದ ತಳಹದಿಯಾದ ಜ್ಞಾನಜ್ಯೋತಿ ಕಣ್ಮರೆಯಾದಾಗಮ, ಅಜ್ಞಾನದ ಮೊಬ್ಬು ಕವಿದೇ ತೀರುವುದು. ಅಜ್ಞಾನದ ಅಂಧಕಾರದಲ್ಲಿ ಹೃದಯ ವೈಶಾಲ್ಯ ಶೂನ್ಯ ವಿಲೀನವಾಗಿ ಸ್ವಾರ್ಥ ವೃತ್ತಿ ತಲೆಯೆತ್ತುತ್ತದೆ. ”ಇದಂ ನ ಮಮ” ”ಇದು ನನ್ನದಲ್ಲ ಎಂಬ ತ್ಯಾಗ ಭಾವನೆಯನ್ನು ಮಾನವರ ಎದೆಯಲ್ಲಿ ದೃಢಗೊಳಿಸಿ, ಔದಾರ್ಯದ ದಿವ್ಯ ಪಾಠವನ್ನು ಕಲಿಸಲು ಧರ್ಮದ ವ್ಯಾವಹಾರಿಕ ರೂಪವಾಗಿ ವೇದವಾಣಿ ಭೋಧಿಸಿದ ಪವಿತ್ರ ಯಜ್ಞ ವಿಧಿ ಸ್ವಾರ್ಥಿಗಳ ಕೈಗೆ ಸಿಕ್ಕಿ, ಅಸಂಖ್ಯ ಮೂಕ ಪಶುಗಳ ನೇಶಂಸ ಹತ್ಯೆಯ ರಾಕ್ಷಸ ಕೃತ್ಯವಾಗಿ ಮಾರ್ಪಟ್ಟಿದ್ದಿತು. ಈ ರಾಕ್ಷಸೀ ವೃತ್ತಿಯ ಘೋರ ದೃಶ್ಯದ ದರ್ಶನದಿಂದ ಮನನೊಂದ ತೀರ್ಥಂಕರ ಮಹಾವೀರ ಹಾಗೂ ತಥಾಗತ ಬುದ್ಧರು, ವೇದಗಳ ನಿಜವಾದ ಅರ್ಥವನ್ನರಿಯದೆ, ವೇದ ವಿಮುಖರಾಗಿ, ಸಾರ್ವಭೌಮ ವೇದಧರ್ಮಕ್ಕೆ ಪ್ರತಿಯಾಗಿ ತಮ್ಮ ತಮ್ಮದೇ ಆದ ಮತಗಳನ್ನು ನೆಲೆಗೊಳಿಸಿ ನಡೆದರು.

ಮಹಾಪುರುಷರಿಗೆ ದೇವರ ಪಟ್ಟ ಕೊಟ್ಟರು

ವೈದಿಕ ಧರ್ಮಕ್ಕೆ ಈ ಎರಡು ಅವೈದಿಕ ಮತಗಳಿಂದ ಉದ್ಬವಿಸಿದ ಉಪಹತಿಯನ್ನು ನಿವಾರಿಸುವ ಸಲುವಾಗಿ, ವೈದಿಕ ಧರ್ಮದ ರಕ್ಷಕರಾಗಿ ರಣರಂಗಕ್ಕಿಳಿದ ಆಚಾರ್ಯ ಶಂಕರರೂ, ಆಚಾರ್ಯ ರಾಮಾನುಜರೂ, ಆಚಾರ್ಯ ಮಧ್ವರೂ, ಆಚಾರ್ಯ ವಲ್ಲಭರೂ, ಆಚಾರ್ಯ ನಿಂಭಾರ್ಕರೂ, ವೇದ ಧರ್ಮದ ಹೆಸರಿನಲ್ಲಿ ತಮ್ಮ ತಮ್ಮವೇ ಆದ ಸಂಪ್ರದಾಯಗಳನ್ನು ಬಿಟ್ಟು ಹೋಗಿದ್ದರು. ಅಜ್ಞಾನದ ಅಂಧಕಾರ ಅಂತರಂಗಕ್ಕಡಸಿ ಆಳಕ್ಕಿಳಿದಾಗ, ವೇದೋಕ್ತನಾದ ನಿತ್ಯ ಶುದ್ಧ ಬುದ್ದ ಮುಕ್ತ ಸ್ವಭಾವನಾದ, ಸಚ್ಚಿದಾನಂದ ಸ್ವರೂಪನಾದ, ಜಗತ್ಕರ್ತೃ ಪ್ರಹರ್ತೃವಾದ, ನಿರಾಕಾರ-ನಿರ್ವಿಕಾರ, ಸರ್ವ ವ್ಯಾಪಕ ಸರ್ವಜ್ಞ ಹಾಗೂ ಅಖಂಡ-ಏಕರಸನಾದ ಏಕಮಾತ್ರ ಉಪಾಸನೀಯವಾದ ವಿಶ್ವಾತ್ಮನ ಧ್ಯಾನ-ಸ್ಮರಣ-ಮನನ-ಚಿಂತನಗಳು ಮಾಯವಾಗಿ, ನಮ್ಮಂತೆಯೇ ಹುಟ್ಟುವ-ಸಾಯುವ, ಅಳುವ-ನಗುವ, ತಿನ್ನುವ-ಕುಡಿಯುವ, ನಲಿಯುವ-ಕನಲುವ, ಮದುವೆ ಮಾಡಿಕೊಂಡು ಮಕ್ಕಳು-ಮರಿಗಳನ್ನು ಹೆರುವ ಹೊರುವ, ನಮ್ಮಂತೆಯೇ ಬೇಕು-ಬೇಡಗಳ ತುಯ್ದಾಟಕ್ಕೆ ಸಿಕ್ಕಿ, ರೊಚ್ಚಿಗೆದ್ದು ಹೋರಾಡುವ ನೂರಾರು ಗಂಡು-ಹೆಣ್ಣು ದೇವೀ-ದೇವತೆಯರ ಕಾಲ್ಪನಿಕ ವಿಗ್ರಹಗಳ ನಾನಾ ವಿಧವಾದ ಪೂಜಾ ವಿಧಾನಗಳು ಎಲ್ಲೆಡೆಯೂ ಹರಡಿದವು. ಜಗತ್ಕರ್ತನಾದ ದೇವರೆ ಇಲ್ಲವೆಂದು ಸಾರಿದ ಜೈನ-ಬೌದ್ದರು, ಅಲ್ಪಜ್ಞರೂ ಅಲ್ಪಶಕ್ತರೂ ಆದ, ಮಹಾ ಸುಧಾರಕರಾದರೂ ಮಹಾತ್ಮರಾದರೂ ಮರ್ತ್ಯರಾದ, ಮಾನವರೇ ಆದ ಮಹಾವೀರ-ಬುದ್ದರನ್ನು ದೇವರ ಪಟ್ಟಕ್ಕೇರಿಸಿದರೆ, ವೈದಿಕರೆನಿಸಿಕೊಂಡವರೂ, ಶ್ರೀರಾಮ-ಶ್ರೀಕೃಷ್ಣ ಮೊದಲಾದ ಮಹಾಪುರುಷರನ್ನು ಪರಮಾತ್ನಮ ಅವತಾರಗಳೆಂದು ಕರೆದರು. ಜೈನ-ಬೌದ್ದರ ಪ್ರತಿಮಾ ಪೂಜನವಿಧಿ ವೈದಿಕರೆನಿಸಿಕೊಂಡವರ ಸಮಾಜಕ್ಕೂ ಕಾಲಿಟ್ಟಿತು.

ವೇದಾಧ್ಯಯನದ ಪರಿಪಾಟ ತಪ್ಪಿಹೋದ ಕಾರಣ, ಜ್ಞಾನಜ್ಯೋತಿ ಆರಿಹೋಗಿ, ವೈದಿಕ ಸಿದ್ಧಾಂತಗಳೆಲ್ಲ ವಿಕೃತವಾಗಿ ಹೋದವು. ಪ್ರತಿಯೊಬ್ಬ ಮಾನವನ ವಯಕ್ತಿಕ, ಸಾಮಾಜಿಕ ಹಾಗೂ ರಾಷ್ಟ್ರೀಯ ಉತ್ಕರ್ಷಕ್ಕೆ ಪೂರ್ಣ ಸಹಕಾರಿಯಾದ, ಪ್ರತಿಯೊಬ್ಬ ವ್ಯಕ್ತಿಯ ಗುಣಕರ್ಮ ಸ್ವಭಾವಗಳ ಆಧಾರದ ಮೇಲೆ ಆಶ್ರಿತವಾದ, ಪರಮ ವೈಜ್ಞಾನಿಕವಾದ ವೈದಿಕ ವರ್ಣ ವ್ಯವಸ್ಥೆ ರೂಪಗೆಟ್ಟು, ಮಾನವ-ಮಾನವರ ಮಧ್ಯೆ ವೈಷಮ್ಯದ ವಿಷಬೀಜ ಬಿತ್ತಿ, ಮಾನವ ದ್ರೋಹಕರವಾದ ಕೃತ್ರಿಮ ಬೇಧ ಭಾವನೆಗಳನ್ನು ಬೆಳೆಸಿ ಅಖಂಡವಾದ ಮಾನವ ಜಾತಿಯನ್ನು ಭಿನ್ನ ಭಿನ್ನವಾಗಿ ಸೀಳಿ ಕೆಡಹುವ ಜಾತಿ ಪದ್ಧತಿಯಂತಹ ಜನ್ಮಗತವಾದ ರಾಕ್ಷಸೀ ಪದ್ಧತಿ ದೇಶದಲ್ಲೆಲ್ಲಾ ಹರಡಿತು. ಈ ದುಷ್ಟ ಪದ್ಧತಿಯ ಕಹಿ ಪರಿಣಾಮವಾಗಿ ಅಸ್ಪಶ್ಯತೆ, ಅದೃಶ್ಯತೆ, ಅಸಮೀಪಗಮ್ಯತೆ, ಮೊದಲಾದ ಧರ್ಮದ್ರೋಹಕರವಾದ ವ್ಯವಹಾರಗಳು ತಲೆ ಎತ್ತಿದವು.

ಈ ಕ್ರೂರ ಪದ್ಧತಿಗೆ ವಿರುದ್ಧವಾಗಿ ಕೂಗೆಬ್ಬಿಸಿದ ಮಹಾವೀರ, ಬುದ್ಧ, ಕಬೀರ, ನಾನಕ ಮೊದಲಾದವರು ತಮ್ಮದೇ ಆದ ತಂಡಗಳನ್ನು ಬಿಟ್ಟು ಹೋಗಿದ್ದರು. ವೈದಿಕ ಆಶ್ರಮ ಪದ್ಧತಿ ಪೂರ್ಣತಃ ಲುಪ್ತವಾಗಿ ಹೋಗಿ, ವಾನಪ್ರಸ್ಥ-ಸಂನ್ಯಾಸಗಳು ನಿರ್ಮೂಲವಾಗಿ ಅವಿವಾಹಿತ-ವಿವಾಹಿತ ಎಂಬೆರಡೇ ಭೇದಗಳು ಉಳಿದಿದ್ದವು. ಪುರುಷರು ಕನಿಷ್ಠ ಪಕ್ಷ 25 ವರ್ಷಗಳ ವರೆಗೆ ಹಾಗೂ ಸ್ತ್ರೀಯು ಕನಿಷ್ಠ ಪಕ್ಷ 16 ವರ್ಷಗಳವರೆಗೆ ಅಖಂಡ ಬ್ರಹ್ಮಚರ್ಯ ಪಾಲಿಸಬೇಕೆಂಬ ವೇದಾದೇಶ ಮರೆಯಾಗಿ, ಹುಡುಗರ ಬ್ರಹ್ಮಚರ್ಯ 15-16 ವರ್ಷಕ್ಕೂ, ಹುಡುಗಿಯರ ಬ್ರಹ್ಮಚರ್ಯ 7-8 ವರ್ಷಕ್ಕೂ ಮಣ್ಣುಗೂಡಿ ಅವರು ವಿವಾಹಿತರಾಗಿ ಹೋಗುತ್ತಿದ್ದರು. ಇನ್ನೂ ಎಳೆ ವಯಸ್ಸಿನಲ್ಲೇ ಆರಂಭವಾದ ಆ ಗ್ರಹಸ್ಥ ಜೀವನ, ಜೀವನದ ಕೊನೆಯುಸಿರಿನೊಂದಿಗೇ ಕೊನೆಯಾಗುತ್ತಿತ್ತು.

ಒಂದು ಕಾಲನ್ನು ಸ್ಮಶಾನದಲ್ಲಿಯೂ, ಇನ್ನೊಮದು ಕಾಲನ್ನು ಮನೆಯಲ್ಲಿಯೂ ಇಟ್ಟಿದ್ದ, ಬಾಳಿನ ಸಂಜೆಯಲ್ಲಿದ್ದ, ಬೊಕ್ಕ ಬಾಯಿಯ, ಗೂನು ಬೆನ್ನಿನ, ನಡುಗು ತಲೆಯ ಮುದುಕನಿಗೂ ಸಹ ಅವನು ವಿಧುರನಾದರೆ, ಹಲವು ವೇಳೆ ವಿಧುರನಾಗದಿದ್ದರೂ ಸಹ ಕೇವಲ ಇಚ್ಛಾ ಪೂರ್ತಿಗಾಗಿ, ಎಳೆ ವಯಸ್ಸಿನ ಕೋಮಲ ಕನ್ಯೆಯರ ಕೈ ಹಿಡಿವ ಅಧಿಕಾರವಿತ್ತು. ಆದರೆ 7-8 ವರ್ಷದ ಕೂಸೇ ಆಗಿರಲೊಲ್ಲಳೇಕೆ ಹುಡುಗಿ ಏನಾದರೂ ವಿಧವೆಯಾಗಿ ಹೋದಳೆಂದರೆ ಅವಳು ಬರಿ ಹಣಿ ಹೊತ್ತು, ಭಾರವಾದ, ಹೃದಯ ಹೊತ್ತು, ಕಣ್ತುಂಬ ನೀರನ್ನು ಹೊತ್ತು, ಮನದಲ್ಲಿ ಸಹಜವಾಗಿಯೇ ಏಳುವ ಕಾಮನೆಗಳನ್ನೆಲ್ಲಾ ನುಂಗಿಕೊಳ್ಳುತ್ತಾ ಸತ್ತ ಗಂಡನ ನೆನಪಿನಲ್ಲೇ ಜೀವನವನ್ನೆಲ್ಲಾ ತೇಯಬೇಕಾಗುತ್ತಿತ್ತು. ರಾಜರಾಮ ಮೋಹನ ರಾಯನ ಪ್ರಯತ್ನದಿಂದ ಸಹಗಮನ ಪದ್ಧತಿ ಕಾನೂನಿನ ಮೂಲಕ ನಿಷೇಧಿಸಲ್ಪಟ್ಟಿದ್ದರೂ ಕೂಡ ದೇಶದಲ್ಲಿ ಅಲ್ಲಲ್ಲಿ ಬಲವಂತದ ಸಹಗಮನಗಳು ನಡೆಯುತ್ತಲೇ ಇದ್ದುವು.

ಸ್ತ್ರೀಯರ ಹಾಗೂ ಶೂದ್ರರ ಸಾಮಾಜಿಕ ಅಧಿಕಾರಗಳೆಲ್ಲಾ ಸಂಪೂರ್ಣವಾಗಿ ಕಿತ್ತುಕೊಳ್ಳಲ್ಪಟ್ಟಿದ್ದುವು. ಮಾನವ ಶರೀರಧಾರಿಗಳಾದ ಪಶುಗಳಂತೆಯೇ ಅವರು ಬಾಳಬೇಕಾಗಿದ್ದಿತ್ತು.

ವೈದಿಕ ಯಜ್ಞ ಪದ್ಧತಿ, ಉಪಾಸನಾ ಕ್ರಮ ನಾಶವಾಗಿ ಸಾವಿರಾರು ದೇವಿ ದೇವತೆಯರ ಪೂಜಾ ವಿಧಾನ ಹುಟ್ಟಿ ಸಮಾಜದಲ್ಲಿ ಐಕ್ಯಮತ್ಯವಿರಲಿಲ್ಲ; ಜಾತಿ ಪದ್ಧತಿಯ ಪ್ರಸಾರದಿಂದ; ಸಮಾನ ಭಾವನೆಗೆ ಅವಕಾಶ ಉಳಿದಿರಲಿಲ್ಲ. ಹೀಗಾಗಿ, ಆರ್ಯ ಜನಾಂಗ ನೂರಾರು ಮತ ಸಂಪ್ರದಾಯಗಳಲ್ಲಿ ಹರಿದು ಹಂಚಿ ಹೋಗಿದ್ದಿತು. ತ್ಯಾಗದ ಆಧಾರದ ಮೇಲೆ ನಿಂತು ವೈದಿಕ ಧರ್ಮದ ಸ್ಥಾನವನ್ನು, ಭೋಗದ ಆಧಾರದ ಮೇಲೆ ನಿಂತ ಪೌರಾಣಿಕ ಮತ ಮತಾಂತರಗಳು ಆಕ್ರಮಿಸಿದ ಕಾರಣ, ಧರ್ಮದ ಹೆಸರಿನಲ್ಲಿಯೇ ಅನಾಚಾರ ಹಾಗೂ ಅಭಕ್ಷ್ಯ-ಭಕ್ಷಣ-ಪೇಯ ಪಾನೀಯಗಳಿಗೆ ಪ್ರಶ್ರಯ ನೀಡುವ ಶಾಕ್ತ ಸಂಪ್ರದಾಯಗಳು ಹರಡಿದ್ದುವು. ಆರ್ಯಾವರ್ತದ ಧಾರ್ಮಿಕ ಹಾಗೂ ಸಾಮಾಜಿಕ ಜೀವನವಂತು ಘೋರ ನಿರಾಶಾಂಧಾಕಾರದಲ್ಲಿ ಲೀನವಾಗಿಯೇ ಇದ್ದಿತು; ಮಹರ್ಷಿ ದಯಾನಂದರು ಕಾರ್ಯರಂಗಕ್ಕೆ ಕಾಲಿಡುವ ಕಾಲಕ್ಕೆ, ಭಾರತವರ್ಷದ ಮೇಲೆ ಮತ್ತೊಂದು ಪ್ರಬಲವಾದ ಸಾಂಸ್ಕೃತಿಕ ಧಾಳಿಯೂ ಆರಂಭವಾಗಿ ಹೋಗಿದ್ದಿತು.

ಮಹರ್ಷಿ ದಯಾನಂದ ಸರಸ್ವತಿ (1824-1883)

ಮೊಗಲ ಸಾಮ್ರಾಜ್ಯ ಭಗ್ನಾವಶೇಷವಾಗಿ, ಏಕ ರಾಷ್ಟ್ರದ ಕಲ್ಪನೆ ಅಳಿದು, ಭಾರತವರ್ಷ ನೂರಾರು ಸಣ್ಣ ಸಣ್ಣ ರಾಜ್ಯಗಳಾಗಿ ಒಡೆದಿದ್ದಿತು. ಮೊಗಲರೊಂದಿಗೆ ಸೆಣಸುತ್ತಿದ್ದ ರಾಜಪುತ್ರ ಹಾಗೂ ಮರಾಠರ ಶಕ್ತಿ ತಣ್ಣಗಾಗಿದ್ದಿತು. ಮೊಗಲ್ ಸಾಮ್ರಾಟ್ ಜಹಾಂಗೀರನ ದರಬಾರಿನಲ್ಲಿ ಕೇವಲ ವ್ಯಾಪಾರ ಸೌಲಭ್ಯಗಳನ್ನು ಕೇಳಿಕೊಳ್ಳಲು ಸರ್ ಥಾಮಸ್‌ರೋ ಮಹಾಶಯನನ್ನು ಕಳುಹಿಸಿದ್ದ ಆಂಗ್ಲ ಕಂಪೆನಿಯವರು ಆ ಉದ್ದೇಶ್ಯದಲ್ಲಿ ಸಫಲರಾಗಿದ್ದರು. ಸೂರತ್‌ನಲ್ಲಿ ವ್ಯಾಪಾರಕೋಠಿ ಕಟ್ಟಿ, ಮೆಲ್ಲ ಮೆಲ್ಲನೆ ರಾಜಕೀಯಕ್ಕೆ ಇಳಿಯಹತ್ತಿದ್ದ ಈಸ್ಟ್ ಇಂಡಿಯಾ ಕಂಪೆನಿ, ನಮ್ಮ ಚರಿತ್ರ ನಾಯಕನೂ ಉದಯವಾಗುವ ಹೊತ್ತಿಗಾಗಲೇ ಸಮಗ್ರ ಭಾರತದ ಪ್ರಭುವಾಗಿ ಕುಳಿತಿದ್ದಿತು. ಆಸೇತು ಹಿಮಾಚಲ ಪರ್ಯಂತ ಆಂಗ್ಲ ರಾಜ್ಯ ಕಂಗೊಳಿಸುತ್ತಿತ್ತು. ತಮ್ಮನ್ನು ಶ್ರೀರಾಮ-ಶ್ರೀಕೃಷ್ಣರ ವಂಶಜರೆಂದು ಹೇಳಿಕೊಳ್ಳುತ್ತಿದ್ದ ಧೀರವೀರ ರಜಪೂತ ರಾಜರುಗಳು ಆಂಗ್ಲರ ಅಡಿಯಾಳ್ತನಕ್ಕೆ ತಮ್ಮ ಒಪ್ಪಿಗೆಯಿತ್ತಿದ್ದರು. ರಾಜನೈತಿಕ ದೃಷ್ಟಿಯಿಂದ ಭಾರತವರ್ಷ ಪರತಂತ್ರವಾಗಿ ಹೋಗಿದ್ದಿತು.

ಆಂಗ್ಲರ ವ್ಯಾಪಾರೀ ತಂಡ ಹಾಗೂ ಸೈನ್ಯಗಳೊಂದಿಗೇ ಕೈಯ್ಯಲ್ಲಿ ಬೈಬಲ್ಲನ್ನು ಹಿಡಿದ ಕ್ರೈಸ್ತ ಪಾದರಿಗಳೂ ಸಮಸ್ತ ಭಾರತವನ್ನು ಭಗವಾನ್ ಏಸು ದೇವನ ಚರಣತಳಕ್ಕೆ ಕೆಡಹಬೇಕೆಂಬ ಸಂಕಲ್ಪ ಹೊತ್ತು ಗುಂಪು ಗುಂಪಾಗಿ ಬಂದಿಳಿಯುತ್ತಿದ್ದರು. ಕೇರಳ, ದ್ರಾವಿಡ ಮತ್ತು ವಂಗ ಪ್ರಾಂತ್ಯಗಳಲ್ಲಿ ಛಲ-ಬಲಗಳಿಂದ ಕ್ರೈಸ್ತ ಪಾದರಿಗಳಿಗೆ ಆಶಾತೀತ ಸಾಫಲ್ಯ ಸಿಕ್ಕುತ್ತಿದ್ದಿತು. ಮೊದಲನೆಯದಾಗಿ, ಶಾಸಕರ ಜನಾಂಗಕ್ಕೆ ಸೇರಿದವರು, ಬಿಳೀ ಚರ್ಮದವರು; ಸರಕಾರದ ಸಹಾಯ ಪಡೆದವರು. ಎರಡನೆಯದಾಗಿ, ವಿದ್ಯಾಶಾಲೆಗಳನ್ನು, ಆಸ್ಪತ್ರೆಗಳು, ಕ್ರೀಡಾ ಸೌಲಭ್ಯಗಳು, ನಿರ್ಧನರಿಗೆ ಆರ್ಥಿಕ ವ್ಯವಸ್ಥೆ ಇವನ್ನೆಲ್ಲಾ ಏರ್ಪಡಿಸಬಲ್ಲ ಶಕ್ತಿ. ಮೂರನೆಯದಾಗಿ, ತಮ್ಮ ಮತದ ಕುಂದು-ಕೊರತೆಗಳನ್ನೆಲ್ಲಾ ಮುಚ್ಚಿಟ್ಟು, ಹಿಂದುಗಳ ಸಂಪ್ರದಾಯಗಳ ಹುಳುಕುಗಳನ್ನು ಮಾತ್ರ ಹೆಕ್ಕಿ ಹೆಕ್ಕಿ ತೋರಿಸಿ ತಮ್ಮ ಸಿದ್ಧಾಂತದ ಸುಂದರ ಭಾಗವನ್ನು ಉಗ್ಗಡಿಸಿ, ಯುಕ್ತಿಯುಕ್ತವಾದ ತರ್ಕದಿಂದ ಸುಶಿಕ್ಷಿತ ಹಿಂದೂ ಯುವಕರ ಹೃದಯಗಳನ್ನು ಗೆಲ್ಲುವ ಜಾಣ್ಮೆ. ಈ ಎಲ್ಲಾ ಪ್ರಭಾವಶಾಲಿಗಳಾದ ಜ್ಞಾನವಿಲ್ಲದಿರುವಿಕೆ ಮತ್ತು ಸಾಮಾಜಿಕ ದುಷ್ಟ ಪದ್ಧತಿಗಳು ಎರಡೂ ಸೇರಿ, ಆರ್ಯ ಧರ್ಮದ ಹೆಸರಾದರೂ ಹೇಳಲು ಉಳಿದೀತೋ ಇಲ್ಲವೋ ಎಂಬಂತಹ ಭೀಕರ ಪರಿಸ್ಥಿತಿ ಉದ್ಭವಿಸಿದ್ದಿತು. ಕೇರಳೀಯ, ದ್ರಾವಿಡ ಹಾಗೂ ಬಂಗಾಳೀ ಸುಶೀಕ್ಷಿತರು ಹಾಗೂ ಅವರ ಹಿಂದೆ ಆರ್ಥಿಕ ಹಾಗೂ ಸಾಮಾಜಿಕ ಸೌಲಭ್ಯಗಳಿಗೆ ಮನಸೋತ ಅಶಿಕ್ಷಿತರೂ ಕೂಡ ಗುಂಪು ಗುಂಪಾಗಿ ಕ್ರೈಸ್ತ ಮತದಲ್ಲಿ ದೀಕ್ಷಿತರಾಗುತ್ತಿದ್ದರು.

ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳದೆ ಆಕ್ರಮಣ ತಡೆಗಟ್ಟಲು ಸಾಧ್ಯವಿಲ್ಲ

ಪರಿಸ್ಥಿತಿ ಇಷ್ಟು ಭಯಾನಕ ಹಾಗೂ ಚಿಂತಾಜನಕವಾಗಿದ್ದಾಗಲೂ ಸಹ ಹಿಂದೂ ಮತ ಮತಾಂತರಗಳ ನಾಯಕರು ”ಉರ್ಧ್ವ ಪುಂಡ್ರವೋ, ಉದ್ದ ತಿಲಕವೋ, ವಿಭೂತಿ ಪಟ್ಟೆಯೋ ? ತುಳಸಿ ಮಾಲೆಯೋ, ರುದ್ರಾಕ್ಷಿ ಮಾಲೆಯೋ ?, ಶಿವ ದೊಡ್ಡವನೋ, ವಿಷ್ಣುವೋ ? ಹೀನ ಜಾತಿಯವರು ಮೇಲೇರಬಯಸಿದರೆ, ಅವರಿಗೇನು ದಂಡ ವಿಧಿಸಬೇಕು ? ಜಾತಿ ಬೆರೆಸುವವರನ್ನು ಎಲ್ಲಿಡಬೇಕು ? ಸಮುದ್ರಯಾನ ಮಾಡಿದವರಿಗೆ ಏನು ಪ್ರಾಯಶ್ಚಿತ್ತ ? ಎಂದು ಚಿಂತಿಸುತ್ತಿದ್ದರೇ ಹೊರತು ತಮ್ಮೆಲ್ಲಾ ಸಂಪ್ರದಾಯಗಳಿಗೂ ಮೂಲಾಧಾರವಾದ ವೇದಗಳ ದಿವ್ಯ ಜ್ಞಾನದ ಜ್ಯೋತಿಯನ್ನು ಮತ್ತೊಮ್ಮೆ ಎಚ್ಚರಿಸಿ, ವಿಮತೀಯರ ಆಕ್ರಮಣದ ಅಂಧಕಾರವನ್ನು ತರಿದೊಟ್ಟುವ ಆಲೋಚನೆಯನ್ನೇ ಮಾಡುತ್ತಿರಲಿಲ್ಲ. ಪೌರಾಣಿಕ ದೇವಿ ದೇವತೆಯರ ವ್ಯಭಿಚಾರ ಲೀಲೆಗಳನ್ನು ಎತ್ತಿ ಎತ್ತಿ ವರ್ಣಿಸಿ, ಏಸು ಕ್ರಿಸ್ತನ ಪವಿತ್ರತೆಯನ್ನು ಮನದಟ್ಟಾಗುವಂತೆ ಎತ್ತಿ ಹಾಡಿ ಹಿಂದುಗಳ ಹೃದಯಗಳನ್ನು ಆಕರ್ಷಿಸುತ್ತಿದ್ದ ಕ್ರೈಸ್ತ ಪಾದರಿಗಳ ಪ್ರಶ್ನೆಗಳಿಗೆ ಹಿಂದೂ ಮತ ಮತಾಂತರಗಳ ಆಚಾರ್ಯರುಗಳ ಬಳಿ ಯಾವ ಉತ್ತರವೂ ಇರಲಿಲ್ಲ. ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳದೆ, ವಿಮತೀಯರ ಆಕ್ರಮಣ ತಡೆಗಟ್ಟಲು ಸಾಧ್ಯವೂ ಇರಲಿಲ್ಲ. ಆದರೆ ಮತೀಯ ಆಗ್ರಹ ಮಿತಿ ಮೀರಿದಾಗ, ಸುಧಾರಣೆಯ ಯೋಚನೆಗವಕಾಶವೆಲ್ಲಿ ? ”ತಮ್ಮ ಮತಗಳೇ ಪರಿಪೂರ್ಣ; ಅದನ್ನು ಬಿಡುವುದು ತಮ್ಮ ಆತ್ಮಗಳಿಗೆ ದ್ರೋಹ ಮಾಡಿಕೊಳ್ಳುತ್ತಾರೆ ಅಷ್ಟೆ” ಎಂದುಕೊಂಡು, ಹಿಂದೂ ನಾಯಕರು ನಿಶ್ಚಿಂತರಾಗಿ ಕುಳಿತಿದ್ದರು. ಕ್ರೈಸ್ತರು ದಿನ ದಿನಕ್ಕೆ ಪ್ರಬಲರಾಗುತ್ತಿದ್ದರು.

ಬಂಗಾಳದ ಸುಪ್ರಸಿದ್ಧ ರಾಜರಾಮ ಮೋಹನ ರಾಯರು, ‘ಬ್ರಾಹ್ಮ ಸಮಾಜ’ವನ್ನು ಸ್ಥಾಪಿಸಿ, ಹಿಂದೂ ಜನಾಂಗದ ಸಾಮಾಜಿಕ ಲೋಪ ದೋಷಗಳನ್ನು ದೂರೀಕರಿಸಿ, ವಿಗ್ರಹಾರಾಧನೆ-ಜಾತಿ ಪದ್ಧತಿಗಳನ್ನು ಖಂಡಿಸಿ, ಏಕದೇವೋಪಾಸನೆಯನ್ನು ಪ್ರಸರಿಸಿ, ಕ್ರೈಸ್ತರಾಗುತ್ತಿದ್ದ ಹಿಂದೂ ಯುವಕರನ್ನು ಹಿಂದೂಗಳಾಗಿಯೇ ಉಳಿಸಿಕೊಳ್ಳಲು ಯಥಾಸಂಭವ ಯತ್ನಿಸಿದರು. ಆದರೆ ವೇದಗಳಂತಹ ದೃಢವಾದ ತಳಹದಿಯ ಮೇಲೆ ಅವರು ತಮ್ಮ ಸಂಸ್ಥೆಯನ್ನು ಸ್ಥಾಪಿಸದೇ ಹೋದ ಕಾರಣ ಬರ ಬರುತ್ತಾ ಬ್ರಾಹ್ಮ ಸಮಾಜ ಕ್ರೈಸ್ತ ಮತದ ಒಂದು ಭಾರತೀಯ ಸಂಸ್ಕರಣವೇ ಆಗಿ ಹೋಯಿತು. ಬ್ರಸೆಲ್ಸ್ ಪಟ್ಟಣದಲ್ಲಿ ದಿವಂಗತರಾದ ರಾಮ ಮೋಹನರ ದೇಹವನ್ನು ಅಂತಿಮ ಸಂಸ್ಕಾರಕ್ಕೆ ಸಜ್ಜುಗೊಳಿಸಿದಾಗ, ಅವರ ಕೊರಳಿನಲ್ಲಿ `ಯಜ್ಞೋಪವೀತ’ವಿದ್ದಿತು. ಅವರ ನಂತರ ಬ್ರಾಹ್ಮ ಸಮಾಜದ ಮಹಾ ನಾಯಕರಾದ ಮಹರ್ಷಿ ದೇವೇಂದ್ರನಾಥ ಠಾಕೂರರು ಆಜೀವನ ಪರ್ಯಂತ ಉಪವೀತಧಾರಿಗಳೇ ಆಗಿದ್ದರು. ಆದರೆ, ಕೇಶವಚಂದ್ರ ಸೇನರ ಕಾಲದಲ್ಲಿ ಬ್ರಾಹ್ಮ ಸಮಾಜದ ಕಾಯಕಲ್ಪವಾಗಿ, ಹಿಂದುತ್ವದ ಯಾವ ಚಿಹ್ನೆಯೂ ಇರಬಾರದ ಸ್ಥಿತಿಯೊದಗಿತು.

ಆದರೆ ಸಮಸ್ಯೆ ಅಷ್ಟು ಸುಲಭವಾದುದಾಗಿರಲಿಲ್ಲ. ಜುಟ್ಟು, ಜನಿವಾರ ಹರಿದೆಸೆಯುವುದರಿಂದ ಅಥವಾ ಹಿಂದೂ ರೀತಿ ನೀತಿಗಳನ್ನು ತುಂಡರಿಸಿ ಚೆಲ್ಲುವುದರಿಂದ ಆರ್ಯ ಜನಾಂಗದ ಉದ್ಧಾರವಾಗುವಂತಿರಲಿಲ್ಲ. ಮೇಲು ಮೇಲಿನ ಸಣ್ಣಪುಟ್ಟ ಸುಧಾರಣೆಗಳಿಂದಲೂ ಕಾರ್ಯಗಳಿಂದಲೂ ಕಾರ್ಯ ಕೈಗೂಡುವಂತಿರಲಿಲ್ಲ. ಹಿಂದೂ ಮತ ಮತಾಂತರಗಳ ಗೋಡೆಗಳೊಳಗೆಲ್ಲಾ ಗೆದ್ದಲು-ಗೂಡುಗಳಿದ್ದವು. ಅವನ್ನು ಹಾಗೆಯೇ ಉಳಿಸಿಕೊಂಡು ಆರ್ಯ ಜನಾಂಗವನ್ನು ಸುರಕ್ಷಿತವಾಗಿಡಲು ಸಾಧ್ಯವೇ ಇರಲಿಲ್ಲ. ಕೈಯ್ಯಲ್ಲಿ ಗುದ್ದಲಿ-ಪಿಕ್ಕಾಸು ಹಿಡಿದು, ನಿರ್ದಾಕ್ಷಣ್ಯವಾಗಿ ಬಲ ಪ್ರಯೋಗ ಮಾಡಿ, ಗೆದ್ದಲು ಮುಕ್ಕಿದ ಗೋಡೆಗಳನ್ನೆಲ್ಲಾ ಕೆಡಹಿ, ವೇದಗಳ ದೃಢವಾದ ತಳಹದಿಯ ಮೇಲೆ ಪರಿಶುದ್ಧ ಧರ್ಮ ಮಂದಿರವನ್ನು ಪುನಃ ನಿರ್ಮಿಸಬಲ್ಲ ಗಂಡೆದೆಯ, ಮೊಂಡು ಸಾಹಸದ, ಪ್ರಚಂಡ ಪಾಂಡಿತ್ಯವುಳ್ಳ ದಂಡಿ ಸನ್ಯಾಸಿಯೊಬ್ಬನ ಆವಶ್ಯಕತೆ, ಅಂದು ಭಾರತವರ್ಷಕ್ಕೆ ಆ ಮೂಲಕ ಸಮಸ್ತ ಜಗತ್ತಿಗೆ ಇದ್ದಿತು. ಆ ಆವಶ್ಯಕತೆಯ ಪೂರ್ತಿಗಾಗಿಯೇ ಮೂಡಿಬಂದ ಮಹಾಮಾನವ ಮಹರ್ಷಿ ದಯಾನಂದ ಸರಸ್ವತೀ.

”ನಾನು ಹೇಳಿದಂತೆ ಕೇಳಿದರೆ ನಿಮಗೆ ಸದ್ಗತಿ” ಎನ್ನಲಿಲ್ಲ ಬೇರೆ ಆಚಾರ್ಯರಂತೆ ದಯಾನಂದರು. ‘ಸತ್ಯಾಸತ್ಯ ವಿವೇಚನೆ ಮಾಡಿರಿ. ಮತೀಯ ಪಕ್ಷಪಾತಗಳಿಗೆ ತಿಲಾಂಜಲಿ ನೀಡಿರಿ. ಸತ್ಯವೆಲ್ಲಿದ್ದರೂ ಸ್ವೀಕರಿಸಿರಿ. ಅಸತ್ಯವೆಲ್ಲಿದ್ದರೂ ಬಿಟ್ಟುಬಿಡಿರಿ. ನನ್ನದಾದ ಕಾರಣ, ಸತ್ಯ ಎನ್ನಬೇಡಿ; ಸತ್ಯವಾದ ಕಾರಣ ನನ್ನದು ಎನ್ನಲು ಕಲಿಯಿರಿ” ಎಂದು ಅವರು ಸಾರಿ ಸಾರಿ ಒತ್ತಿ ಒತ್ತಿ ಹೇಳಿದರು. ವೇದ ಪ್ರಮಾಣವಾದವನ್ನು ಆಂಗೀಕರಿಸುವ ಮೊದಲು, ವೇದಗಳ ಪ್ರತಿಯೊಂದು ಮಂತ್ರವನ್ನೂ ಗಂಭೀರ ತರ್ಕದ ಒರೆಗ೧ಲಿಗೆ ಹಚ್ಚಿ ನೋಡಿದರು. ಅದು ಸತ್ಯವೆಂದು ಸಿದ್ಧವಾದ ಮೇಲೆಯೇ ಅವರು ”ವೇದಗಳ ಕಡೆಗೆ ಹಿಂದಿರುಗಿರಿ” ಎಂಬ ಕೂಗನ್ನು ಆರಂಭಿಸಿದುದು.

…………… ”ದಯಾನಂದರು ಮತಾಚಾರ್ಯರಲ್ಲ; ನವೀನ ಮತ ಪ್ರವರ್ತಕರೂ ಅಲ್ಲ. ಅವರು ಸಮಸ್ತ ಮತ ಮತಾಂತರಗಳ ವಿಧ್ವಂಸನ ಹಾಗೂ ಏಕಮಾತ್ರ ಸಾರ್ವಭೌಮ ಧರ್ಮದ ಪ್ರಶಂಸನಕ್ಕಾಗಿ ಜಗತ್ತಿನಲ್ಲಿ ಉದ್ಬವಿಸಿದ ಒಬ್ಬ ನಿರ್ಮೋಹರೂ, ಪೂರ್ಣ ನಿಷ್ಪಕ್ಷರೂ, ಉದಾರತಮರೂ ಆದ ಮಹರ್ಷಿಗಳು” ಸುಧಾರಕ, ಆಚಾರ್ಯ, ಪಥ ಪ್ರದರ್ಶಕ, ಮಾರ್ಗನ್ವೇಷಕ ಇವರೆಲ್ಲರಿಗಿಂತ ಮೇಲ್ಮಟ್ಟದ ಆತ್ಮ `ಋಷಿ’ಯದು ಎಂದ ಮೇಲೆ `ಮಹರ್ಷಿ’ಯ ಮಟ್ಟವಾವುದೆಂಬುದನ್ನು ಅಭಿಜ್ಞರಾದ ಪಾಠಕರು ತಾವೇ ಊಹಿಸಿಕೊಳ್ಳಲಿ.

ಮಹರ್ಷಿಯ ಕೈಯಲ್ಲಿ ಮಾತ್ರ ವೇದಗಳ ಪುಸ್ತಕವಿರಲಿಲ್ಲ; ನಾಲಿಗೆಯ ಮೇಲೆ ಮಾತ್ರ ವೇದ ಮಂತ್ರಗಳಿರಲಿಲ್ಲ. ಆತನ ಆಚರಣದಲ್ಲಿ ವೇದ ತತ್ತ್ವವೇ ಓಡಮೂಡುತ್ತಿತ್ತು. ಆತನ ಬುದ್ಧಿ ಬೆಳಗುತ್ತಿದ್ದುದು ವೇದ ಜ್ಯೋತಿಯಿಂದ; ಆತನ ಮನಸ್ಸು ಮೆಲುಕು ಹಾಕುತ್ತಿದ್ದುದು ವೇದ ತತ್ತ್ವಗಳನ್ನು; ಆತನ ಹೃದಯ ತುಂಬಿ ತುಳುಕುತ್ತಿದ್ದುದು ವೈದಿಕ ಭಾವನೆಗಳಿಂದ.

ಈಶ್ವರೀಯ ಜ್ಞಾನ ಭಂಡಾರವಾದ ವೇದಗಳನ್ನು ಬುದ್ಧಿಪೂರ್ವಕವಾಗಿ ಅಂಗೀಕರಿಸುವ ಮಾನವ ಯಾವ ರಾಷ್ಟ್ರದವನೂ ಅಲ್ಲ; ಎಲ್ಲಾ ರಾಷ್ಟ್ರಗಳವನೂ ಅಹುದು. ಯಾವ ಭಾಷೆಯವನೂ ಅಲ್ಲ; ಎಲ್ಲ ಭಾಷೆಗಳವನೂ ಅಹುದು. ಯಾವ ಜಾತಿಯವನೂ ಅಲ್ಲ; ಎಲ್ಲ ಜಾತಿಗಳವನೂ ಅಹುದು. ಅವನು ಯಾರಿಗೂ ಸೇರಿದವನಲ್ಲ; ಎಲ್ಲರಿಗೂ ಸೇರಿದವನು. ವಿಶಾಲ ಮಾನವ ಸಮಾಜದಲ್ಲಿ ಮಹರ್ಷಿ ದಯಾನಂದರ ಸ್ಥಾನ ವಸ್ತುತಃ ಇದೇ ಆಗಿದೆ. ಈ ಸ್ಥಾನಕ್ಕಿಂತ ಒಂದೇ ಒಂದು ಗೆರೆಯಷ್ಟು ಕೆಳಗಿನ ಸ್ಥಾನದಲ್ಲಿಯೇ ಮಹರ್ಷಿ ದಯಾನಂದರೇನಾದರೂ ಇದ್ದಿದ್ದರೂ ಕೂಡ, ನಾವು ನಮ್ಮ ಲೇಖನಿಯನ್ನು ಅವರ ಜೀವನ ಚರಿತ್ರೆ ಬರೆಯಲು ಉಪಯೋಗಿಸುತ್ತಿರಲಿಲ್ಲ.

”ಸಮೇ ಶ್ರದ್ಧಾಂಚ ಮೇಧಾಂಚ ಜಾತವೇದಾಃ ಪ್ರಯಚ್ಛತು” (ಅಥರ್ವ: ೯-೬೪-೧) ”ಸರ್ವಜ್ಞನಾದ ಪ್ರಭು ನನಗೆ ಶ್ರದ್ಧೆಯನ್ನು ಕರುಣಿಸಲಿ”; ಎಂದು ಮಹರ್ಷಿ ದಯಾನಂದರು ಪ್ರಾರ್ಥಿಸುತ್ತಿದ್ದರು. ಅವರ ಸಮಸ್ತ ಜೀವನವೂ ಈ ಪ್ರಾರ್ಥನೆಯ ಒಂದು ಸಜೀವ ಚಿತ್ರವಾಗಿಯೇ ಕಂಡು ಬರುವುದನ್ನು ಪಾಠಕರು ತಾವಾಗಿಯೇ ನೋಡಲಿರುವರು. ಶ್ರದ್ಧಾ ಹಾಗೂ ಬುದ್ಧಿ ಈ ಎರಡು ಜ್ಯೋತಿರ್ಮಯ ನೇತ್ರಗಳನ್ನೂ ಉತ್ತಮ ಸ್ಥಿತಿಯಲ್ಲಿ ಹೊಂದಿರುವ ಮಾನವ ಮುಖವೇ ಮಹಿತಮಂಜುಳವಾದ, ಮಹಾ ಮನೋಹರವಾದ ಮುಖ. ಅದೇ ವೈದಿಕ ಧರ್ಮದ ವೈಶಿಷ್ಟ್ಯ.

ಪಂಡಿತ ಸುಧಾಕರ ಚತುರ್ವೇದಿ, ಬೆಂಗಳೂರು.

(”ರಾಷ್ಟ್ರ ಪುರುಷ ಯೋಗಿರಾಜ ಮಹರ್ಷಿ ದಯಾನಂದ ಸರಸ್ವತಿ” ಜೀವನ ಚರಿತ್ರೆಗೆ ಬರೆದ ‘ಪ್ರಾಕ್ಕಥನ’ದಿಂದ, ಪ್ರಕಾಶನ: ವೇದ ಪ್ರಕಾಶನ, ಕುಂಜಿಬೆಟ್ಟು, ಉಡುಪಿ).

Leave a Reply

Your email address will not be published. Required fields are marked *