Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಆತ್ಮೀಯರಿಬ್ಬರನ್ನು ಕಳೆದುಕೊಂಡ ದುಃಖದಲ್ಲಿ ಮೂಡಿದ ಅಕ್ಷರಾಂಜಲಿ, ಚಿತ್ರನಮನ…

  • ಶ್ರೀರಾಮ ದಿವಾಣ

# ಹೌದು, ಹದಿನೇಳು ದಿನಗಳ ಹಿಂದೆ, ಮಾರ್ಚ್ ಒಂದರಂದು ಕೊರಂಗ್ರಪಾಡಿ ದೇವಸ್ಥಾನದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೆವು. ವಾರದ ಹಿಂದೆಯಷ್ಟೇ, ಅಂದರೆ ಮಾರ್ಚ್ 10ರಂದು ಮತ್ತೆ ಒಟ್ಟಿಗೆ ಕೆಲಸ ಮಾಡಿದೆವು. ಅದು ಕಲ್ಯಾಣಪುರ ಮಿಲಾಗ್ರಿಸ್ ಕನ್ನಡ ಮಾಧ್ಯಮ ಹೈಸ್ಕೂಲಿನ ಶಿಕ್ಷಕಿಯೊಬ್ಬರ ನಿವೃತ್ತಿಯ ನಿಮಿತ್ತ ಶಾಲೆಯ ಪಕ್ಕದಲ್ಲೇ ಇದ್ದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಭೋಜನ ಕೂಟದಲ್ಲಿ. ಅಂದು ಶಿಕ್ಷಕ, ಶಿಕ್ಷಕಿ, ಸಿಬ್ಬಂದಿಗಳಿಗೆ ಊಟ ಬಡಿಸಲು ಇದ್ದವರು ನಾವು ನಾಲ್ಕು ಜನರು. ಅವರಲ್ಲೊಬ್ಬ ಇದೇ ವಿಶ್ವಾಸ್ ಬಲ್ಲಾಳ್.

ಬಡಿಸಲು ಹೋದ ಸ್ಥಳದಲ್ಲಿ ಬಿಡುವಿನ ಸಮಯದಲ್ಲಿ ನಾನು (ಲೇಖಕ) ಮೊಬೈಲ್ ನಲ್ಲಿ ಸೆರೆಹಿಡಿದ ವಿಶ್ವಾಸ್…

ಕ್ಯಾಟರಿಂಗ್ ಕೆಲಸದಲ್ಲಿ, ವಿಶ್ವಾಸ್ ಇದ್ದರೆಂದರೆ ಮೇಸ್ತ್ರಿ ಇದ್ದ ಹಾಗೆ. ಮೇಸ್ತ್ರಿ ಅಲ್ಲದಿದ್ದರೂ, ಮೇಸ್ತ್ರಿ ಇಲ್ಲದಿದ್ದರೂ ಮೇಸ್ತ್ರಿಯಂತೆ ಸ್ವಯಂ ಜವಾಬ್ದಾರಿ ತೆಗೆದುಕೊಂಡು ಆಸ್ಥೆಯಿಂದ ಕೆಲಸ ಮಾಡುತ್ತಿದ್ದಂಥ ವ್ಯಕ್ತಿ ವಿಶ್ವಾಸ್. ಅದು ವಿಶ್ವಾಸ್ ಅವರ ಅಭ್ಯಾಸವಾಗಿತ್ತು, ಜೀವನ ಶೈಲಿಯಾಗಿತ್ತು.  ಕೆಲಸದ ಸ್ಥಳಕ್ಕೆ ಬಂದ ಮೇಲೆ ಅವರು ಬರಲಿಲ್ಲ, ಇವರು ಬರಲಿಲ್ಲ, ಮೇಸ್ತ್ರಿ ಬರಲಿಲ್ಲ ಎಂಬ ಯಾವುದೇ ಸಬೂಬು ಹೇಳುವವರಲ್ಲ, ಹೇಳಿದವರಲ್ಲ. ಸ್ಥಳಕ್ಕೆ ಬಂದ ಕೂಡಲೇ ಕೆಲಸ ಶುರು ಮಾಡುವುದು, ಮೇಸ್ತ್ರಿ ಇನ್ನಷ್ಟೇ ಬರಬೇಕು ಎಂದಿದ್ದರೆ, ಜೊತೆಗಿದ್ದವರನ್ನೂ ಕೆಲಸಕ್ಕೆ ತೊಡಗಿಸುವುದರ ಜೊತೆಗೆ ಸ್ವತಹಾ ಕೆಲಸಕ್ಕಿಳಿಯುವುದು ವಿಶ್ವಾಸ್ ರವರ ಪರಿಪಾಠವಾಗಿತ್ತು. ಮಾರ್ಚ್ ಒಂದರಂದು ಕೊರಂಗ್ರಪಾಡಿ ದೇವಸ್ಥಾನದಲ್ಲೂ ವಿಶ್ವಾಸ್ ಅವರ ಈ ಮಾದರಿ ನಡೆಯನ್ನು ಕಂಡವನು ನಾನು.

ಕೆಲಸದಲ್ಲಿ ಉತ್ಸಾಹ, ಲವಲವಿಕೆ, ಚುರುಕುತನ. ಜೊತೆಗೆ ಕೆಲಸದ ಅನುಭವವೂ ವಿಶ್ವಾಸ್‌ರಲ್ಲಿತ್ತು. ಅದಕ್ಕೆ, ವಿಶ್ವಾಸ್ ಬಂದಾಗ ನನಗೆ ಸಮಾಧಾನವಾಗುತ್ತಿತ್ತು. ಮೇಸ್ತ್ರಿಯ ಕೆಲಸದ ಜೊತೆಗೆ, ಬಡಿಸುವ ಕೆಲಸವನ್ನೂ ನಿಭಾಯಿಸುತ್ತಿದ್ದ ವಿಶ್ವಾಸ್ ಅವರ ಕೆಲಸದಲ್ಲಿನ ಈ ರೀತಿಗೆ, ನೀತಿಗೆ ಅವರ ತಂದೆ ವಾಸು ಬಲ್ಲಾಳ್ (ವಾಸುದೇವ ಬಲ್ಲಾಳ್) ಅವರ ದುಡಿಮೆಯ, ಶ್ರಮಜೀವನದ ಬದುಕೂ ಕಾರಣವಾಗಿರಬಹುದು. ತಂದೆಯಂತೆ ಮಗ, ತಂದಗೆ ತಕ್ಕ ಮಗನಾಗಿದ್ದವನು, ಈ ನಮ್ಮ ವಿಶ್ವಾಸ್.

ಬೈಲೂರು ಚಂದು ಮೈದಾನ ಬಳಿಯ ನಿವಾಸಿಯಾಗಿದ್ದ ವಿಶ್ವಾಸ್ ಬಲ್ಲಾಳ್, ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಬಿಕಾಂ ಕಲಿತ ಪ್ರತಿಭಾವಂತ. ವಿದ್ಯಾರ್ಥಿ ಜೀವನದಲ್ಲಿಯೇ ಎಲ್ಲರಿಗೂ ಬೇಕಾದವನಾಗಿದ್ದ, ಎಲ್ಲರ ಪ್ರೀತಿಪಾತ್ರನಾಗಿದ್ದ ವಿಶ್ವಾಸ್, ಯಾರಿಗೂ ಕೇಡು ಬಯಸಿದವರಲ್ಲ. ಪದವಿ ಪಡೆಯುವಷ್ಟಕ್ಕೇ ಸಮಾಧಾನಪಟ್ಟವನೂ ಅಲ್ಲ. ಉನ್ನತ ಶಿಕ್ಷಣದ ಕನಸನ್ನೂ ಕಂಡವರು. ಅದು ಕೇವಲ ಕನಸಾಗಿರಲಿಲ್ಲ. ಆ ಕನಸಿನ ಈಡೇರಿಕೆಗೆ ಹಣದ ಅವಶ್ಯಕತೆ ಇತ್ತು. ತನ್ನ ಕನಸಿನ, ಕಲಿಕೆಯ ಅವಶ್ಯಕತೆಯ ಈಡೇರಿಕೆಗಾಗಿಯೇ ಶಿಕ್ಷಣದ ಜೊತೆ ಜೊತೆಗೆ ಅಡುಗೆ ಸಹಾಯಕನ ಕೆಲಸ, ಬಡಿಸುವ ಕೆಲಸ ಮತ್ತು ಸಿಹಿತಿಂಡಿ ತಯಾರಿಸಿಕೊಡುವ ಕೆಲಸವನ್ನೂ ಮಾಡುತ್ತಿದ್ದರು. ಉಡುಪಿ ಕೃಷ್ಣ ದೇವಸ್ಥಾನದಲ್ಲಿ ಅನ್ನ ಪ್ರಸಾದದ ಜೊತೆಗೆ ವಿತರಿಸುತ್ತಿದ್ದ ಜಿಲೇಬಿಯೇ ಮೊದಲಾದ ಸಿಹಿತಿಂಡಿಯನ್ನು ತಯಾರಿಸುವ ಕೆಲಸದಲ್ಲೂ ಕಳೆದೊಂದು ವರ್ಷದಿಂದ ತನ್ನನ್ನು ತೊಡಗಿಸಿಕೊಂಡಿದ್ದ ವಿಶ್ವಾಸ್, ಇದರಲ್ಲಿ ಪ್ರಾವೀಣ್ಯತೆಯನ್ನೂ ಪಡೆದುಕೊಂಡಿದ್ದರು.

”ಬಹಳ ಕಷ್ಟಪಟ್ಟು ತಂದೆ ನಮ್ಮನ್ನು ಸಾಕಿ ಬೆಳೆಸಿದ್ದಾರೆ. ಇನ್ನು ನಾನು ಕಲಿಬೇಕು, ಒಳ್ಳೆಯ ಕಂಪೆನಿಯಲ್ಲಿ ಕೆಲಸಕ್ಕೆ ಸೇರಬೇಕು. ಪ್ರೀತಿಯ ತಂಗಿಯನ್ನು ಕಲಿಸಿ, ಒಳ್ಳೆಯ ಹುಡುಗನಿಗೆ ಮದುವೆ ಮಾಡಿಕೊಡಬೇಕು, ಇಷ್ಟು ವರ್ಷ ನಮಗೆ ಬೇಕಾಗಿ ತಂದೆ ಕಷ್ಟಪಟ್ಟರು, ಇನ್ನು ಮುಂದೆ ಅವರ ಕಷ್ಟವನ್ನು ಕಡಿಮೆ ಮಾಡಬೇಕು, ನಾನೇ ಅವರನ್ನು ಒಳ್ಳೆಯ ರೀತಿಯಲ್ಲಿ ಸಾಕಬೇಕು” ಇದು ವಿಶ್ವಾಸ್ ಅವರ ಕನಸಾಗಿತ್ತು, ಜೀವನದ ಗುರಿಯಾಗಿತ್ತು, ಆದರ್ಶವಾಗಿತ್ತು.

ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳೇ ಇಂದು ಹೆಚ್ಚಿರುವಾಗ, ಹೆತ್ತವರನ್ನು ಪ್ರೀತಿಯಿಂದ, ಅವರಿಗೆ ಯಾವುದೇ ತೊಂದರೆಯಾಗದಂತೆ, ಅವರಿಗೆ ಯಾವುದೇ ರೀತಿಯ ನೋವನ್ನೂ ಕೊಡದೆ ಸಾಕುವುದೇ ತನ್ನ ಜೀವನದ ಗುರಿ ಎಂದೆನ್ನುವ ಮಕ್ಕಳು ಯಾರಿದ್ದಾರೆ ಇಂದು ? ಇಂಥ ಕಾಲದಲ್ಲಿ ಒಬ್ಬ ಶ್ರೇಷ್ಠ ಆದರ್ಶ ಮಗನಾಗಿ ಬದುಕು ರೂಪಿಸಲು ಮುಂದಾದವನು ವಿಶ್ವಾಸ್.

ಕಳೆದ ಮೂರ್ನಾಲ್ಕು ವರ್ಷಗಳಿಂದ ಊಟ ಬಡಿಸುವ ಕಾಯಕದಲ್ಲಿ ತೊಡಗಿಸಿಕೊಂಡವನು ನಾನು. ಈ ಕೆಲಸದಲ್ಲಿ ಇರುವವರಲ್ಲಿ ಹಲವರು ಪ್ರಾಮಾಣಿಕರು, ಶ್ರಮಜೀವಿಗಳು ಆಗಿರುವುದನ್ನು ಈ ಅವಧಿಯಲ್ಲಿ ಗಮನಿಸಿದ್ದೇನೆ. ಅನೇಕರೊಂದಿಗೆ ಹತ್ತಿರದ ಒಡನಾಟವನ್ನೂ ಇಟ್ಟುಕೊಂಡವನು. ಮೋಸ, ವಂಚನೆ ಮಾಡದೆ, ದುಡಿದು ಬದುಕಬೇಕೆಂಬ ಆಶಯದೊಂದಿಗೆ ಕರ್ಮಯೋಗದಲ್ಲಿ ಬದುಕು ಕಟ್ಟಿಕೊಂಡವರೇ ಹೆಚ್ಚಿನವರು.

ಜೊತೆಗಿರುವವರ ಜೊತೆಗೆ ಪ್ರಿತಿ, ವಿಶ್ವಾಸ, ಆತ್ಮೀಯತೆ, ಮಾತ್ರವಲ್ಲ; ಹಾಸ್ಯ-ಹರಟೆಯೊಂದಿಗೆ ಸ್ನೇಹಿತರಾದವರು ನಮ್ಮ ವಿಶ್ವಾಸ್ ಬಳ್ಳಾಲ್ ಹಾಗೂ ವರುಣ್ ರಾವ್.

‘ಪೂರ್ಣಾವಧಿ ಪತ್ರಕರ್ತ’ನ ಕೆಲಸಕ್ಕೆ ಗುಡ್ ಬೈ ಹೇಳಿ, ಕ್ಯಾಟರಿಂಗ್ ಕೆಲಸಕ್ಕೆ ಕಾಲಿಟ್ಟಾಗ, ಕಾಲಿಟ್ಟ ಆರಂಭಿಕ ದಿನಗಳಲ್ಲಿ ಊಟ ಬಡಿಸುವ ಸ್ಥಳದಲ್ಲಿ ಊಟ ಬಡಿಸುವಾಗ ನನಗೆ ಹತ್ತಿರವಾದವರು, ಆಪ್ತರಾದವರು, ಇಬ್ಬರು. ಆ ಇಬ್ಬರಲ್ಲಿ ಒಬ್ಬನೇ ಈ ವರುಣ್.

ವರುಣ್ ರಾವ್ ಮೂಲತಹ ಬೆಳ್ಮಣ್‌ನವನು. ತಂದೆ ಪಾಕತಜ್ಞರಾದ ವಾಸುದೇವ ರಾವ್. ಪ್ರಸ್ತುತ ಗುಂಡಿಬೈಲು ನಿವಾಸಿ. ದೇಹ ದೊಡ್ಡದಾದರೂ, ಸಣ್ಣ ಹುಡುಗನೇ. ಮುಗ್ದತೆಯ ಸಾಕಾರಮೂರ್ತಿ. ಮಗುವಿನ ಮನಸ್ಸಿನ ವರುಣ್ ಮೇಲೆ ನನಗೇಕೋ ಸ್ವಲ್ಪ ಹೆಚ್ಚು ಪ್ರೀತಿ. ಬಡಿಸುವಲ್ಲಿ ಕೆಲಸದ ಸ್ಥಳಕ್ಕೆ ನಾನು ಕಾಲಿಟ್ಟರೆ ಸಾಕು, ನನ್ನನ್ನು ಕಂಡ ಕೂಡಲೇ ವಿಶ್ ಮಾಡುತ್ತಲೇ ಹತ್ತಿರಕ್ಕೆ ಬಂದು ಮಾತಿಗಿಳಿಯುತ್ತಿದ್ದವನು ನನ್ನ ವರುಣ್. ಯಕ್ಷಗಾನ ಪ್ರೇಮಿಯೂ ಆಗಿದ್ದ ವರುಣ್ ಜೊತೆಗೆ ಸಂಜೆ ಸಮಯ ಹಲವು ಬಾರಿ ಸುತ್ತಾಡಿದ್ದು, ಒಂದೆರಡು ಬಾರಿ ನನ್ನ ಬೈಕ್ ನ ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ಪ್ರಯಾಣಿಸಿದ್ದು, ಸಹಜವಾಗಿಯೇ ತಮಾಷೆ ಮಾತಾಡಿದ್ದು ಇತ್ಯಾದಿಗಳೆಲ್ಲವೂ ಈಗ ಕೇವಲ ನೆನಪು ಮಾತ್ರ.

ಮಾರ್ಚ್ 17ರಂದು ಮಧ್ಯಾಹ್ನ ಪೆರ್ಡೂರು ದೇವಸ್ಥಾನದಲ್ಲಿ ನಡೆದ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಭಕ್ತಾಧಿಗಳಿಗೆ ಅನ್ನ ಪ್ರಸಾದ ಬಡಿಸಿ ಬೈಕ್‌ನಲ್ಲಿ ಉಡುಪಿಗೆ ಮರಳುತ್ತಿದ್ದಾಗ ಪುತ್ತಿಗೆ ಸೇತುವೆ ಪಕ್ಕ ಘಟಿಸಿದ ಅಪಘಾತದಲ್ಲಿ ನಮ್ಮೆಲ್ಲರ ಪ್ರೀತಿಯ ಮತ್ತು ಆತ್ಮೀಯ ಒಡನಾಡಿಯಾಗಿದ್ದ ವರುಣ್ ಹಾಗೂ ವಿಶ್ವಾಸ್ ದುರ್ಮರಣಕ್ಕೀಡಾದರು ಎಂಬುದನ್ನು ನಂಬಲಾಗುತ್ತಿಲ್ಲ. ಆದರೆ ನಂಬಲೇಬೇಕಾಗಿದೆ.

ಪ್ರತೀದಿನ ನನ್ನ ವಾಟ್ಸಾಪ್ ಸ್ಟೇಟಸ್ ಗಳನ್ನು ನೋಡುತ್ತಿದ್ದ ವಿಶ್ವಾಸ್, ಕೆಲವು ಬಾರಿ ಸ್ಟೇಟಸ್ ಗಳಲ್ಲಿ ಹಾಕಿದ ಫೋಟೋಗಳ ಬಗ್ಗೆ ವಿಚಾರಿಸುತ್ತಿದ್ದುದೂ ಇದೆ. 16ರ ರಾತ್ರಿ ಗಂಟೆ 10.22ಕ್ಕೆ ಕೊನೆಯದಾಗಿ ನನ್ನ ಸ್ಟೇಟಸ್ ನೋಡಿದ್ದ ವಿಶ್ವಾಸ್, ತನ್ನ ಸ್ಟೇಟಸ್ ನಲ್ಲಿ ಹುತಾತ್ಮ ಸೈನಿಕ ಸಂದೀಪ್ ಉಣ್ಣಿಕೃಷ್ಣನ್ ಅವರ ಫೊಟೋವನ್ನು ಹಾಕಿಕೊಂಡಿದ್ದರು. ವರುಣ್, ತನ್ನ ಸ್ಟೇಟಸ್ ನಲ್ಲಿ ಅಜ್ಜ-ಅಜ್ಜಿಯ ಫೋಟೋ ಹಾಕುವ ಮೂಲಕ ಕೌಟುಂಬಿಕ ಪ್ರೀತಿಯನ್ನೂ ಅಬಿವ್ಯಕ್ತಿಪಡಿಸಿದ್ದರು.

ವರುಣ್ ರಾವ್ ಹಾಗೂ ವರುಣ್ ಕೊನೆಯದಾಗಿ ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿದ ಅಜ್ಜ-ಅಜ್ಜಿಯ ಫೋಟೋ

ಪ್ರಾಮಾಣಿಕತೆಯ ದುಡಿಮೆಗೆ, ಆದರ್ಶ ಶ್ರಮಜೀವನದ ಮೂಲಕ ನನ್ನ ಮನಸಿನಲ್ಲಿ ಚಿರಸ್ಥಾಯಿಯಾಗಿರುವ ಈ ಇಬ್ಬರು ತಮ್ಮಂದಿರ ಆತ್ಮಕ್ಕೆ ಪರಮಾತ್ಮನು ಸದ್ಗತಿಯನ್ನೂ, ಕುಟುಂಬಕ್ಕೆ ದುಖಃವನ್ನೂ ಸಹಿಸುವ ಶಕ್ತಿಯನ್ನು ಕರುಣಿಸಲಿ ಎಂಬುದು ವಿಶ್ವ ಚೇತನ ಶಕ್ತಿಯಲ್ಲಿ ಪ್ರಾರ್ಥನೆ.

One Comment

  1. bhat.channakeshava@gmail.com'

    chennakeshava

    March 19, 2018 at 10:34 pm

    Diwan sir, Indu jotegiddavaru innondu kshanaviruttare yemba nambike illa, varun vishwas antavaru kottu hogiruva preeti, vishwasa……ajaraamara.

    Matte huttibanni.

Leave a Reply

Your email address will not be published. Required fields are marked *