Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ದಲಿತರ ಪ್ರತೀ ಮನೆಯ ಒಬ್ಬನಿಗೆ ಸರಕಾರ ಉದ್ಯೋಗ ಕೊಡಲಿ: ಅಂಬೇಡ್ಕರ್ ಯುವಸೇನೆಯ ‘ಭೀಮಾಯಾನ’ದಲ್ಲಿ ಶ್ರೀರಾಮ ದಿವಾಣ

ಉಡುಪಿ: ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಸಂಘ ಸಂಸ್ಥೆಗಳಿಗೆ ಶೇಕಡಾ 28ರ ನಿಧಿಯಲ್ಲಿ ಬೆಂಚು-ಕುರ್ಚಿ, ಬ್ಯಾಟ್-ವಿಕೇಟ್, ಮೈಕ್-ಕೇರಂ ಬೋರ್ಡ್ ಇತ್ಯಾದಿ ನೀಡಿದ್ದು ಸಾಕು. ಇನ್ನಾದರೂ ಸರಕಾರಗಳು ಪರಿಶಿಷ್ಟ ಜಾತಿ ಮತ್ತು ಪಂಗಡದ ಪ್ರತೀ ಮನೆಯ ಒಬ್ಬ ವ್ಯಕ್ತಿಗೆ  ಕಡ್ಡಾಯವಾಗಿ ಸರಕಾರಿ ಉದ್ಯೋಗ ಒದಗಿಸುವ ಕೆಲಸವನ್ನು ಮಾಡಬೇಕು ಎಂದು udupibits.in ಜಾಲತಾಣದ ಸಂಪಾದಕರಾದ ಶ್ರೀರಾಮ ದಿವಾಣ ಹೇಳಿದರು.

ಉಡುಪಿ ಅಂಬೇಡ್ಕರ್ ಯುವಸೇನೆಯು ಸಂವಿಧಾನಶಿಲ್ಪಿ, ಭಾರತರತ್ನ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೇ ಜನ್ಮ ದಿನಾಚರಣೆ ಅಂಗವಾಗಿ ಮತ್ತು ಸಂವಿಧಾನದ ರಕ್ಷಣೆಗಾಗಿ ಎಪ್ರಿಲ್ 14ರಂದು ಆಯೋಜಿಸಿದ ‘ಭೀಮಾಯಾನ’ದ ಸಮಾರೋಪದಲ್ಲಿ ಅಂಬಲಪಾಡಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಎಸ್ ಸಿ/ಎಸ್ ಟಿ ಸಮುದಾಯಕ್ಕೆ ಸೇರಿದ ಜನರ ಆಡಳಿತದಲ್ಲಿರುವ ದೈವಸ್ಥಾನ ಮತ್ತು ಭಜನಾ ಮಂದಿರಗಳಲ್ಲಿ ‘ಅಂಬೇಡ್ಕರ್ ಅಧ್ಯಯನ ಕೇಂದ್ರ’ಗಳನ್ನು ಆರಂಭಿಸಬೇಕು ಎಂದು ಸಮುದಾಯ ಮುಖಂಡರಲ್ಲಿ ವಿನಂತಿಸಿದ ಶ್ರೀರಾಮ ದಿವಾಣ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ಇರುವಂತೆ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ ಹುದ್ದೆಗಳನ್ನೂ ಮೀಸಲಾತಿ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ದಸಂಸ ನಾಯಕರುಗಳಾದ ಜಯನ್ ಮಲ್ಪೆ, ಸುಂದರ ಗುಜ್ಜರಬೆಟ್ಟು, ಹರೀಶ್ ಸಾಲ್ಯಾನ್ ಮಲ್ಪೆ, ಯುವರಾಜ್ ಪುತ್ತೂರು, ಕವಿತಾ ಬಲರಾಮನಗರ, ಗಣೇಶ ನೆರ್ಗಿ, ಸುರೇಶ್ ಪಾಲನ್ ತೊಟ್ಟಂ, ಸುಂದರ ಕಪ್ಪೆಟ್ಟು, ಅನಿಲ್ ಅಂಬಲಪಾಡಿ, ರಮೇಶ್ ಪಾಲನ್ ಮೊದಲಾದವರು ಉಪಸ್ಥಿತರಿದ್ದರು.

ಬೆಳಗ್ಗೆ ಮಲ್ಪೆ ವಡಭಾಂಡೇಶ್ವರದಲ್ಲಿ ‘ಭೀಮಾಯಾನ’ಕ್ಕೆ ಚಾಲನೆ ನೀಡಿ ಮಾತನಾಡಿದ ಹೈಕೋರ್ಟ್ ನ್ಯಾಯವಾದಿ ಬೆಂಗಳೂರಿನ ಶಿವಮಣಿ ಅವರು, ಜಾತಿವಾದಿಗಳು ಜಾತಿ ವ್ಯವಸ್ಥೆಯನ್ನು ಉಳಿಸುವ ಸಲುವಾಗಿ ಸಂವಿದಾನವನ್ನು ಬದಲಾಯಿಸುವ ಹುನ್ನಾರ ನಡೆಸುತ್ತಿದೆ. ದಲಿತ ದೌರ್ಜನ್ಯ ತಡೆ ಕಾಯ್ದೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಬಹಳ ದೊಡ್ಡ ಪೆಟ್ಟು ಎಂದು ತಿಳಿಸಿದರು.

ಶಿವಮೊಗ್ಗದ ಕಾಲೇಜು ಉಪನ್ಯಾಸಕರಾದ ಎಸ್.ಸುಂದರ್, ರೈತ ಸಂಘದ ಹಾಸನ ಜಿಲ್ಲಾಧ್ಯಕ್ಷರಾದ ಕೊಟ್ಟೂರು ಶ್ರೀನಿವಾಸ, ಗುರು ಮಾಚಿದೇವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಆನಂದ ಮಡಿವಾಳ ಹಾಗೂ ದಲಿತ ಚಿಂತಕ ಜಯನ್ ಮಲ್ಪೆ ಅವರು ಬಹಿರಂಗ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು. ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷರಾದ ಹರೀಶ್ ಸಾಲ್ಯಾನ್ ಮಲ್ಪೆ, ಸಂತೋಷ್ ಕಪ್ಪೆಟ್ಟು, ಸುಂದರ ಕಪ್ಪೆಟ್ಟು, ಗಣೇಶ ನೇರ್ಗಿ, ವಾಸು ನೇಜಾರು ಮೊದಲಾದವರು ಉಪಸ್ಥಿತರಿದ್ದರು.

ಗುಜ್ಜರಬೆಟ್ಟುವಿನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಜನಪರ ಹೋರಾಟಗಾರರಾದ ನೀಲಗುಳಿ ಪದ್ಮನಾಭ ಅವರು ಮಾತನಾಡಿದರು.

ವಡಭಾಂಡೇಶ್ವರದಿಂದ ಆರಂಭವಾದ ‘ಭೀಮಾಯಾನ’ ವಾಹನ ಜಾಥಾ ಮಲ್ಪೆ, ಕೊಳ, ತೊಟ್ಟಂ, ಕದ್ಕೆ, ಗುಜ್ಜರಬೆಟ್ಟು, ಕೆಮ್ಮಣ್ಣು, ನೇಜಾರು, ಸಂತೆಕಟ್ಟೆ ಕಲ್ಯಾಣಪುರ, ಲಕ್ಷ್ಮೀನಗರ, ಪಾಳೇಕಟ್ಟೆ, ಕೊಡವೂರು, ಮೂಡಬೆಟ್ಟು, ಕಂಬಳಕಟ್ಟ, ಪುತ್ತೂರು, ಬನ್ನಂಜೆ, ಉಡುಪಿ ಸಿಟಿ ಬಸ್ ನಿಲ್ದಾಣ, ಕವಿ ಮುದ್ದಣ ಮಾರ್ಗ, ಜೋಡುಕಟ್ಟೆ, ಅಜ್ಜರಕಾಡು, ಅಂಬಲಪಾಡಿ ಮಾರ್ಗವಾಗಿ ಸಂಚರಿಸಿ ಕಪ್ಪೆಟ್ಟುವಿನಲ್ಲಿ ಸಮಾಪನಗೊಂಡಿತು.

ಚಿತ್ರದಲ್ಲಿ: ಗುಜ್ಜರಬೆಟ್ಟುವಿನಲ್ಲಿ ನೀಲಗುಳಿ ಪದ್ಮನಾಭ ಮಾತನಾಡುತ್ತಿರುವುದು.

Leave a Reply

Your email address will not be published. Required fields are marked *