Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ.

ಚುನಾವಣೆ ನೀತಿ ಸಂಹಿತೆ ಹೆಸರಲ್ಲಿ ಅಬಕಾರಿ ಅಧಿಕಾರಿಗಳ ಅಕ್ರಮ: ಛಾಯಾಗ್ರಹಣ ಮಾಡಿದ ಪತ್ರಕರ್ತನಿಗೆ ಹಲ್ಲೆ, ಕ್ಯಾಮರಾ ಹಾನಿ, ಸುಳ್ಳು ಕೇಸು, ಜೈಲು- ಆರೋಪಿಗಳ ವಿರುದ್ಧ ಕ್ರಮಕ್ಕೆ ಶ್ರೀರಾಮ ದಿವಾಣ ಒತ್ತಾಯ

ಉಡುಪಿ: ಪೋಕಸ್ ಟಿವಿ ಛಾನೆಲ್ ನ ಉಡುಪಿಯ ಪತ್ರಕರ್ತರಾದ ಶಿಜಿತ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿ, ಕ್ಯಾಮರಾ ಕಸಿದುಕೊಂಡು ಹಾನಿಗೈದು, ಸುಳ್ಳು ಮೊಕದ್ದಮೆ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಅಬಕಾರಿ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಕೋರಿ ಮಾನವಹಕ್ಕು ಮತ್ತು ಮಾಹಿತಿಹಕ್ಕು ಕಾರ್ಯಕರ್ತ, ಪತ್ರಕರ್ತ ಶ್ರೀರಾಮ ದಿವಾಣ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಪೋಕಸ್ ಟಿವಿ ಛಾನೆಲ್ ನ ವರದಿಗಾರ ಮತ್ತು ಕ್ಯಾಮರಾಮೆನ್ ಆಗಿ ಉಡುಪಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಜಿತ್ ಕುಮಾರ್ ಅವರು, ಚುನಾವಣಾ ನೀತಿ ಸಂಹಿತೆಯ ಹೆಸರಿನಲ್ಲಿ ಅಬಕಾರಿ ಅಧಿಕಾರಿಗಳು ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಬೆದರಿಕೆ ಹಾಕುತ್ತಾ ಅಕ್ರಮ ನಡೆಸುತ್ತಿರುವ ಸಂದರ್ಭದಲ್ಲಿ ಛಾಯಾಗ್ರಹಣ ನಡೆಸುವ ಮೂಲಕ ಪತ್ರಕರ್ತನಾಗಿ ತನ್ನ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದ್ದು, ಅಕ್ರಮದ ವಿರುದ್ಧ ದಿಟ್ಟತನದಿಂದ ಕಾರ್ಯಾಚರಣೆ ನಡೆಸಿದ ಅವರನ್ನು ಶ್ರೀರಾಮ ದಿವಾಣ ಅಭಿನಂದಿಸಿದ್ದಾರೆ.

ಎಪ್ರಿಲ್ 21ರಂದು ರಾತ್ರಿ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀನಗರ ಬಳಿ ಶಿಜಿತ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿ, ಕ್ಯಾಮರಾ ಕಸಿದುಕೊಂಡು, ಸುಳ್ಳು ಮೊಕದ್ದಮೆ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಮೂಲಕ ಅಬಕಾರಿ ಅಧಿಕಾರಿಗಳು ತಮ್ಮ ಅಕ್ರಮಗಳನ್ನು ಮುಚ್ಚಿಹಾಕಿ ತಮ್ಮನ್ನು ತಾವೇ ರಕ್ಷಿಸುವ ಸಲುವಾಗಿ ನಿಜವಾಗಿಯೂ ದೌರ್ಜನ್ಯಕ್ಕೀಡಾದ ಶಿಜಿತ್ ಕುಮಾರ್ ವಿರುದ್ಧವೇ ಸುಳ್ಳು ಮೊಕದ್ದಮೆ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಹೇಯ ಕೆಲಸ ಮಾಡಿದ್ದಾರೆ. ಇದು ಅಬಕಾರಿ ಅಧಿಕಾರಿಗಳ ಸ್ವಜನ ಪಕ್ಷಪಾತವೂ ಹೌದು, ಸರ್ವಾಧಿಕಾರಿ ಧೋರಣೆಯೂ ಆಗಿದೆ ಎಂದು ಅವರು ದೂರಿದ್ದಾರೆ.

ಅಕ್ರಮದಲ್ಲಿ ನಿರತರಾಗಿ, ಪತ್ರಕರ್ತನ ವಿರುದ್ಧ ದೌರ್ಜನ್ಯ ನಡೆಸಿದ ಅಬಕಾರಿ ಅಧಿಕಾರಿಗಳ ಕ್ರಮವನ್ನು ಖಂಡಿಸಿರುವ ಶ್ರೀರಾಮ ದಿವಾಣ, ಇವರ ವಿರುದ್ಧ ಸೂಕ್ತ ಶಿಸ್ತುಕ್ರಮ ಮತ್ತು ಕಾನೂನು ಕ್ರಮ ಜರುಗಿಸುವಂತೆ ಕೋರಿ ಸರಕಾರ, ಜಿಲ್ಲಾ ಮತ್ತು ರಾಜ್ಯ ಚುನಾವಣಾ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದೂ ಆಗ್ರಹಿಸಿದ್ದಾರೆ.

ಮಾತ್ರವಲ್ಲ, ಕರ್ತವ್ಯ ನಿರತ ಪತ್ರಕರ್ತ ಶಿಜಿತ್ ಕುಮಾರ್ ಮೇಲೆ ಹಲ್ಲೆ ನಡೆಸಿ, ಕ್ಯಾಮರಾ ಕಸಿದುಕೊಂಡು ಹಾನಿಗೈದು, ಸುಳ್ಳು ಮೊಕದ್ದಮೆ ದಾಖಲಿಸಿದ ಆರೋಪಿಗಳಾದ ಅಬಕಾರಿ ಇಲಾಖೆಯ ಅಧಿಕಾರಿ ಚಂದ್ರಮೋಹನ್, ಗೋಪಾಲ, ರೆಡ್ಡಿ, ಚನ್ನಪ್ಪ ಹಾಗೂ ಇತರ ಇಬ್ಬರ ವಿರುದ್ಧ ಮೊಕದ್ದಮೆ ದಾಖಲಿಸಿಕೊಳ್ಳಬೇಕು ಎಂದು ಎಸ್ಪಿ ಲಕ್ಷ್ಮಣ ನಿಂಬರ್ಗಿ ಅವರನ್ನು ಶ್ರೀರಾಮ ದಿವಾಣ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *