Realtime blog statisticsweb statistics
udupibits.in
Breaking News
ಉಡುಪಿ: ಜೂನ್ 6 ಬೆಳಗ್ಗೆ 11ಕ್ಕೆ ಉಡುಪಿ ಡಿಸಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಮಾಹಿತಿ ಆಯೋಗದಿಂದ ಮಾಹಿತಿ ಹಕ್ಕು ಅರ್ಜಿಗಳ ವಿಚಾರಣೆ.

ಬಹುಕೋಟಿ ಭೂಹಗರಣ: ಎಸಿ ಕೋರ್ಟ್ ಆದೇಶಕ್ಕೆ ವಿರುದ್ಧ ಪಹಣಿಗಳಲ್ಲಿ ವಂಚಕರ ಹೆಸರು ಸೇರಿಸಿದ ಕಂದಾಯ ಅಧಿಕಾರಿಗಳು- ಡಿಸಿಗೆ ದೂರು

ಉಡುಪಿ: ಉಡುಪಿ ನಗರದ ಕಾಡಬೆಟ್ಟು ಎಸಿಬಿ ಕಚೇರಿ ಹಿಂಭಾಗದಲ್ಲಿರುವ ಸರಕಾರಕ್ಕೆ ಸೇರಬೇಕಾದ ಬಹುಕೋಟಿ ಮೊತ್ತದ ಭೂಮಿಯನ್ನು ಅತ್ಯಂತ ವ್ಯವಸ್ಥಿತವಾಗಿ ಸ್ವಾಧೀನಪಡಿಸಿಕೊಳ್ಳುವ ಯತ್ನದಲ್ಲಿ ವಿಫಲಗೊಂಡಿರುವ ಕೆಲವು ಮಂದಿ ಖಾಸಗಿ ವ್ಯಕ್ತಿಗಳು ಹಾಗೂ ಉಡುಪಿ ತಾಲೂಕಿನ ಕಂದಾಯ ಅಧಿಕಾರಿಗಳು, ಇದೀಗ ಮತ್ತೆ ಬಾಲ ಬಿಚ್ಚಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರಕಾರಕ್ಕೆ ವಂಚಿಸಿದವರ ಹೆಸರುಗಳನ್ನೇ ಎಸಿ ಆದೇಶಕ್ಕೆ ವ್ಯತಿರಿಕ್ತವಾಗಿ ಪಹಣಿಗಳಲ್ಲಿ ಅನುಭೋಗದಾರರು ಎಂದು ಸೇರಿಸುವ ಮೂಲಕ ಕಂದಾಯ ಅಧಿಕಾರಿಗಳು ತಾವು ವಂಚಕರ ಎಂಜಲು ತಿಂದದ್ದು ಹೌದು ಎಂಬುದನ್ನು ಸ್ವತಹಾ ಸಾಬೀತುಪಡಿಸಿದ್ದಾರೆ.

ಕಾಡಬೆಟ್ಟು ಭೂಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ, ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್ ಅವರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, 2017ರ ಡಿಸೆಂಬರ್ 28ರಂದು ಸಹಾಯಕ ಕಮಿಷನರ್ ಅವರು ‘’ಮೇಲ್ಮನವಿಯನ್ನು ಪುರಸ್ಕರಿಸಿದೆ. ರಾಜಸ್ವ ನಿರೀಕ್ಷಕರು ಉಡುಪಿ ಹೋಬಳಿ ಇವರು ಹೊರಡಿಸಿದ ಎಂ.ಆರ್.ಎಚ್.ನ್ನು ರದ್ದುಪಡಿಸಿದೆ. ವಿಚಾರಣಾಧೀನ ಜಮೀನುಗಳ ಪಹಣಿಗಳನ್ನು ಪ್ರಶ್ನಿತ ಆದೇಶ ಹೊರಡಿಸುವ ಪೂರ್ವದಲ್ಲಿ ಇದ್ದಂತೆ ಊರ್ಜಿತದಲ್ಲಿ ಇಡಲು ಕ್ರಮ ಕೈಗೊಳ್ಳಲು ತಹಶೀಲ್ದಾರರು ಉಡುಪಿ ಇವರಿಗೆ ನಿರ್ದೇಶಿಸಿದೆ’’ ಎಂದು ಬಹಿರಂಗ ನ್ಯಾಯಾಲಯದಲ್ಲಿ ಘೋಷಿಸಿದ್ದರು.

ಉಡುಪಿ ಹೋಬಳಿಯ ರಾಜಸ್ವ ನಿರೀಕ್ಷಕರು ಕಾಡಬೆಟ್ಟು ಭೂಮಿಗೆ ಸಂಬಂಧಿಸಿದಂತೆ, ನಕಲಿ ದಾಖಲೆಗಳ ಆಧಾರದಲ್ಲಿ ಆದೇಶ ಹೊರಡಿಸುವ ಮೊದಲು ಪಹಣಿಗಳಲ್ಲಿ  ‘’ನಾರಾಯಣ ಉಡುಪಿ’’ ಎಂದಷ್ಟೇ ನಮೂದಾಗಿತ್ತು. ರಾಜಸ್ವ ನಿರೀಕ್ಷಕರು ಹಾಗೂ ಇತರ ಅಧಿಕಾರಿಗಳು ಸೇರಿಕೊಂಡು ಪಹಣಿಗಳಲ್ಲಿ ದಾಖಲಾಗಿದ್ದ ‘’ನಾರಾಯಣ ಉಡುಪಿ’’ ಎಂಬ ಹೆಸರಿನ ಬದಲಾಗಿ ಯಾರು ನಕಲಿ ದಾಖಲೆಗಳನ್ನು ತಯಾರಿಸಿ ಸರಕಾರಕ್ಕೆ ಸಲ್ಲಿಸಿ ವಂಚಿಸಿದ್ದರೋ ಅವರ ಹೆಸರುಗಳನ್ನೇ ಪಹಣಿಗಳಲ್ಲಿ ‘’ಅನುಭೋಗದಾರರು’’ ಎಂದು ಸೇರ್ಪಡೆಗೊಳಿಸುವ ಮೂಲಕ ವಂಚಕರ ಋಣ ತೀರಿಸಿದ್ದಾರೆ.

ಉಡುಪಿ ತಾಲೂಕು ಕಂದಾಯ ಅಧಿಕಾರಿಗಳ ಈ ಅಕ್ರಮದ ವಿರುದ್ಧ, ಕಾಡಬೆಟ್ಟು ಭೂ ಹಗರಣದ ಬಗ್ಗೆ ದೂರು ಸಲ್ಲಿಸಿದ ಶ್ರೀರಾಮ ದಿವಾಣ ಅವರು ಇದೀಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಅಕ್ರಮವೆಸಗಿದ ಕಂದಾಯ ಇಲಾಖಾ ಅಧಿಕಾರಿಗಳ ಸೂಕ್ತ ಕಾನೂನು ಮತ್ತು ಶಿಸ್ತುಕ್ರಮ ತೆಗೆದುಕೊಳ್ಳಬೇಕೆಂದೂ, ಎಸಿ ಆದೇಶಕ್ಕೆ ವ್ಯತಿರಿಕ್ತವಾಗಿ ಪಹಣಿಗಳಲ್ಲಿ ‘’ಅನುಭೋಗದಾರರು’’ ಎಂದು ಸೇರಿಸಲಾದ ವಂಚಕರ ಹೆಸರುಗಳನ್ನು ರದ್ದುಪಡಿಸಬೇಕೆಂದೂ ಜಿಲ್ಲಾಧಿಕಾರಿಯವರನ್ನು ಕೋರಲಾಗಿದೆ.

ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಸರ್ವೇ ನಂಬ್ರ 89/5ರಲ್ಲಿ 0.50 ಎಕ್ರೆ, 89/10ರಲ್ಲಿ 1.37 ಎಕ್ರೆ, 89/11ಎಯಲ್ಲಿ 0.39 ಎಕ್ರೆ ಮತ್ತು 89/11ಬಿಯಲ್ಲಿ 0.03 ಎಕ್ರೆ ಭೂಮಿ ನಾರಾಯಣಿ ಅಮ್ಮಾಳ್ ಯಾನೆ ನಾರಾಣಿ ಬಾಯಿ ಎಂಬವರ ಸ್ವಾರ್ಜಿತ ಆಸ್ತಿಯಾಗಿದ್ದು, ಇದನ್ನು ಇವರು ನಿರ್ಗತಿಕ ಮಹಿಳೆಯರ ಹೆರಿಗೆ ಆಶ್ಪತ್ರೆ ನಿರ್ಮಿಸಬೇಕೆಂಬ ವಿಶಾಲ ಹೃದಯ ವೈಶಾಲ್ಯತೆಯಿಂದ ಸರಕಾರಕ್ಕೆ ಹಸ್ತಾಂತರಿ ವೀಲುನಾಮೆ ಮಾಡಿಟ್ಟಿದ್ದರು. ನ್ಯಾಯಾಲಯದಲ್ಲೂ ಈ ವೀಲುನಾಮೆಯನ್ನು ಅಂಗೀಕರಿಸಲಾಗಿತ್ತು.

ಆದರೆ, ಸಂಬಂಧಿಸಿದ ಜವಾಬ್ದಾರಿಯುತ ಅಧಿಕಾರಿಗಳು ಭೂಮಿಯನ್ನು ಸರಕಾರದ ಹೆಸರಿಗೆ ಮಾಡುವಲ್ಲಿ ನಿರ್ಲಕ್ಷ್ಯತೋರಿಸಿದ ಕಾರಣ, ಭೂಮಿ ಹಾಗೆಯೇ ಉಳಿದಿತ್ತು ಮತ್ತು ಇದನ್ನು ಕೆಲವು ವ್ಯಕ್ತಿಗಳು ರಾಜ್ಯದ ಆಡಳಿತಾರೂಢ ಪಕ್ಷದ ನಾಯಕರೊಂದಿಗೆ ಸೇರಿಕೊಂಡು, ಪ್ರಭಾವ ಬೀರುವ ಮೂಲಕ ಮತ್ತು ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸೇರಿಕೊಂಡು ಪಹಣಿಗಳಲ್ಲಿ ತಮ್ಮ ಹೆಸರುಗಳು ದಾಖಲಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಈ ಅಕ್ರಮ ಶ್ರೀರಾಮ ದಿವಾಣ ಅವರ ಗಮನಕ್ಕೆ ಬರುತ್ತಲೇ, ಅವರು ಮಾಹಿತಿ ಹಕ್ಕು ಕಾಯಿದೆ ಮೂಲಕ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಸಂಗ್ರಹಿಸಿಕೊಂಡು ಸರಕಾರಕ್ಕೆ, ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಡಿಸಿಯವರ ವಿಶೇಷ ಆದೇಶದಂತೆ ಎಸಿಯವರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಕಂದಾಯ ಅಧಿಕಾರಿಗಳು ಪಹಣಿಗಳಲ್ಲಿ  ದಾಖಲಿಸಲಾಗಿದ್ದ ವಂಚಕರ ಹೆಸರುಗಳನ್ನು ರದ್ದುಪಡಿಸುವಂತೆಯೂ, ಪ್ರಶ್ನಿತ ಆದೇಶಕ್ಕಿಂತ ಹಿಂದೆ ಇದ್ದಂತೆ ಪಹಣಿಗಳನ್ನು ಊರ್ಜಿತದಲ್ಲಿಡಬೇಕೆಂದೂ ಆದೇಶಿಸಿದ್ದರು.

ಕಾಡಬೆಟ್ಟುವಿನ ಸರಕಾರಕ್ಕೆ ಸೇರಬೇಕಾದ ಬಹುಕೋಟಿ ಮೊತ್ತದ ಭೂಮಿಯನ್ನು ಸರಕಾರದ ಸ್ವಾಧೀನಕ್ಕೆ ಹೋಗದಂತೆ ಮತ್ತು ಖಾಸಗಿ ವ್ಯಕ್ತಿಗಳ ವಶ ಆಗುವಂತೆ ಮಾಡುವ ಅಕ್ರಮದ ಹಿಂದೆ ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷದ ಮೂರು ಮಂದಿ ಮೂರು ಹಂತದಲ್ಲಿರುವ ಪ್ರಮುಖ ನಾಯಕರು ಶಾಮೀಲಾಗಿರುವ ಬಗ್ಗೆ ಬಲವಾದ ಶಂಕೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *