Realtime blog statisticsweb statistics
udupibits.in
Breaking News
ಉಡುಪಿ: ಎಸ್ಪಿ ಭೇಟಿ ಮಾಡಿದ ಕೇಮಾರು ಸ್ವಾಮೀಜಿ ಹಾಗೂ ಗುರುಪುರ ವಜ್ರದೇಹಿ ಸ್ವಾಮೀಜಿ- ಶಿರೂರು ಸ್ವಾಮೀಜಿ ನಿಗೂಢ ಸಾವಿನ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಒತ್ತಾಯ

ಸಿಆರ್ ಪಿಸಿ 107, 116: ಎಸ್‍ಪಿ ಕಚೇರಿಯಲ್ಲಿ ಮಾನದಂಡವೇ ಇಲ್ಲ !

ಉಡುಪಿ: ಐಪಿಎಸ್‍ ಶ್ರೇಣಿಯ ಪೊಲೀಸ್‍ ವರಿಷ್ಠಾಧಿಕಾರಿ ಇರುವ ಉಡುಪಿ ಜಿಲ್ಲಾ ಪೊಲೀಸ್‍ ಕೇಂದ್ರ ಕಚೇರಿಯಲ್ಲಿ ಸಿಆರ್‍ಪಿಸಿ 107, 116 ಹೇರಲು ಪ್ರಸ್ತಾವ ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ಮಾನದಂಡ/ಸರಕಾರದ, ಮೇಲಧಿಕಾರಿಗಳ ಆದೇಶ, ಸುತ್ತೋಲೆ, ಪತ್ರಗಳ ಮಾಹಿತಿಯೇ ಇಲ್ಲ. ಎಸ್‍ಪಿ ಕಚೇರಿಯಲ್ಲೇ ಮಾನದಂಡಗಳಿಲ್ಲವೆಂದಾದಲ್ಲಿ ಪೊಲೀಸ್‍ ಠಾಣೆಗಳಿಗೆ ಅವರು ನಿರ್ದೇಶನ ನೀಡುವುದು ಹೇಗೆ ಸಾಧ್ಯ ಎಂಬ ಪ್ರಶ್ನೆ ಉದ್ಭವಿಸಿದೆ.

ಚುನಾವಣೆ ಸಮಯದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಸಿಆರ್‍ಪಿಸಿಯ ಕಲಂ 107, 116ರಂತೆ ಜಾಮೀನು ಮುಚ್ಚಳಿಕೆ ಬರೆದುಕೊಳ್ಳುವಂತೆ ಪೊಲೀಸರು ತಾಲೂಕು ದಂಡಾಧಿಕಾರಿಯವರಿಗೆ ಪ್ರಸ್ತಾವ ಸಲ್ಲಿಸುತ್ತಾರೆ. ಇದರಂತೆ ದಂಡಾಧಿಕಾರಿ ಆದೇಶದ ಮೇರೆಗೆ ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತದೆ. ಈ ರೀತಿ ಮುಚ್ಚಳಿಕೆ ಬರೆದುಕೊಟ್ಟವರು ಶಾಂತಿ ಕದಡುವ ಕೃತ್ಯ ನಡೆಸಿದ್ದಲ್ಲಿ ಅವರ ವಿರುದ್ಧ ಜಾಮೀನು ರಹಿತ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿರುತ್ತದೆ. ಇದು ಮುಂಜಾಗೃತೆಯ ಕ್ರಮವಾದರೂ ದುರುಪಯೋಗವಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಈ ನಿಟ್ಟಿನಲ್ಲಿ ಮೂಡುಬೆಳ್ಳೆಯ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಉಡುಪಿ ಎಸ್‍ಪಿ ಕಚೇರಿಗೆ ಸಿಆರ್‍ಪಿಸಿ 107, 116 ಹೇರುವಂತೆ ಪ್ರಸ್ತಾವ ಸಲ್ಲಿಸುವಾಗ ಪೊಲೀಸರು ಅನುಸರಿಸಬೇಕಾದ ಮಾನದಂಡಗಳು, ಈ ಬಗ್ಗೆ ಇರುವ ಸರಕಾರದ ಸುತ್ತೋಲೆ/ಆದೇಶ/ಪತ್ರ/ದಾಖಲೆಗಳ ದೃಢೀಕೃತ ಪ್ರತಿ ಕೋರಿ 20/04/2018ರಂದು ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ 28/04/2018ರ ಪತ್ರದಲ್ಲಿ ಪ್ರತಿಕ್ರಿಯಿಸಿದ ಎಸ್‍ಪಿ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಸಹಾಯಕ ಆಡಳಿತಾಧಿಕಾರಿಯವರು ಅರ್ಜಿಯನ್ನು ಉಡುಪಿ ನಗರ ಠಾಣೆಗೆ ವರ್ಗಾಯಿಸಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಸಾರ್ವಜನಿಕ ಮಾಹಿತಿ ಅಧಿಕಾರಿಯವರೊಂದಿಗೆ ಮಾತನಾಡಿದಾಗ, ‘ಮಾಹಿತಿ ನಗರ ಠಾಣೆಯಲ್ಲಿದ್ದರೆ ಅವರು ಕೊಡುತ್ತಾರೆ’ ಎಂದು ತಿಳಿಸಿದ್ದಾರೆ. ಅಲ್ಲಿಯೂ ಮಾಹಿತಿ ಇರುವ ಬಗ್ಗೆ ಅವರಿಗೆ ಸ್ಪಷ್ಟತೆ ಇರುವಂತಿಲ್ಲ. ಎಸ್‍ಪಿ ಕಚೇರಿಯಲ್ಲಿ ಮಾನದಂಡದ ಮಾಹಿತಿ ಇಲ್ಲ ಎಂದು ಅರ್ಥವೇ ಎಂದು ಪ್ರಶ್ನಿಸಿದಾಗ ‘ಹೌದು’ ಎಂದು ತಿಳಿಸಿದ್ದಾರೆ. ಇದರಿಂದ ಎಸ್‍ಪಿ ಕಚೇರಿಯಲ್ಲೇ ಮಾನದಂಡದ ಮಾಹಿತಿ ಇಲ್ಲದಿರುವುದು ಸ್ಪಷ್ಟವಾಗಿದೆ.

ಚುನಾವಣೆ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪೊಲೀಸ್ ಅಧಿಕಾರಿಗಳ ಸಭೆ ಕರೆದು ಮಾಹಿತಿ ನೀಡಬೇಕಾದ ಎಸ್‍ಪಿ ಕಚೇರಿಯಲ್ಲೇ ನೂರಾರು ಜನರ ಮೇಲೆ ಹೇರಲಾದ 107, 116 ಕೇಸುಗಳಿಗೆ ಸಂಬಂಧಿಸಿದಂತೆ ಮಾನದಂಡ ಇಲ್ಲದಿರುವುದು ಆಶ್ಚರ್ಯವೇ ಸರಿ.

ಸ್ಪಷ್ಟ ಮಾನದಂಡ ಇಲ್ಲದಿದ್ದರೆ…

ಯಾವುದೇ ಕಾನೂನಿಗೂ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಮಾನದಂಡ ಇಲ್ಲದೇ ಹೋದರೆ ಅನುಷ್ಠಾನದಲ್ಲಿ ಲೋಪವಾಗುವ ಸಾಧ್ಯತೆ ಇದ್ದೇ ಇದೆ. 107 ಬಗ್ಗೆ ಮಾನದಂಡದ ಮಾಹಿತಿ ಇಲ್ಲದಿರುವುದರಿಂದ ಅಸಮರ್ಪಕವಾಗಿ 107 ಹೇರುವಂತೆ ಪೊಲೀಸರು ಪ್ರಸ್ತಾವ ಸಲ್ಲಿಸುವ ಸಾಧ್ಯತೆಯೂ ಇರುತ್ತದೆ. ಮಾನದಂಡದ ಬಗ್ಗೆ ಜನರಿಗೆ ಮಾಹಿತಿ ನೀಡಿದರೆ ಸದ್ರಿ ಸೆಕ್ಷನ್‍ಗಳನ್ನು ಹೇರುವಾಗ ಜನರು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬಹುದಾಗಿದೆ.

ನೊಟೀಸೂ ಇಲ್ಲ, ಪ್ರತಿಯೂ ಇಲ್ಲ

107, 116 ಸೆಕ್ಷನ್‍ಗಳನ್ನು ಹೇರುವ ಸಂಬಂಧ ಶಿರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಸಿಗಳು ವ್ಯಕ್ತಿಗಳಿಗೆ ಕರೆ ಮಾಡಿ ತಾಲೂಕು ಕಚೇರಿಗೆ ಬಂದು ಸಹಿ ಮಾಡಿ ಹೋಗಿ ಎಂದು ತಿಳಿಸುತ್ತಾರೆ. ಯಾವುದೇ ಅಧಿಕೃತ ಮಾಹಿತಿ/ನೊಟೀಸ್‍ ನೀಡುವುದಿಲ್ಲ. ಸಹಿ ಮಾಡಿದಾಗ್ಯೂ ಅದರ ಪ್ರತಿಯನ್ನು ನೀಡುವುದಿಲ್ಲ. ತಾಲೂಕು ಕಚೇರಿಯ ಸಿಬಂದಿಗೂ ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಚುನಾವಣೆ ಸಂದರ್ಭ ಈ ಗೊಂದಲ ಉಂಟಾಗದಿರಲು ಎಸ್‍ಪಿ, ಡಿಸಿಗಳು ಸಭೆ ನಡೆಸಿ ಚರ್ಚಿಸಬೇಕಾದ ಅಗತ್ಯ ಇದೆ.

Leave a Reply

Your email address will not be published. Required fields are marked *