Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಚುನಾವಣಾ ಚೆಕ್ ಪೋಸ್ಟ್ ಹಿಂತೆಗೆತ: ಅವೈಜ್ಞಾನಿಕ, ಅಕ್ರಮಗಳಿಗೆ ಅವಕಾಶ !

ಉಡುಪಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿಂದ ಪೊಲೀಸ್ ಇಲಾಖೆ ವಿವಿಧೆಡಗಳಲ್ಲಿ ನಡೆಸುತ್ತಿದ್ದ ಬಿಗಿ (?) ಚೆಕ್ ಪೋಸ್ಟ್ ಗಳನ್ನು ಮೇ 11ರ ಬೆಳಗ್ಗೆಯಿಂದ ಹಿಂತೆಗೆದುಕೊಂಡಿದ್ದು, ಅಕ್ರಮವಾಗಿ ಹಣ, ಹೆಂಡ ಇತ್ಯಾದಿ ಸಾಗಾಟ ಮಾಡುವ ರಾಜಕೀಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರಿಗೆ ವರದಾನವಾಗಿ ಪರಿಣಮಿಸಿದೆ.

ಹೆಚ್ಚಾಗಿ ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡುವ ನೆಪದಲ್ಲಿ ಮನೆ ಮನೆಗಳಿಗೆ ಹಣ, ಮದ್ಯ ಮತ್ತು ಇತರ ವಸ್ತುಗಳನ್ನು ಹಂಚುವುದು, ಪಾರ್ಟಿ ಹಮ್ಮಿಕೊಳ್ಳುವುದು ಇತ್ಯಾದಿಗಳೆಲ್ಲವೂ ಮತದಾನದ ಹಿಂದಿನ ದಿನದ ಹಗಲು ಮತ್ತು ರಾತ್ರಿಯಲ್ಲಾಗಿದೆ. ಮತದಾರರನ್ನು ಮನಸ್ಸನ್ನು ವಿವಿಧ ರೀತಿಯ ಅಮಿಷಗಳನ್ನು ಒಡ್ಡಿ ಬದಲಾಯಿಸುವ ದಿನವೆಂದೇ ಮತದಾನದ ಹಿಂದಿನ  ದಿನವನ್ನು ಲಾಗಾಯ್ತಿನಿಂದಲೂ ಗುರುತಿಸಲಾಗಿರುವುದು ಎಲ್ಲರಿಗೂ ತಿಳಿದಿರುವಂಥದ್ದೇ ಆಗಿದೆ.

ಈ ವಾಸ್ತವಾಂಶ ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ ಪೊಲೀಸ್ ಇಲಾಖೆಗೆ, ಅಧಿಕಾರಿಗಳಿಗೂ ಇದು ಗೊತ್ತಿರುವಂಥದ್ದೇ, ಗೊತ್ತಿರಲೇಬೇಕಾದ ವಿಷಯವಾಗಿದೆ. ಹೀಗಿರುವಾಗ ಮತದಾನದ ಹಿಂದಿನ ದಿನ, ಅತೀ ಹೆಚ್ಚು ಅಕ್ರಮಗಳು ನಡೆಯುವ ದಿನ ಚೆಕ್ ಪೋಸ್ಟ್ ಗಳನ್ನು ಹಿಂತೆಗೆದುಕೊಂಡಿದ್ದು ಪೊಲೀಸ್ ಇಲಾಖಾಧಿಕಾರಿಗಳ, ಜಿಲ್ಲಾಡಳಿತ ಅಧಿಕಾರಿಗಳ ತೆಗೆದುಕೊಂಡ ಅವೈಜ್ಞಾನಿಕ ಕ್ರಮವಲ್ಲದೆ ಬೇರೇನೂ ಅಲ್ಲ.

ಅರ್ಥಿಕವಾಗಿ ಪ್ರಬಲವಾಗಿರುವ ರಾಜಕೀಯ ಪಕ್ಷಗಳಿಗೆ, ಅಭ್ಯರ್ಥಿಗಳಿಗೆ ಪರೋಕ್ಷವಾಗಿ ಸಹಾಯ ಮಾಡುವ ಉದ್ಧೇಶದಿಂದಲೇ ಪೊಲೀಸ್ ಅಧಿಕಾರಿಗಳು ಚುನಾವಣಾ ಚೆಕ್ ಪೋಸ್ಟ್ ಗಳನ್ನು ಹಿಂತೆಗೆದುಕೊಂಡಿತೇ ಎಂಬ ಪ್ರಶ್ನೆಯೂ ಇದೀಗ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಚುನಾವಣಾ ಚೆಕ್ ಪೋಸ್ಟ್ ಎನ್ನುವುದು ಭಾಗಶಃ ಒಂದು ಪ್ರಹಸನವಷ್ಟೇ ಆಗಿತ್ತು ಎಂಬುದು ಚೆಕ್ ಪೋಸ್ಟ್ ಗಳಲ್ಲಿನ ಪೊಲೀಸ್, ಬಿಎಸ್ ಎಫ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳ ಕಾರ್ಯಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿದ ಯಾರ ಗಮನಕ್ಕೂ ಬರುವಂತ ಇತ್ತು. ‘ಬಿಗಿ ತಪಾಸಣೆ’ ಎಂಬ ಪ್ರಹಸನದ ಜೊತೆಗೆ ಮತದಾನದ ಹಿಂದಿನ ದಿನ ಬೆಳಗ್ಗೆಯೇ ಚೆಕ್ ಪೋಸ್ಟ್ ಗಳನ್ನು ದಿಢೀರನೇ ಹಿಂತೆಗೆದುಕೊಂಡಿದ್ದು ಪೊಲೀಸ್ ಇಲಾಖಾಧಿಕಾರಿಗಳು ನಡೆಸಿದ ಮತ್ತೊಂದು ಪ್ರಹಸನವಷ್ಟೇ ಆಗಿದೆ ಎಂದು ಸಾರ್ವಜನಿಕರು ಹಾದಿ ಬೀದಿಯಲ್ಲಿ ಮಾತನಾಡಿಕೊಳ್ಳುವಂತಾಗಿದೆ.

ಚುನಾವಣಾ ಚೆಕ್ ಪೋಸ್ಟ್ ಗಳು ಮೇ 11ರಂದು ಬೆಳಗ್ಗೆಯಿಂದ ನಾಪತ್ತೆಯಾಗಿರುವುದು ಗಮನಕ್ಕೆ ಬರುತ್ತಲೇ ಎರಡು ಪ್ರಮುಖ ರಾಷ್ಟ್ರೀಯ ರಾಜಕೀಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರ ಮೊಗದಲ್ಲಿ ಹಿಂದಿಗಿಂತ ಹೆಚ್ಚು ಉತ್ಸಾಹ ಕಂಡುಬಂದಿದೆ. ಓಡಾಟ ಕೂಡಾ ಅತಿಯಾಗಿದೆ. ಹಾವು ಸಾಯಬಾರದು, ಕೋಲೂ ಮುರಿಯಬಾರದು ಎಂಬ ಅಧಿಕಾರಿಗಳ ಕಳಪೆ, ದುರ್ಬಲ ನೀತಿಯಿಂದಾಗಿ ಸಂಸದೀಯ ಪ್ರಜಾತಂತ್ರ ಎಂಬುದು ಒಂದು ಪ್ರಹಸನ ಎಂಬಂತಾಗಿರುವುದು ಖೇದಕರವಾಗಿದ್ದು, ಪ್ರಜ್ಞಾವಂತ ನಾಗರಿಕರು ಅಧಿಕಾರಿಗಳ ಅಸಮರ್ಥನೀಯ, ಅವೈಜ್ಞಾನಿಕ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *