Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಸ್ವಾತಂತ್ರ್ಯ ಹೋರಾಟಗಾರ, ಕಾರ್ಮಿಕ ನಾಯಕ, ಪತ್ರಕರ್ತ, ಸಮಾಜವಾದಿ ಅಮ್ಮೆಂಬಳ ಬಾಳಪ್ಪ ಸ್ಮರಣೆ

# ಕಡು ಬಡ ಕುಟುಂಬದಲ್ಲಿ ಫೆಬ್ರವರಿ 23ರಂದು ಜನಿಸಿದ ಅಮ್ಮೆಂಬಳ ಬಾಳಪ್ಪ ಅವರು ಹಿರಿಯ ಸಮಾಜವಾದಿಯಾಗಿ, ಪ್ರಸಿದ್ದ ಕಾರ್ಮಿಕ ನಾಯಕನಾಗಿ, ಸ್ವಾತಂತ್ರ್ಯ ಹೋರಾಟಗಾರನಾಗಿ ಜನಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿ ಮೇ 15ರಂದು ಇಹಲೋಕದಿಂದ ನಿರ್ಗಮಿಸಿದವರು.

ಇಂದು (ಮೇ 15) ಅವರ ಪುಣ್ಯತಿಥಿ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮೆಂಬಳದಲ್ಲಿ ಅವರನ್ನು ಸ್ಮರಿಸುವ ಕಾರ್ಯಕ್ರಮ. ತನ್ನಿಮಿತ್ತ ಅಕ್ಷರ ಸ್ಮರಣೆ.

ಒಂದೆರಡಲ್ಲ, ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ವಿವಿಧ ಚಳುವಳಿಗಳಲ್ಲಿ ಬಹಿರಂಗವಾಗಿ, ಭೂಗತರಾಗಿ ಸಕ್ರಿಯವಾಗಿದ್ದವರು ಅಮ್ಮೆಂಬಳ ಬಾಳಪ್ಪ ಅವರು. 1964ರಲ್ಲಿ ನಡೆದ ಗೋವಾ ವಿಮೋಚನಾ ಚಳುವಳಿಯಲ್ಲೂ ಬ್ರಿಟಿಷ್ ಮತ್ತು ಪೋರ್ಚುಗೀಸರ ವಿರುದ್ಧ ಧಿರೋದಾತ್ತ ಹೋರಾಟ ನಡೆಸಿ ಪೊಲೀಸ್ ದೌರ್ಜನ್ಯಕ್ಕೂ ಒಳಗಾದವರು, ಜೈಲುವಾಸವನ್ನೂ ಅನುಭವಿಸಿದವರು ಬಾಳಪ್ಪರವರು.

ಬಾಳಪ್ಪ ಎಂದರೆ ಹೋರಾಟ. ಅನ್ಯಾಯದ ವಿರುದ್ಧ ಹೋರಾಟ, ಕಾರ್ಮಿಕರ ಪರವಾಗಿ ಹೋರಾಟ. ಹೋರಾಟವೇ ಬಾಳಪ್ಪರ ಬದುಕಾಗಿತ್ತು. ಜೀವನ ಸಂಗಾತಿಯಾಗಿತ್ತು. ಹಾಗಾಗಿಯೇ ಅವರಿಗೆ ಮದುವೆಯಾಗಿ ಸಂಸಾರ ಸಾಗಿಸಬೇಕು ಎಂದು ಅನಿಸಿದ್ದೇ ಇಲ್ಲ. ತನ್ನ ಇಡೀ ಬದುಕನ್ನೇ ಗೇಣಿ-ಒಕ್ಕಲುಗಳ ಹಿತ ಕಾಪಾಡಲು, ಹಂಚು, ಗೇರುಬೀಜ ಕಾರ್ಖಾನೆಗಳ, ಮೋಟಾರ್, ಹೋಟೇಲ್ ಕಾರ್ಮಿಕರ ಉನ್ನತಿಗಾಗಿ ಸಂಘಟನೆ ಕಟ್ಟಿ ಅಹೋರಾತ್ರಿ ಶ್ರಮಿಸಿದವರು ಅಮ್ಮೆಂಬಳ ಬಾಳಪ್ಪರು.

ಜಯಪ್ರಕಾಶ್ ನಾರಾಯಣ್, ಡಾ.ರಾಮ ಮನೋಹರ ಲೋಹಿಯಾ, ಅಚ್ಯುತ ಪಟವರ್ಧನ್, ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ, ಕೆ.ಕೆ.ಶೆಟ್ಟಿ, ಎಂ.ಡಿ.ಅಧಿಕಾರಿ, ಡಾ.ಕೆ.ನಾಗಪ್ಪ ಆಳ್ವ ಮೊದಲಾದವರ ಸಹವರ್ತಿಯಾಗಿ ಕರ್ನಾಟಕದಲ್ಲಿ ಸಮಾಜವಾದಿ ಪಕ್ಷವನ್ನು, ಸಮಾಜವಾದಿ ಆಂದೋಲನವನ್ನು ಕಟ್ಟಿ ಬೆಳೆಸಿದವರು ನಮ್ಮ ಬಾಳಪ್ಪರು.

ಅಮ್ಮೆಂಬಳ ಬಾಳಪ್ಪನವರು ಬಂಟ್ವಾಳದಲ್ಲಿ ಸ್ಥಾಪಿಸಿದ ‘ಸಮಾಜಸೇವಾ ಸಹಕಾರಿ ಬ್ಯಾಂಕ್, ಇಂದು ಉನ್ನತಿಯೊಂದಿಗೆ ಒಂಭತ್ತು ಶಾಖೆಗಳ ಮೂಲಕ ವಿಸ್ತರಣೆಗೊಂಡಿರುವುದು ಸಣ್ಣ ವಿಷಯವೇನೂ ಅಲ್ಲ.

ಬಾಳಪ್ಪ ಅವರು ಪತ್ರಕರ್ತರೂ ಹೌದು. ‘’ಮಿತ್ರ’’ ಎಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ, ‘’ಮಿತ್ರ’’ ಎಂಬ ವಾರ ಪತ್ರಿಕೆಯ ಸಂಪಾದಕರಾಗಿ, ಪ್ರಕಾಶಕರಾಗಿ ಕೆಲ ಕಾಲ ನಡೆಸಿದವರು ಇವರು. ಅಮ್ಮೆಂಬಳ ಬಾಳಪ್ಪನವರು ಹೊರತರುತ್ತಿದ್ದ ‘’ತುಳುಸಿರಿ’’ ಎಂಬ ಮಾಸಿಕ, ತುಳುವಿನ ಮೊತ್ತ ಮೊದಲ ಮಾಸಿಕ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಯುಎನ್ಐ ವಾರ್ತಾ ಸಂಸ್ಥೆಯ ವರದಿಗಾರರಾಗಿಯೂ, ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸಿಂಡಿಕೇಟ್ ಸದಸ್ಯರಾಗಿಯೂ ದಕ್ಷತೆಯನ್ನು ಮೆರೆದವರು ಇವರು.

ಅಮ್ಮೆಂಬಳ ಬಾಳಪ್ಪನವರು ಈಗ ದೈಹಿಕವಾಗಿ ನಮ್ಮೊಮದಿಗಿಲ್ಲ. ಆದರೆ, ಅವರ ಹೆಸರನ್ನು. ಅವರ ಸಾಹಸವನ್ನು, ಸಾಧನೆಯನ್ನು ನೆನಪು ಮಾಡಿಕೊಳ್ಳಲು, ಅವರ ಹೆಸರಿನಲ್ಲಿ ಜನಪರ ಕಾರ್ಯಕ್ರಮಗಳ ಮೂಲಕ ಬಾಳಪ್ಪನವರ ಹೆಸರನ್ನು ಚಿರಸ್ಥಾಯಿಗೊಳಿಸುವ ಕೆಲಸವನ್ನು ಮಾಡಲೆಂದೇ ಸೇವಾ ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದ್ದು ಸ್ತುತ್ಯಾರ್ಹ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವುದು ಶ್ಲಾಘನಾರ್ಹವಾಗಿದೆ.

ಹಿರಿಯ ಪತ್ರಕರ್ತರೂ, ಸಮಾಜವಾದಿಯೂ ಆಗಿರುವ ಅಮ್ಮೆಂಬಳ ಆನಂದ ಮಣಿಪಾಲ ಅವರು ಅಧ್ಯಕ್ಷರಾಗಿರುವ ‘’ಸ್ವಾತಂತ್ರ್ಯಯೋಧ ಡಾ.ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನ’’ವನ್ನು ಉಮೇಶ್ ಪಿ.ಕೆ ಮೇಲ್ಕಾರ್, ರವೀಂದ್ರನಾಥ್ ಬರ್ಕೆ, ಕೆ.ದಯಾನಂದ್ ಬಿ.ಸಿ.ರೋಡ್, ಡಿ.ಎಂ.ಕುಲಾಲ್, ರಮೇಶ್ ಬಂಟ್ವಾಳ, ಎಚ್.ಸಂದೀಪ್ ಕುಮಾರ್, ಬಿ.ಎಂ.ದಾಮೋದರ್, ತೇಜಸ್ವಿರಾಜ್ ಮುಂತಾದವರು ಮುನ್ನಡೆಸಿಕೊಂಡು ಬರುತ್ತಿದ್ದಾರೆ.

 

Leave a Reply

Your email address will not be published. Required fields are marked *