Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಇದು ಪ್ರಧಾನಿ ಹೇಳಿಕೆ, ಪ್ರಜಾತಂತ್ರದ ಕಗ್ಗೊಲೆ !

* ಶ್ರೀರಾಮ ದಿವಾಣ

# ‘’ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿಕೂಟಕ್ಕೆ ಸರಕಾರ ರಚಿಸಲು ಅವಕಾಶ ಕೊಡಲಾರೆ’’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಘೋಷಿಸಿದ್ದಾರೆ. ಪ್ರಧಾನಿಯವರು ಹೀಗೆ ಘೋಷಿಸಿದ ನಂತರ, ಕರ್ನಾಟಕದ ರಾಜ್ಯಪಾಲರಾದ ಗುಜರಾತ್ ರಾಜ್ಯದ ಮಾಜಿ ಬಿಜೆಪಿ ಸಚಿವ ವಿ.ಆರ್.ವಾಲಾ ಅವರು, ಅತೀ ದೊಡ್ಡ ಪಕ್ಷ ಎಂಬ ನೆಪ ಮುಂದಿಟ್ಟುಕೊಂಡು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಅಧಿಕೃತವಾಗಿ ಆಹ್ವಾನ ನೀಡಿದ್ದು, ಇದೀಗ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಬಿಜೆಪಿ ಅಧ್ಯಕ್ಷರಾಗಿರುವ ಅಮಿತ್ ಷಾ ಇಂಥಹದೊಂದು ಹೇಳಿಕೆ ನೀಡುತ್ತಿದ್ದರೆ ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸುವ, ವಿಮರ್ಶಿಸುವ ಅಗತ್ಯ ಬರುತ್ತಿರಲಿಲ್ಲ. ಆದರೆ ಪ್ರಧಾನಿಯಂಥ ಉನ್ನತ ಸಂವಿಧಾನಿಕ ಮತ್ತು ಬಹಳಷ್ಟು ಘನತೆ ಮತ್ತು ಗೌರವದ ಸ್ಥಾನದಲ್ಲಿರುವ ನರೇಂದ್ರ ಮೋದಿಯವರು ಇಂಥಹದೊಂದು ಹೇಳಿಕೆ ನಿಡಿರುವುದು ಮಾತ್ರ ಎಷ್ಟು ಮಾತ್ರಕ್ಕೂ ಸಮರ್ಥನೀಯವಲ್ಲ, ಸ್ವಾಗತಾರ್ಹವೂ ಅಲ್ಲ.

‘’ಯಾವ ಪಕ್ಷವನ್ನು ಸರಕಾರ ರಚಿಸಲು ಆಮಂತ್ರಿಸಬೇಕು ಎನ್ನುವುದು ರಾಜ್ಯಪಾಲರ ವಿವೇಚನೆಗೆ ಬಿಟ್ಟ ವಿಷಯ, ಪ್ರಧಾನಿಯಾಗಿ ನಾನು ಆ ವಿಷಯದಲ್ಲಿ ಕೈಹಾಕುವುದಿಲ್ಲ’’ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದರೆ, ರಾಜ್ಯಪಾಲರು ದೊಡ್ಡ ಪಕ್ಷವೆಂಬ ನೆಲೆಯಲ್ಲಿ ಬಿಜೆಪಿಯ ಯಡಿಯೂರಪ್ಪನವರನ್ನು ಸರಕಾರ ರಚಿಸಲು ಆಮಂತ್ರಿಸಿದ್ದನ್ನು ಸಕಾರಾತ್ಮಕವಾಗಿ ಸ್ವೀಕರಿಸಬಹುದಿತ್ತು. ಆದರೆ, ಪ್ರಧಾನಿ ಮೋದಿಯವರು ನೀಡಿದ ಪುಢಾರಿತನದ ಹೇಳಿಕೆಯ ಬಳಿಕ ರಾಜ್ಯಪಾಲರ ನಡೆಯನ್ನು ಸಕರಾತ್ಮಕವಾಗಿ ಪರಿಗಣಿಸುವುದು ಸಾಧುವಾಗಲಾರದು.

ಬಿಜೆಪಿ ಪರಿವಾರದ ಜನರು, ಬಿಜೆಪಿ ಪರಿವಾರದ ಬಗ್ಗೆ ಸರಿಯಾದ, ಸೂಕ್ಷ್ಮವಾದ, ಆಳವಾದ ತಿಳುವಳಿಕೆ, ಅರಿವು ಇಲ್ಲದ ಜನರು ಎಂಥದ್ದೇ ಭ್ರಮೆಯನ್ನು ಇಟ್ಟುಕೊಂಡಿರಲಿ; ಬಿಜೆಪಿ ಸಹಿತ ಬಿಜೆಪಿ ಪರಿವಾರ ಎಷ್ಟು ದೊಡ್ಡ ಭ್ರಷ್ಟ, ದುಷ್ಟ, ನೀಚ ಪಕ್ಷ ಎಂಬುದು ಹಲವರಿಗೆ ಗೊತ್ತಿರುವವರಿಗೆ ಗೊತ್ತಿರುವಂಥದ್ದೇ. ಇದರ ಅರ್ಥ ಕಾಂಗ್ರೆಸ್ ಉತ್ತಮ ಪಕ್ಷ ಎಂಬುದಲ್ಲ. ರಾಜ್ಯಪಾಲರ ನಡೆಯನ್ನು ಪ್ರಧಾನಿ ಮೋದಿಯ ಹೇಳಿಕೆಯ ಹಿನ್ನೆಲೆಯಲ್ಲಿ ನೋಡುವುದಾದರೆ, ನೋಡಲೇಬೇಕಾಗಿದೆಯಾದುದರಿಂದ, ಇಲ್ಲಿ ರಾಜ್ಯಪಾಲರು ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಶಾಸಕರನ್ನು ಕೋಟಿ ಕೋಟಿ ನೀಡಿ ಖರೀದಿ ಮಾಡಲು, ಈ ಮೂಲಕ ಪ್ರಜಾತಂತ್ರವನ್ನು ಕೊಲೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದೇ ಭಾವಿಸಬೇಕಾಗುತ್ತದೆ.

ಶಾಸಕರನ್ನು ಖರೀದಿ ಮಾಡುವುದು ಎಂದರೆ ಪ್ರಜಾತಂತ್ರವನ್ನೇ ಖರೀದಿ ಮಾಡುವುದು ಎಂದರ್ಥ. ಶಾಸಕರನ್ನು ಖರೀದಿ ಮಾಡುವುದು ಎಂದರೆ ಮತದಾರರನ್ನೇ ಖರೀದಿ ಮಾಡುವುದು ಎಂದರ್ಥ. ಮಾತ್ರವಲ್ಲ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದಕ್ಕಿಂತ ದೊಡ್ಡ ಭ್ರಷ್ಟತನ ಬೇರೊಂದಿಲ್ಲ, ಇರಲಾರದು. ಬಿಜೆಪಿ ಪಕ್ಷಕ್ಕೆ ಶಾಸಕರನ್ನು ಖರೀದಿ ಮಾಡಿಯೂ ಗೊತ್ತಿದೆ, ಅನುಭವವೂ ಇದೆ. ಹಿಂದಿನ ಅನುಭವವನ್ನು ಇದೀಗ ಸರ್ವಾಧಿಕಾರಿ ಮನಸ್ಥಿತಿಯ ಮೋದಿ-ಷಾ ಜೋಡಿಯ ಮಾರ್ಗದರ್ಶನದಲ್ಲಿ ಮತ್ತೆ ಹೊಸ ರೀತಿಯಲ್ಲಿ ಮಾಡಲು ಬಿಜೆಪಿ ಈ ಬಾರಿ ಹೊರಟಿದೆಯಷ್ಟೆ.

ಐಟಿ ಇಲಾಖೆಯನ್ನು ಮೋದಿ ಈಗಾಗಲೇ ತಮ್ಮ ಕೈಗೊಂಬೆಯನ್ನಾಗಿ ಮಾಡಿಕೊಂಡಿರುವುದು ಗುಟ್ಟಿನ ವಿಷಯವೇನೂ ಅಲ್ಲ. ತಮ್ಮ ಎದುರಾಳಿ ಪಕ್ಷಗಳನ್ನು, ಪಕ್ಷಗಳ ನಾಯಕರನ್ನು, ಜನಪ್ರತಿನಿಧಿಗಳನ್ನು ತಮಗೆ ಬೇಕಾದಂತೆ ಮಣಿಸಲು ಐಟಿ ಅಧಿಕಾರಿಗಳನ್ನು ಮೋದಿ ದುರ್ಬಳಕೆ ಮಾಡಿಕೊಂಡಿರುವುದು ಹಲವು ಬೆಳವಭಣಿಗೆಗಳಿಂದ ಈಗಾಗಲೇ ಸ್ಪಷ್ಟವಾಗಿದೆ. ಈಗ ಮತ್ತೆ ಐಟಿ ಹೆಸರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಜನಪ್ರತಿನಿಧಿಗಳನ್ನು ಬೆದರಿಸುವ, ಆ ಮೂಲಕ ಬಿಜೆಪಿಯನ್ನು ಬೆಂಬಲಿಸುವಂತೆ ಮಾಡುವ ಬಲವಂತ ಮತ್ತು ಬೆದರಿಕೆಯ ತಂತ್ರಗಳು, ಷಡ್ಯಂತ್ರಗಳು ನಡೆಯುತ್ತಿರುವುದು ಬಯಲಾಗಿದೆ.

ಅಧಿಕಾರದ ಮದ, ಅಧಿಕಾರವೆಂಬ ದುರಾಸೆಗಳು ಇದ್ದಾಗ ಮಾತ್ರವೇ ಇಂಥದ್ದನ್ನೆಲ್ಲ ಮಾಡಲು, ಮಾಡಿಸಲು ಸಾಧ್ಯ. ಅಧಿಕಾರದ ಅಮಲು ಎಂಬ ಪಿತ್ತ ನೆತ್ತಿಗೇರಿದ ಹೀಗೆ ಏರಿಸಿಕೊಂಡ ವ್ಯಕ್ತಿ ಎಂಥೆಂಥ ಹೇಳಿಕೆಗಳನ್ನೆಲ್ಲ ಕೊಡಬಲ್, ಎಂಬುದು ಸಹ ಮೋದಿಯವರ ಈ ಹಿಂದಿನ ಹೇಳಿಕೆಯೊಂದನ್ನು ಗಮನಿಸಿದಾಗ ಸ್ಪಷ್ಟವಾಗುತ್ತದೆ.

‘’ಕಾಂಗ್ರೆಸ್ ನಾಯಕರು ಕಿವಿ ತೆರೆದು ನನ್ನ ಮಾತುಗಳನ್ನು ಕೇಳಬೇಕು, ನೀವು ಮಿತಿ ಮೀರಿದರೆ, ನೆನಪಿಡಿ, ಇಲ್ಲಿರುವುದು ಮೋದಿ, ನೀವು ಇದರ ಪರಿಣಾಮವನ್ನು ಎದುರಿಸಬೇಕಾದೀತು’’, ಇದು ಚುನಾವಣಾ ಪ್ರಚಾರ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆ. ಇದನ್ನು ಹೇಳಿಕೆ ಎಂದು ಹೇಳುವುದೇ ತಪ್ಪಾಗುತ್ತದೆ. ಬೆದರಿಕೆ ಒಡ್ಡುವುದು ಎಂದರೆ ಇದುವೇ. ಹೀಗೆಯೇ. ಇದು ರೌಡಿಗಳ ಭಾಷೆಗೆ ಹತ್ತಿರವಾಗಿರುವಂಥ ಭಾಷೆ. ಬಹಿರಂಗವಾಗಿಯೇ ಹೀಗೆ ಬೆದರಿಕೆ ಹಾಕುವ ವ್ಯಕ್ತಿ ಇನ್ನು ತೆರೆಮರೆಯಲ್ಲಿ ಯಾರಿಗೆಲ್ಲ ಹೇಗೆಲ್ಲ ಬೆದರಿಕೆ ಹಾಕಿರಬಹುದು ಎಂದು ಹೇಳಲು ಸಾಧ್ಯವೇ ? ಊಹಿಸಬಹುದಷ್ಟೆ.

ಇಂಥವರು ನಮ್ಮ ದೇಶದ ಪ್ರಧಾನಿಯಾಗಿರುವುದು ದುರಂತವೇ ಸರಿ. ನಮ್ಮ ದೇಶವನ್ನು ಇಂಥವರ ಕೈಯಿಂದ ಪಾರು ಮಾಡುವ ಮಹತ್ತರವಾದ ಜವಾಬ್ದಾರಿ, ಕರ್ತವ್ಯ ಪ್ರಸ್ತುತ ನಮ್ಮೆಲ್ಲರ ಮೇಲಿದೆ.

 

Leave a Reply

Your email address will not be published. Required fields are marked *