Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಪ್ರಧಾನಿ, ರಾಜ್ಯಪಾಲರಿಂದ ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗ, ಭ್ರಷ್ಟಾಚಾರಕ್ಕೆ ನೇರ ಕುಮ್ಮಕ್ಕು !

  • ಶ್ರೀರಾಮ ದಿವಾಣ

# ಕೊನೆಗೂ ಬಹುಮತ ಸಾಬೀತುಪಡಿಸಲಾಗದೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪನವರು ಎರಡೂವರೆ ದಿನಗಳ ಮುಖ್ಯಮಂತ್ರಿ ಸ್ಥಾನಕ್ಕೆ ಅನಿವಾರ್ಯವಾಗಿ ರಾಜೀನಾಮೆ ನೀಡಿದ್ದಾರೆ. ಚುನಾವಣಾ ಫಲಿತಾಂಶ ಹೊರಬಿದ್ದ ಲಾಗಾಯ್ತಿನಿಂದ ಬಿಜೆಪಿ ನಾಯಕರು ಆಡಿದ ಆಟಗಳು ಮತ್ತು ನಡೆದ ವಿದ್ಯಾಮಾನಗಳು ಮಾತ್ರ ಬಿಜೆಪಿ ಮತ್ತು ಬಿಜೆಪಿ ನಾಯಕರ ಗೋಮುಖವ್ಯಾಘ್ರತನವನ್ನು ಬಟಾಬಯಲಾಗಿದೆ.

ಹೇಗೆ ನೋಡಿದರೂ, ಯಾವ ರೀತಿಯ ಲೆಕ್ಕಾಚಾರ ಮಾಡಿದರೂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿರಲಿಲ್ಲ ಎನ್ನುವುದು ಹಗಲಿನಷ್ಟು ನಿಚ್ಚಳವಾಗಿತ್ತು. ಬಿಜೆಪಿ 104 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತಾದರೂ, ಮತ ಗಳಿಕೆ ಪ್ರಮಾಣದಲ್ಲಿ 78 ಸ್ಥಾನಗಳಿಸಿದ ಕಾಂಗ್ರೆಸ್ ನಿಂದ ಎರಡು ಶೇಕಡಾ ಕಡಿಮೆ ಮತವನ್ನೇ ಪಡೆದುಕೊಂಡಿತ್ತು. ಹೀಗೆ ಮತಗಳಿಕೆ ಪ್ರಮಾಣದಲ್ಲೂ, ಬಹುಮತಕ್ಕೆ ಎಷ್ಟು ಬೋಕೋ ಅಷ್ಟು ಸಂಖ್ಯೆಯ ಶಾಸಕರನ್ನು ಗಳಿಸುವಲ್ಲಿ ಬಿಜೆಪಿ ಸಂಪೂರ್ಣವಾಗಿ ವಿಫಲವಾಗಿತ್ತು.

ಹೀಗಿದ್ದೂ, ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಯಡಿಯೂರಪ್ಪನವರು ನಿಯೋಗದ ಮೂಲಕ ರಾಜ್ಯಪಾಲರನ್ನು ಭೇಟಿಯಾಗಿ ಸರಕಾರ ರಚಿಸುವ ಪ್ರಸ್ತಾಪ ಮುಂದಿಟ್ಟಿದ್ದಾರೆ. ಯಡಿಯೂರಪ್ಪನವರ ಈ ಯತ್ನಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾರವರ ಸ್ಪಷ್ಟ ಸೂಚನೆ, ನೀಡಿದ ಭರವಸೆ, ಕೊಟ್ಟ ಮಾರ್ಗದರ್ಶನಗಳೇ ಕಾರಣವಾಗಿರಬಹುದು.

ಕೇಂದ್ರದಲ್ಲಿ ಸರಕಾರವನ್ನು ಮುನ್ನಡೆಸುವ ವಿಕಾಸ ಪುರುಷ, ವಿಶ್ವ ನಾಯಕ, 56 ಇಂಚು ಎದೆಯ ನರೇಂದ್ರ ಮೋದಿಯವರೇ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟಕ್ಕೆ ಸರಕಾರ ನಡೆಸಲು ಬಿಡಲಾರೆ ಎಂದು ಘಂಟಾಘೋಷವಾಗಿ ಘೋಷಿಸಿದರೆಂದರೆ ಯಡಿಯೂರಪ್ಪನವರಿಗೆ ಇನ್ನೇನು ಬೇಕು, ಮುಂದಡಿ ಇಡಲು. ರಾಜ್ಯಪಾಲರಾದ ವಜುಭಾಯಿ ವಾಲಾರವರೂ ತಮ್ಮವರೆ. ಮೋದಿ ಗುಜರಾತ್ ನವರು, ವಾಲಾರವರು ಗುಜರಾತ್ ನವರು. ಎಲ್ಲರೂ ಮಾತಾಡಿ ಹೂಡಿದ ಷಡ್ಯಂತ್ರದ ಪರಿಣಾಮವೇ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಬಹುಮತ ಇಲ್ಲದ ಪಕ್ಷ ಬಹುಮತ ಪಡೆದುಕೊಳ್ಳಬೇಕಾದರೆ ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷಗಳ ಶಾಸಕರನ್ನು ಸೆಳೆದುಕೊಳ್ಳುವುದು ಅನಿವಾರ್ಯ. ಸುಖಾಸುಮ್ಮನೆ ಒಮದು ಪಕ್ಷದ ಶಾಸಕ ಇನ್ನೊಂದು ಪಕ್ಷಕ್ಕೆ ಹೋಗಿ ಸೇರಿಕೊಳ್ಳಲಾರ. ಮಂತ್ರಿ ಪದವಿ ಎಂಬ ಅಧಿಕಾರದ ದುರಾಸೆ, 25ರಿಂದ 100-150 ಕೋಟಿ ರೂಪಾಯಿ ಗಳಿಸುವ ಹೆಬ್ಬಯಕೆ. ಇದಿಲ್ಲದಿದ್ದರೆ ಯಾರು ತಾನೇ ಒಂದು ಪಕ್ಷಕ್ಕೆ ದ್ರೋಹ ಬಗೆದು ಮತ್ತೊಂದು ಪಕ್ಷ ಸೇರುತ್ತಾರೆ. ಖಂಡಿತಾ ಸಾಧ್ಯವಿಲ್ಲ.

ತನ್ನ  ಮಾತನ್ನು ಉಳಿಸಿಕೊಳ್ಳಲು ಸಹಜವಾಗಿಯೇ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರಕಾರದ ಅಧೀನದಲ್ಲಿರುವ ಐಟಿ, ಇಡಿ ಇತ್ಯಾದಿ ಇಲಾಖೆಗಳನ್ನು, ಇಲಾಖಾಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಅಧಿಕಾರದ ದುರುಪಯೋಗ ಮಾಡಿದ್ದಾರೆ. ಸ್ವಜನರಿಗಾಗಿ ಸ್ವಜನ ಪಕ್ಷಪಾತವನ್ನೂ ಎಸಗಿದ್ದಾರೆ. ಸ್ವಲ್ಪವೂ ಮಾನ-ಮರ್ಯಾದೆ, ನಾಚಿಕೆ-ಹೇಸಿಗೆ ಇಲ್ಲದೆ ವಿರೋಧಿ ಪಕ್ಷಗಳ ಶಾಸಕರ ಖರೀದಿಗೆ ಬೇಕಾದ ಕ್ರಮಗಳನ್ನು ತಾನು ತೆರೆಮರೆಯಲ್ಲಿ ನಿಂತು ಇತರರ ಮೂಲಕ ಮಾಡಬಹುದಾದ, ಮಾಡಬೇಕಾದ ಕೆಲಸಗಳನ್ನು ಮಾಡಿದ್ದಾರೆ. ಇದನ್ನು ಗುಜರಾತ್ ಮಾದರಿ ಎಂದು ಬೇಕಾದರೆ ಹೇಳಬಹುದೇನೋ.

ಮೋದಿ-ಷಾ ಜೋಡಿ, ಕೇಂದ್ರ ಮಂತ್ರಿಗಳು, ರಾಜ್ಯ ಬಿಜೆಪಿಯ ಪ್ರಮುಖ ನಾಯಕರು ಎಲ್ಲರೂ ಶಾಸಕರ ಖರೀದಿಗೆ ಮುಂದಾಗಿದ್ದಾರೆ. ಬೆದರಿಕೆ ಹಾಕುವುದು, ಬಹುಕೋಟಿಗಳ ಅಮಿಷ ಒಡ್ಡುವುದು ಇತ್ಯಾದಿಗಳೆಲ್ಲವನ್ನೂ ಮಾಡಿದ್ದಾರೆ. ಆದರೆ ಯಾವುದಕ್ಕೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಶಾಸಕರು ಬಗ್ಗಲಿಲ್ಲ, ಜಗ್ಗಲಿಲ್ಲ. ಪ್ರಜಾತಂತ್ರವನ್ನು ಖರೀದಿಸಲು ಅಷ್ಟು ಸುಲಭವಿಲ್ಲ ಎನ್ನುವುದನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ತೋರಿಸಿಕೊಟ್ಟಿದ್ದಾರೆ. ಇಷ್ಟಕ್ಕಾಗಿ ಈ ಎಲ್ಲಾ ಶಾಸಕರೂ ಅಭಿನಂದನೆಗೆ ಪಾತ್ರರು.

ಮೋದಿ-ಷಾ ಇಬ್ಬರೂ ಹೇಳಿಕೊಳ್ಳುವಂಥ ದೊಡ್ಡ ಚಾಣಕ್ಯರೇನೂ ಅಲ್ಲ ಎಂಬುದು ಈ ಎಲ್ಲಾ ವಿದ್ಯಾಮಾಗಳ ಮೂಲಕ ಸ್ಪಷ್ಟವಾಗಿದೆ. ಬಿಜೆಪಿ ಪಕ್ಷವಾಗಲೀ, ಬಿಜೆಪಿ ನಾಯಕರಾಗಲೀ ಏನೇನೂ ಸಾಚಾ ಪಕ್ಷವಲ್ಲ ಎಂಬುದೂ ಬಯಲಾಗಿದೆ. ಈ ನಿಟ್ಟಿನಲ್ಲಿ ಪಕ್ಷ ನಾಯಕರ, ಕಾರ್ಯಕರ್ತರ ಪ್ರಚಾರಗಳೆಲ್ಲವೂ ಕೇವಲ ಬೂಟಾಟಿಕೆಯವು ಎನ್ನುವುದು ದೃಢಪಟ್ಟಿದೆ.

ಮೋದಿ ಬಯಲಾದಂತೆಯೇ ರಾಜ್ಯಪಾಲ ವಾಲಾರವರು ಬಯಲಾಗಿದ್ದಾರೆ. ವಿ.ಆರ್.ವಾಲಾರವರೂ ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗ ನಡೆಸಿದ ರಾಜ್ಯಪಾಲರಾಗಿ ದಾಖಲೆಗೆ ಸೇರಿಬಿಟ್ಟರು. ರಾಜ್ಯಪಾಲರು ನೇರವಾಗಿಯೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ್ದೂ ಎಷ್ಟು ಮಾತ್ರಕ್ಕೂ ಅಕ್ಷಮ್ಯವೇ ಸರಿ. ಈ ಕಾರಣಕ್ಕಾಗಿ ರಾಜ್ಯಪಾಲರು ದೇಶವಾಸಿಗಳ, ಮುಖ್ಯವಾಗಿ ಆರೂವರೆ ಕೋಟಿ ಕನ್ನಡಿಗರ ಕ್ಷಮೆ ಯಾಚಿಸುವುದು ಮಾತ್ರವೇ ಸರಿಯಾದ ಕ್ರಮವಾದೀತು. ಜೊತೆಗೆ, ಕಳೆದ ಎರಡೂವರೆ ದಿನಗಳ ಅವಧಿಯಲ್ಲಿ ಬಿಜೆಪಿಯ ಪ್ರಹಸನಕ್ಕಾಗಿ ಸರಕಾರಿ ಬೊಕ್ಕಸಕ್ಕಾದ ನಷ್ಟವನ್ನು ತುಂಬಿಸಲು ರಾಜ್ಯಪಾಲರು ತಮ್ಮ ವೇತನವನ್ನು ನೀಡುವುದರಿಂದ ಮಾತ್ರವೇ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತದ ಪ್ರಕ್ರಿಯೆಯಾಗಬಹುದು. ಸ್ವಜನ ಪಕ್ಷಪಾತ ಮತ್ತು ಅಧಿಕಾರ ದುರುಪಯೋಗ, ಎಲ್ಲಕ್ಕೂ ಮಿಗಿಲಾಗಿ ಭ್ರಷ್ಟಾಚಾರಕ್ಕೆ ನೇರವಾಗಿ ಕುಮ್ಮಕ್ಕು ನೀಡುವ ಅಕ್ಷಮ್ಯ ಅಪರಾಧವೆಸಗಿದ್ದಕ್ಕಾಗಿ ವಜುಭಾಯಿ ವಾಲಾರವರು ಗೌರವಾರ್ಹವಾದ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ರಾಜಕೀಯಕ್ಕೆ ಮರಳುವುದೇ ಸೂಕ್ತವಾದೀತು.

ರಾಕ್ಷಸರಿಂದ ರಕ್ಷಿಸಿಕೊಳ್ಳಲು ದೇವತೆಗಳು ಅಡಗಿ ಕುಳಿತುಕೊಂಡು ಕೊನೆಗೆ ತ್ರಿಮೂರ್ತಿಗಳ ಮೊರೆ ಹೋಗುವಂತೆ, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರೆಸಾರ್ಟ್ ಗಳಲ್ಲಿ ರಕ್ಷಣೆ ಪಡೆದುಕೊಂಡು ಅಂತಿಮವಾಗಿ ಸಂವಿಧಾನ, ನ್ಯಾಯಾಂಗ ಮತ್ತು ಕಾನೂನಿನ ಮೊರೆ ಹೋಗಿದ್ದು ಪ್ರಜಾತಂತ್ರದ ಅಪಹಾಸ್ಯವೂ ಹೌದು, ಜಯವೂ ಹೌದು.

ರಾಜ್ಯಪಾಲರು ಯಡಿಯೂರಪ್ಪನವರಿಗೆ ವಿಶ್ವಾಸಮತ ಸಾಬೀತುಪಡಿಸಲು 15 ದಿನಗಳ ಕಾಲಾವಕಾಶ ನೀಡಿ ಕುದುರೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟರೆ, ಸುಪ್ರೀಂಕೋರ್ಟ್ ಅದಕ್ಕೆ ತಡೆ ಒಡ್ಡಿ ಸಂವಿದಾನ ಮತ್ತು ಪ್ರಜಾತಂತ್ರವನ್ನು ಉಳಿಸುವಲ್ಲಿ ಮಹತ್ತರ ಪಾತ್ರ ವಹಿಸುವ ಮೂಲಕ ಮತ್ತೊಮ್ಮೆ ನ್ಯಾಯಾಂಗದ ಘನತೆ ಮತ್ತು ಗೌರವಗಳನ್ನು ಎತ್ತಿ ಹಿಡಿಯಿತು. ಪ್ರಜಾತಂತ್ರವಾದಿಗಳ, ಸಂವಿಧಾನಬದ್ದ ಪ್ರಜೆಗಳ ಅಭಿನಂದನೆಗೆ ಪಾತ್ರವಾಯಿತು.

ಬಿಜೆಪಿ ನಾಯಕರು ಅಡಿಗೆ ಬಿದ್ದರೂ ಮೂಗು ಮೇಲೆ ಎಂಬಂತೆ ಇದೀಗ ವರ್ತಿಸಬಹುದಾದರೂ, ಈ ಸೋಲನ್ನು ಅಷ್ಟು ಬೇಗ ಅರಗಿಸಿಕೊಳ್ಳಲು ಬಿಜೆಪಿ ದುರಹಂಕಾರಿ ನಾಯಕರಿಗೆ ಸಾಧ್ಯವಿಲ್ಲ. ಸೋಲಿನ ಹತಾಷೆಯಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕತ್ವದ ನಡುವೆ ಜಗಳ ಶುರುಹಚ್ಚಿಕೊಳ್ಳುವಂತೆ ಮಾಡಲು, ಮತ್ತೆ ಶಾಸಕರನ್ನು ಖರೀದಿಸಲು ಬೇಕಾದ ಷಡ್ಯಂತ್ರಗಳನ್ನು ಹೆಣೆಯಲು ಅದು ಮುಂದಾಗಬಹುದು. ಇದಕ್ಕಾಗಿ ಅದು ತನ್ನೆಲ್ಲಾ ಶಕ್ತಿ, ಶ್ರಮಗಳನ್ನು ಹಾಕಬಹುದು. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮತ್ತು ಶಾಸಕರು ಹಿಂದಿಗಿಂತ ಇನ್ನು ಮುಂದೆ ಬಹು ಎಚ್ಚರದಿಂದ ಇರುವ ಅಗತ್ಯವಿದೆ.

Leave a Reply

Your email address will not be published. Required fields are marked *