Realtime blog statisticsweb statistics
udupibits.in
Breaking News
ಉಡುಪಿ: ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಶಿಶು ಮರಣ ?

ದಲಿತ ದೌರ್ಜನ್ಯ ಮುಚ್ಚಿಹಾಕಲು ಪೊಲೀಸ್ ಯತ್ನ: ಸೇಡಿನ ಕ್ರಮವಾಗಿ ಪತ್ರಕರ್ತರ ವಿರುದ್ಧ ಕೇಸು ದಾಖಲಿಸುವ ಸಂಚು !

ಉಡುಪಿ: ಕಾರ್ಕಳ ಸಬ್ ಡಿವಿಷನಿನ ಬೆಳ್ಳೆ ನೆಲ್ಲಿಕಟ್ಟೆ ಚುನಾವಣಾ ಚೆಕ್ ಪೋಸ್ಟ್ ನಲ್ಲಿ ಎಪ್ರಿಲ್ 22ರಂದು ಶಿರ್ವ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಅಂದಪ್ಪ ಹಾಗೂ ಇತರರು ನಡೆಸಿದ ದಲಿತ ದೌರ್ಜನ್ಯದ ಬಗ್ಗೆ ವರದಿ ಮಾಡಿದ udupibits.in ನ್ಯೂಸ್ ವೆಬ್ ಸೈಟ್ ಸಂಪಾದಕ ಶ್ರೀರಾಮ ದಿವಾಣ ಹಾಗೂ ಈ ವರದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ ಮಾಹಿತಿ ಹಕ್ಕು ಹೋರಾಟಗಾರ ಮತ್ತು ಪತ್ರಕರ್ತ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಹಾಗೂ ಇತರರ ವಿರುದ್ಧ ಸೇಡಿನ ಕ್ರಮವಾಗಿ ಸುಳ್ಳು ಮೊಕದ್ದಮೆ ದಾಖಲಿಸಲು ಪೊಲೀಸ್ ಅಧಿಕಾರಿಗಳು ಷಡ್ಯಂತ್ರ ಹೂಡಿದ್ದಾರೆ ಎಂಬ ಮಾಹಿತಿ ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.

ಷಡ್ಯಂಂತ್ರದ ಭಾಗವಾಗಿ, ದೌರ್ಜನ್ಯಕ್ಕೆ ಒಳಗಾದ ಯುವಕನಿಂದ ಪೊಲೀಸ್ ಅಧಿಕಾರಿಗಳು ಪತ್ರಕರ್ತರ ವಿರುದ್ಧ ತಮಗೆ ಬೇಕಾದಂತೆ ಹೇಳಿಕೆಯನ್ನು ಬರೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಮಾತ್ರವಲ್ಲ, ಇದಕ್ಕೂ ಮೊದಲು ಸಂತ್ರಸ್ತ ಯುವಕನಿಗೆ ಬೆದರಿಕೆ ಹಾಕಿ ಮತ್ತು ಅಮಿಷಗಳನ್ನು ಒಡ್ಡಿ ”ಪೊಲೀಸರು ನನ್ನ ಮೇಲೆ ದೌರ್ಜನ್ಯ ನಡೆಸಿಲ್ಲ, ನಾನು ಸ್ವಯಂಸ್ಪೂರ್ತಿಯಿಂದ ಚೆಕ್ ಪೋಸ್ಟ್ ಕಸ ಗುಡಿಸಿರುತ್ತೇನೆ. ಮಾತ್ರವಲ್ಲ ತನಗೆ ಪೊಲೀಸರು ಆರೈಕೆ ಮಾಡಿದ್ದಾರೆ” ಎಂಬ ಹೇಳಿಕೆಯನ್ನು ಬರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಎಪ್ರಿಲ್ 22ರಂದು ಸಂಜೆ ಮೂಡುಬೆಳ್ಳೆ ಕಡೆಗೆ ತ್ರಿಬಲ್ ರೈಡ್ ನಲ್ಲಿ ಸಂಚರಿಸುತ್ತಿದ್ದ ದಲಿತ ಯುವಕನನ್ನು, ನೆಲ್ಲಿಕಟ್ಟೆ ಚೆಕ್ ಪೋಸ್ಟ್ ನಲ್ಲಿ ತಡೆದು ನಿಲ್ಲಿಸಿದ ಪಿಸಿ ಅಂದಪ್ಪ ಹಾಗೂ ಇತರರು ಯುವಕನನ್ನು ಏಕಾಏಕಿಯಾಗಿ ಅವಾಚ್ಯ ಶಬ್ದಗಳಿಂದ ಬೈಯ್ದು ಗಂಭೀರ ಹಲ್ಲೆ ನಡೆಸಿದ ಬಳಿಕ ಪಕ್ಕದಲ್ಲಿದ್ದ ಬಾಡಿಗೆ ಮನೆಯೊಂದರಿಂದ ಹಿಡಿಸೂಡಿ ತರಿಸಿ ಬೆದರಿಸಿ  ಒತ್ತಾಯಪೂರ್ವಕವಾಗಿ ಚೆಕ್ ಪೋಸ್ಟ್ ಕಸ ಗುಡಿಸುವಂತೆ ಮಾಡಿದ್ದರು.

ವಿಷಯವನ್ನು, ಜಿಲ್ಲಾಧಿಕಾರಿಗಳಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಣ ನಿಂಬರ್ಗಿ ಅವರ ಗಮನಕ್ಕೂ ತರಲಾಗಿತ್ತು. ಜಿಲ್ಲಾಧಿಕಾರಿಗಳು, ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಉಡುಪಿ ತಾಲೂಕು ಸಮಾಜ ಕಲ್ಯಾಣ ಇಲಾಖಾಧಿಕಾರಿಗಳಿಗೆ ಆದೇಶಿದ್ದರು. ಪ್ರಕರಣದ ಬಗ್ಗೆ ಪಶ್ಚಿಮ ವಲಯದ ಐಜಿಪಿ ಅರುಣ್ ಚಕ್ರವರ್ತಿಯವರಿಗೆ ಮೌಖಿಕವಾಗಿ ಮಾಹಿತಿ ನೀಡಿದ ಬಳಿಕ, ಐಜಿಪಿಯವರ ಸೂಚನೆಯಂತೆ ಎಸ್ಪಿ ನಿಂಬರ್ಗಿಯವರು ತನಿಖೆಗೆ ಆದೇಶಿಸಿದ್ದರು. ಎಸ್ಪಿಯವರು ಪ್ರಕರಣದ ಬಗ್ಗೆ ಶ್ರೀರಾಮ ದಿವಾಣ ಅವರಲ್ಲಿ ಮೌಖಿಕವಾಗಿ ಮಾತನಾಡಿದ ಬಳಿಕ, ಸಂತ್ರಸ್ತ ಯುವಕ ನಡೆಯಲು ಕಷ್ಟಪಡುತ್ತಾ  ಚೆಕ್ ಪೋಸ್ಟ್ ನ ಕಸ ಗುಡಿಸುತ್ತಿದ್ದ ವಿಡೋಯವನ್ನು ಹಾಗೂ ಸಂತ್ರಸ್ತರ ಹೆಸರು ಮತ್ತು ವಿಳಾಸದ ವಿವರವನ್ನು ದಿವಾಣ ಅವರು ಎಸ್ಪಿಯವರ ವಾಟ್ಸ್ಆ್ಯಪ್ ಗೆ ಕಳಹಿಸಿಕೊಟ್ಟಿದ್ದರು.

ಮಾಹಿತಿ ಹಕ್ಕು ಮತ್ತು ಮಾನವ ಹಕ್ಕು ಹೋರಾಟಗಾರರೂ, udupibits.in ನ್ಯೂಸ್ ವೆಬ್ ಸೈಟ್ ಸಂಪಾದಕರೂ ಆದ ಶ್ರೀರಾಮ ದಿವಾಣರಿಗೆ ಕರೆ ಮಾಡಿದ ಎಸ್ಪಿಯವರು, ದೌರ್ಜನ್ಯಕ್ಕೆ ಒಳಗಾಗಿದ್ದಾನೆಂದು ಹೇಳಲಾಗುವ ಯುವಕ, ಚೆಕ್ ಪೋಸ್ಟ್ ನಲ್ಲಿ ”ಸ್ವಯಂ ಪ್ರೇರಣೆಯಿಂದ ಆತ ಗುಡಿಸಿದ್ದಿರಬಹುದು ಎಂದಾದರೆ ಕೇಸು ಬೀಳುತ್ತದೆ” ಎಂದು ತಿಳಿಸುವ ಮೂಲಕ, ತನಿಖೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಯಾವ ಮಾರ್ಗ ಅನುಸರಿಸುತ್ತಿದ್ದಾರೆ ಎಂಬ ಮಾಹಿತಿ ಮುಂಚಿತವಾಗಿಯೇ udupibits.in ಗೆ ಲಭಿಸಿತ್ತು.

ಪ್ರಕರಣದ ದಾರಿ ತಪ್ಪಿಸುವ ಯತ್ನವನ್ನು ಶಿರ್ವ ಪೊಲೀಸ್ ಅಧಿಕಾರಿಗಳು ಮೊದಲೇ ನಡೆಸಿರುವುದು ಸಹಜವಾಗಿದ್ದು, ನಿರೀಕ್ಷಿತವೇ ಆಗಿತ್ತು. ಎಪ್ರಿಲ್ 22ರ ಸಂಜೆ ಪಿಸಿ ಅಂದಪ್ಪ ಪೊಲೀಸ್ ದೌರ್ಜನ್ಯ ನಡೆಸಿದ್ದು, ದಲಿತ ದೌರ್ಜನ್ಯ ಪ್ರಕರಣದ ವಾಸ್ತವಾಂಶಗಳನ್ನು ನೇರವಾಗಿ ದಿಟ್ಟತನದಿಂದ ವರದಿ ಮಾಡಿದ ಕಾರಣಕ್ಕೆ, ವರದಿ ಮಾಡಿದ udupibits.in ನ್ಯೂಸ್ ವೆಬ್ ಸೈಟ್ ಸಂಪಾದಕ ಶ್ರೀರಾಮ ದಿವಾಣ, ವರದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇ್ರ ಮಾಡಿದ ಅಶ್ವಿನ್ ಲಾರೆನ್ಸ್ ಹಾಗೂ ಇತರರ ವಿರುದ್ಧ ಸೇಡಿನ ಕ್ರಮವಾಗಿ ಸುಳ್ಳು ಕೇಸು ದಾಖಲಿಸಲು ಸಂಚು ಹೂಡಿರುವುದು ಬಯಲಾಗಿದ್ದು, ಮುಂದಿನ ಬೆಳವಣಿಗೆಗಳನ್ನು ಕಾದುನೋಡಬೇಕಾಗಿದೆ.

* ಕರ್ನಾಟಕ ಪೊಲೀಸ್: ಸಾಂದರ್ಭಿಕ ಚಿತ್ರ

Leave a Reply

Your email address will not be published. Required fields are marked *