Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ತಾಪಮಾನಕ್ಕೆ ಪ್ರಾಕೃತಿಕ ಮಹಾದುರಂತ: ಸೃಷ್ಠಿಯ ಅದ್ಭುತ, ಗಂಗಾನದಿ ಮೂಲ ‘ಗೋಮುಖ’ ನಾಶ !

*ಶ್ರೀರಾಮ ದಿವಾಣ

ಉಡುಪಿ: ಮಿಲಿಯಾಂತರ ವರ್ಷಗಳ ಹಿಂದೆ ಹಿಮಾಲಯದಲ್ಲಿ ಪ್ರಾಕೃತಿಕವಾಗಿ ನಿರ್ಮಿತವಾಗಿದ್ದ, ಗಂಗಾ ನದಿಯ ಉಗಮ ಸ್ಥಾನವಾಗಿರುವ, ”ಗೋಮುಖ” ಎಂಬ ಹೆಸರಿನ ಸೃಷ್ಠಿಯ ಅದ್ಭುತಗಳಲ್ಲೊಂದಾದ ಹಿಮಗಡ್ಡೆ ಅಥವಾ ಹಿಮಬೆಟ್ಟ (ಗ್ಲೇಸಿಯರ್) ಇದೇ ವರ್ಷದ ಜನವರಿ 28ರಂದು ಕುಸಿದು ಬಿದ್ದು ನಾಶವಾಗಿದೆ ಎಂಬ ಮಹಾದುರಂತದ ಸುದ್ಧಿ ತಡವಾಗಿ www.udupibits.in ಮೂಲಕ ಇದೀಗ ಬಹಿರಂಗಗೊಂಡಿದೆ.

* 1983ರಲ್ಲಿ ಗೋಮುಖ, ಚಿತ್ರದಲ್ಲಿ ರಾಜಗೋಪಾಲ್.      * 2018ರಲ್ಲಿ ಗೋಮುಖ

ಗೋಮುಖ, ಗಂಗಾ ನದಿಯ ಉಗಮ ಸ್ಥಾನವಾಗಿದೆ. ಮಾತ್ರವಲ್ಲ, ತಪೋನಿರತರ ತಪೋಭೂಮಿಯೂ ಆಗಿದೆ. ಈ ತಾಣ, ವಿಶ್ವದ ಅಧ್ಯಾತ್ಮ ಸಾಧಕರ ಸ್ವರ್ಗವಾಗಿದ್ದು, ಜಾಗತಿಕ ಪ್ರವಾಸಿಗರ ಅತ್ಯಾಕರ್ಷಣೆಯ ಸ್ಥಳವಾಗಿದೆ. ಮನುಷ್ಯನ ಸೃಷ್ಠಿಯಾಗುವುದಕ್ಕೂ ಹಿಂದೆಯೇ ”ಗೋಮುಖ”ವಿದ್ದು, ಪ್ರಸ್ತುತ ನಾಶವಾಗಿರುವುದು ಆಘಾತಕಾರಿ ವಿಚಾರವಾಗಿದೆ. ಈ ಮಹಾ ಪ್ರಾಕೃತಿಕ ದುರಂತಕ್ಕೆ ಮಿತಿ ಮೀರಿ ಏರುತ್ತಿರುವ ತಾಪಮಾನ (ಗ್ಲೋಬಲ್ ವಾರ್ಮ್)ವೇ ಕಾರಣವೆನ್ನಲಾಗಿದೆ.

1983ರಲ್ಲಿ

ಉಡುಪಿ ಹಿರಿಯಡ್ಕದ ‘ಗಾಯತ್ರಿ ಧ್ಯಾನ ಮಂದಿರ’ದ ಗಾಯತ್ರಿ ಉಪಾಸಕರಾದ ರಾಜಗೋಪಾಲ್ ಎಂ. ಅವರು ಇದೇ ತಿಂಗಳು ಗಂಗೋತ್ರಿ, ಗೋಮುಖಕ್ಕೆ ಅಧ್ಯಾತ್ಮ ಯಾತ್ರೆ ಕೈಗೊಂಡಿದ್ದು, 21ಕ್ಕೆ ಊರಿಗೆ ಮರಳಿದ್ದು, ಅವರು ಈ ಅಘಾತಕಾರಿ ಸುದ್ಧಿಯನ್ನು ಅತೀವ ದುಃಖದೊಂದಿಗೆ udupibits.inಗೆ ಹಿಂದಿನ ಮತ್ತು ಇಂದಿನ ಛಾಯಾಚಿತ್ರಗಳ ಸಹಿತ ತಿಳಿಸಿದ್ದಾರೆ.

1983ರಲ್ಲಿ

ಸರಿಸುಮಾರು 42 ಕಿಮೀ ವ್ಯಾಪ್ತಿ ಹೊಂದಿರುವ ”ಗೋಮುಖ”ವೆಂಬ ಹಿಮ ಬೆಟ್ಟ ಮಣ್ಣು, ಕಲ್ಲು, ಮರಳು ಮತ್ತು ಹಿಮದಿಂದ ರಚಿಸಲ್ಪಟ್ಟಿದೆ. ”ಗೋಮುಖ”ದ ಒಂದು ಬದಿಯಲ್ಲಿ ತಪೋವನ ಮತ್ತು ಇನ್ನೊಂದು ಬದಿಯಲ್ಲಿ ನಂದನವನವಿದೆ. ಇದರಲ್ಲಿ ತಪೋವನದ ಅರ್ಧ ಭಾಗ ಮತ್ತು ನಂದನನವದ ಕಾಲು ಭಾಗವೂ ಕುಸಿದಿದೆ. ”ಗೋಮುಖ” ಸಂಪೂರ್ಣ ಕುಸಿದಿದ್ದು, ಪರಿಣಾಮ, ಪ್ರಸ್ತುತ ಈ ಜಾಗ ಬಯಲಿನಂತೆ ಮಾರ್ಪಟ್ಟಿದೆ ಎಂದು ಲೇಖಕರೂ ಆಗಿರುವ ರಾಜಗೋಪಾಲ್ ಅವರು ತಿಳಿಸುತ್ತಾರೆ.

2018ರಲ್ಲಿ

ಉತ್ತರಾಖಂಡ ರಾಜ್ಯದಲ್ಲಿರುವ ಗಂಗೋತ್ರಿಯ ವರೆಗೆ ಅನೇಕ ಮಂದಿ ಪ್ರವಾಸಿಗರು ಹೋಗುತ್ತಾರೆಯಾದರೂ, ಗಂಗೋತ್ರಿಯಿಂದ 14 ಕಿಮೀ ದೂರವಿರುವ ”ಬೋಜ್ ಭಾಷಾ”ಕ್ಕಾಗಲೀ, ಇಲ್ಲಿಂದ ಮತ್ತೆ 5 ಕಿಮೀ ದೂರವಿರುವ ”ಗೋಮುಖ”ಕ್ಕಾಗಲೀ ಹೆಚ್ಚಿನ ಪ್ರವಾಸಿಗರು ಹೋಗುವುದಿಲ್ಲ. ಕಾರಣ, ಗಂಗೋತ್ರಿಯಿಂದ ಗೋಮುಖಕ್ಕೆ ಯಾವುದೇ ರೀತಿಯ ವಾಹನದ ವ್ಯವಸ್ಥೆ ಇರುವುದುಇಲ್ಲ. ಮುಖ್ಯವಾಗಿ ಅಧ್ಯಾತ್ಮ ಸಾಧಕರು ಮಾತ್ರವೇ ಗೋಮುಖಕ್ಕೆ ಯಾತ್ರೆ ಕೈಗೊಳ್ಳುತ್ತಾರೆ. ಹಾಗಾಗಿ ಗೋಮುಖದ ಕುಸಿತದ ವಿಷಯ ಹೊರಲೋಕಕ್ಕೆ ಇನ್ನೂ ಸಹ ತಲುಪಿಲ್ಲವೆನ್ನಲಾಗಿದೆ.

ರಾಜಗೋಪಾಲ್ ಎಂ. ಅವರು 1983ರಿಂದ ನಿರಂತರವಾಗಿ ”ಗೋಮುಖ”ಕ್ಕೆ ಅಧ್ಯಾತ್ಮ ಯಾತ್ರೆ ಕೈಗೊಳ್ಳುತ್ತಿದ್ದು, ಗೋಮುಖದ ನಾಶದ ಕಾರಣ, ಈ ವರ್ಷದ ಯಾತ್ರೆ ತೀರಾ ನಿರಾಸೆಯನ್ನುಂಟುಮಾಡಿತು ಎಂದು ಉಡುಪಿಬಿಟ್ಸ್ ಡಾಟ್ ಇನ್ ಜೊತೆ ಮಾತನಾಡುತ್ತಾ ವಿಷಾದದಿಂದ ನುಡಿದಿದ್ದಾರೆ.

2018ರಲ್ಲಿ

ಛಾಯಾಚಿತ್ರಗಳು: ರಾಜಗೋಪಾಲ್ ಎಂ.

 

 

Leave a Reply

Your email address will not be published. Required fields are marked *