Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಎಂ.ರಾಜಗೋಪಾಲರ ‘ಗಾಂಧೀಜಿಯ ರೂಪಕಗಳು’, ತಾವೋ-ಪರತತ್ವದ ಅನುಸಂಧಾನ’ ಹಾಗೂ ಶ್ರೀರಾಮ ದಿವಾಣರ ವ್ಯವಸ್ಥೆಯೆಂಬ ಅವ್ಯವಸ್ಥೆ’ ಕೃತಿಗಳ ಬಿಡುಗಡೆ

ಉಡುಪಿ: ಹಿರಿಯ ಬರಹಗಾರರಾದ ಎಂ.ರಾಜಗೋಪಾಲ್ ಹಿರಿಯಡ್ಕ ಇವರ ‘’ಗಾಂಧೀಜಿಯ ರೂಪಕಗಳು’’ ಹಾಗೂ ‘’ತಾವೋ- ಪರತತ್ತ್ವದಅನುಸಂಧಾನ’’ ಮತ್ತು ಪತ್ರಕರ್ತ ಶ್ರೀರಾಮ ದಿವಾಣ ಇವರ ‘’ವ್ಯವಸ್ಥೆಯೆಂಬ ಅವ್ಯವಸ್ಥೆ’’ ಎಂಬ ಮೂರು ನೂತನ ಕೃತಿಗಳ ಬಿಡುಗಡೆ ಸಮಾರಂಭವು ಇಂದು (ಜೂನ್ 2, 2018) ಸಂಜೆ ಉಡುಪಿಯ ಟಿ.ಎ.ಪೈ ಹಿಂದಿ ಭವನದಲ್ಲಿ ನಡೆಯಿತು.

ಖ್ಯಾತ ಬರಹಗಾರರೂ, ಅಧ್ಯಾಪಕರೂ ಆದ ಅರವಿಂದ ಚೊಕ್ಕಾಡಿ ಅವರು ಮೂರೂ ಕೃತಿಗಳನ್ನು ಬಿಡುಗಡೆಗೊಳಿಸಿ, ಕೃತಿಗಳ ಬಗ್ಗೆ ಮಾತನಾಡಿದರು. ಖ್ಯಾತ ಮನೋವೈದ್ಯರೂ, ಲೇಖಕರೂ ಆದ ಡಾ.ಪಿ.ವಿ.ಭಂಡಾರಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದರು. ಲೇಖಕರಾದ ಶ್ರೀರಾಮ ದಿವಾಣ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರ್ವಹಿಸಿದರು.

ಹಿರಿಯ ಸಮಾಜವಾದಿ ಅಮ್ಮೆಂಬಳ ಆನಂದ ಮಣಿಪಾಲ, ಹಿರಿಯ ಪತ್ರಕರ್ತ ಎಂ.ವಿ.ಬಳ್ಳುಳ್ಳಾಯ, ‘ನಾಡೋಜ’ ಕೆ.ಪಿ.ರಾವ್, ಈಶ್ವರ ಚಿಟ್ಪಾಡಿ, ಪ್ರೊ.ಸಿರಿಲ್ ಮಥಾಯಸ್, ತಾರಾ ಭಟ್, ಅಂಶುಮಾಲಿ, ಜಯನ್ ಮಲ್ಪೆ, ಡಾ.ಶಶಿಕಾಂತ್ ಕೆ., ಡಾ.ವಿರೂಪಾಕ್ಷ ದೇವರಮನೆ, ರಾಜೇಂದ್ರ ಶೆಟ್ಟಿ, ಸುಧಾಕರ ಪೂಜಾರಿ, ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ, ಸಚಿನ್ ಶೆಟ್ಟಿ, ರಸೂಲ್ ಕಟಪಾಡಿ, ಮೊಹಮ್ಮದ್ ಹಂದಟ್ಟು, ಅವಿನಾಶ್ ದೇವಾಡಿಗ ಪಳ್ಳಿ, ಶೇಖರ ಶೆಟ್ಟಿ ಮುದ್ರಾಡಿ, ಮಧುಕರ ಮುದ್ರಾಡಿ, ನಾಗರಾಜಮೂರ್ತಿ, ಚಂದ್ರಶೇಖರ ವಂಡ್ಸೆ, ರಾಜೇಶ್ವರಿ ದಿವಾಣ, ಬಾಲಕೃಷ್ಣ ಕೆ. ಮಿಷನ್ ಕಂಪೌಂಡ್, ರಿಚರ್ಡ್ ದಾಂತಿ, ತಾರಾನಾಥ ಮೇಸ್ತ, ರೋನಾಲ್ಡ್ ಕ್ಯಾಸ್ತಲಿನೊ, ರವಿರಾಜ ದಿವಾಣ ಮೊದಲಾದವರು ಉಪಸ್ಥಿತರಿದ್ದರು.

ಕೃತಿ ಬಿಡುಗಡೆಗೊಳಿಸಿ ಮಾತಾಡಿದ ಖ್ಯಾತ ವಿಮರ್ಶಕ ಅರವಿಂದ ಚೊಕ್ಕಾಡಿಯವರ ಭಾಷಣದ ಪೂರ್ಣ ಪಾಠ:

‘ವ್ಯವಸ್ಥೆಯೆಂಬ ಅವ್ಯವಸ್ಥೆ’ ಕೃತಿಯ ಬಗ್ಗೆ…

ಶ್ರೀರಾಮ ದಿವಾಣ ಅವರ ‘ ವ್ಯವಸ್ಥೆಯೆಂಬ ಅವ್ಯವಸ್ಥೆ’, ಎರಡನೆಯ ಆವೃತ್ತಿಯಾಗಿ ಪ್ರಕಟಗೊಂಡಿರುವ ಎಮ್.ರಾಜಗೋಪಾಲ್ ಅವರ ‘ ಗಾಂಧೀಜಿಯ ರೂಪಕಗಳು’  ಮತ್ತು ರಾಜಗೋಪಾಲ್ ಅವರದೆ ಆದ ‘ ತಾವೋ-ಪರತತ್ವದ ಅನುಸಂಧಾನ’ ಕೃತಿಗಳ ಅನಾವರಣ ಮಾಡಿದ್ದೇನೆ. 1200ಪುಟಗಳ ಈ ಕೃತಿಗಳನ್ನು ನಿನ್ನೆ ಸಂಜೆ ತಂದು ಕೊಟ್ಟು ಇವತ್ತು ಬಿಡುಗಡೆ ಮಾಡಬೇಕೆಂದು ಹೇಳಿದ ಶ್ರೀರಾಮ ದಿವಾಣ ಅವರ ಅಗಾಧ ಕಾನ್ಫಿಡೆನ್ಸ್ ಲೆವೆಲ್ ಗೆ ನಾನು ಶರಣಾಗಿದ್ದೇನೆ !

ಅನಾವರಣಗೊಳಿಸಿದ ಈ ಮೂರೂ ಪುಸ್ತಕಗಳ ನಡುವೆ ಮೇಲ್ನೋಟಕ್ಕೆ ಸಂಬಂಧವೆ ಇಲ್ಲ. ‘ ವ್ಯವಸ್ಥೆ ಎಂಬ ಅವ್ಯವಸ್ಥೆ’ಯು ಒಂದು ಕೊನೆಯಲ್ಲಿ ನಿಂತರೆ, ‘ತಾವೊ-ಪರತತ್ತತ್ವದ ಅನುಸಂಧಾನ’ ವು ಇನ್ನೊಂದು ಕೊನೆಯಲ್ಲಿ ನಿಲ್ಲುತ್ತದೆ. ಇವೆರಡರ ನಡುವಿನಲ್ಲಿ ‘ಗಾಂಧೀಜಿಯ ರೂಪಕಗಳು’ ನಿಲ್ಲುತ್ತದೆ. ಈ ಮೂರೂ ಕೃತಿಗಳ ನಡುವೆ ಕಾಣದ ಸಂಬಂಧಗಳನ್ನು ಕಾಣಲು ಸಾಧ್ಯವಿದೆ. ಹೇಗೆ ಎಂಬುದನ್ನು ಕೊನೆಯಲ್ಲಿ ಹೇಳುತ್ತೇನೆ.

ನಾನು ‘ವ್ಯವಸ್ಥೆಯೆಂಬ ಅವ್ಯವಸ್ಥೆ’ ಕೃತಿಯ ಬಗ್ಗೆ ಮಾತನಾಡಬೇಕೊ ಅಲ್ಲ ಶ್ರೀರಾಮ ದಿವಾಣರ ಬಗ್ಗೆಯೆ ಮಾತನಾಡಬೇಕೊ ಎಂದು ಇನ್ನೂ ತೀರ್ಮಾನಕ್ಕೆ ಬರಲು ಆಗಿಲ್ಲ. ಏಕೆಂದರೆ ಇವೆರಡರ ನಡುವೆ ಸಂಬಂಧವಿದೆ.

ಶ್ರೀರಾಮ ದಿವಾಣ ಅವರು ಬಹುಕಾಲ ಆ್ಯಕ್ಟಿವಿಸ್ಟ್ ಆಗಿ ನಮಗೆಲ್ಲ ಪರಿಚಿತರು. ಈ ಕೃತಿಯಲ್ಲಿರುವ ಲೇಖನಗಳೂ ಆ್ಯಕ್ಟಿವಿಸ್ಟ್ ಆಗಿ ಅವರು ಪಡೆದ ಅನುಭವಗಳ ಆಧಾರದ್ದಾಗಿವೆ. ಈಗ ಅವರು ಆ್ಯಕ್ಟಿವಿಸ್ಟ್ ಅಲ್ಲ. ಅದರಿಂದ ಹೊರಬಂದಿದ್ದಾರೆ. ಆದರೆ ಆ್ಯಕ್ಟಿವಿಸ್ಟ್ ಆಗಿ ಅವರು ಪಡೆದ ಅನುಭವಗಳು ಈ ಕೃತಿಯಲ್ಲಿ ಹೆಜ್ಜೆ ಹೆಜ್ಜೆಗೂ ಕಾಣಸಿಗುತ್ತದ. ಅವರು ನೀಡುವ ವಿವರಗಳು ಕಾಲ್ಪನಿಕವಲ್ಲ. ದೂರ ದೇಶದ್ದೊ, ಕೇರಳ-ಮಿಝೋರಾಂ ಅಂತಲೋ ದೂರ ಪ್ರದೇಶಗಳದ್ದೂ ಅಲ್ಲ. ಇಲ್ಲೆ ಉಡುಪಿಯಲ್ಲಿ ಅವರು ಪಡೆದ ನೈಜ ಅನುಭವಗಳ ಆಧಾರಗಳನ್ನು ಕೃತಿಯಲ್ಲಿ ಅಲ್ಲಲ್ಲಿ ಕೊಟ್ಟಿದ್ದಾರೆ. ಆದ್ದರಿಂದ ಕೃತಿಗೆ ಸ್ಥಳೀಯ ಮಹತ್ವ ಬಹಳ ಇದೆ. ಉದಾಹರಣೆಗೆ ಮತಾಂತರದ ತಂತ್ರವಿದ್ದಾಗ ಪ್ರೀತಿ ಯಾವ ರೀತಿ ಶುಷ್ಕಗೊಳ್ಳುತ್ತದೆ ಎಂಬುದನ್ನು ಬರೆದಿದ್ದಾರೆ.

ಶ್ರೀರಾಮ ದಿವಾಣರು ಭ್ರಷ್ಠಾಚಾರದ ಬಗ್ಗೆ ಬರೆಯುತ್ತಾರೆ. ಸ್ವಯಂ ಸೇವಾ ಸಂಸ್ಥೆಗಳು ಹೇಗೆ ಉದ್ಯಮಗಳಾಗುತ್ತಿವೆ, ಹೋರಾಟಗಳು ಹೇಗೆ ವ್ಯವಹಾರಗಳಾಗುತ್ತವೆ, ಧರ್ಮ ಹೇಗೆ ಕೆಡುಕುಗಳ ಮೂಲವಾಗುತ್ತದೆ, ಅತ್ಯಾಚಾರದ ಸಮಸ್ಯೆಯ ಹಿಂದಿನ ಪುರುಷ ಮನೋಧರ್ಮದ ಅಟ್ಟಹಾಸ, ರಾಜಕೀಯ ಶೈಥಿಲ್ಯಗಳು, ಆರ್ಥಿಕ ಹಿನ್ನಡೆ, ಚುನಾವಣೆಗಳು ಮುಂತಾದ ಆ್ಯಕ್ಟಿವಿಸ್ಟ್ ಮೂವ್ ಮೆಂಟಿನ ಪ್ರಧಾನ ಆಸಕ್ತಿಗಳ ಬಗ್ಗೆಯೆಲ್ಲ ಬರೆಯುತ್ತಾರೆ. “ಅಸ್ತ್ರವಾಗುತ್ತಿದೆ ಅತ್ಯಾಚಾರ” ಎನ್ನುವ ಲೇಖನದಲ್ಲಿ ಅತ್ಯಾಚಾರವನ್ನು ಶತ್ರು ದಮನದ ತಂತ್ರವಾಗಿ ಬಳಸಲಾಗುತ್ತದೆ ಎಂದು ಅವರು ಹೇಳಿರುವುದು ವಾಸ್ತವ ಅದು. ಆದರೆ ಅದು ಈಗ ಪ್ರಾರಂಭವಾದದ್ದಲ್ಲ. ಸಾವಿರಾರು ವರ್ಷಗಳಿಂದಲೂ ಈ ತಂತ್ರ ಚಾಲ್ತಿಯಲ್ಲಿದೆ.

ಇಲ್ಲಿನ ಬರಹಗಳಲ್ಲಿ  ಒಬ್ಬ ಲೇಖಕ ಸಮಾಜವನ್ನು ಗ್ರಹಿಸಿ ಹೇಳಬಹುದಾದದ್ದಕ್ಕಿಂತ ಪರಿಣಾಮಕಾರಿಯಾಗಿ, ಅನುಭವ ಜನ್ಯವಾಗಿ ಹೇಳುವ ತೀಕ್ಷ್ಣತೆ ಇದೆ. ಆದರೆ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಹೇಳಬಲ್ಲ ಶ್ರೀರಾಮ ದಿವಾಣರಿಗೆ ಪರಿಹಾರವನ್ನು ಅಷ್ಟೇ  ಪರಿಣಾಮಕಾರಿಯಾಗಿ ಹೇಳಲು ಕಷ್ಟವಾಗುತ್ತದೆ. ಆದರೆ ಆ ಪ್ರಯತ್ನವನ್ನು ಅವರು ಮಾಡುತ್ತಾರೆ. ಉದಾಹರಣೆಗೆ, ‘ಭಾರತದ ಜನರೇ ಜನಲೋಕಪಾಲರಾಗಬೇಕು’ ಎಂಬ ಲೇಖನದಲ್ಲಿ, “ಭಾರತದ ಒಬ್ಬೊಬ್ಬನೂ ಜನಲೋಕಪಾಲನಾಗಬೇಕು. ಹೀಗಾಗಬೇಕಾದರೆ ಸುದೀರ್ಘ ಕಾಲಾವಧಿ ಬೇಕು. ಮಾನಸಿಕವಾಗಿ ಭ್ರಷ್ಠಾಚಾರ ವಿರೋಧಿ ಮನೋಭಾವವನ್ನು ಬೆಳೆಸಿಕೊಳ್ಳಬೇಕು” ಎಂದು ಹೇಳಿದ್ದಾರೆ. ಇದು ಸಮಸ್ಯೆಗೆ ಪರಿಹಾರವೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದರ ಸಾಧನೆಯಾಗಬೇಕಾದರೆ ದೀರ್ಘ ಕಾಲ ಬೇಕು ಎನ್ನುವ ವಾಸ್ತವದ ಅರಿವಿನ ಅವರ ತಿಳಿವಳಿಕೆಯಲ್ಲೂ ಎರಡನೆಯ ಮಾತಿಲ್ಲ. ಆದರೆ ಹೇಗೆ ? ಸಮಾಜದಲ್ಲಿ ಆ ರೀತಿಯ ಮನೋಭಾವ ಬೆಳೆಯುವುದು ಹೇಗೆ ? ತಾನೇ ತಾನಾಗಿ ಆಗುವುದಿಲ್ಲ. ಮತ್ತೆ ಚಳವಳಿಗಳೇ ಬೇಕು. ರಾಜಕೀಯದಲ್ಲಿ ಜಾಸ್ತಿ ಉತ್ತರಗಳನ್ನು ಹುಡುಕುವ ಆ್ಯಕ್ಟಿವಿಸ್ಟ್ ಮೂವ್ ಮೆಂಟ್ ಸಮಾಜದಲ್ಲೆ ಉತ್ತರವನ್ನು ಜಾಸ್ತಿ ಹುಡುಕಬೇಕು. ಸಮಾಜದಲ್ಲಿ ಉತ್ತರವನ್ನು ಹುಡುಕಲು ಹೊರಟಾಗ ಮತ್ತೆ ಸಮಸ್ಯೆ ಇದೆ. ಜಾತಿ, ಮತ, ವರ್ಗಗಳಾಗಿ ವಿಭಜನೆ ಹೊಂದಿ ಎಂಟು ಹತ್ತು ಕಿ.ಮೀ.ವ್ಯಾಪ್ತಿಯಲ್ಲಿ ಪರಿಸ್ಥಿತಿ ಬದಲಾಗುವ ರೀತಿಯಲ್ಲಿರುವ ನಮ್ಮ ಸಮಾಜದಲ್ಲಿನ ಮಾನಸಿಕತೆ ಬಹಳ ಜಟಿಲ. ಈ ಜಟಿಲತೆಯನ್ನು ಮೊದಲು ಬಗೆಹರಿಸಿಕೊಳ್ಳಬೇಕು. ಆ್ಯಕ್ಟಿವಿಸ್ಟ್ ಮೂವ್ ಮೆಂಟ್ ಗಳು ಸಾಮಾನ್ಯವಾಗಿ ಕೆಲವು ಥಿಯರಿಗಳನ್ನಿಟ್ಟುಕೊಂಡು ಹೊರಡುತ್ತವೆ. ಸಮಾಜ ಹಾಗೆಯೇ ಇದೆ ಎಂದು ಅಂದುಕೊಳ್ಳುತ್ತವೆ ಅಥವಾ ಹಾಗೆಯೇ ಇದೆ ಎಂದು ಕಾಣಿಸಲು ಪ್ರಯತ್ನಿಸುತ್ತವೆ. ಉದಾಹರಣೆಗೆ ಹೇಳುವುದಾದರೆ ಬಡವರೆಲ್ಲರೂ ಒಳ್ಳೆಯವರು ಎಂದು ಭಾವಿಸುತ್ತೇವೆ. ಬಡವರೆಲ್ಲರೂ ಅಸಹಾಯಕರು ನಿಜ; ಆದರೆ ಒಳ್ಳೆಯವರೇ ಆಗಬೇಕಾಗಿಲ್ಲ. ಈ ರೀತಿಯ ಅನೇಕ ಸತ್ಯಗಳನ್ನು ಜೀರ್ಣಿಸಿಕೊಳ್ಳಲಿಕ್ಕೇ ಚಳವಳಿಗಳಿಗೆ ಬಹಳ ಕಾಲ ಬೇಕಾಗುತ್ತದೆ.

ಇಂಥ ಶೋಧಗಳ ಕಡೆಗೆ ಶ್ರೀರಾಮ ದಿವಾಣರು ಹೆಚ್ಚು ಮನಸು ಮಾಡಿದ ಹಾಗೆ ಈ ಕೃತಿಯಲ್ಲಿ ಕಾಣುವುದಿಲ್ಲ. ಅದಕ್ಕೆ ಕಾರಣ ಈ ಕೃತಿಯೇ ಹೇಳುವ ಇನ್ನೊಂದು ಸತ್ಯ. ಅದೇನೆಂದರೆ ಭ್ರಮನಿರಸನ. ಈ ಭ್ರಮನಿರಸನಕ್ಕೆ ವೈಫಲ್ಯಗಳು ಕಾರಣ ಇರುತ್ತವೆ. ವೈಫಲ್ಯ ಯಾಕೆ ಬರುತ್ತದೆ ಎಂದು ಕೇಳಿದರೆ, ಅಲ್ಲಿ ಮತ್ತೊಂದು ಸತ್ಯ ಎದುರಿಗೆ ಬರುತ್ತದೆ. ನೀವು ಒಬ್ಬನನ್ನು ವಿರೋಧಿಸುತ್ತೀರಿ ಎಂದಾಗ ಅವನೂ ಕೂಡ ನಿಮ್ಮನ್ನು ವಿರೋಧಿಸುತ್ತಾನೆ, ನಿಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಾನೆ ಎಂದು ಗೊತ್ತಿರಬೇಕಾಗುತ್ತದೆ. ಅದನ್ನು ಅರಗಿಸಿಕೊಳ್ಳುವ ಶಕ್ತಿ ಬೇಕು. ಗಾಂಧಿ, ಅಂಬೇಡ್ಕರ್, ಲೋಹಿಯಾ, ಜಯಪ್ರಕಾಶ್ ನಾರಾಯಣರಂಥವರಿಗೆಲ್ಲ ಆ ಶಕ್ತಿ ಇತ್ತು. ಆ ಶಕ್ತಿ ಇಲ್ಲದಾಗ ನಾವು ದಾಳಿ ಮಾಡಿದಾಗ ಅವನು ಪ್ರತಿದಾಳಿ ಮಾಡುತ್ತಿದ್ದಾನೆ ಅವನು ಕೆಟ್ಟವನು ಎಂದು ನಮ್ಮೊಂದಿಗಿರುವವರ ಮುಂದೆ ನಾವು ಅಳಲನ್ನು ತೋಡಿಕೊಳ್ಳುತ್ತೇವೆ. “ಇಂತಾದ್ದನ್ನೆಲ್ಲ ನಿರ್ಲಕ್ಷಿಸಬೇಕು” ಎಂದು ನಮ್ಮನ್ನು ನಾವೇ ಸಮಾಧಾನ ಮಾಡಿಕೊಳ್ಳುತ್ತಾ ಎದುರಾಳಿ ಕೊಟ್ಟ ಹೊಡೆತವನ್ನೆ ನೆನಪಿಸಿಕೊಳ್ಳುತ್ತಿರುತ್ತೇವೆ ! ಮೊದಮೊದಲು ಎದುರಾಳಿಯ ಮೇಲೆ ಸಿಟ್ಟು ಬರುತ್ತದೆ. ಆಮೇಲಾಮೇಲೆ ನಮ್ಮವರ ಮೇಲೆಯೇ “ನನಗೆ ಬೆಂಬಲ ಕೊಡಲಿಲ್ಲ” ಎಂದು ಸಿಟ್ಟು ಬರಲು ಶುರುವಾಗುತ್ತದೆ. ನಮ್ಮ ಬೆಂಬಲಿಗನಿಗೂ ನಮಗಿರುವಷ್ಟೆ ಸಾಮರ್ಥ್ಯವಿರುವುದು ಎಂಬ ಸತ್ಯವನ್ನು ಮರೆಯುತ್ತೇವೆ. ಹೀಗೆ ಭ್ರಮನಿರಸನ ಹುಟ್ಟಿಕೊಳ್ಳತೊಡಗುತ್ತದೆ.

ಭ್ರಮನಿರಸನ ಈ ಕೃತಿಯಲ್ಲಿ ಇದೆಯಾದರೂ ಅಪಾರವಾದ ಭರವಸೆಯೂ ಇದೆ. ಅದೇನೆಂದರೆ ಶ್ರೀರಾಮ ದಿವಾಣರು ಎಷ್ಟೇ ಭ್ರಮನಿರಸನಕ್ಕೊಳಗಾದರೂ ಇತಿಹಾಸದಲ್ಲಿ ಉತ್ತರ ಹುಡುಕಿಕೊಂಡು ಇತಿಹಾಸವನ್ನು ವೈಭವೀಕರಿಸುವುದಿಲ್ಲ. ಯಾರಾದರೂ “ಹಿಂದೆಯೆಲ್ಲ ಬಹಳ ಚೆನ್ನಾಗಿತ್ತು. ಈಗ ಎಲ್ಲವೂ ಕೆಟ್ಟುಹೋಗಿದೆ” ಎಂದು ಪ್ರಜ್ಞಾಪೂರ್ವಕವಾಗಿ ಹೇಳಿದರೆ (ಬೀಸು ಮಾತಾಗಿ ಹೇಳುವುದು ಬೇರೆ) ಅದರ ಅರ್ಥ ಅವರು ಬೌದ್ಧಿಕವಾಗಿ ಸತ್ತಿದ್ದಾರೆಂದೇ ಆಗಿರುತ್ತದೆ. ಹಿಂದೆ ಹೇಗಿತ್ತೆಂದು ನಾವು ನೋಡಿದ್ದೇವಾ ? ಕೇವಲ ಕಲ್ಪನೆ ಅಷ್ಟೆ. ಶ್ರೀರಾಮ ದಿವಾಣರು ಹಿಂದೆ ಚೆನ್ನಾಗಿತ್ತು ಎಂದು ಹೇಳಲು ಹೋಗುವುದಿಲ್ಲ. ಇದು ಕೃತಿಯು ನಮಗೆ ಉಳಿಸಿಕೊಡುವ ಬಹಳ ದೊಡ್ಡ ಭರವಸೆಯಾಗಿದೆ.

‘ಗಾಂಧೀಜಿಯ ರೂಪಕಗಳು’ ಕೃತಿಯ  ಬಗ್ಗೆ…

ಇನ್ನೀಗ ಎರಡನೆಯ ಪುಸ್ತಕ ರಾಜಗೋಪಾಲ್ ಅವರ ‘ಗಾಂಧೀಜಿಯ ರೂಪಕಗಳು’ ಬಗ್ಗೆ ಬರುತ್ತೇನೆ.ಗಾಂಧಿಯೂ ಒಬ್ಬ ಹೋರಾಟಗಾರನೇ.ಗಾಂಧಿಯೂ ಬಂಡಾಯಗಾರನೇ.ವಾಸ್ತವದ ಕುರಿತ ಅವರ ಗ್ರಹಿಕೆ ಎಷ್ಟು ಸಶಕ್ತವಾಗಿತ್ತು ಎನ್ನುವುದಕ್ಕೆ ಒಂದು ಉದಾಹರಣೆ ಹೇಳುತ್ತೇನೆ.ಭಾರತವನ್ನು ವಿಭಜಿಸದೆ ತಾವು ಹೋದರೆ ಮುಸ್ಲಿಮರನ್ನು ಹಿಂದೂಗಳು ನಾಶ ಮಾಡುತ್ತಾರೆ ಎಂಬ ಪ್ರತಿಪಾದನೆಯನ್ನು ಬ್ರಿಟಿಷ್ ಸರಕಾರ ಮಾಡಿದಾಗ ಗಾಂಧಿ ವೈಸರಾಯ್ ಗೆ ಒಂದು ಪತ್ರವನ್ನು ಬರೆದು ” ನಿಮ್ಮ ಗ್ರಹಿಕೆ ತಪ್ಪು.ಒಗ್ಗಟ್ಟಾಗಿರುವ ಮುಸ್ಲಿಮರನ್ನು ನಾಶ ಮಾಡುವ ಶಕ್ತಿ ಜಾತಿಗಳಾಗಿ ವಿಭಜಿಸಲ್ಪಟ್ಟು ಜಾತಿಗಳಾಗಿ ಅಲ್ಪ ಸಂಖ್ಯಾತರೇ ಆಗಿರುವ ಹಿಂದೂಗಳಿಗೆ ಇಲ್ಲ”ಎನ್ನುತ್ತಾರೆ.ದೇಶವಿಭಜನೆ,ತಮ್ಮ ಅನುಯಾಯಿಗಳ ಸಣ್ಣತನ,ಮತೀಯ ಗಲಭೆ,ನೆಹರೂ-ಪಟೇಲ್ ಭಿನ್ನಮತ ನಿವಾರಣೆ ಮುಂತಾದ ಒತ್ತಡಗಳಿಂದ ಜರ್ಝರಿತರಾಗಿದ್ದ ಗಾಂಧಿಗೆ 1948ರ ಜನವರಿ 28 ರಂದು “ಯಾವನಾದರೂ ಮತಿಹೀನ ಗುಂಡು ಹೊಡೆದು ನನ್ನನ್ನು ಸಾಯಿಸಿದರೆ ಯಾರೂ ದುಃಖಿಸಬೇಡಿ” ಎನ್ನುತ್ತಾರೆ.ಅದಾಗಿ ಎರಡೇ ದಿವಸಕ್ಕೆ ಮತಿಹೀನ ಮತಭ್ರಾಂತನೊಬ್ಬ ಗಾಂಧೀಜಿಯನ್ನು ಗುಂಡು ಹೊಡೆದು ಸಾಯಿಸುತ್ತಾನೆ.

516 ಪುಟಗಳ ಈ ಕೃತಿಯನ್ನು ಬರೆಯಬೇಕಾದರೆ ರಾಜಗೋಪಾಲ್ ಅವರು 13ವರ್ಷ ಅಧ್ಯಯನ ಮತ್ತು ಕ್ಷೇತ್ರಾಧ್ಯಯನವನ್ನು ಮಾಡಿದ್ದಾರೆ‌.ಗಾಂಧಿಯ ಕುರುಹುಗಳೆಲ್ಲ ಇದ್ದ ಸ್ಥಳಗಳಿಗೆ ಹೋಗಿ ಗಾಂಧಿಯನ್ನು ಅನುಭವಕ್ಕೆ ತಂದುಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ.ಮುನ್ನುಡಿಯಲ್ಲಿ ಲಕ್ಷ್ಮೀಶ ತೋಳ್ಪಾಡಿಯವರು ” ರಾಜಗೋಪಾಲ,ಗಾಂಧಿಯನ್ನು ಪರಂಪರೆಯ ನಡುವೆ ಇಟ್ಟು ನೋಡುತ್ತಾನೆ.ಸರಿಯೇ,ರಾಮ,ಕೃಷ್ಣ,ಬುದ್ಧರ ಪರಂಪರೆ”ಎಂದು ಹೇಳಿದ್ದಾರೆ.ಅದಕ್ಕೆ ತಕ್ಕಂತೆ ರಾಜಗೋಪಾಲ ಅವರು ಪ್ರಾರಂಭದಲ್ಲಿಯೇ,”ಜಗತ್ತಿನ ಅತೀ ಶ್ರೇಷ್ಠರು-ಕೊನೆಗೂ ಒಬ್ಬಂಟಿಗಳು.ಝರತುಷ್ಟ್ರ,ಬುದ್ಧ,ಕ್ರಿಸ್ತ,ಮಹಮ್ಮದ್….”ಎನ್ನುವ ಮೂಲಕ ತಾನು ಗಾಂಧಿಯನ್ನು ಗ್ರಹಿಸುವ ದೃಷ್ಟಿಕೋನವನ್ನು ಸೂಚಿಸುತ್ತಾರೆ.ಗಾಂಧಿ ಹತ್ಯೆಯನ್ನು ಜೀಸಸ್ ಹತ್ಯೆಯೊಂದಿಗೆ ತುಲನೆ ಮಾಡುತ್ತಾರೆ.ತನ್ನ ಜೀವಿತಾವಧಿಯ ಪ್ರತಿಯೊಂದು ಕ್ಷಣವನ್ನೂ ಕ್ರಿಯೆಯಾಗಿ ಬಾಳಿದ ಗಾಂಧಿಯ ಸಮಗ್ರ ಜೀವನವನ್ನು ಒಂದು ಪರಂಪರೆಯ ರೂಪಕವಾಗಿ ಕಟ್ಟಿಕೊಡುತ್ತಾರೆ.ಈ ಕೃತಿಯ ಸಾರವನ್ನು ಹೇಳಲು ನನಗೆ ಎರಡು ಗಂಟೆಯಾದರೂ ಬೇಕಾಗುತ್ತದೆ.ಅಷ್ಟು ಸಮಯಾವಕಾಶವಿಲ್ಲದ್ದರಿಂದ ಈ ಕೃತಿಯ ಬಗ್ಗೆ ಇಷ್ಟನ್ನು ಹೇಳಿ ನಿಲ್ಲಿಸುತ್ತೇನೆ.

‘ತಾವೋ- ಪರತತ್ವದ ಅನುಸಂಧಾನ’ ಕೃತಿಯ ಬಗ್ಗೆ…

ಪ್ರತೀ ಕ್ಷಣವನ್ನೂ ಸಮಾಜದೊಂದಿಗೆ ಬಾಳಿದ ಗಾಂಧಿ, ಸಮಾಜದಿಂದ ಪ್ರತ್ಯೇಕವಾಗಿ ಬದುಕಿದ್ದರೆ ಏನಾಗಬಹುದಾಗಿತ್ತೊ ಅದನ್ನು ಮೂರನೆಯ ಕೃತಿ ರಾಜಗೋಪಾಲ್ ಅವರು ಬರೆದ ‘ ತಾವೋ-ಪರತತ್ವದ ಅನುಸಂಧಾನ’ ವು ಹೇಳುತ್ತದೆ.ತಾವೊ ಎಂದರೆ ಧರ್ಮ ಎಂದು ಅರ್ಥ.ಚೀನಾದ ಲಾವೋತ್ಸೆ ಇದರ ಪ್ರವಾದಿ.ಧರ್ಮದ ಸ್ಥಾಪನೆ ಆತನ ಉದ್ದೇಶವಲ್ಲ.ಭಿಕಾರಿಯಾಗಿ ಬದುಕಿದ ಲಾವೋತ್ಸೆ ಪ್ರವಚನ ಕೇಳಲು ಬರುವ ಜನರ ಉಪದ್ರವ ತಾಳಲಾರದೆ ಉತ್ತರ ಚೀನಾದಿಂದ ಓಡಿ ಬರುವಾಗ ಸುಂಕದ ಅಧಿಕಾರಿಯೊಬ್ಬ ಸುಂಕವೆಂದು ‘ ತಾವೊ- ದ-ಚಿಂಗ್’ ಪುಸ್ತಕವನ್ನು ಬರೆಸಿದನೆಂದು ಪ್ರತೀತಿ.ಈ ಪುಸ್ತಕವೇ ತಾವೋ ದ ದಾಖಲೆ.

ತಾವೋ:ಮುಕ್ತ ಪ್ರವೇಶ ಎಂಬ ವಿಸ್ತಾರವಾದ ಪ್ರವೇಶಿಕೆಯಲ್ಲಿ ರಾಜಗೋಪಾಲ್ ಅವರು ತಾವೋ ದ ಸ್ವರೂಪವನ್ನು ವಿವರಿಸಿದ್ದಾರೆ.”ಇಲ್ಲವಾಗುವ ಮೂಲಕ ಎಲ್ಲವೂ ಆಗುವ” ಪರಿಕಲ್ಪನೆಯಲ್ಲಿ ತಾವೋ ವನ್ನು ಹಿಡಿದಿಟ್ಟಿದ್ದಾರೆ.ಲಾವೋತ್ಸೆಯ ಕವನದ ಒಂದು ಭಾಗ ಹೀಗಿದೆ:

ತಾವೋದ ಬೆಳಕು ಕತ್ತಲಿನಂತೆ ತೋರುತ್ತದೆ,

ತಾವೋದ ಮುನ್ನಡೆ ಹಿನ್ನಡೆಯಂತೆ ತೋರುತ್ತದೆ,

ಸಪಾಟಾದ ತಾವೋ ದೂರಾದಂತೆ ಭಾಸವಾಗುತ್ತದೆ,

ಶ್ರೇಷ್ಠಶೀಲ ಕಳಂಕಕ್ಕೊಳಗಾದಂತೆ ಕಾಣುತ್ತದೆ,

ಪರಿಪೂರ್ಣ ನಿಷ್ಠೆ ಪಥಭ್ರಷ್ಠವಾದಂತೆ ಅನ್ನಿಸುತ್ತದೆ,

ಮುನ್ನೆಚ್ಚರಿಕೆ ಹೇಡಿತನದಂತೆ ಕಾಣುತ್ತದೆ,

ಶುದ್ಧವಾದದ್ದು ಕೊಳೆಯಾದಂತೆ ತೋರುತ್ತದೆ

ಹಾಗೂ-

ತಾವೋ ಹೆಸರಿರದಲ್ಲಿ ಅಡಗಿರುತ್ತದೆ.

ಇಲ್ಲಿ ಹೆಸರಿರದಲ್ಲಿ ತಾವೋ ಅಡಗಿರುವುದೇ “ಇಲ್ಲವಾಗುವ ಮೂಲಕ ಎಲ್ಲವೂ ಆಗುವ” ಅದರ ಲಕ್ಷಣವಾಗಿದೆ.

ಮೇಲಿನಿಂದ ಕೆಳಕ್ಕೆ ಅಥವಾ ಕೆಳಗಿನಿಂದ ಮೇಲಕ್ಕೆ(ತಾವೋಗೆ ಮೇಲೆ-ಕೆಳಗೆ ಇಲ್ಲ)ಓದಿಕೊಳ್ಳಬಹುದಾದ ಕವಿತೆಯೊಂದು ಹೀಗಿದೆ:

ಇನ್ನೊಬ್ಬರನ್ನು ಅರಿತವನು-ಕುಶಾಗ್ರಮತಿ

ತನ್ನನ್ನೆ ತಿಳಿದವನು-ಜ್ಞಾನಿ

ಇತರರನ್ನು ಆಳುವವನು-ಬಲಶಾಲಿ

ತನ್ನನ್ನೆ ನಿಗ್ರಹಿಸುವವನು-ಶಕ್ತಿವಂತ

ಸಂತೃಪ್ತ ಮನುಷ್ಯ-ಶ್ರೀಮಂತ

ಗುರಿ ತಲುಪುವವನು-ಛಲವಂತ

ಕೇಂದ್ರದಲ್ಲಿ ನೆಲೆಸುವವನು-ಸಹನಾಶೀಲ

ಸತ್ತರೂ ನಾಶವಿಲ್ಲದವನು-ಚಿರಂಜೀವಿ

ವಿಸ್ತಾರವಾದ ಪ್ರವೇಶಿಕೆಯ ನಂತರ ಇಲ್ಲಿ ತಾವೋ ಕವಿತೆಗಳ ಅನುವಾದವಿದೆ.ನಂತರದ ಭಾಗದಲ್ಲಿ ತಾವೋದ ಸಣ್ಣ ಕಥೆಗಳಿವೆ.ಈ ಸಣ್ಣ ಕತೆಗಳು ಜ್ಞಾನರಾಶಿಯಂತೆ ಭಾಸವಾಗುತ್ತವೆ.ಕೆಲವು ಕತೆಗಳು ಉಪನಿಷತ್ತಿನ ಕತೆಗಳಂತೆ ಸಂವಾದ ರೂಪದಲ್ಲಿಯೂ ಇದ್ದು ಗುರು-ಶಿಷ್ಯ ಪರಂಪರೆಯನ್ನು ಇದು ಹೋಲುತ್ತದೆ.

ಒಟ್ಟಿನಲ್ಲಿ ಇಲ್ಲಿ ಅನಾವರಣಗೊಳಿಸಿದ ಮೂರೂ ಪುಸ್ತಕಗಳು ಬೇರೆ ಬೇರೆಯಾಗಿ ಕಂಡರೂ ಅಂತಃಪ್ರವಾಹವಾಗಿ ಅವು ಪರಸ್ಪರ ಸಂಬಂಧವಿರುವ ಪುಸ್ತಕಗಳಾಗಿವೆ.ಅತ್ಯತ್ತಮವಾದ ಈ ಕೃತಿಗಳನ್ನು ಕೊಂಡು ಓದಿ.ಓದಿನ ದಿವ್ಯಾನುಭವ ನಿಮ್ಮದಾಗಲಿ ಎಂದು ಹಾರೈಸಿ ನನ್ನ ಮಾತುಗಳನ್ನು ಕೇಳಿದ ನಿಮ್ಮೆಲ್ಲರಿಗೂ ವಂದಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

Leave a Reply

Your email address will not be published. Required fields are marked *