Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ.
ಕಾಪು ತಾಲೂಕು ಕಚೇರಿಗೆ ಹೋಗಲು ದೋಣಿ ವ್ಯವಸ್ಥೆ ಮಾಡುವಿರಾ ?
- Updated: June 6, 2018

ಉಡುಪಿ: ವಾರದ ಹಿಂದೆ ಸುರಿದ ಮಹಾಮಳೆಗೆ ಪಿ.ಡಬ್ಲ್ಯೂ.ಡಿ ಮತ್ತು ಸ್ಥಳೀಯಾಡಳಿತಗಳ ನಿರ್ಲಕ್ಷ್ಯದಿಂದ ರೋಡು ತೋಡಾಗಿದೆ. ಇದಾದ ಬಳಿಕ, ಅಲ್ಲಲ್ಲಿ ಸಾಮಾನ್ಯ ಮಳೆಯಾಗಿದೆ. ಜನಸಾಮಾನ್ಯರೇ ಹಿಂದಾದ ಅವಾಂತರ ಮತ್ತೊಮ್ಮೆ ಆಗದಿರಲಿ ಎಂಬ ಕಾಳಜಿಯಿಂದ ಮಳೆಯ ನೀರು ಹೋಗಲು ರಸ್ತೆ ಬದಿಯ ತೋಡುಗಳನ್ನು ಸರಿಪಡಿಸುತ್ತಿದ್ದಾರೆ. ನೀರು ತುಂಬಿದ್ದನ್ನು ಬಿಡಿಸಿ ಕೊಡುತ್ತಿದ್ದಾರೆ. ಆದರೆ ದಿನನಿತ್ಯ ನೂರಾರು ಜನರು, ಅಧಿಕಾರಿಗಳು ಆಗಮಿಸುವ ನೂತನ ಕಾಪು ತಾಲೂಕಿನ ತಹಶೀಲುದಾರರ ಕಚೇರಿ ಹಾಗೂ ನೆಮ್ಮದಿ ಕೇಂದ್ರಕ್ಕೆ ಹೋಗಲು ಮಾತ್ರ ದೋಣಿ ವ್ಯವಸ್ಥೆಯನ್ನು ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ.
ದಾರಿಯಲ್ಲೇ ಮಳೆ ನೀರು ತುಂಬಿ ಪಾದಚಾರಿಗಳು, ದ್ವಿಚಕ್ರವಾಹನ ಸವಾರರು ಪರದಾಡುವಂತಾಗಿದೆ. ತಹಶೀಲುದಾರರು, ಡಿಟಿ, ಆರ್ ಐ ಹಾಗೂ ಕೆಲವು ವಿಎಗಳು ಕಾರಿನಲ್ಲಿ ಆಗಮಿಸುವುದರಿಂದ ಅವರಿಗೆ ದಾರಿಯಲ್ಲಿ ಕೆಸರು ನೀರು ತುಂಬಿರುವುದು ಅಂಥ ದೊಡ್ಡ ವಿಷಯವಾಗಿ ಕಂಡಿರಲಿಕ್ಕಿಲ್ಲ. ಆದರೆ ಪಾದಚಾರಿಗಳಿಗೆ ಹಾಗೂ ದ್ವಿಚಕ್ರ ವಾಹನ ಸವಾರರು ಮಾತ್ರ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಲೇ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಮಳೆ ಇಲ್ಲದಿರುವಾಗಿನ ಸ್ಥಿತಿಯೇ ಹೀಗಿದೆ, ಆದರೆ ಮಳೆ ಬಂದ ದಿನ ಮತ್ತು ಮರುದಿನ ಇಲ್ಲಿನ ಸ್ಥಿತಿ ಶೋಚನೀಯವೇ ಸರಿ. ಮಳೆ ಬಂದ ಬಳಿಕ ಈ ಪರಿಸರ ಅಥವಾ ರಸ್ತೆ ಕೆರೆಯೇ ಅಗಿರುತ್ತದೆ. ಕನಿಷ್ಟ ಪುರಸಭೆಯ ಒಬ್ಬ ಸೇವಕನ ನೆರವಿನಿಂದ ನೀರು ಬಿಡಿಸಿಕೊಟ್ಟು ಈ ಸಮಸ್ಯೆಯನ್ನು ಬಗೆಹರಿಸಬಹುದಾದರೂ, ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಕಾರಿನಲ್ಲಿ ಬಂದು ಕಚೇರಿಯಲ್ಲಿ ಕುಳಿತುಕೊಳ್ಳುತ್ತಿದ್ದಾರೆ.
ಇನ್ನಾದರೂ ತಹಶೀಲುದಾರರಾದ ಜಾನ್ ಪ್ರಕಾಶ್ ರೋಡ್ರಿಗ್ಸ್, ಆರ್ ಐ ರವಿಶಂಕರ್ ಅವರು ಈ ಬಗ್ಗೆ ಸಂಬಂಧಪಟ್ಟ ಪೌರಾಡಳಿತಕ್ಕೆ ತಿಳಿಸಿ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತಾಗಬೇಕು.