Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಸುಳ್ಳು ಕೇಸು ದಾಖಲಿಸಿ ಮಾಜಿ ನಕ್ಸಲ್ ಮುಖಂಡ ನೀಲಗುಳಿ ಬಂಧನ: ಶರಣಾಗತಿ-ಪುನರ್ವಸತಿ ಪ್ಯಾಕೇಜ್ ಅನುಷ್ಠಾನ ಸಮಿತಿ ಮಧ್ಯಪ್ರವೇಶದ ನಿರೀಕ್ಷೆಯಲ್ಲಿ ನೀಲಗುಳಿ ಪತ್ನಿ ರೇಣುಕಾ

ಉಡುಪಿ: ಮಾಜಿ ನಕ್ಸಲೀಯ ಹೋರಾಟಗಾರ ನೀಲಗುಳಿ ಪದ್ಮನಾಭ ಅವರನ್ನು ಸುಳ್ಳು ಕೇಸು ದಾಖಲಿಸಿ ಬಂಧಿಸಲಾಗಿದೆ ಎಂದು ನೀಲಗುಳಿಯವರ ಪತ್ನಿ ಆರೋಪಿಸಿದ್ದಾರೆ. ಪತಿ ಬಂಧನಕ್ಕೊಳಗಾದ ಬಳಿಕ ಜಾಮೀನು ಕೋರಿ ಅರ್ಜಿ ಸಲ್ಲಿಸುವರೇ ಖ್ಯಾತ  ನ್ಯಾಯವಾದಿ ಎಂ.ಶಾಂತಾರಾಮ ಶೆಟ್ಟಿ ಅವರನ್ನು ಭೇಟಿಯಾಗಲು ಉಡುಪಿಗೆ ಆಗಮಿಸಿದ ಸಂದರ್ಭದಲ್ಲಿ udupibits.in ಜೊತೆ ಮಾತನಾಡುತ್ತಾ ನೀಲಗುಳಿಯವರ ಪತ್ನಿ ರೇಣುಕಾ ಅವರು ಕೆಲವು ಮಹತ್ವದ ವಿಷಯಗಳನ್ನು ಹಂಚಿಕೊಂಡರು.

ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರಕಾರ ನೇಮಕ ಮಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಹಿರಿಯ ನ್ಯಾಯವಾದಿ ಎ.ಕೆ.ಸುಬ್ಬಯ್ಯ, ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಮೊದಲಾದವರಿರುವ, ‘ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಪ್ಯಾಕೇಜ್ ಅನುಷ್ಠಾನ ಸಮಿತಿ’ಯು ಸರಕಾರದ ಪರವಾಗಿ ನಡೆಸಿದ ಮಾತುಕತೆಯಲ್ಲಿ, ಶರಣಾಗುವ ನಕ್ಸಲರ ವಿರುದ್ಧ ದಾಖಲಿಸಲಾದ ಕೇಸುಗಳನ್ನು ಹಿಂಪಡೆಯುವುದೇ ಮೊದಲಾದ ಭರವಸೆಗಳನ್ನು ನೀಡಿದ ಹಿನ್ನೆಲೆಯಲ್ಲಿ, ಭರವಸೆಗಳನ್ನು ನಂಬಿ ನೀಲಗುಳಿ ಹಾಗೂ ಇತರ ಮೂವರು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿದ್ದ ಅಣ್ಣಾಮಲೈ ಅವರ ಸಮಕ್ಷಮ ಶರಣಾಗತಿಯಾಗಿ ಮುಖ್ಯವಾಹಿನಿಗೆ ಬಂದಿದ್ದರು. ಆದರೆ, ಶರಣಾಗತಿಯಾದಾಗ, ”ದಾಖಲಾದ ಕೇಸುಗಳನ್ನು ಹಿಂಪಡೆಯಲಾಗುವುದಿಲ್ಲ, ವಿಚಾರಣೆ ಎದುರಿಸಿಯೇ ಆರೋಪಮುಕ್ತರಾಗಬೇಕು’’ ಎಂದು ಎಸ್ಪಿ ಅಣ್ಣಾಮಲೈ ಅವರು ಪ್ರಕಟಿಸಿದರು. ನಮಗೆ ಆಶ್ಚರ್ಯವಾಯಿತಾದರೂ ಆಗ ನಾವು ಸುಮ್ಮನಾದೆವು’’ ಎಂದು ರೇಣುಕಾ ಅವರು ನೋವಿನಿಂದ ಹೇಳಿಕೊಂಡರು. ಕಾರಣ, 19 ಕೇಸುಗಳನ್ನು ನ್ಯಾಯಾಲಯದಲ್ಲಿ ಎದುರಿಸುವ ನಿಟ್ಟಿನಲ್ಲಿ ನ್ಯಾಯವಾದಿಗಳಿಗೆ ನೀಡಲು ಬೇಕಾದ ಹಣಕಾಸು ವ್ಯವಸ್ಥೆ ನೀಲಗುಳಿ ಪದ್ಮನಾಭ ಅವರಲ್ಲಿ ಇರಲಿಲ್ಲ.

ನಕ್ಸಲೀಯರನ್ನು ಮುಖ್ಯವಾಹಿನಿಗೆ ಕರೆತರುವ ಸರಕಾರದ ಕಾರ್ಯಕ್ರಮದಲ್ಲಿ, ಈ ನಾಲ್ವರ ಶರಣಾಗತಿ ಪ್ರಕ್ರಿಯೆಯು ಮಹತ್ವದ ಬೆಳವಣಿಗೆಯೆಂದೂ, ಇದು ಸರಕಾರ ಹಾಗೂ ಸಮಿತಿಯ ಸಾಧನೆಯೆಂದು ಅಂದು ಬಿಂಬಿಸಲಾಗಿತ್ತು.

ಶರಣಾಗುವ ಸಂದರ್ಭದಲ್ಲಿ, ನೀಲಗುಳಿ ಪದ್ಮನಾಭರವರ ವಿರುದ್ದ ಉಡುಪಿ ಜಿಲ್ಲೆಯಲ್ಲಿ 9, ಚಿಕ್ಕಮಗಳೂರು ಜಿಲ್ಲೆಯಲ್ಲಿ 9 ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಹೀಗೆ ಒಟ್ಟು 19 ಕೇಸುಗಳು ದಾಖಲಾಗಿವೆ. ಇಷ್ಟು ಕೇಸುಗಳನ್ನು ಹೊರತುಪಡಿಸಿದರೆ ಬೇರೆ ಯಾವುದೇ ಕೇಸುಗಳಿಲ್ಲ ಎಂದು ಸ್ಪಷ್ಟಪಡಿಸಲಾಗಿತ್ತು. ಪ್ರಸ್ತುತ ನೀಲಗುಳಿಯವರನ್ನು ಯಾವ ಕೇಸುಗಳಡಿಯಲ್ಲಿ ಬಂಧಿಸಲಾಗಿದೆಯೋ, ಅಂಥ ಕೇಸುಗಳು ಕುಂದಾಪುರ ತಾಲೂಕಿನ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಾಗಲೀ, ಅಮಾಸೆಬೈಲು ಪೊಲೀಸ್ ಠಾಣೆಯಲ್ಲಾಗಲೀ ದಾಖಲಾಗಿರುವ ವಿಷಯವನ್ನು ಶರಣಾಗತಿ ಸಂದರ್ಭದಲ್ಲಿ ನೀಲಗುಯಳಿಯವರಿಗೆ ತಿಳಿಸಿರಲೇ ಇಲ್ಲ. ಶರಣಾಗತಿ ಸಂದರ್ಭದಲ್ಲಿ ಈ ಕೇಸುಗಳು ಇರುವ ವಿಷಯವನ್ನು ತಿಳಿಸಲಾಗಿತ್ತು ಎನ್ನುವ ಪೊಲೀಸ್ ಅಧಿಕಾರಿಗಳ ಹೇಳಿಕೆ ಸುಳ್ಳು ಎಂದು ಸ್ಪಷ್ಟಪಡಿಸುವ ಮೂಲಕ ರೇಣುಕಾರವರು ಪೊಲೀಸ್ ಅಧಿಕಾರಿಗಳ ವಾದವನ್ನು ಅಲ್ಲಗೆಳೆದಿದ್ದಾರೆ.

ಶರಣಾಗತಿ ಸಂದರ್ಭದಲ್ಲಿ, ‘‘ಸರಕಾರದ ಹಣಕಾಸು ಪರಿಹಾರಗಳ ಪ್ಯಾಕೇಜ್ ನಮಗೆ ಬೇಡ, ನಮ್ಮ ಮೇಲಿನ ಕೇಸುಗಳನ್ನು ಕೈಬಿಟ್ಟು, ಕಿರುಕುಳ ನೀಡದೆ ಮುಖ್ಯವಾಹಿನಿಯಲ್ಲಿ ಸ್ವತಂತ್ರವಾಗಿ ಬದುಕಲು ಬಿಟ್ಟರೆ ಸಾಕು, ನಾವು ಕೂಲಿ ಮಾಡಿ ಬದುಕುತ್ತೇವೆ’’ ಎಂದು ತಿಳಿಸಿದ್ದೆವು. ‘’ಮುಂದಕ್ಕೆ ಯಾವುದೇ ತೊಂದರೆ ಕೊಡುವುದಿಲ್ಲ’’ ಎಂದು ಎಸ್ಪಿ ಅಣ್ಣಾಮಲೈ ಅವರು ಭರವಸೆ ನೀಡಿದ್ದರು. ‘’ಸರಕಾರ ಅಂದು ನೀಡಿದ ಭರವಸೆಗೆ ತದ್ವಿರುದ್ದವಾಗಿ ಇಂದು ನಡೆದುಕೊಳ್ಳುತ್ತಿದೆ, ಸುಳ್ಳು ಕೇಸು ದಾಖಲಿಸಿ ನೀಲಗುಳಿಯವರನ್ನು ಬಂಧಿಸಿದೆ, ಎಚ್.ಎಸ್.ದೊರೆಸ್ವಾಮಿ, ಎ.ಕೆ.ಸುಬ್ಬಯ್ಯ ಮೊದಲಾದವರಿರುವ ಸಮಿತಿಯು ಸರಕಾರದ ಮಟ್ಟದಲ್ಲಿ ಮಧ್ಯಪ್ರವೇಶಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕಾಗಿದೆ. ಶರಣಾಗತಿ ಪ್ರಕ್ರಿಯೆಯಲ್ಲಿ ಮುಖ್ಯ ಪಾತ್ರ ವಹಿಸಿದ ಸಮಿತಿಯವರೇ ಇದೀಗ ಮಧ್ಯಪ್ರವೇಶ ಮಾಡಿ ಸಮಸ್ಯೆಯನ್ನು ಪರಿಸಹರಿಸಲು ಮುಂದಾಗುತ್ತದೆ ಎಂಬುದು ನಮ್ಮ ನಿರೀಕ್ಷೆಯಾಗಿದೆ” ಎಂದು ರೇಣುಕಾ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

‘’ಶರಣಾಗತಿ ಆದ ಬಳಿಕ ದೋಷಾರೋಪಣಾ ಪಟ್ಟಿ ಸಲ್ಲಿಸುವ ಸಮಯದಲ್ಲಿ ಮತ್ತು ಆಮೇಲೆಯೂ ಒಮ್ಮೆ ಪೊಲೀಸ್ ಅಧಿಕಾರಿಗಳ ಕಡೆಯಿಂದ ನಮಗೆ ಅನ್ಯಾಯವಾಗಿತ್ತು. ಆದರೆ, ಬಳಿಕ ಆ ಅನ್ಯಾಯಗಳನ್ನು ಸರಿಪಡಿಸಲಾಗಿತ್ತು. ಇದೀಗ ಮತ್ತೆ ಮೂರನೇ ಬಾರಿ ಸುಳ್ಳು ಕೇಸಿನಲ್ಲಿ ಬಂಧಿಸುವ ಮೂಲಕ ಅನ್ಯಾಯವೆಸಗಲಾಗಿದೆ’’ ಎಂದು ರೇಣುಕಾ ತಿಳಿಸಿದರು.

ನಮಗೆ ತಿಳಿಸಿದಂತೆ ಮತ್ತು ನಮಗೆ ತಿಳಿದಂತೆ ನೀಲಗುಳಿಯವರ ಮೇಲೆ ದಾಖಲಾದ 19 ಕೇಸುಗಳ ಪೈಕಿ ಚಿಕ್ಕಮಗಳೂರಿನ ಎಲ್ಲಾ 9, ಶಿವಮೊಗ್ಗದ ಒಂದು ಮತ್ತು ಉಡುಪಿಯ 9ರಲ್ಲಿ 6 ಕೇಸುಗಳಲ್ಲಿ ನೀಲಗುಳಿ ಪದ್ಮನಾಭರಿಗೆ ಜಾಮೀನು ಮಂಜೂರಾಗಿತ್ತು. ಸೀತಾನದಿ ಬೋಜ ಶೆಟ್ಟಿ ಹತ್ಯೆ ಕೇಸಿಗೆ ಸಂಬಂಧಿಸಿದಂತೆ ನಾಲ್ಕು ದಿನಗಳ ಕಾಲ ಉಡುಪಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಕೊನೆಯ ದಿನದ ವಿಚಾರಣೆ ಮುಕ್ತಾಯವಾಗಿ ಮಧ್ಯಾಹ್ನ ಅಂದಾಜು 11.30ರಿಂದ 12 ಗಂಟೆಯ ನಡುವೆ ನ್ಯಾಯಾಲಯದ ಆವರಣದಿಂದ ಹೊರಗೆ ಬಂದಾಗ ಇದ್ದಕ್ಕಿದ್ದಂತೆ ಎರಡು ಕಡೆಯಿಂದ ದಿಢೀರನೇ ಬಂದು ಎರಡೂ ಕಡೆಯಿಂದ ರಟ್ಟೆಗಳನ್ನು ಹಿಡಿದು ಎಳೆದುಕೊಂಡು ಜೀಪಿಗೆ ಹತ್ತಿಸಿ ಕಿಡ್ನಾಪ್ ಮಾಡಿದಂತೆ ಕರೆದೊಯ್ದರು. ಯಾರು ಯಾಕೆ ಹೀಗೆ ಮಾಡುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ನೀಲಗುಳಿಯವರಿಗೆ ಕಾಲು ಗಂಟೆಯೇ ಬೇಕಾಯಿತು. ನೀಲಗುಳಿಯವರಿಗೆ ಒಂದು ಕಾಲು ಇಲ್ಲ. ನಾನು ಮಗುವನ್ನು ನೋಡಿಕೊಳ್ಳಬೇಕು. ಸರಕಾರದ ಭರವಸೆಗಳನ್ನು ನಂಬಿ ಮುಖ್ಯವಾಹಿನಿಗೆ ಬಂದು ಸ್ವತಂತ್ರವಾಗಿ ಬದುಕು ಸಾಗಿಸಬೇಕಾಗಿದ್ದ ನಮಗೆ ಇಂಥ ಪರಿಸ್ಥಿತಿಯಲ್ಲಿ ಸುಳ್ಳು ಕೇಸು ದಾಖಲಿಸಿ ಬಂಧಿಸುವ ಮೂಲಕ ಹಿಂಸೆ ನೀಡಿದರೆ ನಾವೇನು ಮಾಡಬೇಕು ಎಂದು ರೇಣುಕಾ ದುಃಖದಿಂದ ಅಲವತ್ತುಕೊಂಡರು.

ಮಾಜಿ ನಕ್ಸಲೀಯ ಮುಖಂಡ ನೀಲಗುಳಿ ಪದ್ಮನಾಭ ಅವರು ಪ್ರಸ್ತುತ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜೂನ್ 11 ಅಥವಾ 12ರಂದು ಖ್ಯಾತ ನ್ಯಾಯವಾದಿ ಶಾಂತಾರಾಮ ಶೆಟ್ಟಿಯವರು ಜಾಮೀನು ಕೋರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಸರಕಾರದಿಂದ ನಾಮನಿರ್ದೇಶನಗೊಂಡು ಭರವಸೆಗಳ ಆಧಾರದಲ್ಲಿ ನಕ್ಸಲೀಯರನ್ನು ಶರಣಾಗತಿ ಮಾಡಿಸುವಲ್ಲಿ ಮುಖ್ಯ ಪಾತ್ರ ವಹಿಸಿದ ನಕ್ಸಲ್ ಶರಣಾಗತಿ ಪುನರ್ವಸತಿ ಪ್ಯಾಕೇಜ್ ಅನುಷ್ಠಾನ ಸಮಿತಿಯ ಸದಸ್ಯರು ಸರಕಾರದ ಜೊತೆ ಮಧ್ಯಪ್ರವೇಶಿಸಿ ಪ್ರಸ್ತುತ ಉದ್ಭವಿಸಿದ ಗಂಭೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂಬ ನೀಲಗುಳಿ ಪದ್ಮನಾಭ ಅವರ ಪತ್ನಿ ರೇಣುಕಾರವರ ನಿರೀಕ್ಷೆ ಈಡೇರುತ್ತದೆಯೋ, ಹುಸಿಯಾಗುತ್ತದೆಯೋ ಎಂಬುದನ್ನು ಕಾದುನೋಡಬೇಕು.

 

Leave a Reply

Your email address will not be published. Required fields are marked *