Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಉಡುಪಿಯಲ್ಲಿ ಸರಕಾರದ ಅಧೀನಕ್ಕೆ ಒಳಪಡದ ‘ಕರ್ನಾಟಕ ಸರಕಾರ’ದ ಆಸ್ಪತ್ರೆ: ಸರಕಾರದಿಂದ, ಆಸ್ಪತ್ರೆ ಅಧಿಕೃತರಿಂದ ಮೋಸದಾಟ !

ಉಡುಪಿ: ಖಾಸಗಿ ಆಸ್ಪತ್ರೆಯೊಂದು ”ಕರ್ನಾಟಕ ಸರಕಾರ” ಎಂಬ ಪಲಕ ಹಾಕಬಹುದೇ ? ”ಕರ್ನಾಟಕ ಸರಕಾರ” ಎಂದು ಪಲಕ ಅಳವಡಿಸಿರುವ ಆಸ್ಪತ್ರೆಯೊಂದು ಸರಕಾರದ ಅಥವಾ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಲ್ಲವೇ ಜಿಲ್ಲಾ ಸರಕಾರಿ ಆಸ್ಪತ್ರೆಯ ಅಧೀನಕ್ಕೆ ಒಳಪಡಲೇಬೇಕಲ್ಲವೇ ? ”ಕರ್ನಾಟಕ ಸರಕಾರ” ಎಂಬ ಪಲಕ ಅಳವಡಿಸಿದ ಆಸ್ಪತ್ರೆಯೊಂದು ತನಗೂ ಸರಕಾರಕ್ಕೂ ಯಾವುದೇ ಸಂಬಂಧವೂ ಇಲ್ಲ, ಸರಕಾರದ ಯಾವುದೇ ಇಲಾಖೆಯ, ಅಧಿಕಾರಿಗಳ ಅಧೀನಕ್ಕೂ ತಮ್ಮ ಆಸ್ಪತ್ರೆ ಒಳಪಡುವುದಿಲ್ಲ, ತಮ್ಮ ಆಸ್ಪತ್ರೆ ಸರ್ವ ತಂತ್ರ ಸ್ವತಂತ್ರ, ಇಲ್ಲಿ ತಾವು ಮಾಡಿದ್ದೇ ಕಾನೂನು ಎಂಬಂತೆ ನಡೆದುಕೊಳ್ಳುತ್ತಿರುವ ಉಡುಪಿಯ ”ಕರ್ನಾಟಕ ಸರಕಾರ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಆಸ್ಪತ್ರೆ” ಕಾರ್ಯಶೈಲಿ ಇದೀಗ ಮತ್ತೆ ಅನೇಕ ಗಂಭೀರ ಅನುಮಾನಗಳಿಗೆ ಕಾರಣವಾಗಿದೆ.

ಮಹಾದಾನಿಯಾಗಿದ್ದ ಉಡುಪಿಯ ಹಾಜಿ ಅಬ್ದುಲ್ಲಾ ಸಾಹೇಬರು ದಾನ ಮಾಡಿದ ಬಹುಕೋಟಿ ಮೌಲ್ಯದ ಜಮೀನಿನಲ್ಲಿದ್ದ ”ಉಡುಪಿ ಜಿಲ್ಲಾ ಸರಕಾರಿ ಹಾಜಿ ಅಬ್ದುಲ್ಲಾ ಸ್ಮಾರಕ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯನ್ನು ಜಮೀನು ಸಹಿತವಾಗಿ ಸಿದ್ದರಾಮಯ್ಯನವರು ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್.ಶೆಟ್ಟಿ ಅವರಿಗೆ ನೀಡಿದ್ದರು.

ಯಾವುದೇ ರೀತಿಯ ಟೆಂಡರು ಕರೆಯದೆ ‘ಕರ್ನಾಟಕ ಪಾರದರ್ಶಕ ಕಾಯ್ದೆ’ಯನ್ನು ಉಲ್ಲಂಘಿಸುವ ಮೂಲಕ ಅಕ್ರಮವಾಗಿ ತನಗೆ ಬೇಕಾದವರಿಗೆ ಸರಕಾರಿ ಆಸ್ಪತ್ರೆಯನ್ನು ಬಹುಕೋಟಿ ಮೌಲ್ಯದ ಜಮೀನಿನ ಸಹಿತ ಖಾಸಗಿ ಉದ್ಯಮಿಯೊಬ್ಬರಿಗೆ ಹಸ್ತಾಂತರ ಮಾಡಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸ್ವಜನ ಪಕ್ಷಪಾತವೆಸಗಿದ್ದರು. ಸಿದ್ದರಾಮಯ್ಯನವರ ಈ ಸರ್ವಾಧಿಕಾರಿ ಕ್ರಮದ ವಿರುದ್ಧ ಸಾರ್ವಜನಿಕರು ಪ್ರತಿಭಟನೆಗಳನ್ನು ನಡೆಸಿ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಮಾತ್ರವಲ್ಲ, ನ್ಯಾಯಾಲಯದ ಮೆಟ್ಟಿಲನ್ನೂ ಹತ್ತಿದ್ದರು.

ಸರಕಾರಿ ಜಮೀನನ್ನು, ಸರಕಾರಿ ಆಸ್ಪತ್ರೆಯನ್ನು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ತಮ್ಮ ಅಧಿಕಾರಾವಧಿಯಲ್ಲಿ ತನ್ನ ಸ್ವಂತ ಆಸ್ತಿ ಎಂದು ತಿಳಿದುಕೊಂಡು ಉದ್ಯಮಿ ಬಿ.ಆರ್.ಶೆಟ್ಟಿಗೆ ನೀಡಿದ್ದು, ಆರಂಭಿಕ ಒಪ್ಪಂದದಂತೆ, ಸಿದ್ದರಾಮಯ್ಯನವರೇ ಘೋಷಿಸಿದಂತೆ ಜನವರಿ ಒಂದರಿಂದ ಪೂರ್ಣ ಪ್ರಮಾಣದಲ್ಲಿ ಆರಂಭವಾಗಬೇಕಾಗಿತ್ತು. ಆದರೆ, ಜೂನ್ 12ರ ವರೆಗೂ ಈ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಯಾರನ್ನೂ ಈ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗುತ್ತಿಲ್ಲ. ಇದು ಸರಕಾರದ ಜೊತೆ ಆಸ್ಪತ್ರೆ ಅಧಿಕೃತರು ಮಾಡಿಕೊಂಡ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ.

ಈ ನಡುವೆ, ಈ ಆಸ್ಪತ್ರೆಗೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ಪತ್ರಕರ್ತ ಶ್ರೀರಾಮ ದಿವಾಣ ಅವರು ಮಾಹಿತಿ ಹಕ್ಕು ಕಾಯ್ದೆ- 2005ರಂತೆ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಮತ್ತು ಜಿಲ್ಲಾಸ್ಪತ್ರೆ ಇವುಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳಲ್ಲಿ ಕೇಳಿದ್ದು, ಜಿಲ್ಲಾಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ನೀಡಿದ ಮಾಹಿತಿಯಲ್ಲಿ ”ಕರ್ನಾಟಕ ಸರಕಾರ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಆಸ್ಪತ್ರೆಯು ಜಿಲ್ಲಾ ಆಸ್ಪತ್ರೆಯ ಅಧೀನದಲ್ಲಿ ಬಾರದ ಕಾರಣ ಈ ಮಾಹಿತಿ ನಮ್ಮಲ್ಲಿ ಲಭ್ಯವಿರುವುದಿಲ್ಲ” ಎಂಬ ಉತ್ತರದೊಂದಿಗೆ ಕೈತೊಳೆದುಕೊಂಡಿದೆ. ಈ ಅಧಿಕೃತ ಮಾಹಿತಿ ಆಶ್ಚರ್ಯಕ್ಕೂ, ಕೆಲವೊಂದು ಗಂಭೀರವಾದ ಶಂಕೆಗಳಿಗೂ ಕಾರಣವಾಗಿದೆ.

”ಕರ್ನಾಟಕ ಸರಕಾರ” ಎಂದು ಪಲಕ ಅಳವಡಿಸಿದ ಬಳಿಕ, ”ನಮಗೂ ಸರಕಾರಕ್ಕೂ ಯಾವುದೇ ಸಂಬಂಧ ಇಲ್ಲ’ ಎಂದು ಒಂದು ಸಂಸ್ಥೆ ಹೇಳುವುದಾದರೆ, ”ಆ ಸಂಸ್ಥೆಯು ನಮ್ಮ ಅಧೀನದಲ್ಲಿ ಬರುವುದಿಲ್ಲ” ಎಂದು ಸರಕಾರ, ಸರಕಾರೀ ಇಲಾಖೆಗಳು ಹೇಳುವುದಾದರೆ, ಇನ್ನು ಮುಂದೆ ರಾಜ್ಯದಲ್ಲಿ ಯಾವ ಸಂಸ್ಥೆಗಳು ಬೇಕಾದರೂ ತಮ್ಮ ಸಂಸ್ಥೆಗಳ ಮುಂದೆ ”ಕರ್ನಾಟಕ ಸರಕಾರ” ಎಂದು ಪಲಕ ಅಳವಡಿಸಬಹುದು ಎಂದು ಅರ್ಥವಲ್ಲವೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.

”ಕರ್ನಾಟಕ ಸರಕಾರ” ಎಂದು ಪಲಕ ಅಳವಡಿಸಿದ ಬಳಿಕವೂ ಉಡುಪಿಯ ”ಕರ್ನಾಟಕ ಸರಕಾರ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ-ಮಕ್ಕಳ ಆಸ್ಪತ್ರೆ”ಯು ಯಾವುದೇ ರೀತಿಯಲ್ಲಿಯೂ ಕರ್ನಾಟಕ ಸರಕಾರದ ಅಧೀನಕ್ಕೆ ಒಳಪಡುವುದಿಲ್ಲ ಎನ್ನುವುದನ್ನು ಗಮನಿಸಿದರೆ, ಸರಕಾರ ಮತ್ತು ಆಸ್ಪತ್ರೆ ಅಧಿಕೃತರು ಜಂಟಿಯಾಗಿ ಸಾರ್ವಜನಿಕರನ್ನು ವಂಚಿಸುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಈ ವಂಚನೆಯ, ಮೋಸದಾಟದ, ಜನದ್ರೋಹದ ಪ್ರಮಾಣ ಯಾವ ಮಟ್ಟದ್ದು ಎಂಬುದು ಇನ್ನಷ್ಟೇ ಬಹಿರಂಗಕ್ಕೆ ಬರಬೇಕಾಕಾಗಿದೆ.

 

Leave a Reply

Your email address will not be published. Required fields are marked *