Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ.

ಸಾರ್ವಜನಿಕ ಸಂಪರ್ಕದ ಸಾಕಾರಮೂರ್ತಿ ದಿ//ಎಂ.ಜನಾರ್ದನ್: 25ನೇ ಪುಣ್ಯ ಸ್ಮರಣೆಯಲ್ಲಿ ಅಮ್ಮೆಂಬಳ ಆನಂದರಿಂದ ಆಪ್ತ ಮೆಲುಕು 

ಮಂಗಳೂರು: ಬದುಕಿದ್ದರೆ ಈಗ 92ರ ವಸಂತವನ್ನು ಕಾಣಬಹುದಾಗಿದ್ದ ಆದರೆ, 1993 ಜೂನ್ 24ರಂದು ತಮ್ಮ 67ನೇ ವಯಸ್ಸಿನಲ್ಲಿ ನಿಧನರಾದ ಚಿಂತನಶೀಲ ಚೇತನವಾಗಿದ್ದ ಎಂ.ಜನಾರ್ದನ್ ಅವರ 25ನೇ ಪುಣ್ಯಸ್ಮರಣೆ ಕಾರ್ಯಕ್ರಮವು ಜೂನ್ 24ರಂದು ಕುದ್ರೋಳಿ ಸುಬ್ಬಣ್ಣ ಕುಟುಂಬಸ್ಥರು ಮತ್ತು ದಿವಂಗತರ ಹಿರಿಯ ಮಕ್ಕಳಾದ ಜಯಪ್ರಕಾಶ್, ನಂದಿನಿ ಹಾಗೂ ಜಗದೀಶ್ ರವರ ನೇತೃತ್ವದಲ್ಲಿ ಮಂಗಳೂರು ನಗರದ ಗಣಪತಿ ದೇವಸ್ಥಾನ ರಸ್ತೆಯ ಶ್ರೀ ರಾಧಾಕೃಷ್ಣ ದೇವಸ್ಥಾನ ಸಭಾಂಗಣದಲ್ಲಿ ಜರುಗಿತು.

ಎಂ.ಜನಾರ್ದನ್ ರವರ ಒಡನಾಡಿಯೂ, ಸಹೋದ್ಯೋಗಿಯೂ, ಸಮಾನ ಮನಸ್ಕರೂ, ಸಮ ವಯಸ್ಸಿನವರೂ, ಆಪ್ತಮಿತ್ರರೂ ಆಗಿದ್ದ ಹಿರಿಯ ಸಮಾಜವಾದಿ, ಖ್ಯಾತ ಪತ್ರಕರ್ತ ಅಮ್ಮೆಂಬಳ ಆನಂದ ಅವರು ವಿಶೇಷ ಆಮಂತ್ರಿತರಾಗಿ ಭಾಗವಹಿಸಿ, ಜನಾರ್ದನ್ ಅವರ ಕುರಿತು ಸಂಸ್ಮರಣಾ ಭಾಷಣ ಮಾಡಿದರು.

1952ರಲ್ಲಿ ತಾನು ದಿವಂಗತ ವಿ.ಎಸ್.ಕುಡ್ವರವರ ‘ನವಭಾರತ’ ದೈನಿಕದಲ್ಲಿ ಉಪಸಂಪಾದಕನಾಗಿದ್ದಾಗ ಜನಾರ್ದನ್ ರವರ ಜೊತೆಗೆ ಆರಂಭವಾದ ಗೆಳೆತನ ಅವರು ನಿಧನ ಹೊಂದುವವರೆಗೂ ಗಾಢವಾಗಿ ಮುಂದುವರಿದಿತ್ತು. ಪತ್ರಿಕೋದ್ಯಮ ಮಾತ್ರವಲ್ಲದೆ, ಹಲವು ಜನಪರ ಆಂದೋಲನಗಳಲ್ಲಿ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ರೆಂಬೆ ಕೊಂಬೆಗಳಾಗಿ ವಿಸ್ತರಿಸಿಕೊಂಡದ್ದನ್ನು ಅಮ್ಮೆಂಬಳ ಆನಂದರು ನೆನಪಿಸಿಕೊಂಡರು.

1954ರಲ್ಲಿ ‘ನವಭಾರತ’ ಬಿಟ್ಟು ಮಂಗಳೂರಿನಿಂದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾಕ್ಕೆ ದಿನಕರ ದೇಸಾಯಿಯವರ ಕೆನರಾ ವೆಲ್ಫೇರ್ ಟ್ರಸ್ಟಿನ ಆಜೀವ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾಗ ಎಂ.ಜನಾರ್ದನ್ ಅವರು 1954ರಿಂದ 2003ರ ವರೆಗೂ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ನಡುವಿನ ಸಾಂಸ್ಕೃತಿಕ ಕೊಂಡಿಯಾಗಿದ್ದರು ಎಂಬುದನ್ನು ಅಮ್ಮೆಂಬಳ ಆನಂದರು ಸ್ಮರಿಸಿಕೊಂಡರು.

ಅಲ್ಪಕಾಲದ ಪತ್ರಿಕಾ ಸೇವೆಯಿಂದ ಮುಕ್ತರಾದ ಎಂ.ಜನಾರ್ದನ್ ಅವರು ತಮ್ಮ ಬದುಕಿನ ಅಂತಿಮ ದಿನಗಳವರೆಗೂ ಸಿಂಡಿಕೇಟ್ ಬ್ಯಾಂಕ್ನ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು ಮತ್ತು ಇಲ್ಲೆಲ್ಲಾ ತಾವು ವಹಿಸಿಕೊಮಡ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಸಿದ್ದರು. ಅಕಾಡೆಮಿ ಆಫ್ ಜನರಲ್ ಎಜುಕೇಶನ್ನ ಇಂಗ್ಲೀಷ್ ಸಾಪ್ತಾಹಿಕ ‘ಮಣಿಪಾಲ್ ರೆಕಾರ್ಡ್’ ಗೆ ಜೀವಕಳೆ ತುಂಬುವಲ್ಲಿ ಎಂ.ಜನಾರ್ದನ್ ಅವರು ಬಹಳ ಶ್ರಮಿಸಿದ್ದರು ಎಂದು ಅಮ್ಮೆಂಬಳ ಆನಂದರು ಹೇಳಿದರು.

ಸಿಂಡಿಕೇಟ್ ಬ್ಯಾಕ್ನ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದಾಗ, ಸಿಂಡಿಕೇಟ್ ಬ್ಯಾಂಕ್ನ ನೂತನ ಶಾಖೆಗಳು ವಿವಿಧೆಡೆಗಳಲ್ಲಿ ಆರಂಭಗೊಳ್ಳುವ ಸಂದರ್ಭಗಳಲ್ಲಿ ಮತ್ತು ವಿವಿಧ ಶಾಖೆಗಳು ತನ್ನ ದಶಮಾನೋತ್ಸವ, ಬೆಳ್ಳಿಹಬ್ಬವೇ ಮುಂತಾದ ಕಾರ್ಯಕ್ರಮಗಳನ್ನು ಆಚರಿಸುತ್ತಿದ್ದಾಗ, ಬ್ಯಾಂಕ್ನ ನಿರ್ದೇಶನದಂತೆ ಕಾರ್ಯಕ್ರಮಗಳ ಪೂರ್ವ ಸಿದ್ಧತೆಗಾಗಿ ಎಂ.ಜನಾರ್ದನ್ ಅವರು ಬ್ಯಾಂಕಿನ ನೂತನ ಶಾಖೆಗಳು ಆರಂಭಗೊಳ್ಳಲಿರುವ ವಿವಿಧ ಊರುಗಳಿಗೆ ವಾರದ ಮೊದಲೇ ತಲುಪುತ್ತಿದ್ದರು ಮತ್ತು ಆ ಆ ಊರುಗಳಲ್ಲಿ ನಿಗದಿತ ಕಾರ್ಯಕ್ರಮಗಳು ಪೂರ್ಣಪ್ರಮಾಣದಲ್ಲಿ ಯಶಸ್ವಿಯಾಗಿ ನಡೆಯಲು ಬೇಕಾದ ಪೂರ್ವ ತಯಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು. ಈ ಸಂದರ್ಭಗಳಲ್ಲೆಲ್ಲಾ ಬಿಡುಗಡೆಯಾಗುತ್ತಿದ್ದ ಬ್ಯಾಂಕಿನ ಸಂಸ್ಮರಣಾ ಸಂಚಿಕೆಗಳು ಸಂಗ್ರಹಯೋಗ್ಯವಾಗಿ ಹೊರಬರುತ್ತಿದ್ದು, ಎಂ.ಜನಾರ್ದನ್ ಅವರು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು ಎಂಬುದನ್ನು ಅಮ್ಮೆಂಬಳ ಆನಂದ ಅವರು ಸ್ಮರಿಸಿಕೊಂಡರು.

ಎಲೆಮರೆಯ ಕಾಯಿಗಳಂತಿದ್ದ ನೂರಾರು ಮಂದಿ ಯುವ ಪ್ರತಿಭೆಗಳನ್ನು ಬೆಳಕಿಗೆ ತಂದ ಶ್ರೇಯಸ್ಸು ಸಹ ಎಂ.ಜನಾರ್ದನ್ ಅವರಿಗೆ ಸಲ್ಲುತ್ತದೆ. ಸ್ವತಹಾ ತಾನೇ ಇದಕ್ಕೊಂದು ಉದಾಹರಣೆ ಎನ್ನುವುದನ್ನು ಅಮ್ಮೆಂಬಳ ಆನಂದ ಅವರು ಕೃತಜ್ಞತಾಪೂರ್ವಕವಾಗಿ ಸಭೆಯ ಮುಂದೆ ಬಿಚ್ಚಿಟ್ಟರು.

ಆದರ್ಶ ಬದುಕನ್ನು ಬಾಳಿದ ವಿರಳಾತೀವಿರಳರಲ್ಲಿ, ಸಾರ್ವಜನಿಕ ಜೀವನದಲ್ಲಿ ತಾನು ಕಂಡ ಒಬ್ಬ ಪರಿಪೂರ್ಣ ವ್ಯಕ್ತಿತ್ವದ ಶಕ್ತಿಯಾಗಿದ್ದರು ಎಂ.ಜನಾರ್ದನ್ ಅವರು ಎಂದು ತಿಳಿಸಿದ ಅಮ್ಮೆಂಬಳ ಆನಂದ ಅವರು, ಬಹಳ ದೊಡ್ಡ ಸ್ನೇಹಿತರ ಬಳಗವನ್ನು ಹೊಂದಿದ್ದ ಜನಾರ್ದನ್ ಅವರು ನಿವೃತ್ತ ನ್ಯಾಯಮೂರ್ತಿ, ಸಾಹಿತಿ ದಿವಂಗತ ಸೇವ ನಮಿರಾಜ ಮಲ್ಲ, ದಿವಂಗತ ಪ್ರೊ.ಕು.ಶಿ.ಹರಿದಾಸ್ ಭಟ್, ದಿವಂಗತ ವಿಜಯನಾಥ ಶೆಣೈ, ದಿವಂಗತ ಕೆ.ಕೆ.ಪೈ, ಎನ್.ಕೆ.ತಿಂಗಳಾಯ, ಬಿವಿಟಿಯ ಕೆ.ಎಂ.ಉಡುಪ ಮೊದಲಾದವರು ಎಂ.ಜನಾರ್ದನ್ ಅವರ ಆಪ್ತ ಮಿತ್ರ ವರ್ಗದವರಾಗಿದ್ದರು ಎನ್ನುವುದನ್ನು ನೆನಪು ಮಾಡಿಕೊಂಡರು.

ಎಂ.ಜನಾರ್ದನರ ವಿಭಿನ್ನ  ನಡೆಯ ವ್ಯಕ್ತಿತ್ವ ಮತ್ತು ಅಸಾಧಾರಣ ಪುಸ್ತಕ ಪ್ರಿಯತೆಯ ಬಗ್ಗೆ ಆನಂದರು ವಿವರಿಸಿದರು. ಹೋದಲ್ಲೆಲ್ಲ ಪುಸ್ತಕದಂಗಡಿಗಳನ್ನು ಹೊಕ್ಕು ಅಮೂಲ್ಯ ಪುಸ್ತಕಗಳನ್ನು ಖರೀದಿಸುತ್ತಿದ್ದ ಜನಾರ್ದನ್ ರವರ ಮನೆ ಪ್ರಸ್ತುತ ಸಾವಿರಾರು ಅತ್ಯಮೂಲ್ಯ ಗ್ರಂಥಗಳ ಗ್ರಂಥಾಲಯವೇ ಆಗಿದೆ ಎಂದು ತಿಳಿಸಿದ ಅಮ್ಮೆಂಬಳ ಅವರು, ‘ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಎಂಬ ನುಡಿ ಪ್ರಚಲಿತದಲ್ಲಿದ್ದು, ಆದರೆ ತನ್ನ ಪ್ರಕಾರ ಹುಟ್ಟು ಸಾವಿಗಿಂತಲೂ ನೆನಪುಗಳೇ ಶ್ರೇಷ್ಠವಾದುದು. ಶತಶತಮಾನಗಳು ಕಳೆದರೂ ನೆನಪುಗಳಿಗೆ ಸಾವಿಲ್ಲ. ರಾಮ, ಕೃಷ್ಣ, ಬುದ್ಧ, ಮಹಾವೀರ, ಬಸವಣ್ಣ, ಗಾಂಧಿ, ಜೆ.ಪಿ., ಲೋಹಿಯಾ ಮೊದಲಾದವರು ನೆನಪುಗಳು ಚಿರಂತನ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಂ.ಜನಾರ್ದನರವರ ನೂರಾರು ಬಂಧು ಬಾಂಧವರು ಭಾಗವಹಿಸಿದ್ದರು. ಆಗಮಿಸಿದವರೆಲ್ಲರು ಜನಾರ್ದನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಮಧ್ಯಾಹ್ನ ಸಹಭೋಜನವನ್ನು ಏರ್ಪಡಿಸಲಾಗಿತ್ತು. ಸುರೇಶ್ ಕುಲಾಲ್ ಪ್ರಸ್ತಾವನೆಗೈದರು.

Leave a Reply

Your email address will not be published. Required fields are marked *