Realtime blog statisticsweb statistics
udupibits.in
Breaking News
ಉಡುಪಿ: ಅಂಚೆ ಕಚೇರಿಗಳಲ್ಲಿ ಇಂಡಿಯನ್ ಪೋಸ್ಟಲ್ ಆರ್ಡರ್ ಅಲಭ್ಯತೆ- ಸಮಸ್ಯೆ ಪರಿಹರಿಸಲು ಮಾಹಿತಿ ಹಕ್ಕು ಕಾರ್ಯಕರ್ತರಿಂದ ಪ್ರಧಾನಿಗೆ ಪತ್ರ

ಮೂಡುಬೆಳ್ಳೆ ಸಿಂಡಿಕೇಟ್‍ ಬ್ಯಾಂಕಿನಲ್ಲಿ ಸಿಬಂದಿ ಕೊರತೆ; ಗ್ರಾಹಕರ ಪರದಾಟ

ಉಡುಪಿ: ಕೋಟ್ಯಂತರ ರೂ. ವ್ಯವಹಾರವಿರುವ, ಹೆಚ್ಚಿನ ಎನ್‍ಆರ್ ಐಗಳು, ಅವರ ಮನೆಯವರು ಗ್ರಾಹಕರಿರುವ, ಶಿಕ್ಷಣ ಸಂಸ್ಥೆಗಳು, ಸ್ಥಳೀಯಾಡಳಿತ, ಧಾರ್ಮಿಕ ಕೇಂದ್ರಗಳು, ಸಂಘಟನೆಗಳು, ವ್ಯಾಪಾರಿಗಳು ಖಾತೆಗಳನ್ನು ಹೊಂದಿರುವ ಮೂಡುಬೆಳ್ಳೆ ಸಿಂಡಿಕೇಟ್‍ ಬ್ಯಾಂಕ್‍ನಲ್ಲಿ ಸಿಬಂದಿಗಳ ಕೊರತೆ ಗ್ರಾಹಕರನ್ನು ಅತಿಯಾಗಿ ಕಾಡುತ್ತಿದೆ. ಇದರೊಂದಿಗೆ ಕನ್ನಡದಲ್ಲಿ ವ್ಯವಹರಿಸಲು ಬಾರದ ಸಿಬಂದಿಗಳೊಂದಿಗೆ ಮಾತನಾಡಲು ಗ್ರಾಮೀಣ ಜನಸಾಮಾನ್ಯರು ಹರ ಸಾಹಸ ಪಡುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ.

4-5 ವರ್ಷಗಳ ಹಿಂದೆ ಇದೇ ಶಾಖೆಯಲ್ಲಿ ಸಿಬಂದಿಯ ಸಮಸ್ಯೆ ಕಾಡುತ್ತಿದ್ದಾಗ, ಸ್ಥಳೀಯರು ಉನ್ನತಾಧಿಕಾರಿಗಳಿಗೆ ದೂರು ನೀಡಿದ್ದರು. ಇದಕ್ಕೆ ಸ್ಪಂದಿಸಿದ್ದ ಅಧಿಕಾರಿಗಳು ಇಬ್ಬರು ಸಿಬಂದಿಯನ್ನು ತತ್‍ಕ್ಷಣ ನೇಮಕ ಮಾಡಿದ್ದರು. ಈಗ ಅವರು ಪದೋನ್ನತಿಯೊಂದಿಗೆ ವರ್ಗಾವಣೆ ಹೊಂದಿದ್ದಾರೆ. ಇದರಿಂದಾಗಿ ಮತ್ತೆ ಹಿಂದಿನ ಅದೇ ಸಮಸ್ಯೆಯನ್ನು ಗ್ರಾಹಕರು ಪುನರಪಿ ಅನುಭವಿಸುವಂತಾಗಿದೆ.

ಒಬ್ಬರು ಸಿಬಂದಿ ರಜೆ ಇದ್ದರೆ ದೇವರೇ ಗತಿ !

ಪ್ರಸ್ತುತ ಬ್ಯಾಂಕ್‍ ಶಾಖೆಯಲ್ಲಿ ಮ್ಯಾನೇಜರ್, ಒಬ್ಬರು ಇತ್ತೀಚೆಗೆ ನೇಮಕಗೊಂಡ (ಕನ್ನಡ ಸರಿಯಾಗಿ ಬಾರದ) ಸಿಬಂದಿ, ಇಬ್ಬರು ಹಿರಿಯ ಸಿಬಂದಿ ಹಾಗೂ ಓರ್ವ ಅಟೆಂಡರ್‍ ಇದ್ದಾರೆ. ಇವರಲ್ಲಿ ಗ್ರಾಹಕರ ವ್ಯವಹಾರಕ್ಕೆ ಇಬ್ಬರು ಸಿಬಂದಿ ಮಾತ್ರ ಲಭ್ಯವಾಗುತ್ತಾರೆ. ಇನ್ನೊಬ್ಬರು ಕ್ಯಾಶ್‍ ಕೌಂಟರ್ ನಲ್ಲಿರುತ್ತಾರೆ. ಜೂನ್ 25ರಂದು ಓರ್ವ ಸಿಬಂದಿ ರಜೆ ಇದ್ದುದರಿಂದ ಗ್ರಾಹಕರ ಸೇವೆಗೆ ಕನ್ನಡ ಸರಿಯಾಗಿ ಬಾರದ ಓರ್ವ ಸಿಬಂದಿ ಮಾತ್ರವಿದ್ದರು. ಇವರು ಹೊಸದಾಗಿ ನೇಮಕಗೊಂಡವರಾಗಿದ್ದು, ಇವರು ಇನ್ನಷ್ಟೇ ಕಲಿತುಕೊಳ್ಳಬೇಕಿದೆ. ಕ್ಯಾಶ್‍ನಲ್ಲಿದ್ದ ಹಿರಿಯ ಸಿಬಂದಿಯೊಬ್ಬರು ಹಿಂದಿನಿಂದಲೂ ಉತ್ತಮ ಸೇವೆಗೆ ಹೆಸರಾಗಿದ್ದು ಅವರೇ ಹೊರಗೆ-ಒಳಗೆ ಓಡಾಡಿಕೊಂಡು ಗ್ರಾಹಕರನ್ನು ಸುಧಾರಿಸುತ್ತಿದ್ದರು. ಸರ್ವರ್ ಸಮಸ್ಯೆ ಇದ್ದದರಿಂದ ಸೇವೆ ಇನ್ನಷ್ಟು ವಿಳಂಬವಾಯಿತು. ಶನಿವಾರ, ರವಿವಾರ ರಜೆ ಇದ್ದುದರಿಂದ ಸೋಮವಾರ ಬೆಳಗ್ಗಿನಿಂದಲೇ ಗ್ರಾಹಕರ ಸಂಖ್ಯೆ ಹೆಚ್ಚಿತ್ತು. ಮತ್ತೆ ಮ್ಯಾನೇಜರ್ ಅವರೇ ಹೊರಗೆ ಬಂದು ಗ್ರಾಹಕರೊಂದಿಗೆ ವ್ಯವಹರಿಸುವಂತಾಯಿತು. ಲೋನ್‍ ಸಂಬಂಧಿತ ಕಡತ ನಿರ್ವಹಣೆ ಸಹಿತ ಅವರೇ ಮಾಡಬೇಕಿದ್ದ ಕರ್ತವ್ಯಗಳಿಗೆ ಇದರಿಂದ ಸಮಯ ದೊರೆಯದೇ ಹೋಯಿತು.

ಮಾಹಿತಿ ನೀಡಿದರೆ ಹೋರಾಟದ ಸಲಹೆ !

ಬ್ಯಾಂಕ್ ನಲ್ಲಿ ಸಿಬಂದಿ ಇಲ್ಲದೆ ಉಂಟಾಗುವ ಸಮಸ್ಯೆಗಳ ಬಗ್ಗೆ ಬ್ಯಾಂಕ್‍ನ ಎಜಿಎಂ ಅವರಿಗೆ ಮಾಹಿತಿ ನೀಡಿದಾಗ, ಅವರಿಂದ ಬಂದದ್ದು ಹೋರಾಟ ಮಾಡಬೇಕೆಂಬ ಸಲಹೆ ! ಕನ್ನಡಿಗರು ನೇಮಕವಾಗುವಂತೆ ಹೋರಾಟ ಮಾಡಿ ಎಂದು ಆ ಅಧಿಕಾರಿ ತಿಳಿಸಿದ್ದು, ಸಿಬಂದಿ ಕೊರತೆ ತುಂಬುವ ಬಗ್ಗೆ ಏನೂ ಹೇಳದೆ ಬ್ಯಾಂಕ್‍ ಮ್ಯಾನೇಜರ್ ಅವರನ್ನು ಸಂಪರ್ಕಿಸುತ್ತೇನೆ ಎಂದು ತಿಳಿಸಿದ್ದಾರೆ. ನೇಮಕಗೊಂಡ ಅಧಿಕಾರಿಗಳಿಗೆ ಕನ್ನಡ ತರಬೇತಿ ಕೊಡಿ ಎಂದು ಹೇಳಿದರೆ ನಿರುತ್ತರರಾಗಿದ್ದಾರೆ.

ಕನಿಷ್ಟ 5 ಸಿಬಂದಿ ಅಗತ್ಯ

ಮೂಡುಬೆಳ್ಳೆಯ ಸಿಂಡಿಕೇಟ್‍ ಬ್ಯಾಂಕ್‍ ಅತೀ ಹೆಚ್ಚು ಗ್ರಾಹಕರನ್ನು ಹೊಂದಿದೆ. ಇಲ್ಲಿ ಅಸಿಸ್ಟೆಂಟ್‍ ಮ್ಯಾನೇಜರ್ ಸಹಿತ ಕನಿಷ್ಟ 5 ಸಿಬಂದಿಯ ಅಗತ್ಯವಿದ್ದು, ಒಬ್ಬರು ರಜೆ ಇದ್ದಾಗ ಶಾಖೆಯಲ್ಲಿ ಅಬಾಧಿತವಾಗಿ ಸೇವೆ ದೊರೆಯುವಂತೆ ಮಾಡಬಹುದಾಗಿದೆ. ಈ ಬಗ್ಗೆ ರೀಜಿನಲ್‍ ಮ್ಯಾನೇಜರ್‍ ಮತ್ತು ಉನ್ನತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಗ್ರಾಹಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *