Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಸಾರ್ವಜನಿಕ – ಖಾಸಗಿ (Government – Private)

* ಕಟೀಲು ಸಿತ್ಲ ರಂಗನಾಥ ರಾವ್

# ಮೊನ್ನೆಯಿಂದ ನಾನು ವಾಟ್ಸ್ ಆಪಿನಲ್ಲಿ ಕೆಲವು ತಲೆಬುಡವಿಲ್ಲದ, ಅರ್ಥವಿಲ್ಲದ, ಮತ್ತು ಸ್ವತಂತ್ರ ಭಾರತದ ಘನ ಸಂವಿಧಾನಕ್ಕೆ ವಿರೋಧವಾದ ಹಲವು ಹೇಳಿಕೆಗಳನ್ನು ಅಭಿಪ್ರಾಯಗಳನ್ನು ನೋಡುತ್ತಿದ್ದೇನೆ. ಜನರ ಅರಿವಿಲ್ಲದ ಮುಗ್ಧತೆಗೆ, ಅಂಧ ಶೃದ್ಧೆಗೆ ಬಹಳ ಖೇದವೂ ಆಗುತ್ತದೆ. ನೂರಾರು ವರ್ಷಗಳ ಹಿಂದೆ ಭಾರತ ದೇಶದಲ್ಲಿದ್ದ ಊಳಿಗಮಾನ್ಯ ಪದ್ಧತಿ ಅಥವಾ ಜೀತ ಪದ್ಧತಿಯನ್ನು ಪ್ರೋತ್ಸಾಹಿಸುವಂತಹ ರೀತಿಯ ಅಭಿಪ್ರಾಯಗಳನ್ನು ನಾನು ನೋಡುತ್ತಿದ್ದೇನೆ. ಇದು ಸಂವಿಧಾನ ವಿರೋಧಿ. ಸಂವಿಧಾನವನ್ನು ಬೆಂಬಲಿಸದ, ಅದನ್ನು ವಿರೋಧಿಸುವ ಮಂದಿಗಳು ದೇಶದ್ರೋಹಿಗಳು. ಅಲ್ಲದೆ ಇಂತಹ ಊಳಿಗಮಾನ್ಯ ಪದ್ಧತಿಯನ್ನು, ಯಾರದೋ ಕೃಪೆಗೆ ಬೇಕಾಗಿ, ಯಾರೋ ಎಸೆಯುವ ಒಂದು ಚೂರು ಭಿಕ್ಷೆಗೆ ಬೇಕಾಗಿ ತಮ್ಮತನವನ್ನು, ತಮ್ಮ ಸ್ವಾಭಿಮಾನವನ್ನು, ಆತ್ಮಾಭಿಮಾನವನ್ನು ಅವರಲ್ಲಿ ಅಡವಿಟ್ಟುಕೊಂಡು, ಅಂತಹ ಧನಿಗಳನ್ನು, ಸಂಸ್ಥೆಗಳನ್ನು ಬೆಂಬಲಿಸುವವರು ನಿಜವಾಗಿ ಈಗಿನ ಸಮಾಜಕ್ಕೆ ಕಂಟಕಪ್ರಾಯರು. ಈ ಕೆಲ ಮಂದಿಗಳ ದುರಾಲೋಚನೆಯ ಕಾರಣ ಇಡಿಯ ಸಮಾಜ ಸಂಕಷ್ಟಕ್ಕೆ ಸಿಲುಕುವ ಅಪಾಯವೂ ಇಲ್ಲದಿಲ್ಲ. 1947 ಕ್ಕೆ ಭಾರತ ದೇಶಕ್ಕೆ ಸಿಕ್ಕಿದ ಸ್ವಾತಂತ್ರ್ಯ ಮತ್ತು ಅಂದಿನಿಂದ 2018 ರ ವರೆಗೆ ಆ ಸ್ವಾತಂತ್ರ್ಯವನ್ನು, ಅದರಿಂದ ಲಭಿಸಿದ ಸರ್ವ ಸೌಲತ್ತುಗಳನ್ನು ಅನುಭವಿಸಿದ್ದರೂ ಆ ಸ್ವಾತಂತ್ರ್ಯದ ಮೌಲ್ಯ ಈ ಮಂದಿಗಳಿಗೆ ಇನ್ನೂ ತಿಳಿಯುತ್ತಿಲ್ಲವಲ್ಲ ಅನ್ನುವಾಗ ಊಳಿಗಮಾನ್ಯ ಪದ್ಧತಿಯನ್ನು ಬಲವಾಗಿ ಪ್ರತಿಪಾದಿಸುವ ಕೆಲ ವ್ಯಕ್ತಿಗಳ ವಿವೇಕಶೂನ್ಯ ವರ್ತನೆಗೆ ಅನುಕಂಪ ಮೂಡುತ್ತದೆ.

ಯಾವುದೇ ಒಂದು ಸ್ವಾಯತ್ತ ಸಂಸ್ಥೆ ಅದು ಸರ್ಕಾರದ ಸುಪರ್ದಿಗೆ ಒಳಪಡುವುದು ಅಥವಾ ಸರ್ಕಾರ ಅಂತಹ ಸಂಸ್ಥೆಯನ್ನು ಸ್ವಾಧೀನ ಪಡಿಸಿಕೊಳ್ಳುವುದು ತಪ್ಪೇ ?

ಭಾರತೀಯ ಸಂವಿಧಾನದ ಪ್ರಕಾರ ಈ ಪ್ರಕ್ರಿಯೆ ತಪ್ಪಲ್ಲ. ಇದು ಸರ್ಕಾರದ ಹಕ್ಕು. ಯಾವುದೇ ಒಂದು ಸ್ವಾಯತ್ತ ಸಂಸ್ಥೆ, ಅದು ಸಾರ್ವಜನಿಕ ದೇಣಿಗೆಗಳು, ಕೊಡುಗೆಗಳು ಇತ್ಯಾದಿ ವಿವಿಧ ಧನಮೂಲವನ್ನು ಬಹಳ ಮುಖ್ಯವಾಗಿ ಆಶ್ರಯಿಸಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಆ ಸ್ವಾಯತ್ತ ಸಂಸ್ಥೆ ಸಮರ್ಪಕ ರೀತಿಯಲ್ಲಿ ಕಾರ್ಯನಿರ್ವಹಿಸದೇ ಯಾರೋ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅಲ್ಲಿ ಕ್ರೋಢೀಕರಣಗೊಂಡ ಸಂಪತ್ತನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವ ಶಂಕೆಯುಂಟಾದಲ್ಲಿ ಸರ್ಕಾರ ನೇರವಾಗಿ ಅಥವಾ ಯಾವುದಾದರೂ ಒಂದು ದೂರಿನ ಆಧಾರದಲ್ಲಿ ಆ ಸ್ವಾಯತ್ತ ಸಂಸ್ಥೆಯನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಳ್ಳುವ ಪ್ರಕ್ರಿಯೆಗೆ ಮುಂದಾಗಬಹುದಾಗಿದೆ.

ಉದಾಹರಣೆಗೆ 19 ನೇ ಜುಲೈ 1969 ರಂದು ಅನೇಕ ಖಾಸಗಿ ಬ್ಯಾಂಕುಗಳನ್ನು ಸರ್ಕಾರ ತನ್ನ ಸುಪರ್ದಿಗೆ ಪಡೆದುಕೊಂಡು ಅವನ್ನೆಲ್ಲ ರಾಷ್ಟ್ರೀಕೃತ ಬ್ಯಾಂಕುಗಳೆಂದು ಘೋಷಿಸಿತು. ಈ ಪ್ರಕ್ರಿಯೆಯನ್ನು ನಮ್ಮ ರಾಷ್ಟ್ರದ ಆರ್ಥಿಕತೆಯ ಬಲುದೊಡ್ಡ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ಸರ್ಕಾರ ಸ್ವಾಧೀನಕ್ಕೆ ಪಡೆದುಕೊಳ್ಳುವುದಕ್ಕೆ ಮುಂಚೆ ಇವುಗಳೆಲ್ಲ ಖಾಸಗಿ ಬ್ಯಾಂಕುಗಳಾಗಿದ್ದವು. ಈ ಖಾಸಗಿ ಬ್ಯಾಂಕುಗಳಲ್ಲಿ ಹಣವನ್ನು ಇಡುತ್ತಿದ್ದವರು ಯಾರು? ಭಾರತ ದೇಶದ ಪ್ರಜೆಗಳು. ಪ್ರಜೆಗಳ ಕಷ್ಟಾರ್ಜಿತ ದುಡ್ಡು ಖಾಸಗಿಯವರ ಕೈಯಲ್ಲಿದ್ದರೆ ಪರೋಕ್ಷವಾಗಿ ಖಾಸಗಿಯವರು ದೇಶದ ಅರ್ಥವ್ಯವಸ್ಥೆಯ ಮೇಲೆ ತಮ್ಮ ನಿಯಂತ್ರಣವನ್ನು ಸಾಧಿಸತೊಡಗುತ್ತಾರೆ. ದೇಶದ ಆರ್ಥಿಕತೆಯ ಮೇಲಿನ ಖಾಸಗಿಯವರ ಹಿಡಿತದಿಂದ ಬಡವರು ಬಡವರಾಗಿಯೇ ಉಳಿದು, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಲೇ ಹೋಗುವ ಅಪಾಯ ಹೆಚ್ಚು. ಬಡವರ ಶೋಷಣೆ ನಡೆಯುತ್ತದೆ. ಕಷ್ಟಪಟ್ಟು ದಾಸ್ಯದಿಂದ ವಿಮುಕ್ತಿಯನ್ನು ಪಡೆದ ದೇಶ ಮತ್ತೆ ದೇಶದೊಳಗಿನ ಕೆಲ ವ್ಯಕ್ತಿಗಳ ದಾಸ್ಯಕ್ಕೆ ಒಳಗಾಗಬೇಕಾಗುತ್ತದೆ. ಸಮಾನತೆ ಎನ್ನುವುದು ನಾಶವಾಗಿ ಬಿಡುತ್ತದೆ. ದೇಶದ ಪ್ರಜೆಗಳ ದುಡ್ಡನ್ನು ಕೆಲವೇ ಕೆಲ ಖಾಸಗಿ ವ್ಯಕ್ತಿಗಳು ಅಪಹರಿಸಿದರೆ ಪ್ರಯಾಸಪಟ್ಟು ಬಡವರು ಸಂಪಾದಿಸಿದ ಹಣವನ್ನು ಅವರು ನಂಬಿ ಕಳೆದುಕೊಂಡರೆ ಅದಕ್ಕೆ ಹೊಣೆ ಯಾರು? ಈ ಎಲ್ಲಾ ಕಾರಣಗಳಿಗಾಗಿ ದೇಶದ ಪ್ರಜೆಗಳ ಹಣದ ಸುರಕ್ಷತೆಯ ದೃಷ್ಟಿಯಿಂದ ತನ್ಮೂಲಕ ದೇಶದ ಆರ್ಥಿಕತೆಯ ಮೇಲೆ ಸರಕಾರದ್ದೇ ಹಿಡಿತ ಇರಬೇಕೆನ್ನುವುದ ಉದ್ದೇಶದಿಂದ ಖಾಸಗಿ ಬ್ಯಾಂಕುಗಳ ರಾಷ್ಟ್ರೀಕರಣ ಮಾಡಲಾಯಿತು.

ಈ ಪ್ರಕ್ರಿಯೆಯಿಂದ ದೇಶಕ್ಕೆ, ದೇಶದ ಪ್ರಜೆಗಳಿಗೆ ಆದ ಲಾಭಗಳು ಒಂದೆರಡಲ್ಲ. ಅನೇಕ ಲಾಭಗಳಾಗಿವೆ. ಈ ಬ್ಯಾಂಕುಗಳಲ್ಲಿ ಪಾರದರ್ಶಕ ನೇಮಕಾತಿಗಳಾಗತೊಡಗಿತು. ಬ್ಯಾಂಕುಗಳ ನೌಕರರ ಸಂಬಳ ಸವಲತ್ತುಗಳು ವೃದ್ಧಿಯಾಯಿತು ಮಾತ್ರವಲ್ಲದೇ ಔದ್ಯೋಗಿಕ ಭದ್ರತೆಯೂ ದೊರಕಿತು. ಪಿಂಚಿಣಿಯ ವ್ಯವಸ್ಥೆ ದೊರಕಿತು. ಎರಡು ವರ್ಷಗಳ ಕೆಳಗೆ ನನ್ನ ಬಂಧುವೊಬ್ಬರಿಗೆ ತೆರೆದ ಹೃದಯದ ಶಸ್ತ್ರಚಿಕಿತ್ಸೆಯಾಗಿದ್ದ ಸಮಯದಲ್ಲಿ ಅವರಲ್ಲಿಯೇ ಇದ್ದ ವಿಮಾಯೋಜನೆಯೇ ಸಹಾಯಕ್ಕೆ ಬಂದುದಲ್ಲದೆ ಅವರ ಮಕ್ಕಳ ಖಾಸಗಿ ಸಂಸ್ಥೆಯ ವಿಮಾಯೋಜನೆಯಿಂದ ಏನೇನೂ ಸಹಾಯವಾಗಿರಲಿಲ್ಲ. ಇದು ಬಹಳ ಪ್ರಮುಖವಾದ ವಿಚಾರ.

ಯಾವ ಸ್ವಾಯತ್ತ ಸಂಸ್ಥೆಯನ್ನೆಲ್ಲ ಸರ್ಕಾರ ಸ್ವಾಧೀನ ಪಡಿಸಿಕೊಳ್ಳಬಹುದು ?

ಅದ್ಯಾವ ಉದ್ದೇಶವೇ ಇದ್ದರೂ ಕೂಡ ಸಾರ್ವಜನಿಕರ ಸಂಪತ್ತು ಎಲ್ಲಿ ಕ್ರೋಢೀಕರಣವಾಗುತ್ತದೆಯೋ ಅಂತಹ ಸಂಸ್ಥೆಯನ್ನು ಸರ್ಕಾರ ಸೂಕ್ತ ನಿಯಮಾವಳಿಗಳನ್ನು ರೂಪಿಸಿಕೊಂಡು ತನ್ನ ಸುಪರ್ದಿಗೆ ತೆಗೆದುಕೊಳ್ಳಬಹುದು. ಆದರೆ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಖಾಸಗಿ ಕೈಗಾರಿಕೆಗಳು, ಖಾಸಗಿ ಉದ್ದಿಮೆಗಳು ಇಂತಹ ಸಂಸ್ಥೆಗಳನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳಲೇಬೇಕಾದ ಅವಶ್ಯಕತೆಯಿಲ್ಲ. ಏಕೆಂದರೆ ಇಂತಹ ಕಡೆಗಳಲ್ಲಿ ಖಾಸಗಿಯವರು ತಮ್ಮದೇ ಸ್ವಂತ ಬಂಡವಾಳವನ್ನು ಹೂಡಿರುತ್ತಾರೆ. ಕೆಲವೊಮ್ಮೆ ಶೇರುಗಳ ಮೂಲಕ ಸಾರ್ವಜನಿಕರಿಂದ ಹಣ ಸಂಗ್ರಹವನ್ನು ಮಾಡಿದರೂ ಕೂಡ ಆ ಶೇರುಗಳಿಗೆ ವರ್ಷಾಂತ್ಯದಲ್ಲಿ ಲಾಭಾಂಶವನ್ನು ವಿತರಿಸಲಾಗುತ್ತದೆ. ಇನ್ನು ಶೈಕ್ಷಣಿಕ, ಆರೋಗ್ಯ ಸಂಸ್ಥೆಗಳಲ್ಲಿ ತಾವು ಪಡೆದುಕೊಳ್ಳುವ ಹಣಕ್ಕೆ ಪ್ರತಿಯಾಗಿ ಸೂಕ್ತ ಸೇವೆಯನ್ನು ಒದಗಿಸಲಾಗುತ್ತದೆ. ಈ ಒಡಂಬಡಿಕೆ ಹಣ ಸಂದಾಯ ಮಾಡುವವನ ಮತ್ತು ಆ ಸಂಸ್ಥೆಯ ನಡುವೆ ಇರುತ್ತದೆ. ಉದಾಹರಣೆಗೆ ಇಂಜಿನಿಯರಿಂಗ್ ಪದವಿಯನ್ನು ಪಡೆಯುವುದಕ್ಕಾಗಿ ಒಂದು ಖಾಸಗಿ ಶೈಕ್ಷಣಿಕ ಸಂಸ್ಥೆಯಲ್ಲಿ ಕಲಿಕಾರ್ಥಿಯಾಗಿ ಸೇರಿದ ವಿದ್ಯಾರ್ಥಿ ಆ ಇಂಜಿನಿಯರಿಂಗ್ ಪದವಿಯನ್ನು ಪಡೆಯುತ್ತಾನೆ. ಈ ಸೇವೆಯನ್ನು ಪಡೇಯುವುದಕ್ಕಾಗಿ ಸೂಕ್ತ ಖರ್ಚನ್ನು ಭರಿಸುತ್ತಾನೆ. ಈ ಸಂಸ್ಥೆಗಳೂ ಕೂಡ ಆಯಾಯ ಕ್ಷೇತ್ರದ ಸರ್ಕಾರಿ ವಿಭಾಗಗಳ ಮಾರ್ಗಸೂಚಿಯನ್ವಯವೇ ಕಾರ್ಯನಿರ್ವಹಿಸಬೇಕಾಗುತ್ತದೆ. ಈ ಮಾರ್ಗಸೂಚಿಯನ್ವಯ ಕಾರ್ಯನಿರ್ವಹಿಸದೇ ಇರುವಂತಿಲ್ಲ.

ಯಾವುದೇ ಸಾರ್ವಜನಿಕರ ಸಂಪತ್ತಿನ ಮೂಲಕ ನಡೆಯಲ್ಪಡುವ ಸ್ವಾಯತ್ತ ಸಂಸ್ಥೆ ಸರ್ಕಾರೀ ಸ್ವಾಮ್ಯಕ್ಕೆ ಒಳಪಡಬೇಕು ಯಾಕೆ ?

ಈ ವಿಚಾರವನ್ನು ಬಹಳ ವಿಸ್ತೃತವಾಗಿ ಅವಲೋಕನ ಮಾಡಬೇಕಾಗುತ್ತದೆ. ಒಂದೊಂದಾಗಿ ಗಮನಿಸುತ್ತ ಸಾಗೋಣ. ಸ್ವಾತಂತ್ರ್ಯಪೂರ್ವದ ಪರಿಸ್ಥಿತಿ:* ಸ್ವಾತಂತ್ರ್ಯಪೂರ್ವದಲ್ಲಿ ಅಂದರೆ 1947 ಕ್ಕೂ ಮುಂಚೆ ನಮ್ಮ ದೇಶ ವಿದೇಶೀಯರ ಆಳ್ವಿಕೆಯಲ್ಲಿತ್ತು. ಅದಕ್ಕೂ ಮುಂಚೆ ರಾಜರುಗಳ, ಪಾಳೇಗಾರರುಗಳ ಅಧೀನದಲ್ಲಿತ್ತು. ಆ ಕಾಲದಲ್ಲಿ ಜಮೀನ್ದಾರಿ ಪದ್ಧತಿ ಚಾಲ್ತಿಯಲ್ಲಿತ್ತು. ಈ ಜಮೀನ್ದಾರಿ ಪದ್ಧತಿ ಊಳಿಗಮಾನ್ಯ ವ್ಯವಸ್ಥೆಯಲ್ಲಿತ್ತು. ಒಬ್ಬ ಜಮೀನ್ದಾರ, ಉಳಿದವರೆಲ್ಲ ಆತನ ಊಳಿಗದವರು. ದುಡಿಯುವ ಬಲು ದೊಡ್ಡ ವರ್ಗ ಚಿಕ್ಕ ಜಮೀನ್ದಾರಿ ವರ್ಗದ ಕೈಕೆಳಗೆ ಊಳಿಗ ಅಥವಾ ಜೀತ ಮಾಡುತ್ತ ಕಷ್ಟದಲ್ಲಿ ಜೀವಿಸುತ್ತಿತ್ತು. ಆ ಜಮೀನ್ದಾರನ ಕೃಪಾಕಟಾಕ್ಷವಿದ್ದರೆ ಮಾತ್ರ ಜೀವನ, ಇಲ್ಲವಾದರೆ ಜೀವನ ನರಕಸದೃಶವಾಗಿ ಪರಿಣಮಿಸುತ್ತಿತ್ತು. ಆ ಜಮೀನ್ದಾರನ ಕೃಪಾಕಟಾಕ್ಷಕ್ಕೆ ಬೇಕಾಗಿ ಕೆಲವೇ ಕೆಲವು ಊಳಿಗದ ಮಂದಿಗಳು ಆತನ ಭಟ್ಟಂಗಿಗಳಾಗಿ, ಆತ ಹೇಳಿದ್ದನ್ನು ಕೇಳುತ್ತ ಉಳಿದ ಊಳಿಗದವರ ಮೇಲೆ ದೌರ್ಜನ್ಯಕ್ಕೆ ಅಸ್ತ್ರವಾಗಿರುತ್ತಿದ್ದರು.

95 ಕ್ಕೂ ಹೆಚ್ಚು ಯಕ್ಷಗಾನ ಕಲಾವಿದರ ಸಂದರ್ಶನವನ್ನು ಮಾಡಿದ್ದ ಸಮಯದಲ್ಲಿ ಒಂದಿಬ್ಬರು ಸಂದರ್ಶನದ ಬಳಿಕ ಲೋಕಾಭಿರಾಮವಾಗಿ ಮಾತಾಡುತ್ತಿದ್ದ ವೇಳೆ ಹೇಳಿದ ನಿಜ ಕಥೆ ಕೇಳಿ ನಾನು ದಂಗು ಬಡಿದು ಹೌಹಾರಿ ಹೋಗಿದ್ದೆ. ಒಂದೂರು. ಅಲ್ಲೊಬ್ಬ ಜಮೀನ್ದಾರ. ಓರ್ವ ಸಾಮಾನ್ಯ ವ್ಯಕ್ತಿ ಸಣ್ಣ ಮಟ್ಟಿನ ಭೂಮಾಲೀಕ. ಆತನ ಪತ್ನಿ ಅತ್ಯಂತ ಸುಂದರಿ. ಜಮೀನ್ದಾರನ ದೃಷ್ಟಿ ಆ ಸುಂದರಿಯ ಮೇಲೆ ಬಿತ್ತು. ಇಡೀ ಊರಿಗೆ ಊರೇ ನೋಡುತ್ತಿದ್ದಂತೆಯೇ ಆ ಸಣ್ಣ ಭೂಮಾಲೀಕನ ಪತ್ನಿಯನ್ನು ಆಕೆ ಕುಳಿತ ಮಂಚ ಸಹಿತವಾಗಿ ಆ ಜಮೀನ್ದಾರನ ಊಳಿಗದ ನಾಲ್ಕು ಮಂದಿಗಳು ಜಮೀನ್ದಾರನ ಮನೆಗೆ ಹೊತ್ತೊಯ್ದರು. ಆ ಬಳಿಕ ಆಕೆ ಸಾಯುವವರೆಗೂ ಆ ಜಮೀನ್ದಾರನ ಜತೆಯಲ್ಲಿಯೇ ಇದ್ದಳು. ಆಕೆಗೂ ಅನಿವಾರ್ಯ ಪ್ರಾಣ ಉಳಿಯಬೇಕಲ್ಲ. ಇಡಿಯ ಊರಿನ ಮಂದಿಗಳಿಗೂ ಪ್ರಾಣ ಉಳಿಯಬೇಕಲ್ಲ. ಆ ಪುಟ್ಟ ಭೂಮಾಲೀಕನ ಪ್ರಾಣವೂ ಉಳಿಯಬೇಕಲ್ಲ. ಈ ಪ್ರಾಣವನ್ನು ಉಳಿಸಿಕೊಳ್ಳುವುದಕ್ಕಾಗಿ ಎಲ್ಲರೂ ಈ ಅನ್ಯಾಯವನ್ನು ಸುಮ್ಮನೇ ಸಹಿಸಿಕೊಂಡಿದ್ದರು. ಕವಿ ಮುದ್ದಣ ವಿರಚಿತ ರತ್ನಾವತಿ ಕಲ್ಯಾಣ ಪ್ರಸಂಗದಲ್ಲಿ ಬರುವ ಈ ಪದವನ್ನು ಗಮನಿಸಿ. 1972 ರ ಪಾವಂಜೆ ಪ್ರತಿಯಲ್ಲಿ ಆ ಪದ ಹೀಗಿದೆ.*

ವಾರ್ಧಿಕ

ಕದಲದೋಲೆತ್ತಿಕೊಂಡೊಯ್ದಾಗ ಮಂಚಮಂ | ಒದಗಿನಿಂ ನಿಶಿಯೊಳಾ ಪುರಗಿರಿಗಳಂ ಕಳೆದು |

ಪದುಮಸಖನುದಯದೊಳ್ ದಿಂಡೀರವೆಂಬ ವನದೆಡೆಗೆಯ್ದು ಪೊರೆಯನಿಳುಹಿ ||

ಉದಧಿವವಸನೇಶ ಶ್ರಮವನು ಕಳೆಯಲೋಸುಗವೆ | ಮುದದಿ ಕುಳಿತಿರಲಿತ್ತ ನಿದ್ದೆ ತಿಳಿದೆದ್ದಾಗ |

ಳದುಭುತವಿದೇನೆಂದು ಬಾಯ್ಬಿಡುತ ಮರುಗಿದಳ್ ಕಡು ಭಯವ ತಾಳ್ದು ಸುದತಿ ||*

1901 ರಲ್ಲಿ ವರಕವಿ ಮುದ್ದಣ ಅಳಿದಿದ್ದಾನೆ. ಹಾಗಾದರೆ ವರಕವಿ ಮುದ್ದಣನ ಕಾಲಕ್ಕೂ ಹಿಂದೆ ಇಂತಹ ಘಟನೆಗಳನೇಕ ನಡೆದಿವೆ. ಮತ್ತು ಆತನ ಕಾಲದಲ್ಲೂ ನಡೆದಿರಬಹುದು ಎನ್ನುವುದಕ್ಕೆ ಈ ಪದವೇ ಜ್ವಲಂತ ಸಾಕ್ಷಿ. ಯಾವುದೇ ಸಾಹಿತ್ಯ ಕೃತಿಗಳನ್ನು ಅಂದಿನ ಸಾಮಾಜಿಕ, ಆರ್ಥಿಕ, ಧಾರ್ಮಿಕ ಸ್ಥಿತಿಗಳನ್ನು ತಿಳಿದುಕೊಳ್ಳುವ ದೃಷ್ಟಿಕೋನದಿಂದ ಅಭ್ಯಸಿಸಿದರೆ ಇಂತಹ ಗೂಢಾರ್ಥಗಳು ಅರ್ಥವಾಗಲು ಸಾಧ್ಯ. ಮೇಲೆ ಹೇಳಿರುವ ಮಾದರಿಯ ಘಟನೆಗಳು ಅಂದಿನ ಕಾಲದಲ್ಲಿ ಸರ್ವೇ ಸಾಮಾನ್ಯವೆಂಬಂತೆ ನಡೆಯುತ್ತಿದ್ದ ವಿಚಾರ.

ಮಲಯಾಳಂನ ಪ್ರಸಿದ್ಧ ಕಲಾವಿದ ಮುಮ್ಮೂಟಿ ನಟಿಸಿದ ಅಡೂರು ಗೋಪಾಲಕೃಷ್ಣ ನಿರ್ದೇಶಿಸಿರುವ ಬಾರ್ಕೂರಿನಲ್ಲಿ ಚಿತ್ರೀಕರಣಗೊಂಡ ಒಂದು ಚಲನಚಿತ್ರ “ವಿಧೇಯನ್” ಇಂತಹುದೇ ಒಂದು ಕಥೆಯನ್ನಾಧರಿಸಿ ಬಿಡುಗಡೆಗೊಂಡಿತ್ತು. ಆ ಜೀತದಾಳು ಅದೆಷ್ಟು ತನ್ನನ್ನು ತಾನು ತನ್ನ ಧನಿಗೆ ಮಾರಿಕೊಂಡಿದ್ದನೆಂದರೆ, ತನ್ನ ಸ್ವಾಭಿಮಾನ, ಆತ್ಮಾಭಿಮಾನವೆಲ್ಲವನ್ನೂ ಬಿಟ್ಟು ತನ್ನ ಹೆಂಡತಿಯ ಮಾನಾಪಮಾನ, ಆತ್ಮಾಭಿಮಾನ ಮತ್ತು ಸ್ವಾಭಿಮಾನವನ್ನೂ ತನ್ನ ಧನಿಯ ಕೀಳು ಕಾಮನೆಗಾಗಿ ಬಲಿ ಕೊಡುವ ಮನಸ್ಸು ಮಾಡುತ್ತಾನೆ. ಅದು ಆ ಜೀತದಾಳಿನ ಅನಿವಾರ್ಯತೆ. ಅದಲ್ಲವಾದರೆ ಬದುಕೇ ಇಲ್ಲವೆನ್ನುವಾಗ ಬದುಕನ್ನು ಉಳಿಸಿಕೊಳ್ಳಲು ಏನೆಲ್ಲ ಮಾಡಬೇಕಾಗಿ ಬರುತ್ತದೆ. ಕೆಲವರು ತಮ್ಮ ಕಿಂಚಿತ್ ಸ್ವಾರ್ಥ ಈಡೇರುತ್ತದೆಯೆಂಬಾಗ ಇಡಿಯ ಸಮಾಜವನ್ನೂ ಲೆಕ್ಕಿಸದೇ ಅಂತಹ ಜಮೀನ್ದಾರರ ಸಹಾಯಕ್ಕೆ ಒದಗುತ್ತಾರೆ. (ಚಲನಚಿತ್ರದ ಸಂಪೂರ್ಣ ಮಾಹಿತಿ https://en.wikipedia.org/wiki/Vidheyan) ವಿಧೇಯನ್ ಚಲನಚಿತ್ರದ ವೀಡಿಯೋ ಲಿಂಕು (https://www.youtube.com/watch?v=NtLXsGKgXck)*

ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿಯೇ ಇಂತಹ ಜೀತ ಪದ್ಧತಿ, ಬಾಲ್ಯ ವಿವಾಹ, ಸತೀ ಸಹಗಮನ ಮೊದಲಾದ ಅನೇಕ ಪಿಡುಗಳ ನಿವಾರಣೆಗೆ ರಾಜಾರಾಮ್ ಮೋಹನ್ ರಾಯ್ ಅವರ ಸಹಕಾರದೊಡನೆ ಅನೇಕ ನೀತಿ ನಿಯಮಾವಳಿಗಳನ್ನು ರೂಪಿಸಲಾಗಿತ್ತಾದರೂ ಅದು ಅಷ್ಟೊಂದು ಪರಿಣಾಮಕಾರಿಯಾಗಿರಲಿಲ್ಲ. ಯಾಕೆಂದರೆ ಬ್ರಿಟಿಷರಿಗೆ ಇದು ಅವರ ರಾಷ್ಟ್ರವಲ್ಲವಲ್ಲ.

ಸ್ವಾತಂತ್ರ್ಯಾನಂತರದ ಪರಿಸ್ಥಿತಿ

ನಮ್ಮ ಭಾರತ ದೇಶದ ಜನತೆಗೆ ಸ್ವಾತಂತ್ರ್ಯದ ಮಹತ್ವದ ಅರಿವು ಮೂಡಿ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಸತ್ಯ, ಸಮತ್ವ, ಅಹಿಂಸೆಯ ಮೌಲ್ಯಗಳ ಮೂಲಕ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳಲಾಯಿತು. ಸ್ವಾತಂತ್ರ್ಯವನ್ನು ಪಡೆಯುವ ಮೂಲ ಉದ್ದೇಶ ಸರ್ವ ಸಮಾನತೆಯ ಸಮಾಜದ ಸೃಷ್ಟಿ. ಈ ಸ್ವಾತಂತ್ರ್ಯದ ಕಾರಣದಿಂದಲೇ ಇಂದಿಗೆ ಇಬ್ಬರು ದಲಿತ ರಾಷ್ಟ್ರಪತಿಗಳನ್ನು ನಮ್ಮ ದೇಶ ಕಾಣುವಂತಾಯಿತು. ಮೊದಲಿನ ಊಳಿಗಮಾನ್ಯ ಪದ್ಧತಿಯಲ್ಲಿ ಇಂತಹ ಸಮಾನ ಅವಕಾಶವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ನಮ್ಮದೇ ಆದ ಸಂವಿಧಾನವನ್ನು ಡಾ. ಅಂಬೇಡ್ಕರ್ ಅವರು ರೂಪಿಸಿದರು. ಇಲ್ಲಿ ಸರ್ವರಿಗೂ ಸಮಾನತೆಯನ್ನು ಘೋಷಿಸಲಾಗಿದೆ. ಭಾರತ ದೇಶದಲ್ಲಿ ಜೀವಿಸುತ್ತಿರುವ ಸರ್ವ ಮನುಷ್ಯರೂ ಒಂದೇ ಎನ್ನುವ ತತ್ವವಿಲ್ಲಿ ಸಾರಲಾಗಿದೆ. ಯಾವುಯಾವುದೋ ಆಧಾರದಿಂದ ಯಾರೂ ದೊಡ್ಡವರೂ ಅಲ್ಲ, ಯಾರೂ ಸಣ್ಣವರೂ ಅಲ್ಲ. ಸರ್ವರೂ ಸಮಾನರು.

ಖಾಸಗಿವಲಯದಲ್ಲಿನ ಲೋಪಗಳು

1. ನನ್ನೋರ್ವ ಆತ್ಮೀಯರು ಬರೋಬ್ಬರಿ 30 ವರ್ಷಗಳ ಕಾಲ ಒಂದು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗವನ್ನು ನಿರ್ವಹಿಸಿದರು. ಎರಡು ವರ್ಷಗಳ ಹಿಂದೆ ನಿವೃತ್ತರಾದರು. ಅವರಿಗೆ ಅವರ ಹಕ್ಕಿನ 15 ರಿಂದ 20 ಲಕ್ಷಗಳಷ್ಟು ನಿವೃತ್ತಿಯ ಸಮಯದಲ್ಲಿ ಸಿಗಬೇಕಾಗಿತ್ತು. ಆದರೆ ಅವರಿಗೆ ಸಿಕ್ಕಿದ್ದು ಕೇವಲ 2 ಲಕ್ಷ. ಇಂತಹ ಅನ್ಯಾಯಗಳು ಖಾಸಗಿವಲಯದಲ್ಲಿ ದಿನನಿತ್ಯ ಎನ್ನುವಂತೆ ನಡೆಯುತ್ತಿರುತ್ತದೆ.

2. ಅನೇಕ ಖಾಸಗಿ ಸಂಸ್ಥೆಗಳಲ್ಲಿ ವೇತನವಿಷ್ಟು ಎಂದು ನಿಗದಿಯನ್ನೇ ಮಾಡಿರುವುದಿಲ್ಲ.

3. ಅನೇಕ ಖಾಸಗಿ ಸಂಸ್ಥೆಗಳಲ್ಲಿ ವೇತನ ತಿಂಗಳ ತಾರೀಖು 20 ಆದರೂ ಸಿಗುವುದಿಲ್ಲ.

4. ಅನೇಕ ಖಾಸಗಿ ಸಂಸ್ಥೆಗಳಲ್ಲಿ 8 ರಿಂದ 9 ತಿಂಗಳವರೆಗೂ ವೇತನವಿಲ್ಲದೇ ಕೆಲಸ ಮಾಡುತ್ತಿರುವವರು ಅದೆಷ್ಟೋ ಮಂದಿಗಳು.

5. ಯಾವುದೇ ರೀತಿಯ ಸೌಲತ್ತುಗಳಿಲ್ಲ. ವಿಮೆಯಿಲ್ಲ, ಭವಿಷ್ಯನಿಧಿಯಿಲ್ಲ, ಉದ್ಯೋಗ ಭದ್ರತೆಯಿಲ್ಲ. ನಮಗೆ ಶ್ರಮಿಸಲು ಸಾಧ್ಯವಿರುವಷ್ಟು ಕಾಲ ಮಾತ್ರವೇ ನಮಗೆ ಸಿಗುವ ಕಿಂಚಿತ್ ಸಂಬಳವಾದರೂ ಸಿಗುತ್ತದೆಯೇ ಹೊರತು, ನಿವೃತ್ತಿಯ ನಂತರ ಚಿಕ್ಕಾಸೂ ದೊರಕುವುದಿಲ್ಲ.

6. ಇಂತಹ ಸಂಸ್ಥೆಗಳೆಲ್ಲವನ್ನೂ ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಅವಕಾಶ ಕಡಿಮೆ. ಯಾಕೆಂದರೆ ಮೊದಲೇ ಹೇಳಿದಂತೆ ಖಾಸಗಿಯವರು ತಾವೇ ಸ್ವತಃ ಬಂಡವಾಳವನ್ನು ಹೊಂದಿಸಿ ನಡೆಸುತ್ತಿರುವ ಸಂಸ್ಥೆಯಿದು.

ಉತ್ತಮ ವ್ಯವಸ್ಥೆಗಾಗಿ, ಉತ್ತಮ ಸೌಲತ್ತುಗಳಿಗಾಗಿ, ಸಮಾನ ಸಮಾಜದ ನಿರ್ಮಾಣಕ್ಕಾಗಿ ಭ್ರಷ್ಟ ವ್ಯವಸ್ಥೆ ತೊಲಗಲೇಬೇಕು

ಆದುದರಿಂದ ಸಾರ್ವಜನಿಕರನೇಕರ ಲಕ್ಷ ಕೋಟಿಗಟ್ಟಲೆ ದೇಣಿಗೆ ಭಕ್ತಿಯ ಸೇವೆಯ ರೂಪದಲ್ಲಿ ಬರುವ ಯಾವುದೇ ದೇವಳದ ಯಾವುದೇ ಒಂದು ಸಂಸ್ಥೆ ಖಂಡಿತಕ್ಕೂ ಸರ್ಕಾರದ ಅಧೀನಕ್ಕೊಳಪಡಲೇಬೇಕು. ಅಲ್ಲಿನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಮಂದಿಗಳಿಗೆ ಅವರ ಸುಧೃಢ ಜೀವನ, ಸ್ವತಂತ್ರ ಜೀವನ, ಬೇಧಭಾವವಿರದ ಸಮಾನತೆಯ ಜೀವನ ಬೇಡವಿರಬಹುದು. ಅಥವಾ ಅವರು ಅಲ್ಲಿನ ಪಟ್ಟಭದ್ರರ ಜೀತಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡಿರಲೂಬಹುದು. ಅಂಥವರು ಆ ಸಂಸ್ಥೆಯಲ್ಲಿ ಕೈಂಕರ್ಯ ಮಾಡುವುದಕ್ಕಿಂತ ಆ ಸಂಸ್ಥೆಯ ವ್ಯಕ್ತಿಗಳ ಮನೆಯ ಊಳಿಗ ಮಾಡಬಹುದು. ಅದಕ್ಕೆ ಆ ಯಜಮಾನ ಅಷ್ಟೋ ಇಷ್ಟೋ ಕೊಟ್ಟಿದ್ದರಲ್ಲಿಯೇ ತೃಪ್ತಿ ಪಟ್ಟುಕೊಳ್ಳುತ್ತಾನಾದರೆ ಅದು ಅವರ ಹಣೆಬರಹ. ಆದರೆ ಅಂತಹ ಸಂಸ್ಥೆಗಳಿಗೆ ದುಡ್ಡು ದೇಣಿಗೆಯಾಗಿ ಕೊಟ್ಟವರು ಯಾರು? ನಾನು, ನೀವು, ಅವರು, ಇವರು. ಅಂದರೆ ಸಾರ್ವಜನಿಕರು. ಆದ ಕಾರಣ ನಮ್ಮ ಹಣ ಸರಿಯಾದ ರೀತಿಯಲ್ಲಿ ವಿನಿಯೋಗವಾಗಲೇ ಬೇಕು. ಇದು ಈ ಹಿಂದಿನ ಊಳಿಗಮಾನ್ಯ ಪದ್ಧತಿಯ ಕಾಲವಲ್ಲ. ಸ್ವತಂತ್ರ ಭಾರತ. ಇಲ್ಲಿ ನಾವು ನೀವೆಲ್ಲರೂ ಸಮಾನರು. ನಮ್ಮ ಕಷ್ಟಾರ್ಜಿತ ಹಣ ನಮ್ಮ ಭಕ್ತಿ, ಶೃದ್ಧೆ, ಪ್ರೀತಿಯ ಕಾಣಿಕೆ ಸತ್ಪಾತ್ರರಿಗೆ ಸಂದಾಯವಾಗಲೇಬೇಕು.

ದೇವರ ಗರ್ಭಗುಡಿಯ ಬಳಿಯಲ್ಲಿಯೇ 500 ಕೊಟ್ಟವನಿಗೆ ಉದ್ದದ ಮಾಲೆ, 10 ಕೊಟ್ಟವನಿಗೆ ಗಂಧಪ್ರಸಾದವನ್ನು ಎಸೆಯುವ ಅಸಮಾನತೆ ತೊಲಗಬೇಕು. ದೇವರ ಗರ್ಭಗುಡಿಯ ಬಳಿಯಲ್ಲಿನ ಇಂತಹ ವರ್ತನೆ ಸರಿಯೇ? ಇಂತಹ ವರ್ತನೆ ಸರಿಯಲ್ಲ ಅಲ್ಲವೇ? ಇಂತಹ ತಪ್ಪುಗಳನೇಕವನ್ನು ದೇವರ ಹತ್ತಿರವಿರುವ ಅನೇಕರು ಮಾಡುತ್ತಾ ಭಕ್ತಾದಿಗಳಿಗೆ ಮಾತ್ರವೇ ದೇವರ ಭಯವನ್ನು ಬಿತ್ತುವ ಷಡ್ಯಂತ್ರವನ್ನು ನಾನಂತೂ ಒಪ್ಪಿಕೊಳ್ಳುವುದಿಲ್ಲ. ನನಗೆ ನನ್ನ ದೇವರ ಮೇಲೆ ಭಯವಿಲ್ಲ. ನಾನು ಏನೂ ತಪ್ಪು ಹೇಳಲಿಲ್ಲ. ದೇವರ ಭಯವಿರುವುದು ತಪ್ಪಿತಸ್ತನಿಗೆ ಮಾತ್ರವೇ ಹೊರತು ಸರಿಯಾದ ದಾರಿಯಲ್ಲಿರುವವನಿಗಲ್ಲ.

ಕೆಲವರು ಹೇಳುತ್ತಾರೆ ಸರ್ಕಾರೀ ವ್ಯವಸ್ಥೆಯಲ್ಲಿ ಲೋಪದೋಷಗಳಿವೆ. ಸರ್ಕಾರ ತನ್ನ ಸುಪರ್ದಿಗೆ ಯಾವುದೇ ಒಂದು ಸಂಸ್ಥೆಯನ್ನು ಮತ್ತು ಮಂಡಳಿಗಳನ್ನು ತೆಗೆದುಕೊಂಡರೆ ಮತ್ತಷ್ಟು ಹಾಳಾಗುತ್ತದೆ. ನನಗಾಗ ನಗು ಬರುತ್ತದೆ. ಹಾಗಾದರೆ ಈಗ ಖಾಸಗಿ ಒಡೆತನದಲ್ಲಿ ಎಲ್ಲವೂ ಸರಿಯಿಲ್ಲವೆಂದು ನೀವೇ ಒಪ್ಪಿಕೊಂಡಾಯಿತಲ್ಲ. ಸರ್ಕಾರದ ವ್ಯವಸ್ಥೆಗಳಲ್ಲಿ ಲೋಪವಿದ್ದರೆ ಅದನ್ನು ಸರಿಪಡಿಸುವ ಬಗ್ಗೆ ಯೋಚನೆ ಮಾಡಬೇಕು. ಅದನ್ನು ಬಿಟ್ಟು ಒಂದು ವ್ಯವಸ್ಥೆಯ ಒಳಗಡೆ ನಾವು ಸೇರಿಕೊಳ್ಳಲಾರೆವು ಎನ್ನುವ ಉದ್ಧಟತನವನ್ನು ತೋರಿಸುವುದು ತಪ್ಪು. ಅದೂ ಘನ ಭಾರತ ಸರ್ಕಾರದ ಅಧೀನದಲ್ಲಿರುವ ಘನ ಕರ್ನಾಟಕ ಸರ್ಕಾರದ ಸುಪರ್ದಿಗೆ ಒಳಪಡಲಾರೆವು ಎಂದು ಯಾರಾದರೂ ಹೇಳುತ್ತಾರಾದರೆ ಅವರು ದೇಶದ್ರೋಹಿಗಳು. ಅವರು ಈ ರಾಷ್ಟ್ರದಲ್ಲಿರಲು ಅರ್ಹರಲ್ಲ. ನಮ್ಮ ಘನ ಭಾರತ ದೇಶದ ಡಾ. ಅಂಬೇಡ್ಕರ್ ಅವರಿಂದ ವಿರಚಿತವಾದ ಘನ ಸಂವಿಧಾನಕ್ಕೆ ಗೌರವ ಕೊಡಲಾಗುವುದಿಲ್ಲವೆಂದರೆ ಏನರ್ಥ? ಇನ್ನೂ ಒಂದು ವಿಚಾರ ಹೇಳುತ್ತೇನೆ. ನಮ್ಮ ದೇಹದ ಆರೋಗ್ಯದಲ್ಲಿ ಏರುಪೇರಾದರೆ ಔಷಧಿಯನ್ನು ತೆಗೆದುಕೊಳ್ಳುತ್ತೇವೆಯೇ ವಿನಃ ದೇಹವನ್ನು ತ್ಯಾಗ ಮಾಡುವುದಿಲ್ಲವಲ್ಲ. ಅದೇ ರೀತಿ ಸರ್ಕಾರೀ ವ್ಯವಸ್ಥೆಯಲ್ಲಿ ಲೋಪದೋಷಗಳಿದ್ದರೆ ಅದನ್ನು ಸರಿಪಡಿಸಿಕೊಳ್ಳಬೇಕು ಹೊರತು ಸರ್ಕಾರ ಅಂತಹ ಭ್ರಷ್ಟತೆಯ ಆಪಾದನೆಯಿರುವ ಸಂಸ್ಥೆಯನ್ನು ಸರ್ಕಾರದ ಅಧೀನಕ್ಕೊಳಪಡುವುದನ್ನು ವಿರೋಧಿಸುವುದಲ್ಲ.

ಕೆಲವು ಧೈರ್ಯವಂತರು ತಡವಾಗಿಯಾದರೂ ಜ್ಞಾನೋದಯವಾಗಿ ಒಂದು ವ್ಯವಸ್ಥೆಯ ವಿರುದ್ಧ ಹೋರಾಟಕ್ಕೆ ನಿಂತಿದ್ದಾರೆ. ಇದೊಂದು ಏಕಾಂಗಿ ಹೋರಾಟ. ನಮ್ಮಲ್ಲಿ ಅವರ ಜತೆ ನಿಂತು ಅವರಿಗೆ ಧೈರ್ಯ ತುಂಬಿ ಅವರ ಕಾರ್ಯವನ್ನು ಶ್ಲಾಘಿಸಲು ಹೇಡಿತನವಿದ್ದರೆ, ಪ್ರಾಣಭೀತಿಯಿದ್ದರೆ ಕೊನೆಯ ಪಕ್ಷ ಅಂಥಹ ಧೈರ್ಯಸ್ಥರ ವಿರುದ್ಧ ಮಾತಾಡುವ ಕೀಳು ಮಟ್ಟಕ್ಕಿಳಿಯಬೇಡಿ. ಬೆರಳೆಣಿಕೆಯ ಆ ಧೈರ್ಯಸ್ಥರನ್ನು ವಿರೋಧಿಸುವವರಿಗೆ ಪ್ರಾಯಃ ಹೆಚ್ಚಿನ ಲಾಭವಿರಬಹುದು. ಅಥವಾ ಅವರಿಗೆ ಇದುವರೆಗೂ ಬೇಧಭಾವದಿಂದ ಇತರರಿಗಿಂತ ಹೆಚ್ಚಿನದ್ದೇನನ್ನಾದರೂ ಕೊಟ್ಟುಕೊಂಡು ಪೋಷಿಸಿಕೊಂಡು ಬಂದಿರಬೇಕು. ಬೆರಳೆಣಿಕೆಯ ಕೆಲ ಧೈರ್ಯಸ್ಥರು ಒಂದು ವ್ಯವಸ್ಥೆಯ ವಿರುದ್ಧ ಹೋರಾಡಿ ಗೆಲುವು ಸಾಧಿಸಿದರೆ ಅದರ ಫಲವನ್ನು ಇಂದು ವಿರೋಧಿಸಿದ ನೀವುಗಳೆಲ್ಲರೂ ಕೂಡ ಪಡೆಯುತ್ತೀರಿ ಎನ್ನುವುದು ನೆನಪಿರಲಿ. ಅಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋರಾಟ ಮಾಡಿದಾಗಲೂ ಆ ಹೋರಾಟಗಾರರನ್ನು ವಿರೋಧಿಸಿದವರಿದ್ದರು, ಬ್ರಿಟಿಷರ ಪರವಾಗಿದ್ದವರಿದ್ದರು. ಸ್ವಾತಂತ್ರ್ಯ ಬಂದ ಬಳಿಕ ಅವರೂ ಈ ಸ್ವಾತಂತ್ರ್ಯವನ್ನು ಮತ್ತದರ ಫಲವನ್ನು ಚೆನ್ನಾಗಿಯೇ ಅನುಭವಿಸಿದರು. ನಮ್ಮ ಮನೆಗೇ ಬೆಂಕಿ ಬೀಳಲಿ ಆಗ ನಂದಿಸುತ್ತೇನೆ ಎನ್ನುವ ದುರಾಲೋಚನೆಯನ್ನು ಬಿಟ್ಟು ಆತನ ಮನೆಗೆ ಬಿದ್ದ ಬೆಂಕಿ ನನ್ನನ್ನೂ ಸುಡಬಲ್ಲುದು ಎನ್ನುವ ದೂರದೃಷ್ಟಿಯಿಂದ ಬೆಂಕಿಯನ್ನು ನಂದಿಸುವ ಕೆಲ ಬೆರಳೆಣಿಕೆಯವರ ಧೈರ್ಯಕ್ಕೆ ಪ್ರೋತ್ಸಾಹವಾಗಿ ಅವರ ಜತೆ ನಿಲ್ಲೋಣ.*

ಸರಕಾರವೆಂದರೆ ಬೇರಾರೂ ಅಲ್ಲ, ನಾನು, ನೀವುಗಳೇ ಎನ್ನುವುದನ್ನು ಮರೆಯದಿರೋಣ. ಪ್ರಜೆಗಳಿಂದ, ಪ್ರಜೆಗಳಿಗಾಗಿ ಮತ್ತು ಪ್ರಜೆಗಳಿಗೋಸ್ಕರ. ನಮ್ಮ ಹಣವನ್ನು ನಾವು ನಮಗಾಗಿ ನಾವು ಉಪಯೋಗಿಸಿಕೊಳ್ಳೋಣ.

Leave a Reply

Your email address will not be published. Required fields are marked *