Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕಳೆಗುಂದುತ್ತಿದ್ದ ಕಲಾ ವಿಭಾಗಕ್ಕೆ ಸ್ಫೂರ್ತಿಯ ಸಲೆಯಾಗಿದ್ದ ಡಾ| ಪದ್ಮನಾಭ ಭಟ್‍ ನಿವೃತ್ತಿ

*ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ

ಉಡುಪಿ: ವಿವಿಧ ಕಾರಣಗಳಿಂದ ಕಳೆಗುಂದುತ್ತಿದ್ದ ಕಲಾ ವಿಭಾಗದಲ್ಲಿ ಆಸಕ್ತಿ/ಅನಿವಾರ್ಯತೆಯಿಂದ ದಾಖಲಾದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಕೀಳರಿಮೆಗೆ ಒಳಗಾಗದಂತೆ ತಡೆದು, ತನ್ನಂಥೆಯೇ ಅವರನ್ನೂ ಬಹು ಆಯಾಮಗಳಲ್ಲಿ ತೊಡಗಿಸಿಕೊಂಡು ಸದಾ ಕ್ರಿಯಾಶೀಲರನ್ನಾಗಿರಿಸಿದ ಕೀರ್ತಿ, 3 ದಶಕಕ್ಕೂ ಹೆಚ್ಚು ಕಾಲ ಪ್ರಾಧ್ಯಾಪಕರಾಗಿ ಸೇವೆಗೈದು, ಸಂತ ಮೇರಿ ಕಾಲೇಜಿನಲ್ಲಿ ರಾಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥರಾಗಿ, ವಿವಿಯ ಪರೀಕ್ಷಾಂಗ, ಪಠ್ಯ ರಚನೆಯ ಉನ್ನತ ಹುದ್ದೆಗಳನ್ನು ಆಲಂಕರಿಸಿ ಇಂದು (ಜೂನ್ 30, 2018) ನಿವೃತ್ತಿ ಹೊಂದಿದ ಡಾ| ಎಸ್‍. ಪದ್ಮನಾಭ ಭಟ್‍ ಅವರದು.

ಸಾಹಿತ್ಯ, ಕಲೆ, ಸಂಸ್ಕೃತಿ ಅಧ್ಯಯನ, ಜಾನಪದ, ಸಂಶೋಧನೆ, ಪತ್ರಿಕೋದ್ಯಮ, ಅನ್ವಯಿಕ ಅರ್ಥಶಾಸ್ತ್ರ, ಆಡಳಿತ ಸುಧಾರಣೆ, ಅಭಿವೃದ್ಧಿ ರಾಜಕೀಯ, ಸಾಮಾಜಿಕ ಹೋರಾಟ, ಗ್ರಾಹಕ ಜಾಗೃತಿ, ಮಾನವ/ಮಾಹಿತಿ ಹಕ್ಕು, ಸಂವಿಧಾನ, ಮಾನವ ಸಂಪದ, ಹೀಗೆ ಹತ್ತು ಹಲವು ಆಯಾಮಗಳಲ್ಲಿ ತೊಡಗಿಸಿಕೊಂಡು ಅಪಾರ ಅಧ್ಯಯನ/ಅಧ್ಯಾಪನ ನಡೆಸಿದ್ದ ಭಟ್‍ ಅವರು, ವಿದ್ಯಾರ್ಥಿಗಳಿಗೂ ಈ ಎಲ್ಲ ರಂಗಗಳಲ್ಲಿನ ಅವಕಾಶಗಳ ಪರಿಚಯ ಮಾಡಿಕೊಡುವುದಷ್ಟೇ ಅಲ್ಲದೆ ಶಿಕ್ಷಣ ಪೂರೈಸಿ ತೆರಳಿದ ಬಳಿಕವೂ ಸತತ ಮಾರ್ಗದರ್ಶನ ನೀಡುತ್ತ ಮಾದರಿ ಪ್ರಾಧ್ಯಾಪಕರಾಗಿ ಗುರುತಿಸಿಕೊಂಡವರು.

“ಆ ನೋ ಭದ್ರಾಃ ಕ್ರತವೋ ಯಂತು ವಿಶ್ವತಃ” ಇದು ಶಿರ್ವದ ಸಂತ ಮೇರಿ ಕಾಲೇಜಿನ ಕಲಾ ವಿಭಾಗಕ್ಕೆ ದಾಖಲಾದ ನನ್ನ ರಾಜ್ಯಶಾಸ್ತ್ರದ ಮೊದಲ ತರಗತಿಯಲ್ಲಿ ಡಾ| ಎಸ್‍. ಪದ್ಮನಾಭ ಭಟ್‍ ಅವರು ಉಚ್ಚರಿಸಿದ ಮೊದಲ ವಾಕ್ಯೋಕ್ತಿ. ಉದಾತ್ತ ವಿಚಾರಗಳು ಎಲ್ಲೆಡೆಯಿಂದ ಬರಲಿ ಎಂಬರ್ಥದ ಋಗ್ವೇದದ ಈ ಸಾಲಿನಲ್ಲೇ ಕಲಾ ವಿಭಾಗದ ಮಹತ್ವವನ್ನು ಮೊಟ್ಟ ಮೊದಲ ಬಾರಿಗೆ ತೃತೀಯ ದರ್ಜೆಯ ವಿದ್ಯಾರ್ಥಿಗಳು ಎಂದು ಭಾವಿಸಿದ್ದ ನಮಗೆ, ನಾವೂ ಯಾವ ದರ್ಜೆಗೂ ಸೀಮಿತವಾಗದ ವಿಶ್ವದರ್ಜೆಯವರು ಎಂದು ಮನವರಿಕೆ ಮಾಡಿಸಿ ಮನಸ್ಥೈರ್ಯ ಮೂಡಿಸಿದವರು ಅವರು. ಎಲ್ಲೆಡೆಗಳಿಂದ ಜ್ಞಾನ ಪಡೆದು ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂಬುದು ಅವರು ವಾದವಾಗಿತ್ತು. ಇಂಗ್ಲಿಷಿನ ಗಂಧ ಗಾಳಿಯೇ ಇಲ್ಲದ ನಮಗೆ ಎಲ್ಲ ಪ್ರಾಧ್ಯಾಪಕರು ಇಂಗ್ಲಿಷಿನಲ್ಲೇ ಪಾಠ ಮಾಡುತ್ತಾರಾ ಎಂಬ ಆತಂಕವಿದ್ದಾಗ ಇವರು ಇಂಗ್ಲಿಷ್‍ನ ಜತೆಯಲ್ಲಿ ನಮ್ಮಿಷ್ಟದ ಕನ್ನಡದಲ್ಲೂ ಬಹಳ ಆಕರ್ಷಕವಾಗಿ ಪಾಠ ಮಾಡಿದ್ದನ್ನು ಕಂಡು ಬಹಳ ಸಂತಸವಾಯಿತು. ಆಗ ಅವರ ಬಗ್ಗೆ ನಮಗೇನೂ ತಿಳಿದಿರಲಿಲ್ಲ. ಆದರೆ ಅವರ ಜ್ಞಾನ ಹಾಗೂ ಸಾಧನೆಯ ನಿಜವಾದ ಪರಿಚಯವಾದುದು ಗ್ರಂಥಾಲಯಕ್ಕೆ ಹೋದಾಗ.

ಪಾಠಗಳಿಗೆ ಸಂಬಂದಿಸಿದಂತೆ ಆಕರ ಗ್ರಂಥಗಳನ್ನು ಪಡೆಯಲು ಗ್ರಂಥಾಲಯಕ್ಕೆ ಹೋದೆವು. ಅಲ್ಲಿ ಶ್ರೀ ಶ್ರೀಧರ ಹೆಗ್ಡೆ ಅವರು ಗ್ರಂಥ ಪಾಲಕರು. ಭಾರೀ ಶಿಸ್ತಿನ ವ್ಯಕ್ತಿ. ಗ್ರಂಥಾಲಯದಲ್ಲಿ ಯಾರೂ ತುಟಿ ಪಿಟಿಕ್ಕೆನ್ನಲಿಕ್ಕಿರಲಿಲ್ಲ. ಪುಸ್ತಕ ಪಡೆಯುವವರು ಆದಷ್ಟು ಕಡಿಮೆ ಸ್ವರದಲ್ಲಿ ಮಾತನಾಡಬೇಕು. ಅದೂ ರೆಫರೆನ್ಸ್ ಪುಸ್ತಕ ಪಡೆಯುವವರು ಫಾರ್ಮ್‍ ತುಂಬಿಸಿ ಪುಸ್ತಕಗಳು ಮತ್ತು ಆಥರ್ ಹೆಸರು ಬರೆದು ಬಾಕ್ಸ್ ಗೆ ಹಾಕಿ ಹೋಗಬೇಕು. ನೊಟೀಸ್‍ ಬಂದ ಬಳಿಕ ಹೋಗಿ ಅವುಗಳನ್ನು ಪಡೆದುಕೊಳ್ಳಬೇಕು. ಎಲ್ಲ ಪುಸ್ತಕಗಳ ಆಥರ್ ಗಳ ಹೆಸರನ್ನು ಬರೆದೆವು. ರಾಜ್ಯಶಾಸ್ತ್ರಕ್ಕೆ ಯಾರು ? ಇದು ನಮ್ಮೆಲ್ಲರ ಪ್ರಶ್ನೆ. ಹೆಗ್ಡೆಯವರಲ್ಲಿ ಕೇಳಿದಾಗ ಅವರು ಹೇಳಿದ್ದಿಷ್ಟು-ರಾಜ್ಯ ಶಾಸ್ತ್ರದ ಎಲ್ಲ ಪುಸ್ತಕಗಳ ಮುಂದೆ ನಿಮ್ಮ ಪ್ರೊಫೆಸರ್ ಹೆಸರೇ ಬರೆಯಿರಿ. ನಮಗೆ ಆಶ್ವರ್ಯ ! ಆದರೂ ಮರುಪ್ರಶ್ನಿಸದೆ ಫಾರ್ಮ್‍ ತುಂಬಿಸಿ ಬಂದೆವು.

ಪುಸ್ತಕ ಬಂದಾಗಲೇ ಕೆಲವು ಪುಸ್ತಕಗಳನ್ನು ಪದ್ಮನಾಭ ಭಟ್ ಅವರೇ ಬರೆದಿದ್ದರೆ, ಉಳಿದವುಗಳನ್ನು ಅವರು ಕನ್ನಡಕ್ಕೆ ಅನುವಾದಿಸಿದ್ದರು. ಅದರಲ್ಲಿ ಗ್ರಂಥಕರ್ತರ ಬಗ್ಗೆ ಇದ್ದ ಮಾಹಿತಿಯನ್ನು ಓದಿದಾಗ ಅವರ ಬಗ್ಗೆ ನಮಗೆ ಸಂಪೂರ್ಣವಾಗಿ ತಿಳಿಯಿತು. ತನ್ನ ಬಗ್ಗೆ ಒಂದಿಷ್ಟೂ ಹೇಳಿಕೊಳ್ಳದೆ, ಸರಳ ನಡೆನುಡಿಯಿಂದಲೇ ತನ್ನ ವ್ಯಕ್ತಿತ್ವದ ದರ್ಶನ ಮಾಡಿಸಿದವರು ಡಾ| ಪದ್ಮನಾಭ ಭಟ್‍.

ಡಾ| ಪದ್ಮನಾಭ ಭಟ್‍ ಅವರ ಮಾರ್ಗದರ್ಶನದಲ್ಲಿ ಸಂತ ಮೇರಿ ಕಾಲೇಜಿನ ಕಲಾ ವಿಭಾಗ ಉಳಿದ ಯಾವ ವಿಭಾಗಗಳಿಗೂ ಕಡಿಮೆ ಇಲ್ಲದಂತಿತ್ತು. ಉಳಿದ ವಿಭಾಗದವರು ಕಲಾ ವಿಭಾಗವನ್ನು ಬಿಟ್ಟು ಯಾವುದೇ ಕಾರ್ಯಕ್ರಮ ನಡೆಸಲು ಸಾಧ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ ಅವರು ನಮ್ಮನ್ನು ತಯಾರು ಮಾಡಿದ್ದರು. ಪಠ್ಯೇತರ ಚಟುವಟಿಕೆಗಳಲ್ಲಿ ಅವರು ಎಷ್ಟು ತೊಡಗಿಸಿಕೊಂಡಿದ್ದರೋ, ಅಷ್ಟೇ ಪ್ರಮಾಣದಲ್ಲಿ ಗಂಭೀರ ಅಧ್ಯಯನ/ಅಧ್ಯಾಪನದಲ್ಲೂ ತೊಡಗಿದ್ದರು. ಪಾಠ-ಪರೀಕ್ಷೆ-ಹಾಜರಿ-ಅಂಕ ಇದರಲ್ಲಿ ಅವರದು ಯಾವುದೇ ರಾಜಿ ಇರಲಿಲ್ಲ.

ರಾಜ್ಯಶಾಸ್ತ್ರಜ್ಞರ ಯಾದಿಯಲ್ಲಿ ಅಗ್ರ ಸ್ಥಾನದಲ್ಲಿರುವ ಪದ್ಮನಾಭ ಭಟ್‍ ಅವರು ರಾಜಕೀಯ, ಆಡಳಿತ ಸುಧಾರಣೆಯ ನಿಟ್ಟಿನಲ್ಲಿ ತನ್ನದೇ ಕೊಡುಗೆ ನೀಡಿದ್ದಾರೆ. ಯಾವುದೇ ರಾಜಕೀಯ ಸಿದ್ಧಾಂತಗಳಿಗೆ ಕಟ್ಟುಬೀಳದೆ ಅಭಿವೃದ್ಧಿ ರಾಜಕೀಯದ ಪ್ರತಿಪಾದನೆಯನ್ನು ಅವರು ಸಮರ್ಥವಾಗಿ ಮಾಡಿದ್ದಾರೆ. ಕೇವಲ ಪಾಠ/ಸಂಶೋಧನೆಗೇ ಸೀಮಿತವಾಗದೆ ವ್ಯವಸ್ಥೆಯ ಜಡತೆಯನ್ನು ಝಾಡಿಸುವಲ್ಲಿ ಗ್ರಾಹಕ ಹಕ್ಕು/ಮಾಹಿತಿ ಹಕ್ಕು ಕಾರ್ಯಕರ್ತರಾಗಿಯೂ ಅವರು ಕೆಲಸ ಮಾಡಿದ್ದಾರೆ. ಒಟ್ಟಿನಲ್ಲಿ ಪುಸ್ತಕಗಳ ಜ್ಞಾನವನ್ನು ಪ್ರಾಯೋಗಿಕವಾಗಿಯೂ ಅನ್ವಯಿಸಿ ಸಮಾಜಮುಖಿಯಾಗಿಯೂ ಮುನ್ನಡೆಯುತ್ತಿದ್ದಾರೆ.

ವಿಧಾನ ಸಭೆ ಚುನಾವಣೆಯಲ್ಲಿ ಜಿಲ್ಲಾಧಿಕಾರಿ-ಜಿಲ್ಲಾ ಚು. ಅಧಿಕಾರಿಗಳು ನಿಯಮ ಉಲ್ಲಂಘಿಸಿ ನಿವೃತ್ತಿಗೆ 6 ತಿಂಗಳು ಒಳಗಿರುವವರನ್ನು ಚು. ಕರ್ತವ್ಯಕ್ಕೆ ನಿಯೋಜನೆ ಮಾಡಿದ ಬಗ್ಗೆ ದಾಖಲೆ ಸಹಿತ ಹೋರಾಟ ನಡೆಸಿದ ಅವರು ನಿವೃತ್ತಿ ಬಳಿಕ ಆ ಹೋರಾಟವನ್ನು ಕಾನೂನಾತ್ಮಕವಾಗಿ ಮುನ್ನಡೆಸುವ ಛಲ ಹೊಂದಿದ್ದಾರೆ. ಗ್ರಾಹಕರ ಹಕ್ಕುಗಳು, ಮಾನವ ಹಕ್ಕುಗಳ ಬಗ್ಗೆ, ಕಾನೂನುಗಳ ಬಗ್ಗೆ ತಜ್ಞತೆಯನ್ನು ಹೊಂದಿರುವ ಅವರು ಮುಂದೆ ಈ ಜ್ಞಾನವನ್ನು ಪ್ರಾಯೋಗಿವಾಗಿ ಅನ್ವಯಿಸುವುದರ ಜತೆಗೆ ನಮ್ಮಂಥವರಿಗೆ ಮಾರ್ಗದರ್ಶಕರಾಗಿ ಮುನ್ನಡೆಯಲಿ ಎಂಬ ಹಾರೈಕೆ ನನ್ನದು.

Leave a Reply

Your email address will not be published. Required fields are marked *