Realtime blog statisticsweb statistics
udupibits.in
Breaking News
ಉಡುಪಿ: ಅಂಚೆ ಕಚೇರಿಗಳಲ್ಲಿ ಇಂಡಿಯನ್ ಪೋಸ್ಟಲ್ ಆರ್ಡರ್ ಅಲಭ್ಯತೆ- ಸಮಸ್ಯೆ ಪರಿಹರಿಸಲು ಮಾಹಿತಿ ಹಕ್ಕು ಕಾರ್ಯಕರ್ತರಿಂದ ಪ್ರಧಾನಿಗೆ ಪತ್ರ

ಉಡುಪಿ-ಕಾರ್ಕಳ ಹೆದ್ದಾರಿಯಲ್ಲಿ ಅಪಾಯಕಾರಿ ರೀತಿಯಲ್ಲಿ ಬಂಡೆಕಲ್ಲು ಸಾಗಾಟ: ಅಧಿಕಾರಿಗಳ ಜಾಣಮೌನ !

ಉಡುಪಿ: ಉಡುಪಿ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಅಪಾಯಕಾರಿ ರೀತಿಯಲ್ಲಿ ಬಂಡೆಕಲ್ಲುಗಳನ್ನು ಸಾಗಾಟ ಮಾಡುವ ಪ್ರಕ್ರಿಯೆ ನಿತ್ಯ ನಿರಂತರವಾಗಿ ನಡೆಯುತ್ತಿದ್ದು, ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಮೌನ ವಹಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.

ಹೀಗೆ ಅಪಾಯಕಾರಿ ರೀತಿಯಲ್ಲಿ ಬಂಡೆಕಲ್ಲುಗಳನ್ನು ಸಾಗಾಟ ಮಾಡುವ ಲಾರಿಗಳ ಹಿಂಬದಿಯಲ್ಲಿ ನಂಬರ್ ಪ್ಲೇಟ್ ಇರುವುದಿಲ್ಲ ಮತ್ತು ಮುಂಬದಿಯಲ್ಲಿ ಇರುವ ನಂಬರ್ ಪ್ಲೇಟ್ ಗಳಲ್ಲಿ ನಮೂದಾಗಿರುವ ನಂಬರ್ ಗಳು ಅಪೂರ್ಣವಾಗಿರುತ್ತದೆ. ಈ ಅಪೂರ್ಣವಾಗಿರುವ ನಂಬರ್ ಗಳು ಸಹ ನಿಜಕ್ಕೂ ಅಸಲಿ ನಂಬರ್ ಗಳೋ, ನಕಲಿ ನಂಬರ್ ಗಳೋ ಎಂಬುದು ಸಹ ಶಂಕೆಗೆ ಮೂಲವಾಗಿದೆ.

ಅಪೂರ್ಣವಾಗಿರುವ ನಂಬರ್ ಗಳನ್ನು ಸಂಬಂಧಿಸಿದವರಿಗೆ ನೀಡಿದರೂ, ಅಧಿಕಾರಿಗಳು ತನಿಖೆ ನಡೆಸುವ ಹಂತದಲ್ಲಿ ಮೊದಲಿದ್ದ ನಂಬರ್ ಪ್ಲೇಟ್ ಗಳನ್ನು ತೆಗೆದಿರಿಸಿ, ಬೇರೆಯೇ ಆದ ನಂಬರ್ ಪ್ಲೇಟ್ ಗಳನ್ನು ಅಳವಡಿಸಿ ಯಾಮರಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಬಂಡೆಕಲ್ಲುಗಳನ್ನು ಅಪಾಯಕಾರಿ ರೀತಿಯಲ್ಲಿ ಲಾರಿಗಳಲ್ಲಿ  ಸಾಗಾಟ ಮಾಡುತ್ತಿರುವ ವಿಷಯ ಸ್ಥಳೀಯ ಪೊಲೀಸರಿಗೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟವಾಗಿ ಗೊತ್ತಿದೆಯಾದರೂ, ಇವರಿಗೆಲ್ಲ ಸಂಬಂಧಿಸಿದ ಉದ್ಯಮಿಗಳು ಮಾಮೂಲಿ ಸಂದಾಯ ಮಾಡುತ್ತಿರುವುದರಿಂದ, ಅಧಿಕಾರಿಗಳೆಲ್ಲ ಜಾಣಮೌನ ವಹಿಸುತ್ತಾರೆ ಎಂದು ಹೇಳಲಾಗುತ್ತಿದೆ.

ಲಾರಿಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಬೃಹತ್ ಬಂಡೆಕಲ್ಲುಗಳನ್ನು ಸಾಗಾಟ ಮಾಡುವುದರಿಂದಾಗಿ, ಇಂಥ ಲಾರಿಗಳ ಹಿಂಬದಿಯಲ್ಲಿ ಬರುವ ಇತರ ವಾಹನಗಳ ಸವಾರರು ಜೀವ ಕೈಯ್ಯಲ್ಲಿ ಹಿಡಿದುಕೊಂಡೇ ವಾಹನ ಚಲಾಯಿಸುವ ಆತಂಕದ ಪರಿಸ್ಥಿತಿ ಸೃಷ್ಟಿಯಾಗಿದೆ. ಅನಾಹುತ ನಡೆಯುವ ತನಕ ಜಿಲ್ಲಾಡಳಿತದ ಯಾವನೇ ಒಬ್ಬ ಅಧಿಕಾರಿಯೂ ಎಚ್ಚೆತ್ತುಕೊಳ್ಳುವ ಸಾಧ್ಯತೆ ಇಲ್ಲ, ಇದು ದುರಂತ ಎಂದು ಸಾರ್ವಜನಿಕರು ತೀವ್ರ ಖೇದ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *