Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕಾಸರಗೋಡು ಕನ್ನಡಿಗರ ಅಗ್ರಗಣ್ಯ ಹೋರಾಟಗಾರ, ಅಪ್ರತಿಮ ಸಂಘಟಕ, ಸಾಹಸೀ ಪತ್ರಕರ್ತ, ‘ನಾಡಪ್ರೇಮಿ’ ಎಂ.ವಿ.ಬಳ್ಳುಳ್ಳಾಯ ಇನ್ನಿಲ್ಲ… ಮರೆಯಲಾಗದ, ಮರೆಯಬಾರದ ಮಹಾನುಭಾವನ ನೆನಪಿನಲ್ಲಿ ನುಡಿನಮನ

* ಶ್ರೀರಾಮ ದಿವಾಣ.

# ವಾರಕ್ಕೊಂದು ಬಾರಿಯಂತೆ, ತಪ್ಪಿದರೆ ಎರಡು ವಾರಕ್ಕೊಮ್ಮೆಯಾದರೂ ಎಂ.ವಿ. ಬಳ್ಳುಳ್ಳಾಯರನ್ನು ನಾನು ಭೇಟಿಯಾಗುತ್ತಿದ್ದೆ. ನಾವಿಬ್ಬರೂ ಜೊತೆಯಾಗಿ ಕುಳಿತು ಎರಡು ಮೂರು ಗಂಟೆಗಳ ಕಾಲ ಆತ್ಮೀಯವಾಗಿ ಹರಟುತ್ತಿದ್ದೆವು. ಅವರಿರುವಲ್ಲಿಗೆ ಹೋಗಿ ವಾಪಾಸ್ ಹೊರಡುವವರೆಗೂ ನಮ್ಮಿಬ್ಬರ ಬಾಯಿಯೂ ಬಂದ್ ಆಗುತ್ತಿರಲಿಲ್ಲ. ಅಷ್ಟೂ ಮಾತು-ಕತೆ. ಇನ್ನು ಮುಂದೆ ಇದು ಸಾಧ್ಯವಿಲ್ಲ. ಬಳ್ಳುಳ್ಳಾಯರು ಇನ್ನಿಲ್ಲ.

ಎಂ.ವಿ. ಬಳ್ಳುಳ್ಳಾಯರು ಒಂದು ಸಮುದ್ರವಿದ್ದಂತೆ. ಸಮುದ್ರದಂತೆಯೇ ಬಳ್ಳುಳ್ಳಾಯರಲ್ಲಿಯೂ ಪ್ರಕ್ಷುಬ್ದತೆ ಇತ್ತು, ಅದಕ್ಕೂ ಮಿಗಿಲಾಗಿ ಪ್ರಶಾಂತೆಯೂ ಇತ್ತು. ಹೊರಗೆ, ಮೇಲ್ನೋಟಕ್ಕೆ, ಮೊದ ಮೊದಲಿಗೆ ಅವರೊಂದು ಅಬ್ಬರದ ಭರತ, ಭೋರ್ಗರೆತ. ಹತ್ತಿರಕ್ಕೆ ಹತ್ತಿರಕ್ಕೆ ಹೋದಂತೆ, ಅವರ ಮನದಾಳಕ್ಕೆ ಇಳಿದಂತೆ, ಅವರು ಅವರ ನಮ್ಮನ್ನು ಮನದಾಳಕ್ಕೆ ಇಳಿಯಬಿಟ್ಟರೆ, ಆ ಅವಕಾಶ ಪಡೆದುಕೊಂಡ ಭಾಗ್ಯವಂತರ ಅರಿವಿಗೆ ಮಾತ್ರ ಬರುವಂಥದ್ದು ಅವರೊಳಗಿನ ಆಪ್ತತೆ, ನಿಜವಾದ ಆತ್ಮೀಯತೆ, ಸಾಗರದ ನಡುವಿನ ಶಾಂತತೆ.

ಅವರ ಮನಸ್ಸಿಗೆ ಹತ್ತಿರದವನಾಗುವ ಭಾಗ್ಯ ನನ್ನ ಪಾಲಿಗೆ ಒದಗಿಬಂದಿತ್ತು. ಇದು ಅದೃಷ್ಟವೂ ಹೌದು, ನನಗಾದ ಸೋಜಿಗವೂ ಹೌದು. ಹಾಗೆ ತಡವಾಗಿ ಸಿಕ್ಕಿದ ಬಳ್ಳುಳ್ಳಾಯರೆಂಬ ಭಾಗ್ಯ ಇಷ್ಟು ಬೇಗ ಹೀಗೆ ಕಣ್ಮರೆಯಾಗಿಬಿಡುತ್ತದೆ ಊಹನೆಯೇ ನನಗಾಗಿರಲಿಲ್ಲ. ಊಹಿಸುವಂಥ ಯಾವ ಘಟನೆಯೂ ನನ್ನ ಹಾಗೂ ಅವರ ಕೊನೆಯ ಭೇಟಿಯ ದಿನದವರೆಗೂ ಆಗಿರಲಿಲ್ಲ. ಅದು ಹಾಗೆಲ್ಲ ಆಗುವಂಥದ್ದೂ ಅಲ್ಲ, ಬಿಡಿ.

ಎಂ.ವಿ. ಬಳ್ಳುಳ್ಳಾಯರು ಸಾಮಾನ್ಯರಲ್ಲ, ಅಸಾಮಾನ್ಯ ವ್ಯಕ್ತಿತ್ವದವರಾದರೂ ಅವರಿದ್ದುದು ಮಾತ್ರ ಸಾಮಾನ್ಯರಲ್ಲಿ ಸಾಮಾನ್ಯರಂತೆಯೇ. ಕಾಸರಗೋಡು ಕನ್ನಡಿಗರ ಅಗ್ರಗಣ್ಯ ಹೋರಾಟಗಾರರು ಇವರು. ಕಾಸರಗೋಡು ಕನ್ನಡಿಗರ ನಿಜವಾದ ಹೋರಾಟದಲ್ಲಿ ಕಾಸರಗೋಡು ಕನ್ನಡಿಗರ ಕಣ್ಮಣಿಯಾಗಿದ್ದ, ಕಾಸರಗೋಡು ಕನ್ನಡಿಗರಿಗಾಗಿ ತಮ್ಮ ಅಮೂಲ್ಯ ಜೀವನವನ್ನು ಶ್ರೀಗಂಧದಂತೆ ತೇಯ್ದುಕೊಂಡ ಕಳ್ಳಿಗೆ ಮಹಾಬಲ ಭಂಡಾರಿಯವರ ಬಲಗೈ ಆಗಿದ್ದವರು ಇದೇ ಬಳ್ಳುಳ್ಳಾಯರು. ತನ್ನ ಅಮೂಲ್ಯವಾದ ವ್ಯಕ್ತಿಗತ ಬದುಕನ್ನು ಬದಿಗಿಟ್ಟು ಕಾಸರಗೋಡು ಕನ್ನಡಿಗರ ಹೋರಾಟಕ್ಕಾಗಿಯೇ ”ನಾಡಪ್ರೇಮಿ” ಎಂಬ ವಾರಪತ್ರಿಕೆಯನ್ನು ಆರಂಭಿಸಿ, ಕಾಸರಗೋಡು ಕನ್ನಡದ, ಕನ್ನಡಿಗರ ಹೋರಾಟದ ಮುಖವಾಣಿಯನ್ನಾಗಿಸಿ ಸುಧೀರ್ಘ ಕಾಲ ಮುನ್ನಡೆಸಿದ ದಟ್ಟ, ಧೀಮಂತ, ಶ್ರೀಮಂತ, ಪ್ರಾಮಾಣಿಕ ಪತ್ರಕರ್ತರಾಗಿ ಒಮದು ಕಾಲದ ಕಾಸರಗೋಡು ಕನ್ನಡಿಗರ ಮನದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ”ನಾಡಪ್ರೇಮಿ ಬಳ್ಳುಳ್ಳಾಯರೆಂದರೆ ಇವರೆ.

ಅಂದಿನ ಕಾಸರಗೋಡು ಕನ್ನಡಿಗರ ಮಾತಿನಲ್ಲಿ, ಮನೆಯಲ್ಲಿ, ಮನದಲ್ಲಿ ಎಂ.ವಿ.ಬಳ್ಳುಳ್ಳಾಯರ ಹೆಸರು ಬೆರೆತಿತ್ತು. ಇಂದಿನ ಅನೇಕರು, ಪ್ರಸ್ತುತ ಹೋರಾಟ ನಡೆಸುತ್ತಿರುವವರೇ ಮರೆತ ಹೆಸರು ಎಂ.ವಿ. ಬಳ್ಳುಳ್ಳಾಯ. ದಾಮೋದರ ಅಗ್ಗಿತ್ತಾಯರನ್ನು ಬೇಗನೇ ಮರೆತರೆ, ಬಳ್ಳುಳ್ಳಾಯರನ್ನು ನಿಧಾನವಾಗಿ ಮರೆತರು. ಹೀಗಾಗಿ ಹಲವರ ಪಾಲಿಗೆ ಬಳ್ಳುಳ್ಳಾಯರು ನಿಧನರಾಗಿ ದಶಕವೇ ಕಳೆಯಿತು. ”ಏನು, ದಿವಾಣ ಏನೇನೋ ಬರೆಯುತ್ತಿದ್ದಾನೆ !” ಎಂದೆನಿಸಬಹುದು ಕೆಲವರಿಗೆ. ಇಲ್ಲ, ನನ್ನಂಥವರಿಗೆ, ನನ್ನಂಥೆಯೇ ಬಳ್ಳುಳ್ಳಾಯರಿಗೆ ಹತ್ತಿರದವರಾಗಿರುವ, ಆಪ್ತ ಒಡನಾಟದಲ್ಲಿದ್ದ ಎಂ.ಕೆ.ಮಠ ಅವರಂಥವರಿಗೆ ಮಾತ್ರ ಆಶ್ಚರ್ಯವಾಗದು. ಇರಲಿ…

* ಬಳ್ಳುಳ್ಳಾಯರ ಜೊತೆಗೊಂದು ಸೆಲ್ಫಿ

ವಿದ್ಯಾರ್ಥಿ ನಾಯಕ ವಾಸುದೇವ

೧೯೩೯, ನವೆಂಬರ್ ೩೦ರಂದು ಅಂದಿನ ಮದರಾಸು ಪ್ರಾಂತ್ಯದ ಕಾಸರಗೋಡು ತಾಲೂಕಿನ ಮುಳಿಯಾರು ಗ್ರಾಮದ ಮೂಡುಮನೆಯಲ್ಲಿ ಸುಬ್ರಾಯ ಬಳ್ಳುಳ್ಳಾಯ ಹಾಗೂ ಭಾಗೀರಥಿ ಅಮ್ಮನವರ ಕೊನೆಯ ಮಗನಾಗಿ ಜನಿಸಿದ ವಾಸುದೇವ ಅವರೇ, ಇಂದಿನ ಎಂ.ವಿ.ಬಳ್ಳುಳ್ಳಾಯ ಅಥವಾ ಮೂಡುಮನೆ ವಾಸುದೇವ ಬಳ್ಳುಳ್ಳಾಯ. ತಂದೆ ಸುಬ್ರಾಯ ಬಳ್ಳುಳ್ಳಾಯರೇ ಸ್ಥಾಪನೆ ಮಾಡಿದ ಕೋಟೂರು ಶ್ರೀ ಕಾರ್ತಿಕೇಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನೂ, ಕಾಸರಗೋಡು ಬಿ.ಇ.ಎಂ. ಪ್ರೌಢಶಾಲಾ ವಿದ್ಯಾಭ್ಯಾಸವನ್ನೂ ಮಾಡಿದ ಎಂ.ವಿ.ಬಳ್ಳುಳ್ಳಾಯರು, ಪ್ರೌಢಶಾಲೆಯಲ್ಲಿ ಕಲಿಯುತ್ತಿರುವಾಗಲೇ ಕಾಸರಗೋಡು ಕನ್ನಡಿಗರ ಅಳಿವು ಉಳಿವಿನ ಹೋರಾಟವೆಂದು ಅಂದು ಪರಿಗಣಿಸಿದ್ದ ”ಕಾಸರಗೋಡು ಕರ್ನಾಟಕ ಪ್ರಾಂತೀಕರಣ ಹೋರಾಟ”ಕ್ಕಾಗಿ ತಮ್ಮ ದೇಹವನ್ನೂ, ಮನಸ್ಸನ್ನೂ ಇಡಿಯಾಗಿ ಸಮರ್ಪಿಸಿಕೊಂಡ ತ್ಯಾಗಜೀವಿ.

ಕನ್ನಡಿಗರಿಗಾಗಿ ಜೈಲುಪಾಲಾದ ಹೋರಾಟಗಾರ ಬಳ್ಳುಳ್ಳಾಯ

ಅಚ್ಚ ಕನ್ನಡ ಪ್ರದೇಶವಾಗಿದ್ದ ಕಾಸರಗೋಡು ಕರ್ನಾಟಕದಲ್ಲೇ ಉಳಿಯಬೇಕು, ಯಾವುದೇ ಕಾರಣಕ್ಕೂ ಕೇರಳದೊಂದಿಗೆ ಸೇರಿಸಲೇಬಾರದು ಎಂಬ ಪರಮಗುರಿಯೊಂದಿಗೆ ೧೯೫೬-೫೭ರ ಅವಧಿಯಲ್ಲಿ ಕನ್ನಡಿಗರ ಚಳುವಳಿ ಆರಂಭವಾದಾಗ, ನೇರಾನೇರ ಚಳುವಳಿಗೆ ಧುಮುಕಿದ ಬಳ್ಳುಳ್ಳಾಯರು, ಆಗ ಬಿ.ಇ.ಎಂ.ಹೈಸ್ಕೂಲಿನ ವಿದ್ಯಾರ್ಥಿ ನಾಯಕರಾಗಿದ್ದವರು. ವಿದ್ಯಾರ್ಥಿ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡ ಕಾರಣಕ್ಕೆ, ಹೋರಾಟದ ತರುವಾಯ ಮನೆಯಿಂದ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮಾರ್ಗದ ಮಧ್ಯದಿಂದ ಬಳ್ಳುಳ್ಳಾಯರನ್ನು ಪೊಲೀಸರು ಬಂಧಿಸಿ, ಥಳಿಸಿ, ಜೈಲಿಗೆ ತಳ್ಳಿದ್ದರು. ೧೫ ದಿನಗಳ ಕಾಲ ಕಾಸರಗೋಡು ಜೈಲಿನಲ್ಲೂ, ಬಳಿಕ ಮಂಗಳೂರು ಜೈಲಿನಲ್ಲೂ ಬಳ್ಳುಳ್ಳಾಯರು ಕಾಸರಗೋಡು ಕನ್ನಡಿಗರಿಗಾಗಿ ಸೆರೆಮನೆವಾಸ ಅನುಭವಿಸಿದ್ದರು.

ವಿದ್ಯಾರ್ಥಿ ನಾಯಕನಾಗಿದ್ದಾಗಲೇ ಹೋರಾಟಗಾರನಾಗಿ ಚಳುವಳಿಗೆ ಧುಮುಕಿ, ಜೈಲುವಾಸ ಅನುಭವಿಸಿ ಬಿಡುಗಡೆಯಾಗಿ ಹೊರಬಂದ ಬಳಿಕ, ಬಳ್ಳುಳ್ಳಾಯರು ಹೋರಾಟರಂಗಕ್ಕೇ ತಮ್ಮನ್ನು ಸಮರ್ಪಿಸಿಕೊಂಡರು. ನಂತರ ಜೀವನ ನಿರ್ವಹಣೆಗಾಗಿ ಒಂದೆರಡು ವರ್ಷ ಮಂಗಳೂರು- ಕಾಸರಗೋಡು-ಮಡಿಕೇರಿ-ಪುತ್ತೂರು ಕಡೆಗೆ ಸಂಚರಿಸುವ ಬಸ್‌ಗಳ ಜೋಯಿಂಟ್ ಬುಕ್ಕಿಂಗ್ ಸಂಸ್ಥೆಗಳ ತನಿಖಾಧಿಕಾರಿಯಾಗಿ ವೃತ್ತಿನಿರತರಾದವರು.

ಕಾಸರಗೋಡು ಕನ್ನಡಪರ ಚಳುವಳಿ ಮುಂದುವರಿದೇ ಇತ್ತು. ಚಳುವಳಿಗೆ ನೇತೃತ್ವ ನೀಡಲು ಸ್ಥಾಪಿಸಿದ ಕರ್ನಾಟಕ ಸಮಿತಿಯ ಸಂಚಾಲಕನಾಗಿ ಸುಧೀರ್ಘ ೧೧ ವರ್ಷಗಳ ಕಾಲ ಕನ್ನಡಿಗರ ಧೀರೋದಾತ್ತವಾದ, ರಾಜಿರಹಿತ ಹೋರಾಟಕ್ಕೆ ಕಳ್ಳಿಗೆ ಮಹಾಬಲ ಭಂಡಾರಿಯವರ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟವರು, ನೇತೃತ್ವ ನೀಡಿದ ಸಾಹಸಿ ನಮ್ಮ ಬಳ್ಳುಳ್ಳಾಯರು. ಹೋರಾಟಕ್ಕೆ ಮಾಧ್ಯಮೊಂದರ ಸಹಾಯ-ಸಹಭಾಗಿತ್ವ, ಸಹಕಾರದ-ಬೆಂಬಲದ ಮುಖವಾಣಿಯ ಅವಶ್ಯಕತೆಯನ್ನು ಕಳ್ಳಿಗೆ-ಬಳ್ಳುಳ್ಳಾಯರ ಜೋಡಿ ಮನಗಂಡಾಗ, ಇದರ ಜವಾಬ್ದಾರಿಯನ್ನು ಹೊತ್ತುಕೊಂಡು ”ನಾಡಪ್ರೇಮಿ”ಯನ್ನು ಆರಂಭಿಸಿ ಎಂಟು ವರ್ಷಗಳ ಕಾಲ ಮುನ್ನಡೆಸಿದರು. ಆಗ ಎಂ.ವಿ. ಬಳ್ಳುಳ್ಳಾಯರಿಗೆ ಹೆಗಲಿಗೆ ಹೆಗಲಾಗಿದ್ದವರು ಬೈಲಂಗಡಿ ದಾಮೋದರ ಅಗ್ಗಿತ್ತಾಯ. ಇವರನ್ನು ಇಲ್ಲಿ ನೆನಪಿಸಿಕೊಳ್ಳುವುದು ಸೂಕ್ತವೆಏ ಆಗಿದೆ. ಹೋರಾಟ ಮತ್ತು ನಾಡಪ್ರೇಮಿ ಎರಡರ ಜೊತೆಗೂ ಇದ್ದು ಕಷ್ಟ ನಷ್ಟ ಅನುಭವಿಸಿದವರು ಗಣಪತಿ ದಿವಾಣ, ವಿಚಿತ್ರ ಏತಡ್ಕ ಮುಂತದವರು. ಇವರನ್ನೆಲ್ಲ ಮರೆಯಲುಂಟೆ ?, ಮರೆಯಬಹುದೇ ? ಕಾಸರಗೋಡು ಕನ್ನಡಿಗರ ಹೋರಾಟಕ್ಕೆ ಬೆಂಬಲವಾಗಿದ್ದ ”ಕಾಸರಗೋಡು ಸಮಾಚಾರ”ವನ್ನು ನಡೆಸಿದ ವೈ. ಮಹಾಲಿಂಗ ಭಟ್ಟರನ್ನೂ ಈ ಸಂದರ್ಭದಲ್ಲಿ ಸ್ಮರಿಸಬೇಕು.

ತುರ್ತು ಪರಿಸ್ಥಿತಿಯ ವಿರುದ್ಧವೂ ಪ್ರತಿಭಟನೆ

ತುರ್ತು ಪರಿಸ್ಥಿತಿಯ ಬಿಸಿ ಪತ್ರಿಕೆಗಳಿಗೂ ತಟ್ಟಿದಾಗ ಅದರ ವಿರುದ್ಧ ಬಾಯಿಗೆ ಕಪ್ಪು ಬಟ್ಟೆ ಕಟ್ಟಿ ಪ್ರತಿಭಟಿಸಿದ ಬಳ್ಳುಳ್ಳಾಯ ಎಂಬ ಕೆಚ್ಚೆದೆಯ ಕಿಚ್ಚಿನ ಬಿಸಿರಕ್ತದ ಕನ್ನಡ ಬಂಟನನ್ನು ಅತೀವವಾಗಿ ಕಾಡಿದ್ದು, ಜೀವನದಲ್ಲಿ ಮೊತ್ತಮೊದಲು ತೀವ್ರವಾಗಿ ದುಃಖಿಸುವಂತೆ ಮಾಡಿದ ಘಟನೆ ನಡೆಯಿತು. ಅದುವೇ, ನಾಡಪ್ರೇಮಿ ಪತ್ರಿಕೆಗಳ ಬಂಡಲ್ ಗಳನ್ನು ಕಟ್ಟಿಕೊಡುತ್ತಿದ್ದ, ವಿಳಾಸಗಳ ಚೀಟಿ ಅಂಟಿಸಿಕೊಡುತ್ತಿದ್ದ ಇಬ್ಬರು ಚಿಕ್ಕ ಪ್ರಾಯದ ಮಕ್ಕಳನ್ನು (ಶಾಂತಾರಾಮ-ಸುಧಾಕರ) ಪೊಲೀಸರು ಗುಂಡಿಗೆ ಆಹುತಿ ಪಡೆದುಕೊಂಡ ದುರಂತ ಘಟನೆ. ಕಾಸರಗೋಡು ಕನ್ನಡಿಗರ ರಾಜಿರಹಿತ ಹೋರಾಟವನ್ನು ಧಮನಿಸುವ ಸಲುವಾಗಿಯೇ ಕೇರಳ ಪೊಲೀಸರು ಇಬ್ಬರು ಮುಗ್ದ ಕನ್ನಡದ ಕಂದಮ್ಮಗಳನ್ನು ಬಲಿತೆಗೆದುಕೊಂಡು ಕೇಕೆ ಹಾಕಿ ನಕ್ಕಿದ್ದರು.

ಇಲ್ಲಿಂದ, ಕಾಸರಗೋಡು ಕನ್ನಡ ಚಳುವಳಿ ತನ್ನ ಕಾವನ್ನು ಹಂತ ಹಂತವಾಗಿ ಕಳೆದುಕೊಳ್ಳಲಾರಂಭಿಸಿತು. ”ನಾಡಪ್ರೇಮಿಗೆ”ಗೆ ವಿದಾಯ ಹಾಡಿದ ಎಂ.ವಿ.ಬಳ್ಳುಳ್ಳಾಯರು, ”ಡೆಕ್ಕನ್ ಹೆರಾಲ್ಡ್” ಮತ್ತು ”ಪ್ರಜಾವಾಣಿ” ದಿನಪತ್ರಿಕೆಗಳ ಕಾಸರಗೋಡು ಜಿಲ್ಲಾ ವರದಿಗಾರರರಾದರು. ೧೯೬೬ರಿಂದ ದಶಕದ ಹಿಂದಿನವೆರೆಗೂ, ಅಂದರೆ ಅನಾರೋಗ್ಯ ಬಾಧಿಸುವ ವರೆಗೂ ಬಳ್ಳುಳ್ಳಾಯರು ಪತ್ರಕರ್ತರಾಗಿಯೇ ಇದ್ದರು. ಇವರು ಕೇವಲ ಪತ್ರಕರ್ತರಾಗಿರಲಿಲ್ಲ, ಹಲವು ಪ್ರಾಮುಖ್ಯವಾದ ಪ್ರಥಮಗಳನ್ನು ಸಾಧಿಸಿದ ಖ್ಯಾತ ಪತ್ರಕರ್ತರೇ ಆಗಿದ್ದರು. ಕೇರಳ ಸರಕಾರದಲ್ಲಿದ್ದ ಯಾರೊಬ್ಬರು ಕಾಸರಗೋಡಿನ ಒಬ್ಬರು ಪತ್ರಕರ್ತರ ಹೆಸರು ಹೇಳುತ್ತಿದ್ದುದು, ಅದು ಬಳ್ಳುಳ್ಳಾಯರದೇ ಆಗಿತ್ತು. ಹಾಗಿತ್ತು, ಆ ಕಾಲದ ಬಳ್ಳುಳ್ಳಾಯರ ಪೆನ್ ಗಾರಿಕೆ. ೧೯೫೨-೫೩ರಲ್ಲಿ ಬಳ್ಳುಳ್ಳಾಯರು ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ”ನವ ಭಾರತ” ದಿನಪತ್ರಿಕೆಗೆ ಕಾಸರಗೋಡು ವರದಿಗಾರರಾಗಿದ್ದರು.

ಬಹುಮುಖಿ ಬಳ್ಳುಳ್ಳಾಯ

ಹಾಸನದ ಚೆನ್ನಕೇಶವ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾಗಿ, ಸಿಂಡಿಕೇಟ್ ಬ್ಯಾಂಕ್ ಕೃಷಿ ಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯರಾಗಿ, ಪ್ರತಿಷ್ಟಾನದ ಮುಖವಾಣಿ ”ಕರ್ಷಕಲೋಕ” ಮಲೆಯಾಳ ಪತ್ರಿಕೆಯ ಸಂಪಾದಕ ಮಂಡಳಿ ಸದಸ್ಯರಾಗಿ, ಕೋಟೂರು ಕಾರ್ತಿಕೇಯ ಕಲಾ ಸಂಸ್ಥೆಯ ಕಾರ್ಯದರ್ಶಿಯಾಗಿ, ಕೋಟೂರು ಶ್ರೀ ಕಾರ್ತಿಕೇಯ ಪ್ರಾಥಮಿಕ ಶಾಲೆಯ ಮ್ಯಾನೇಜರ್ ಆಗಿದ್ದ ಬಳ್ಳುಳ್ಳಾಯರ ಸಾಧನೆ ಮತ್ತು ಸಾಹಸಗಳ ಬಗ್ಗೆ ಒಂದು ಪುಸ್ತಕವನ್ನೇ ಬರೆಯಬಹುದಾಗಿದ್ದು, ಇಲ್ಲಿ ಬರೆದಿರುವುದು ಕೇವಲ ಒಂದು ಬಿಂದು ಮಾತ್ರವಾಗಿದೆ.

ಎಂ.ವಿ, ಬಳ್ಳುಳ್ಳಾಯರು ನೇರ ನಡೆ ನುಡಿಯ ನಿಷ್ಟುರವಾದಿ. ದಿಟ್ಟ ಹೋರಾಟಗಾರರು, ಅಪ್ರತಿಮ ಸಂಘಟಕರು, ಖ್ಯಾತ ಪತ್ರಕರ್ತರು ಮಾತ್ರವಲ್ಲ, ರಂಗನಟರೂ, ವಾಯಲಿನ್ ಮತ್ತು ಪಿಟೀಲು ವಾದಕರೂ ಆಗಿದ್ದಾರೆ. ವಾಯಲಿನ್‌ನಲ್ಲಿ ಪ್ರಾವಿಣ್ಯತೆಯನ್ನು ಪಡೆದಿದ್ದ ಅವರು ಇದನ್ನು ಮಕ್ಕಳಿಗೆ ಕಲಿಸಿಕೊಡುತ್ತಲೂ ಇದ್ದರು.

# ಎಂ.ಕೆ.ಮಠ ಸಂಪಾದಿಸಿದ ಬಳ್ಳುಳ್ಳಾಯರ ಕುರಿತಾದ ”ಪುನರ್ಜನ್ಮ”

ಹಾಸನದ ಚೆನ್ನಕೇಶವ ವಿದ್ಯಾಸಂಸ್ಥೆಯ ಸ್ಥಾಪಕಿ ಎನ್.ಕೆ. ಪೊದುವಾಳ್ ಕರಿಗೌಡ (ಇವರು ಇದಕ್ಕೂ ಮೊದಲು ಕಾಸರಗೋಡು ಬಿ.ಇ.ಎಂ. ಪ್ರೌಢಶಾಲೆಯಲ್ಲಿ ಅಧ್ಯಾಪಕಿಯಾಗಿದ್ದರು) ಇವರ ಸಂಸ್ಮರಣಾ ಸಂಚಿಕೆಯನ್ನು ಸಂಪಾದಿಸಿ ಪ್ರಕಟಿಸಿದ್ದ ಎಂ.ವಿ.ಬಳ್ಳುಳ್ಳಾಯರ ಬಗ್ಗೆ ”ಪುನರ್ಜನ್ಮ” ಎಂಬ ಅಭಿನಂದನಾ ಕೃತಿಯನ್ನು ರಾಷ್ಟ್ರ ಪ್ರಸ್ತಿ ಪುರಸ್ಕೃತ ಚಿತ್ರನಟ ಎಂ.ಕೆ.ಮಠ ಅವರು ೨೦೦ಒದಲ್ಲಿ ಸಂಪಾದಿಸಿ ಪ್ರಕಟಿಸಿದ್ದಾರೆ. ಕಾಸರಗೋಡಿನ ಸಮಸ್ತ ಕನ್ನಡಿಗರು ಸೇರಿ ಮಡಬೇಕಾಗಿದ್ದ ಈ ಕೆಲಸವನ್ನು ಎಂ.ಕೆ.ಮಠ ಮಾಡಿದ್ದು, ಈ ನಿಟ್ಟಿನಲ್ಲಿ ಮಠ ಅವರನ್ನು ನಾನು ಅಭಿನಂದಿಸುತ್ತೇನೆ ಮತ್ತು ಬಳ್ಳುಳ್ಳಾಯರ ನಿಜವಾದ ಅಭಿಮಾನಿಗಳೆಲ್ಲರ ಪರವಾಗಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಎಂ.ಕೆ. ಮಠ ಅವರ ಈ ಮರೆಯಲಾಗದ ಕೆಲಸವನ್ನು ನನ್ನಂಥವರು ಯಾವತ್ತಿಗೂ ಮರೆಯುದಿಲ್ಲ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.

ನಾಡಪ್ರೇಮಿ ಬಗ್ಗೆ…

ಚಿತ್ರ: ಶ್ರೀರಾಮ ದಿವಾಣ

ಕರ್ನಾಟಕದ ಕನ್ನಡಿಗರು, ಕನ್ನಡ ಪರ ಸಂಘ ಸಂಸ್ಥೆಗಳು, ಕರ್ನಾಟಕ ಸರಕಾರ ಮಾಡಬೇಕಾದ ಕೆಲಸವನ್ನು ಅಂದು ಕಾಸರಗೋಡಿನಲ್ಲಿ ಕಳ್ಳಿಗೆ ಮಹಾಬಲ ಭಂಡಾರಿ, ಎಂ.ವಿ. ಬಳ್ಳುಳ್ಳಾಯ, ಗಂಗಾಧರ ಭಟ್, ಕುಣಿಕುಳ್ಳಾಯ, ಕಕ್ಕಿಲ್ಲಾಯ, ಅಗ್ಗಿತ್ತಾಯ, ಬೇವಿಂಜೆ, ದಿವಾಣ ಮುಂತಾದವರು ಮಾಡಿದರು ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಾಗಿದೆ.

”ನಾಡಪ್ರೇಮಿ” ಕಾಸರಗೋಡಿನಿಂದ ಪ್ರಕಟವಾಗುತ್ತಿದ್ದ ವಾರಪತ್ರಿಕೆ. 1965ರ ಫೆಬ್ರವರಿಯಲ್ಲಿ ‘ಕಾಸರಗೋಡು ಕರ್ನಾಟಕ ಪ್ರಾಂತೀಕರಣ ಚಳುವಳಿ’ಯ ಭಾಗವಾಗಿ, ಧೀಮಂತ ಪತ್ರಕರ್ತರಾದ ಎಂ.ವಿ.ಬಳ್ಳುಳ್ಳಾಯರು ‘ನಾಡಪ್ರೇಮಿ’ಯನ್ನು ಆರಂಭಿಸಿದ್ದರು ಮತ್ತು ಪತ್ರಿಕೆಯನ್ನು ಮುನ್ನಡೆಸುವಲ್ಲಿ ಬಳ್ಳುಳ್ಳಾಯರ ಹೆಗಲಿಗೆ ಹೆಗಲು ಕೊಟ್ಟವರು ದಾಮೋದರ ಅಗ್ಗಿತ್ತಾಯರು. ನ್ಯಾಯವಾದಿ ಕಳ್ಳಿಗೆ ಮಹಾಬಲ ಭಂಡಾರಿಯವರು ನಾಡಪ್ರೇಮಿಯನ್ನು ಪ್ರೋತ್ಸಾಹಿಸಿದವರಲ್ಲಿ ಪ್ರಮುಖರು. ಕಾಸರಗೋಡು ಎಸ್.ವಿ.ಟಿ.ರಸ್ತೆಯಲ್ಲಿದ್ದ ಪತ್ರಿಕಾ ಕಚೇರಿಯಲ್ಲಿಯೇ ನಡೆದ ಸರಳ ಸಮಾರಂಭದಲ್ಲಿ ‘ಕಾಸರಗೋಡು ಕನ್ನಡಿಗರ ಮಹಾಬಲ’ ಕಳ್ಳಿಗೆ ಮಹಾಬಲ ಭಂಡಾರಿಯವರು ನಾಡಪ್ರೇಮಿಯನ್ನು ಬಿಡುಗಡೆಗೊಳಿಸಿದ್ದರು. ಸಮಾರಂಭದಲ್ಲಿ ‘ವಿಚಿತ್ರ ಏತಡ್ಕ’ ಕಾವ್ಯನಾಮದ ವೈ.ಎಸ್.ಹರಿಹರ ಭಟ್, ‘ಕಾಸರಗೋಡು ಸಮಾಚಾರ’ ಪತ್ರಿಕೆಯ ಸಂಪಾದಕರಾಗಿದ್ದ  ‘ವೈಮಾನಿಕ’ ಕಾವ್ಯನಾಮದ ವೈ.ಮಹಾಲಿಂಗ ಭಟ್, ಗಣಪತಿ ದಿವಾಣ ಮುಂತಾದ ಕೆಲವೇ ಪ್ರಮುಖರು ಉಪಸ್ಥಿತರಿದ್ದರು. ಎಂ.ವಿ.ಬಳ್ಳುಳ್ಳಾಯರು ಸಂಪಾದಕರು ಮತ್ತು ಪ್ರಕಾಶಕರಾಗಿದ್ದ ನಾಡಪ್ರೇಮಿಯನ್ನು, ಪಿ.ವಿ.ಪ್ರಭು ಅವರು ತಮ್ಮ ಪ್ರಕಾಶ್ ಪ್ರಿಂಟರ್ಸ್ ನಲ್ಲಿ ಮುದ್ರಿಸುತ್ತಿದ್ದರು.

ಕಯ್ಯಾರ ಕಿಞ್ಙಣ್ಣ ರೈ, ಕೀರಿಕ್ಕಾಡು ಮಾಸ್ಟರ್ ವಿಷ್ಣು ಭಟ್, ಗಣಪತಿ ದಿವಾಣ, ‘ವಿಚಿತ್ರ ಏತಡ್ಕ’, ‘ತಲೆಹೋಕ’ (ದಾಮೋದರ ಅಗ್ಗಿತ್ತಾಯ), ತೇ.ಶೆ.ಕಾರ್ಯಹಳ್ಳಿ (ಟಿ.ಎಸ್.ಕಾರ್ಯಹಳ್ಳಿ), ‘ಕಾ.ನಾ.ಭ’, ‘ರಾಧಾರಂಜನ’, ಶಿರೋಮಣಿ ವಿದ್ವಾನ್ ಕೆ. ನಾರಾಯಣಾಚಾರ್ಯ ಕಣ್ವತೀರ್ಥ, ‘ಶ್ರೀ ಕಾಸರಗೋಡು’, ‘ಶಶಿರಾಜ’, ‘ಎಂ.ವಿ.ಎಸ್’, ಯು.ಈಶ್ವರ ಭಟ್, ‘ಕುಮಾರತನಯ ಕಾಸರಗೋಡು’, ‘ಶ್ರೀನಿಲಯ ಕಾಸರಗೋಡು’, ‘ಬಾಕಿನ’ (ರಘುರಾಮ), ಕೆ.ವಿ.ತಿರುಮಲೇಶ್, ಡಾ.ಕೆ.ರಮಾನಂದ ಬನಾರಿ ದೇಲಂಪಾಡಿ, ಕಾ.ವಾ.ಆಚಾರ್ಯ ಶಿರ್ವ (ಕಾಸರಗೋಡು ವಾಸುದೇವ ಆಚಾರ್ಯ), ಗೋಪಾಲಕೃಷ್ಣ ಪೈ ಪೆರ್ಲ, ಪಿ.ಪಿ.ಶರ್ಮ ಕಾಸರಗೋಡು, ಕೃಷ್ಣ ಭಟ್ ಪೆರ್ಲ, ‘ಬೀಜಿ’, ಶಂಕರನಾರಾಯಣ ಭಟ್ ಮಧೂರು, ಬಿ.ಸೀತಾರಾಮ ಪೈ, ಅಂಬಿಕಾ ಭಕ್ತ ಮುಂಡೋಡು ಮೊದಲಾದವರ ಕಥೆ, ಕವನ, ಲೇಖನಗಳು ‘ನಾಡಪ್ರೇಮಿ’ಯಲ್ಲಿ ಪ್ರಕಟವಾಗುತ್ತಿದ್ದವು.

ಬಳ್ಳುಳ್ಳಾಯರೇ, ನಿಮಗಿದೋ ನಮೋ ನಮಃ…

* 2018, ಜೂನ್ 2ರಂದು ಉಡುಪಿಯಲ್ಲಿ ನಡೆದ ಶ್ರೀರಾಮ ದಿವಾಣ ಅವರ ”ವ್ಯವಸ್ಥೆಯೆಂಬ ಅವ್ಯವಸ್ಥೆ” ಕೃತಿ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ದರು, ಎಂ.ವಿ.ಬಳ್ಳುಳ್ಳಾಯರು. ಚಿತ್ರ: ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ

Leave a Reply

Your email address will not be published. Required fields are marked *