Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕಾಸರಗೋಡಿನಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ, ಗಣ್ಯರಿಂದ ಎಂ.ವಿ.ಬಳ್ಳುಳ್ಳಾಯರಿಗೆ ನುಡಿ ನಮನ

ಕಾಸರಗೋಡು: ಜನಮುಖಿ ಧೋರಣೆಯ, ಜನಪರ ಕಾಳಜಿಯ, ಸರಳ ನಿರಾಡಂಬರ ವ್ಯಕ್ತಿತ್ವದ ಎಂ.ವಿ. ಬಳ್ಳುಳ್ಳಾಯ ಅವರು, ಕನ್ನಡಿಗರ ಹೋರಾಟಕ್ಕೆ ಚೈತನ್ಯ ತುಂಬಿದ ಮಹಾನ್ ವ್ಯಕ್ತಿಯಾಗಿದ್ದಾರೆ. ದೀನ ದಲಿತರ ಬಗ್ಗೆ ಅವರಿಗಿದ್ದ ಕಾಳಜಿ ಮತ್ತು ನ್ಯಾಯಪರ ಧೋರಣೆ ಅನನ್ಯವಾದುದು. ಪತ್ರಕರ್ತರಾಗಿ ಯಾವತ್ತೂ ಪತ್ರಿಕಾ ಘನತೆ ಎತ್ತಿಹಿಡಿದು ಕೆಲಸ ಮಾಡಿದವರು ಬಳ್ಳುಳ್ಳಾಯರು ಎಂದು ಹಿರಿಯ ಪತ್ರಕರ್ತ, ಕವಿ, ಲೇಖಕ ರಾಧಾಕೃಷ್ಣ ಉಳಿಯತ್ತಡ್ಕ ಅವರು ಹೇಳಿದರು.

ಕಾಸರಗೋಡು ಕನ್ನಡಿಗರ ಅಗ್ರಗಣ್ಯ ಹೋರಾಟಗಾರ, ಕನ್ನಡ ಹೋರಾಟಗಾರರ ಮುಖವಾಣಿ ‘ನಾಡಪ್ರೇಮಿ’ ವಾರಪತ್ರಿಕೆಯ ಸಂಪಾದಕ, ಕಲೆ, ಶಿಕ್ಷಣ, ಸಾರಿಗೆ ಸಹಿತ ವಿವಿಧ ಕ್ಷೇತ್ರಗಳ ಸಾಧಕರಾಗಿದ್ದ ಎಂ.ವಿ.ಬಳ್ಳುಳ್ಳಾಯರು ಜುಲೈ 4ರಂದು ಉಡುಪಿ ಜಿಲ್ಲೆಯ ಹೆಬ್ರಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಜುಲೈ 6ರಂದು ಕಾಸರಗೋಡಿನ ಪದ್ಮಗಿರಿ ಕಲಾಕುಟೀರದಲ್ಲಿ ರಂಗ ಚಿನ್ನಾರಿ (ರಿ) ಕಾಸರಗೋಡು ಮತ್ತು ಕಾಸರಗೋಡು ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ‘ನುಡಿ ನಮನ’ ದಲ್ಲಿ ರಾಧಾಕೃಷ್ಣ ಉಳಿಯತ್ತಡ್ಕ ಅವರು ಮಾತನಾಡುತ್ತಿದ್ದರು.

ಹಿರಿಯ ಬಹುಭಾಷಾ ಲೇಖಕರಾದ ಬಿ.ನರಸಿಂಗ ರಾವ್ ಅವರು ದೀಪ ಬೆಳಗಿಸಿ, ಎಂ.ವಿ.ಬಳ್ಳುಳ್ಳಾಯರನ್ನು ನೆನಪು ಮಾಡಿಕೊಂಡರು. ಎಂ.ವಿ.ಬಳ್ಳುಳ್ಳಾಯರು ಬಹಳ ಕಷ್ಟದಿಂದ ‘ನಾಡಪ್ರೇಮಿ’ಯನ್ನು ನಡೆಸಿದ ಆ ದಿನಗಳನ್ನು, ತಾನೂ ಸಹ ಅನೇಕ ಬರಹಗಳನ್ನು ನಾಡಪ್ರೇಮಿಗೆ ಬರೆದುಕೊಡುತ್ತಿದ್ದೆ ಎಂದು ತಿಳಿಸುವ ಮೂಲಕ ಹಿಂದಿನ ಆ ದಿನಗಳನ್ನು ಮೆಲುಕು ಹಾಕಿದರು. ಯಾವತ್ತೂ ಬಹಳ ಬ್ಯುಜಿ ಮನುಷ್ಯನಾಗಿದ್ದ ಬಳ್ಳುಳ್ಳಾಯರದು ಸಂಘರ್ಷಮಯ ವ್ಯಕ್ತಿತ್ವದವರು ಎಂದರು.

ಒಂದು ಕಾಲದಲ್ಲಿ ನೂರಾರು ಪ್ರದರ್ಶನ ಕಂಡು, ಪ್ರಖ್ಯಾತಗೊಂಡಿದ್ದ ‘ಮಾಂಗಲ್ಯ ಭಾಗ್ಯ’ ನಾಟಕದಲ್ಲಿ ‘ಮಿಲಿಟ್ರಿ’ ಪಾತ್ರಧಾರಿಯಾಗಿ ರಂಗದಲ್ಲಿ ಮಿಚಿದ್ದ ಎಂ.ವಿ.ಬಳ್ಳುಳ್ಳಾಯರು, ಬಳಿಕ ಮಿಲಿಟ್ರಿ ಬಳ್ಳುಳ್ಆಯ’ರೆಂದೇ ಜನಪ್ರಿಯರಾಗಿದ್ದರು. ಅವರೊಬ್ಬರು ‘ಡೈನಾಮಿಕ್’. ಕಾಸರಗೋಡು ಕನ್ನಡಿಗರ ಮುಂಚೂಣಿ ಹೋರಾಟಗಾರರಾಗಿದ್ದ ಕಳ್ಳಿಗೆ ಮಹಾಬಲ ಭಂಡಾರಿಯವರ ಸಂಸ್ಮರಣೆಯನ್ನು ಪ್ರತೀ ವರ್ಷದ ಜನವರಿ 7ರಂದು ಎಂ.ಗಂಗಾಧರ ಭಟ್ಟರ ಜೊತೆಗೂಡಿ ಎಂ.ವಿ. ಬಳ್ಳುಳ್ಳಾಯರು ನಡೆಸಿಕೊಂಡು ಬರುತ್ತಿದ್ದರು, ಗಂಗಾಧರ ಭಟ್ಟರ ನಿಧನದ ನಂತರ, ಬಳ್ಳುಳ್ಳಾಯರು ಉಡುಪಿಯಿಂದ ದೂರವಾದ ಬಳಿಕ ಕಳ್ಳಿಗೆ ಸಂಸ್ಮರಣೆ ನಿಂತುಹೋಗಿದೆ ಎಂದು ಡಾ.ಕಾಸರಗೋಡು ಅಶೋಕ್ ಕುಮಾರ್ ಮಂಗಳೂರು ಅವರು ಹೇಳಿದರು. ಕಾಸರಗೋಡಿನ ಕನ್ನಡ ಹೋರಾಟದಲ್ಲಿ ಕೇರಳದ ಪೊಲೀಸರ ಗುಂಡಿಗೆ ಬಲಿಯಾಗಿ ಹುತಾತ್ಮರದ ಶಾಂತಾರಾಮ ಹಾಗೂ ಸುಧಾಕರ ಅವರನ್ನು ಈ ಸಂದರ್ಭದಲ್ಲಿ ಡಾ.ಅಶೋಕ್ ಕುಮಾರ್ ಅವರು ಸ್ಮರಿಸಿದರು.

ಎಂ.ವಿ.ಬಳ್ಳುಳ್ಳಾಯರು ದೈಹಿಕವಾಗಿ ಕಾಸರಗೋಡಿನಿಂದ ದೂರವಾಗಿ ಉಡುಪಿಯಲ್ಲಿ ನೆಲೆಸಿದ್ದರೂ, ಅವರ ಮನಸ್ಸು ಯಾವತ್ತೂ ಕಾಸರಗೋಡಿನ ಕನ್ನಡಿಗರ ಪರವಾಗಿಯೇ ಯೋಚಿಸುತ್ತಿತ್ತು. ಅವರೊಂದು ಗ್ರಂಥ ಭಂಡಾರದಂತೆ. ಆದರೆ, ಈ ಅಮೂಲ್ಯ ಗ್ರಂಥವನ್ನು ನಾವಿಂದು ಕಳೆದುಕೊಂಡಿದ್ದೇವೆ. ಇದು ನಿಜಕ್ಕೂ ಬೇಸರದ ವಿಷಯ ಎಂದು ಅಂತಿಮ ವರ್ಷಗಳಲ್ಲಿ ಬಳ್ಳುಳ್ಳಾಯರೊಂದಿಗೆ ನಿರಂತರ ಒಡನಾಟದಲ್ಲಿದ್ದ udupibits.in ಸಂಪಾದಕ ಶ್ರೀರಾಮ ದಿವಾಣ ಅವರು ಹೇಳಿದರು. ಕಾಸರಗೋಡು ಕನ್ನಡ ಹೋರಾಟಗಾರರ ಮುಖವಾಣಿಯಾಗಿದ್ದ ‘ಕಾಸರಗೋಡು ಸಮಾಚಾರ’ದ ಸಂಪಾದಕರಾಗಿದ್ದ ದಿ/ ವೈ.ಮಹಾಲಿಂಗ ಭಟ್ಟರನ್ನು ಶ್ರೀರಾಮ ದಿವಾಣರು ಈ ಸಂದರ್ಭದಲ್ಲಿ ಸ್ಮರಿಸಿದರು.

ಹಿರಿಯ ಕನ್ನಡ ಹೋರಾಟಗಾರರಾದ ಬಿ.ಬಾಲಕೃಷ್ಣ ಅಗ್ಗಿತ್ತಾಯ ಹಾಗೂ ಗೋವಿಂದ ಬಳ್ಳಮೂಲೆ ನುಡಿ ನಮನ ಸಲ್ಲಿಸಿದರು. ಕಾಸರಗೋಡು ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ರಂಗ ಚಿನ್ನಾರಿಯ ನಿರ್ದೇಶಕರಾದ ಕಾಸರಗೋಡು ಚಿನ್ನಾ ಕಾರ್ಯಕ್ರಮ ನಿರ್ವಹಣೆಯ ಜೊತೆಗೆ ಎಂ.ವಿ.ಬಳ್ಳುಳ್ಳಾಯ ಜೊತೆಗಿನ ತನ್ನ ಒಡನಾಟವನ್ನು ನೆನಪು ಮಾಡಿಕೊಂಡು ನುಡಿ ನಮನ ಸಲ್ಲಿಸಿದರು.

 

ಖ್ಯಾತ ಕವಯಿತ್ರಿ ಡಾ.ಯು.ಮಹೇಶ್ವರಿ, ಪತ್ರಕರ್ತರಾದ ಪುರುಷೋತ್ತಮ ಭಟ್ ಮೊದಲಾದವರು ಉಪಸ್ಥಿತರಿದ್ದರು.

ವಿವಿಧ ಸಂಘಗಳಿಂದ ಶ್ರದ್ಧಾಂಜಲಿ ಸಭೆ

ಕೇರಳ ಕಾರ್ಯನಿರತ ಪತ್ರಕರ್ತರ ಸಂಘದ ಕಾಸರಗೋಡು ಜಿಲ್ಲಾ ಘಟಕ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಕಾಸರಗೋಡು ಗಡಿನಾಡ ಘಟಕ ಪ್ರತ್ಯೇಕ ಸಂತಾಪ ಸಭೆಗಳನ್ನು ನಡೆಸಿ ಎಂ.ವಿ.ಬಳ್ಳುಳ್ಳಾಯರಿಗೆ ಶ್ರದ್ಧಾಂಜಲಿ ಸಲ್ಲಿಸಿತು.

ಜೂನ್ 4ರಂದು ಕಾಸರಗೋಡು ಪ್ರೆಸ್ ಕ್ಲಬ್ ನಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಹಿರಿಯ ಪತ್ರಕರ್ತರಾದ ವಿ.ವಿ.ಪ್ರಭಾಕರನ್ ಎಂ.ವಿ. ಬಳ್ಳುಳ್ಳಾಯ ಸಂಸ್ಮರಣಾ ಭಾಷಣ ಮಾಡಿದರು. ಪ್ರೆಸ್ ಕ್ಲಬ್ ಅಧ್ಯಕ್ಷರಾದ ಟಿ.ಎ.ಶಾಫಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರಾದ ಸುರೇಶ್, ಅಬ್ದುಲ್ ರಹಮಾನ್ ಆಲೂರ್, ಸನ್ನಿ ಜೋಸೆಫ್, ಗಂಗಾಧರ ಯಾದವ್ ತೆಕ್ಕೆಮೂಲೆ, ದೇವದಾಸ್ ಪಾರೆಕಟ್ಟ, ಶಾಫಿ ತೆರುವತ್, ಗೋಪಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು. ಕೆ.ವಿ.ಪದ್ಮೇಶ್ ಸ್ವಾಗತಿಸಿದರು. ಶೈಜು ಪಿಲಾತ್ತರ ವಂದಿಸಿದರು.

ಯಕ್ಷ ತೂಣೀರ ಸಂಪ್ರತಿಷ್ಠಾನದ ಸದಸ್ಯರು, ಮೂಡುಮನೆ ವಾಸುದೇವ ಬಳ್ಳುಳ್ಳಾಯರ ಬಾಲ್ಯ ಸ್ನೇಹಿತರಾದ ಕಲಾವಿದ ಕೆ.ಚಂದ್ರಶೇಖರ ಭಟ್ ಆದೂರು, ಕೆ.ಗೋಪಾಲಕೃಷ್ಣ ಭಟ್ ಹಾಗೂ ಅನೇಕ ಮಂದಿ ಪ್ರಮುಖರು ಬಳ್ಳುಳ್ಳಾಯರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

 

 

 

Leave a Reply

Your email address will not be published. Required fields are marked *