Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಸಿಬ್ಬಂದಿ ಕೊರತೆ: ಮೂಡುಬೆಳ್ಳೆ ಸಿಂಡಿಕೇಟ್ ಬ್ಯಾಂಕ್ ವಿರುದ್ಧ ಪ್ರತಿಭಟನೆ !

ಉಡುಪಿ: ಪ್ರತಿಷ್ಠಿತ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಒಂದಾದ ಸಿಂಡಿಕೇಟ್ ಬ್ಯಾಂಕ್ ಮೂಡುಬೆಳ್ಳೆ ಬ್ರಾಂಚ್ ಸಿಬ್ಬಂದಿಗಳ ಕೊರತೆಯಿಂದ ನಲುಗುತ್ತಿದ್ದು, ಈ ಬಗ್ಗೆ ಕೆಲವು ತಿಂಗಳಿಂದ ಎಷ್ಟೇ ದೂರುಗಳನ್ನು ನೀಡಿದರೂ ಉನ್ನತ ಅಧಿಕಾರಿಗಳು ಯಾವುದೇ ಕ್ರಮಗಳನ್ನೂ ತೆಗೆದುಕೊಳ್ಳದೆ ಕಡೆಗಣಿಸಿರುವ ಬಗ್ಗೆ ತೀವ್ರ ಅಕ್ರೋಶಿತರಾದ ಗ್ರಾಹಕರು ಬ್ಯಾಂಕಿನ ಅಧಿಕಾರಿ ವರ್ಗದ ವಿರುದ್ಧ ಇಂದು (ಜುಲೈ 10, 2018) ಪೂರ್ವಾಹ್ನ ಬ್ಯಾಂಕ್ ನಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ ವಿದ್ಯಾಮಾನ ನಡೆಯಿತು.

ಸಿಂಡಿಕೇಟ್ ಬ್ಯಾಂಕಿನಲ್ಲಿ ಅಗತ್ಯಕ್ಕೆ ಬೇಕಾದಷ್ಟು ಸಿಬ್ಬಂದಿಗಳು ಇಲ್ಲ. ಮೊದಲಿದ್ದ ಇಬ್ಬರು ಸಿಬ್ಬಂದಿಗಳು ನಿವೃತ್ತರಾಗಿದ್ದರೆ, ಒಬ್ಬರು ಭಡ್ತಿಯೊಂದಿಗೆ ವರ್ಗಾವಣೆಯಾಗಿದ್ದರು. ಉಳಿದದ್ದು ಮ್ಯಾನೇಜರ್ ಹಾಗೂ ಒಬ್ಬರು ಸಿಬ್ಬಂದಿ. ಇವರಿಬ್ಬರೂ ಹೊಸಬರು. ಇರುವ ಒಬ್ಬರು ಸಿಬ್ಬಂದಿ ಮಹಿಳಾ ಸಿಬ್ಬಂದಿಯಾಗಿದ್ದು, ಇವರು ಸ್ಥಳೀಯ ಕನ್ನಡ ಭಾಷೆ ಬಲ್ಲವರಲ್ಲ. ಬ್ಯಾಂಕಿನ ಸಮಸ್ಯೆ ಬಗ್ಗೆ udupibits.in ಈ ಹಿಂದೆಯೇ ವರದಿ ಮಾಡಿತ್ತು. ಮಾತ್ರವಲ್ಲ, ವರದಿಯನ್ನು ಜೂನ್ 26ರಂದು ರೀಜನಲ್ ಮ್ಯಾನೇಜರ್ ಅವರ ಗಮನಕ್ಕೆ ತರಲಾಗಿತ್ತು. ಗ್ರಾಹಕರು ದೂರವಾಣಿ ಮುಖಾಂತರವೂ ಎ.ಆರ್.ಒ ಅವರಿಗೆ ಮೌಖಿಕ ದೂರು ನೀಡಿದ್ದರು. ಆದರೂ, ಉನ್ನತ ಅಧಿಕಾರಿಗಳಾದ ಇವರ್ಯಾರೂ ಗಂಭೀರವಾಗಿ ಪರಿಗಣಿಸದೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದರು.

ಜಮಾಯಿಸಿದ ಸಾರ್ವಜನಿಕರು, ಪೊಲೀಸ್ ಮಧ್ಯಪ್ರವೇಶ

ಒಂದರ್ಥದಲ್ಲಿ ಏಕೋಪಾಧ್ಯಾಯ ಶಾಲೆಯಂತೆ ಸಿಂಡಿಕೇಟ್ ಬ್ಯಾಂಕ್ ಮೂಡುಬೆಳ್ಳೆ ಬ್ರಾಂಚ್ ಕಾರ್ಯನಿರ್ವಹಿಸುತ್ತಿತ್ತು. ಜಯಲೈ 10ರಂದು ಬೆಳಗ್ಗೆಯೂ ಬ್ಯಾಂಕಿನಲ್ಲಿ ಮ್ಯಾನೇಜರ್ ಒಬ್ಬರನ್ನು ಹೊರತುಪಡಿಸಿದರೆ ಬೇರೆ ಯಾರೂ ಇಲ್ಲದ ಶೋಚನೀಯ ಪರಿಸ್ಥಿತಿ ಸೃಷ್ಟಿಯಾಯಿತು. ಬ್ಯಾಂಕಿಗೆ ಬಂದ ಗ್ರಾಹಕರು ಬ್ಯಾಂಕಿನೊಳಗೆ ತುಂಬಿ ಹೋದರು, ಉಳಿದವರು ಹೊರಗಡೆ ನಿಲ್ಲಬೇಕಾಗಿ, ಕಾಯಬೇಕಾಗಿ ಬಂತು.

ಸಹಜವಾಗಿಯೇ ಗ್ರಾಹಕರು ಬ್ಯಾಂಕಿನ ಆಡಳಿತ ವ್ಯವಸ್ಥೆಯ ಅವ್ಯವಸ್ಥೆಯ ವಿರುದ್ಧ ಹಿಡಿಶಾಪ ಹಾಕತೊಡಗಿದರು. ಆಕ್ರೋಶ ವ್ಯಕ್ತಪಡಿಸತೊಡಗಿದರು. ಬ್ಯಾಂಕಿನ ಮುಂದೆ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಂತೆಯೇ, ವಿಷಯ ತಿಳಿದ ಶಿರ್ವ ಪೊಲೀಸ್ ಠಾಣೆಯ ಎಎಸ್ಐ ಕೆ.ಬೋಜ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡರು. ಗ್ರಾಹಕರನ್ನು ಸಮಾಧಾನಪಡಿಸಲು ಯತ್ನಿಸಿದರು.

ರೀಜನಲ್ ಆಫೀಸರ್ ಆಗಮನ

ಗ್ರಾಹಕರು ಸಮಾಧಾನಗೊಳ್ಳಲಿಲ್ಲ. ವಿಷಯ ಕೊನೆಗೆ ಬ್ಯಾಂಕಿನ ರೀಜನಲ್ ಕಚೇರಿಯವರೆಗೂ ಹೋಯಿತು. ಬ್ಯಾಂಕಿನ ಮುಂದೆ ಸಾರ್ವಜನಿಕರು ಜಮಾಯಿಸಿ, ಪೊಲೀಸರೂ ಸ್ಥಳಕ್ಕೆ ಆಗಮಿಸಿರುವ ವಿಷಯ ತಿಳಿಯುತ್ತಿದ್ದಂತೆಯೇ, ಕೊನೆಗೆ ನಿರ್ವಾಹವಿಲ್ಲದೆ ಬ್ಯಾಂಕಿನ ರೀಜನಲ್ ಆಫೀಸರ್ ಆಗಿರುವ ನಟರಾಜನ್ ಅವರು ಇಬ್ಬರು ಸಿಬ್ಬಂದಿಗಳನ್ನು ಕರೆದುಕೊಂಡು ಮೂಡುಬೆಳ್ಳೆಗೆ ಆಗಮಿಸಿದರು.

ಸಿಬ್ಬಂದಿಗಳ ಕೊರತೆಯಿಂದಾಗಿ ಆದ ತೊಂದರೆಗೆ ಗ್ರಾಹಕರಲ್ಲಿ ಕ್ಷಮೆಯಾಚಿಸಿದರು. ಸಮಸ್ಯೆಯನ್ನು ಪರಿಹರಿಸುವುದಾಗಿಯೂ, ಎಲ್ಲರೂ ಸಹಕರಿಸಬೇಕೆಂದೂ ಕೈಮುಗಿದು ವಿನಂತಿಸಿಕೊಂಡರು. ಅಂತಿಮವಾಗಿ, ‘ಮುಂದೆ ಹೀಗಾಗಲೇಬಾರದು, ಇಂದು ಪ್ರತಿಭಟನೆಯ ಬಳಿಕ ಇಬ್ಬರು ಸಿಬ್ಬಂದಿಗಳನ್ನು ಕರೆದುಕೊಂಡು ಬಂದಿದ್ದೀರಿ, ನಾಳೆ ಮತ್ತೆ ನಾವು ಪ್ರತಿಭಟನೆ ಮಾಡುವ ಹಾಗೆ ಮಾತ್ರ ಮಾಡಬೇಡಿ, ಇಂದಿನಿಂದಲೇ ಸೂಕ್ತ ಕ್ರಮಗಳನ್ನು ತೆಗದುಕೊಳ್ಳಿ’ ಎಂದು ಸ್ಪಷ್ಟ ಮಾತುಗಳಲ್ಲಿ ಎಚ್ಚರಿಸಿದರು. ಕೊನೆಗೆ, ರೀಜನಲ್ ಆಫೀಸರ್ ನಟರಾಜನ್ ಜೊತೆಗೆ ಆಗಮಿಸಿದ ಇಬ್ಬರು ಸಿಬ್ಬಂದಿಗಳು ಕಾರ್ಯನಿರ್ವಹಿಸಲು ಆರಂಭಿಸಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.

ಬೆಳ್ಳೆ ಗ್ರಾಮ ಪಂಚಾಯತ್ ಸದಸ್ಯ, ಮಾಜಿ ಅಧ್ಯಕ್ಷ ರಾಜೇಂದ್ರ ಶೆಟ್ಟಿ ನೇತೃತ್ವದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಯಿತು. ಉದ್ಯಮಿ ಎ.ಕೆ.ಆಳ್ವಾ, ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ರಂಜನಿ ಎಸ್.ಹೆಗ್ಡೆ, ಪಾಣಾರ ಸಂಘದ ಅಧ್ಯಕ್ಷರಾದ ಸುದಾಕರ ಪಾಣಾರ, ಕೃಷಿಕರಾದ ಐವನ್ ದಲ್ಮೇದಾ, ಉದ್ಯಮಿ ಮಾರ್ಟಿನ್ ಕೋಟ್ಯಾನ್, ಗಣೇಶ್ ಕುಲಾಲ್, ಕ್ಲೆಮೆಂಟ್ ಕಸ್ತಲಿನೋ, ಚಂದ್ರಶೇಖರ್ (ಚಂದ್ರು) ಕ್ಲಿಫರ್ಡ್ ಮಾರ್ಟಿಸ್, ಶ್ರೀರಾಮ ದಿವಾಣ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

One Comment

  1. martismalita@gmail.com'

    Asmith martis

    July 10, 2018 at 11:58 pm

    At syndicate bank.i have not experienced a problem till now.they are fast and approachable always.not delaying as other banks.if u want to withdraw money.it will be given in 10minutes..in anothe Bank at belle thy give token n made us to wait for more than 30minutes unnecessarily.i agree there should be more staffs .but the staffs attitude and work I appreciate.

Leave a Reply

Your email address will not be published. Required fields are marked *