Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮಹಾದಾನಿ ನಾರಾಯಣಿ ಬಾಯಿಯವರ 53ನೇ ಪುಣ್ಯಸ್ಮರಣೆ

*ಶ್ರೀರಾಮ ದಿವಾಣ

# ಮಹಾದಾನಿ, ಮಾನವತಾವಾದಿ ನಾರಾಯಣಿ ಬಾಯಿ ಯಾನೆ ನಾರಾಯಣಿ ಅಮ್ಮಾಳ್ ಅವರು ನಿಧನರಾಗಿ ಜುಲೈ 14ಕ್ಕೆ 53 ವರ್ಷಗಳಾಗುತ್ತವೆ.

ಮೂಲತಹ ಕೇರಳದವರಾಗಿದ್ದರೂ, ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕಾಡಬೆಟ್ಟುವಿನಲ್ಲಿ ವಾಸವಾಗಿದ್ದ ನಾರಾಯಣಿ ಬಾಯಿ ಯಾನೆ ನಾರಾಯಣಿ ಅಮ್ಮಾಳ್ ಅವರು, 1965ರ ಜುಲೈ 14ರಂದು ಉಡುಪಿ ನಗರದ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದರು.

ಕಲ್ಯಾಣಿ ಎಂಬವರ ಮಗಳಾಗಿರುವ ನಾರಾಯಣಿ ಬಾಯಿ ಅವರು ಮದುವೆಯಾಗಿರಲಿಲ್ಲ. ಸಮಾಜದ ಯಾವುದೇ ರೀತಿಯ ಕೊಂಕುನುಡಿಗಳಿಗೆ ಗಮನಕೊಡದೆ ಧೈರ್ಯದಿಂದ ಏಕಾಂಗಿ ಜೀವನ ನಡೆಸಿದ ನಾರಾಯಣಿ ಬಾಯಿ ಅವರು, ಮಾನವತಾವಾದಿಯೂ, ಮಹಾದಾನಿಯೂ ಆಗಿರುವ ಕಾರಣಕ್ಕೆ ನಾವಿಂದು ಅವರನ್ನು ಸ್ಮರಿಸಬೇಕಾಗಿದೆ.

ಕಾಡಬೆಟ್ಟುವಿನಲ್ಲಿದ್ದ ತನ್ನ ಜಮೀನನ್ನು ತಾನು ವಾಸ್ತವ್ಯವಿದ್ದ ಮನೆ ಮತ್ತು ಬಾಡಿಗೆಗೆ ನೀಡಿದ್ದ ಹತ್ತಕ್ಕೂ ಅಧಿಕ ಬಾಡಿಗೆ ಮನೆಗಳ ಸಹಿತವಾಗಿ ಸರಕಾರಕ್ಕೆ ದಾನ ಮಾಡಿದ ಮಹಾದಾನಿ ನಮ್ಮ ಈ ನಾರಾಯಣಿ ಬಾಯಿ ಎನ್ನುವುದು ಇನ್ನೂ ಸಹ ಉಡುಪಿಯ ಜನರಿಗೇ ಗೊತ್ತಿಲ್ಲ.

ನಾರಾಯಣಿ ಬಾಯಿ ಅವರು ಸರಕಾರಕ್ಕೆ ದಾನ ಮಾಡಿದ ಬೆಲೆಬಾಳುವ ಜಮೀನನ್ನು ಸರಕಾರವೇ, ಅಂದರೆ ಸರಕಾರಿ ಅಧಿಕಾರಿಗಳು ಸದ್ವಿನಿಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳ ಮೂಲಕ ಸರಕಾರದ ಸ್ವಾಧೀನಕ್ಕೆ ತೆಗೆದುಕೊಂಡು ಈ ಜಮೀನನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಸಂಪೂರ್ಣವಾಗಿ ನಿರ್ಲಕ್ಷ್ಯವಹಿಸಿದ್ದೇ ಮಹಾದಾನಿಯೂ, ಜಮೀನು ಕಡೆಗಣನೆಗೆ ಒಳಗಾಗಲು ಮುಖ್ಯ ಕಾರಣವಾಗಿದೆ.

1973ರ ಎಪ್ರಿಲ್ ನಿಂದ ಅಂದಿನಿಂದ ಜವಾಬ್ದಾರಿಯುತ ಸ್ಥಾನಗಳಲ್ಲಿ ಅಧಿಕಾರದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು, ತಹಶೀಲ್ದಾರರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಕರ್ತವ್ಯಲೋಪ ಇತ್ಯಾದಿಗಳಿಂದಾಗಿ ಸರಕಾರಕ್ಕೆ ದಕ್ಕಬೇಕಾದ ಬಹುಮೌಲ್ಯದ ಜಮೀನು ಸರಕಾರಕ್ಕೆ ಇದುವರೆಗೂ ದಕ್ಕದೇಹೋಗಿದೆ. ಮಾತ್ರವಲ್ಲ, ಇದೇ ಕಾರಣದಿಂದ ನಾರಾಯಣಿ ಬಾಯಿ ಅವರು ಸರಕಾರಕ್ಕೆ ದಾನ ಮಾಡಿದ ಜಮೀನು ಸದ್ಬಳಕೆಯಾಗದೆ ಹಾಗೆಯೇ ಉಳಿದಿದೆ. ಇದು ದುರ್ದೈವದ ವಿಷಯವೇ ಸರಿ.

ಮೂಡನಿಡಂಬೂರು ಗ್ರಾಮದ ಕಾಡಬೆಟ್ಟುವಿನ ಸರ್ವೇ ನಂಬ್ರ 89/5ರ 50 ಸೆಂಟ್ಸ್, 89/10ರ 1.37 ಎಕರೆ, 89/11ಎಯ 39 ಸೆಂಟ್ಸ್ ಮತ್ತು 89/11ಬಿಯ 3 ಸೆಂಟ್ಸ್ ಜಮೀನನ್ನು ನಾರಾಯಣಿ ಬಾಯಿ ಅವರು 1944ರ ಎಪ್ರಿಲ್ ಒಂದರಂದು ಸರಕಾರಕ್ಕೆ ದಾನ ಮಾಡಿದ್ದರು. ಮಾತ್ರವಲ್ಲ, ತಾನು ದಾನ ಮಾಡಿದ ಜಮೀನಿನಲ್ಲಿ ಬಡ ಮಹಿಳೆಯರ ಹೆರಿಗೆ ಆಸ್ಪತ್ರೆಯನ್ನು ನಿರ್ಮಿಸಬೇಕು ಎಂದು ನಾರಾಯಣಿ ಬಾಯಿ ಅವರು ನೋಂದಣಿ ಮಾಡಿಸಿಟ್ಟಿದ್ದ ವೀಲುನಾಮೆಯಲ್ಲಿ ಬರೆದಿದ್ದರು.

ಬಡವರ ಬಗ್ಗೆ ಮತ್ತು ಮಹಿಳೆಯರ ಮೇಲೆ ನಾರಾಯಣಿ ಬಾಯಿ ಅವರಿಗೆ ಎಷ್ಟೊಂದು ಕಾಳಜಿ ಇತ್ತು ಎನ್ನುವುದಕ್ಕೆ ಅವರು ಬರೆದಿಟ್ಟಿದ್ದ ವೀಲುನಾಮೆಯೇ ಸಾಕ್ಷಿಯಾಗಿದೆ. ಇಂಥ ಮಹಾದಾನಿಯನ್ನು ನೆನೆಯುವುದು ಎಲ್ಲರ ನೈತಿಕ ಕರ್ತವ್ಯವೂ ಆಗಿದೆ. ನಾರಾಯಣಿ ಬಾಯಿ ದಾನ ಮಾಡಿದ ಈ ಜಮೀನನ್ನು ಇನ್ನಾದರೂ ಸರಕಾರ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವಂತೆ ಮಾಡುವುದು ಮತ್ತು ಈ ಬಹುಕೋಟಿ ಮೊತ್ತದ ಜಮೀನನ್ನು ಇನ್ನಾದರೂ ಸರಕಾರ ಸೂಕ್ತ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳುವಂತೆ ಮಾಡುವುದು ಉಡುಪಿಯ ಜನರ ಮತ್ತು ಪ್ರಸ್ತುತ ಅಧಿಕಾರದಲ್ಲಿರುವ ರಾಜ್ಯ ಸರಕಾರ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಗಳು, ತಾಲೂಕು ತಹಶೀಲ್ದಾರರು ಮೊದಲಾದವರನ್ನೊಳಗೊಂಡ ಜಿಲ್ಲಾಡಳಿತದ ಕರ್ತವ್ಯವಾಗಿದೆ.

ಹಿಂದಿನ ಸರಕಾರಿ ಅಧಿಕಾರಿಗಳ ಕರ್ತವ್ಯಲೋಪದ ಕಾರಣ, ನಾರಾಯಣಿ ಬಾಯಿ ಅವರು ನಿರ್ಗತಿಕ ಮಹಿಳೆಯರ ಹೆರಿಗೆ ಆಸ್ಪತ್ರೆ ನಿರ್ಮಿಸಬೇಕೆಂಬ ಸದುದ್ಧೇಶದಿಂದ ಸರಕಾರಕ್ಕೆ ದಾನ ಮಾಡಿದ ಜಮೀನನ್ನು ಇಂದು ಕೆಲವು ಜನರು ತಮ್ಮ ಸ್ವಾಧೀನಕ್ಕೆ ಪಡೆದುಕೊಳ್ಳುವ ಸಂಚು ನಡೆಸುತ್ತಿದ್ದಾರೆ. ಈ ಜನರೊಂದಿಗೆ ಕೆಲವು ಕಾಂಗ್ರೆಸ್ ನಾಯಕರು ತಮ್ಮ ಸ್ವಾರ್ಥ ಸಾಧನೆಗಾಗಿ ಸೇರಿಕೊಂಡಿದ್ದು, ಬಹುಕೋಟಿ ಮೊತ್ತದ ಜಮೀನನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಳ್ಳಲು ಷಡ್ಯಂತ್ರ ಹೂಡಿದ್ದು, ಈ ಷಡ್ಯಂತ್ರದ ಭಾಗವಾಗಿ ಈಗಾಗಲೇ ಸುಳ್ಳು ಮತ್ತು ನಕಲಿ ದಾಖಲೆಗಳನ್ನು ತಯಾರಿಸಕೊಂಡು ಸಂತತಿ ನಕ್ಷೆ, ಮ್ಯುಟೇಶನ್, ಪಹಣಿ ಇತ್ಯಾದಿಗಳನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಂಡು ಅಕ್ರಮವಾಗಿ ಕೈವಶಪಡಿಸಕೊಳ್ಳುವ ಅಪರಾಧ ಕೃತ್ಯವೆಸಗಲು ಮುಂದಾಗಿದ್ದಾರೆ. ಈ ಅಕ್ರಮದಲ್ಲಿ ಗ್ರಾಮ ಸಹಾಯಕರು, ಕಂದಾಯ ನಿರೀಕ್ಷಕರು ಸಹಿತ ತಾಲೂಕು ಮಟ್ಟದ ಕಂದಾಯ ಇಲಾಖಾ ಅಧಿಕಾರಿಗಳು ಕೂಡಾ ಅಕ್ರಮಕೂಟದ ಜೊತೆಗೆ ಕೈಜೋಡಿಸಿದ್ದಾರೆ.

Leave a Reply

Your email address will not be published. Required fields are marked *