Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಗ್ರಾಮ ಸಹಾಯಕರನ್ನು ಮರೆಯದಿರೋಣ…

*ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ

# ಕೆಲವು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಕಾಪು ತಾಲೂಕಿನಲ್ಲಿ ಅತಿ ಹೆಚ್ಚಿನ ಹಾನಿ ಉಂಟಾದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಯಿತು. ಮಳೆ ಸಂದರ್ಭ ಜಿಲ್ಲಾಡಳಿತದಿಂದ ದೋಣಿ ವ್ಯವಸ್ಥೆ ಕ್ಲಪ್ತ ಸಮಯಕ್ಕೆ ಲಭ್ಯವಾಗದ ಹಿನ್ನೆಲೆಯಲ್ಲಿ ಬೆಳ್ಳೆ ಗ್ರಾಮ ಪಂಚಾಯತ್ ನ ಪಿಡಿಒ ಮತ್ತು ವಿಎ ಅವರೇ ಪಡುಬೆಳ್ಳೆಯಲ್ಲಿ ನೀರಿಗಿಳಿದು ಅಗ್ನಿಶಾಮಕ ಸಿಬಂದಿಯೊಂದಿಗೆ ಅಪಾಯದಲ್ಲಿದ್ದ ಬಾಣಂತಿ, ಮಗು, ಪಾರ್ಶ್ವವಾಯು ಪೀಡಿತರನ್ನು ರಕ್ಷಿಸಿದ್ದರು. ಈ ತುರ್ತು ಸಂದರ್ಭದಲ್ಲಿ ವಿಎ, ಪಿಡಿಒ ಜತೆ ಬೆಳ್ಳೆಯ ಗ್ರಾಮ ಸಹಾಯಕ ಸ್ಟ್ಯಾನಿ ಡಿ’ಸೋಜಾ ಅವರೂ ಶ್ರಮಿಸಿದ್ದರು. ಇಡೀ ದಿನ ಗ್ರಾಮದ ವಿವಿಧೆಡೆ ಮಳೆಹಾನಿ ಸ್ಥಳಗಳಿಗೆ ತೆರಳಿ ಸಹಾಯ ಮಾಡಿ ನೈಜಾರ್ಥದಲ್ಲಿ ‘ಗ್ರಾಮ ಸಹಾಯಕ’ ಎನಿಸಿಕೊಂಡಿದ್ದರು. ಇವರಂಥೆ ಹೆಚ್ಚಿನ ಗ್ರಾಮ ಸಹಾಯಕರು ಸೂಚನೆ ನೀಡುವ ‘ಅಧಿಕಾರಿಗಳ’ ಆದೇಶಗಳನ್ನು ವಿಳಂಬವಿಲ್ಲದೆ ಕಾರ್ಯಗತೊಳಿಸಿದ್ದರು.

*ಸ್ಟ್ಯಾನಿ ಡಿ’ಸೋಜಾ, ಗ್ರಾಮ ಸಹಾಯಕರು, ಬೆಳ್ಳೆ

ಬಹುಕಾಲದ ಬೇಡಿಕೆ ಇದ್ದರೂ ಸರಕಾರಿ ನೌಕರರ ಸ್ಥಾನಮಾನ ದೊರೆಯದೆ, ತೀರಾ ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ ಈ ಗ್ರಾಮ ಸಹಾಯಕರ ಅಸಹಾಯಕತೆಯನ್ನು ಎಲ್ಲ ಸರಕಾರಗಳು ನಿರ್ಲಕ್ಷಿಸುತ್ತಲೇ ಬಂದಿವೆ. ಯಾವ ಸರಕಾರಗಳೂ ಗ್ರಾಮೀಣ ಭಾಗದಲ್ಲಿ ಅಸಹಾಯಕರಂತೆ ಹಗಲಿರುಳು ದುಡಿಯುತ್ತಿರುವವರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಹಗಲಿಗೆ ಮಾತ್ರವಲ್ಲದೆ ರಾತ್ರಿ ಪಾಳಿಗೂ ಅವರನ್ನು ನಿಯೋಜಿಸಲಾಗುತ್ತಿದ್ದು, ಅವರ ಅಸಹಾಯಕತೆಯ ಗರಿಷ್ಠ ಪ್ರಯೋಜನವನ್ನು ಕಂದಾಯ ಇಲಾಖೆ ಪಡೆದುಕೊಳ್ಳುತ್ತಿದೆ.

20 ವರ್ಷಗಳಿಂದಲೂ ಕೆಲಸ ಮಾಡುತ್ತಿರುವ ಈ ಗ್ರಾಮದ ಆಪತ್ಬಾಂಧಬರು ಇನ್ನೂ ಅಸಹಾಯಕರಾಗಿಯೇ ಉಳಿದಿದ್ದಾರೆ. ಇವರೆಲ್ಲ ತಮ್ಮ ಖಾಯಮಾತಿ ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆಸಿದಾಗ ಸರಕಾರಗಳು ಗೌರವಧನದಲ್ಲಿ (ಧನಕ್ಕೆ ಮಾತ್ರ ಗೌರವ ಪ್ರಮಾಣಕ್ಕಲ್ಲ) ಅಲ್ಪಸ್ವಲ್ಪ ಹೆಚ್ಚಳ ಮಾಡುವುದು ಬಿಟ್ಟರೆ ಬೇರೇನೂ ಮಾಡುವುದಿಲ್ಲ.

ಯಾವುದೇ ಸೇವಾ ಭದ್ರತೆ ಇಲ್ಲದೆ, ಪಿಎಫ್, ಇಎಸ್ಐ ಇಲ್ಲದೆ ಬರೇ 12 ಸಾವಿರ ರೂ.ಮಾಸಿಕ ವೇತನಕ್ಕೆ ದುಡಿಯುತ್ತಿರುವ ಇವರಿಗೆ ಯಾವ ಕಾರ್ಮಿಕ ನಿಯಮಗಳೂ ಅನ್ವಯಿಸುವುದಿಲ್ಲ ಎಂಬುದೇ ತೀರಾ ಖೇದಕರ ವಿಷಯ. ನೌಕರರಿಗೆ ಪಿಎಫ್, ಇಎಸ್ಐ ನೀಡದೆ ಇರುವ ಖಾಸಗಿ ಸಂಸ್ಥೆಗಳಿಗೆ ಧಾಳಿ ನಡೆಸಿ ಕ್ರಮ ತೆಗೆದುಕೊಳ್ಳುವ ಇದೇ ಸರಕಾರ, ಗ್ರಾಮ ಸಹಾಯಕರಿಗೆ ಕಾನೂನಿನ ಒಳ ಸುಳಿಗಳ ಕಾರಣವೊಡ್ಡಿ ಸಿಗಲೇಬೇಕಾದ ಸೇವಾ ಭದ್ರತೆಗಳನ್ನು ನೀಡುತ್ತಿಲ್ಲವೆಂಬುದು ವಿಪರ್ಯಾಸ. ಕಾನೂನು ಏನೇ ಇದ್ದರೂ ಸರಕಾರ ಮನಸ್ಸು ಮಾಡಿದರೆ ಈ ಗ್ರಾಮ ಸಹಾಯಕರ ಅಸಹಾಯಕತೆಯನ್ನು ದೂರ ಮಾಡಲು ಸಾಧ್ಯ.

ಪ್ರಕೃತ ಗ್ರಾಮ ಸಹಾಯಕರು ದಿನವಿಡೀ ದುಡಿಯುವ ಜತೆಗೆ ತಿಂಗಳಿಗೆ 2 ರಾತ್ರಿ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಗ್ರಾಮ ಸಹಾಯಕರು ಆಡಳಿತ ಸಂರಚನೆಯ ಕೊನೆಯಲ್ಲಿದ್ದು ಸರಕಾರಿ ನೌಕರರ ಸ್ಥಾನಮಾನ ಪಡೆಯದಿರುವುದರಿಂದ ಇವರ ಜೀವನಾಗತ್ಯ ಬೇಡಿಕೆಗಳ ಹೋರಾಟಕ್ಕೆ ದೊಡ್ಡ ಮಟ್ಟದ ಬೆಂಬಲ ದೊರೆತಿಲ್ಲ. ಸೇವಾ ಭದ್ರತೆ, ಸೇವಾ ಸೌಲಭ್ಯ ಇಲ್ಲದಿದ್ದರೂ ಗ್ರಾಮದಲ್ಲಿ ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿರುವ, ತುರ್ತು ಸಂದರ್ಭಗಳಲ್ಲಿ ಅಧಿಕಾರಿಗಳಿಗಿಂತಲೂ ಒಂದು ಹೆಜ್ಜೆ ಮುಂದುವರಿದು ಸೇವೆಗೈವ ಈ ಗ್ರಾಮ ಸಹಾಯಕರ ಬೇಡಿಕೆಗಳನ್ನು ಎಚ್. ಡಿ. ಕುಮಾರ ಸ್ವಾಮಿ ನೇತೃತ್ವದ ನೂತನ ರಾಜ್ಯ ಸರಕಾರ ತಿರಸ್ಕರಿಸದೆ ಪುರಸ್ಕರಿಸಲಿ ಎಂಬುದೇ ಎಲ್ಲರ ಆಶಯ.

(ಕೃಪೆ: fb)

Leave a Reply

Your email address will not be published. Required fields are marked *