Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮೆಸ್ಕಾಂ ನಿರ್ಲಕ್ಷ್ಯಕ್ಕೆ ಇಬ್ಬರ ಬಲಿ: ಸ್ಥಳಕ್ಕೆ ಬಾರದ ಶಾಸಕರ ವಿರುದ್ಧ ಆಕ್ರೋಶ

ಉಡುಪಿ: ಉಡುಪಿ ತಾಲೂಕು ಕೊಡಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಂಡುಪಾದೆ ನಿವಾಸಿಗಳಾದ ಶ್ರೀಮತಿ ಗೋಪಿ ಬಾಯಿ (85) ಹಾಗೂ ಶ್ರೀಮತಿ ಸುಮತಿ (50) ವಿದ್ಯುತ್ ಸ್ಪರ್ಶಿಸಿ ಮೃತರಾದ ದಾರುಣ ಘಟನೆ ಇಂದು (ಜುಲೈ 19, 2018) ಮುಂಜಾನೆ ಸಂಭವಿಸಿದೆ.

ಮೃತರು ತಾಯಿ ಹಾಗೂ ಮಗಳು. ಗುರುವಾರ ಮುಂಜಾನೆ ಮನೆ ಮುಂಭಾಗದ ಆವರಣದ ದಣಪೆ (ಗೇಟ್)ಯನ್ನು ತೆಗೆಯಲು ಮಗಳು ಸುಮತಿ ದಣಪೆ ಬಳಿ ತೆರಳಿದಾಗ, ಸಿಂಗಲ್ ಲೀಡಿನಲ್ಲಿದ್ದ ವಿದ್ಯುತ್ ತಂತಿ ತುಂಡಾಗಿ ಸುಮತಿಯವರ ಮೇಲೆ ಬಿದ್ದಿದೆ. ವಿದ್ಯುತ್ ಆಘಾತದಿಂದ ಸುಮತಿ ಅವರು ಬೊಬ್ಬೆ ಹಾಕಿದಾಗ, ಮಗಳನ್ನು ರಕ್ಷಿಸಲು ಓಡಿಬಂದ ತಾಯಿ ಗೋಪಿ ಬಾಯಿಯವರು ಸಹ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ. ಪರಿಣಾಮವಾಗಿ ತಾಯಿ- ಮಗಳು ಇಬ್ಬರೂ ಸ್ಥಳದಲ್ಲೇ ಮೃತರಾಗಿದ್ದಾರೆ.

ದೂರು ಕೊಟ್ಟರೂ ಕ್ರಮವಿಲ್ಲ !

ಗೋಪಿ ಬಾಯಿಯವರ ಮನೆಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಆದರೆ, ಮನೆಯ ಪಕ್ಕದಿಂದಾಗಿಯೇ ವಿದ್ಯುತ್ ತಂತಿ ಹಾದುಹೋಗಿದೆ. ಬೀರಬೆಟ್ಟು-ಮರ್ಣೆ-ಗುಂಡುಪಾದೆ ಮತ್ತು ಕೊಡಿಬೆಟ್ಟು ಗ್ರಾಪಂ ವ್ಯಾಪ್ತಿಯಲ್ಲಿ ಮತ್ತಿತರ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ತಂತಿಗಳು ಅಪಾಯಕಾರಿ ರೀತಿಯಲ್ಲಿ ರೀತಿಯಲ್ಲಿ ನೇತಾಡುತ್ತಿರುವ ಬಗ್ಗೆ ಗ್ರಾಮಸ್ಥರು ಕಳೆದ ಮೂರು ವರ್ಷಗಳಿಂದ ಸತತವಾಗಿ ಮೆಸ್ಕಾಂಗೆ ದೂರು ನೀಡಿಕೊಂಡು ಬಂದಿದ್ದಾರೆ. ಆದರೆ, ಮೆಸ್ಕಾಂ ಅಧಿಕಾರಿಗಳು ಯಾವುದೇ ಮುಂಜಾಗ್ರತಾ ಕ್ರಮಗಳನ್ನೂ ಜರುಗಿಸದೆ ದಿವ್ಯ ನಿರ್ಲಕ್ಷ್ಯ ತಾಳಿದ್ದರಿಂದಲೇ ಇದೀಗ ಇಬ್ಬರು ಮಹಿಳೆಯರು ವಿದ್ಯುತ್ ಗೆ ಬಲಿಯಾಗಬೇಕಾಗಿ ಬಂದಿದೆ.

ಘಟನೆ ಬಳಿಕ ಗ್ರಾಮಸ್ಥರು ಮೆಸ್ಕಾಂ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಕಾರಣ, ಇಂದು ಮಧ್ಯಾಹ್ನದ ಬಳಿಕ ಮೆಸ್ಕಾಂ ಸಿಬ್ಬಂದಿಗಳು ಕೆಲವು ಕಡೆಗಳಲ್ಲಿ ವಿದ್ಯುತ್ ತಂತಿಗೆ ತಾಗುತ್ತಿದ್ದ ಗೆಲ್ಲುಗಳನ್ನು ಕಡಿಯುವ ನಾಟಕವನ್ನು ಆರಂಭಿಸಿದ್ದಾರೆ.

ಶಾಸಕ ಲಾಲಾಜಿ ವಿರುದ್ಧ ಗ್ರಾಮಸ್ಥರ ಅಸಮಾಧಾನ

ಮೆಸ್ಕಾಂನವರ ದಿವ್ಯ ನಿರ್ಲಕ್ಷ್ಯಕ್ಕೆ ತಾಯಿ-ಮಗಳು ಮೃತರಾದ ದಾರುಣ ಘಟನೆ ನಡೆದರೂ, ಘಟನಾ ಸ್ಥಳಕ್ಕೆ ಮತ್ತು ವಿದ್ಯುತ್ ತಂತಿಗಳು ಅಪಾಯಕಾರಿ ಸ್ಥಿತಿಯಲ್ಲಿರುವ ಗ್ರಾಮಕ್ಕೆ ಕಾಪು ವಿದಾನ ಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್. ಮೆಂಡನ್ ಅವರು ಭೇಟಿ ನೀಡದೇ ಇರುವ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳದ ಸಮೀಪದ ಮರ್ಣೆ ಗ್ರಾಮದ ಜಮೀನೊಂದರಲ್ಲಿ ಜನರಿಗೆ ವಿಶ್ರಾಂತಿ ಗೃಹ ಎಂದು ಸುಳ್ಳು ಹೇಳಿ ನಿರ್ಮಿಸುತ್ತಿರುವ ತ್ಯಾಜ್ಯ ಘಟಕದ ಬಗ್ಗೆ ಸ್ಥಳೀಯರ ಆಕ್ಷೇಪವಿತ್ತು. ಸ್ಥಳಕ್ಕೆ ಶಾಸಕರು ಭೇಟಿ ನೀಡಿದಲ್ಲಿ ಜನರು ಈ ಬಗ್ಗೆ ಶಾಸಕರಲ್ಲಿ ದೂರು ನೀಡಬಹುದು ಎಂಬುದು ಒಂದಿಬ್ಬರು ಬಿಜೆಪಿ ನಾಯಕರಲ್ಲಿ ಆತಂಕವೂ ಇತ್ತು. ಇದನ್ನು ತಪ್ಪಿಸುವ ಸಲುವಾಗಿ ಶಾಸಕ ಲಾಲಾಜಿಯವರು ಘಟನಾ ಸ್ಥಳಕ್ಕೆ ಭೇಟಿ ನೀಡದಂತೆ ಸ್ಥಳೀಯ ಬಿಜೆಪಿ ನಾಯಕರು ತಡೆದಿದ್ದಾರೆ ಎಂಬ ಮಾತುಗಳು ಗ್ರಾಮಸ್ಥರಿಂದಲೇ ಕೇಳಿ ಬಂದಿದೆ. ಒಂದಿಬ್ಬರು ವ್ಯಕ್ತಿಗಳ ಸೂಚನೆಯಂತೆ ಲಾಲಾಜಿಯವರು ಕೊನೆಗೆ ರುದ್ರಭೂಮಿಗೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರೆನ್ನಲಾಗಿದೆ. ಇಲ್ಲಿಂದಲೇ ಪರಿಹಾರಕ್ಕೂ ಸೂಚಿಸಿದರೆನ್ನಲಾಗಿದೆ.

ತನ್ನ ಕ್ಷೇತ್ರದಲ್ಲಿ ಈ ರೀತಿಯ ದುರ್ಘಟನೆಗಳು ನಡೆದಾಗ ಜಾತಿ, ಮತ, ಪಕ್ಷ ನೋಡದೆ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳುವುದರ ಜೊತೆಗೆ ಸರಕಾರದಿಂದ ಹೆಚ್ಚು ಪರಿಹಾರ ಲಭಿಸುವಂತೆ ಮಾಡುವಲ್ಲಿ ಆಸಕ್ತಿ ತೋರಿಸುತ್ತಿದ್ದ ಕ್ಷೇತ್ರದ ಮಾಜಿ ಶಾಸಕ ವಿನಯ ಕುಮಾರ್ ಸೊರಕೆಯವರನ್ನು ಇಂದು ಗ್ರಾಮಸ್ಥರು ನೆನಪು ಮಾಡಿಕೊಂಡು, ಹಾಲಿ ಶಾಸಕ ಲಾಲಾಜಿಯವರು ಘಟನಾ ಸ್ಥಳಕ್ಕೆ ಭೇಟಿ ನೀಡದೇ ಇರುವುದರ ವಿರುದ್ಧ ಲಾಲಾಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

Leave a Reply

Your email address will not be published. Required fields are marked *