Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಶಿರೂರು ಸ್ವಾಮೀಜಿ ಅಸಹಜ ಸಾವು: ಸತ್ಯ ಬಯಲಾಗಲು ನಿಷ್ಪಕ್ಷಪಾತ ತನಿಖೆ ಅಗತ್ಯ

*ಶ್ರೀರಾಮ ದಿವಾಣ

# ಉಡುಪಿಯ ಪ್ರತಿಷ್ಠಿತ ಅಷ್ಠ ಮಠಗಳಲ್ಲಿ ಒಂದಾದ ಶಿರೂರು ಮಠದ ಪೀಠಾಧಿಪತಿ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು ಜುಲೈ 19ರಂದು ಬೆಳಗ್ಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಅಸಹಜವಾಗಿ ಸಾವನ್ನಪ್ಪಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಆಹಾರದಲ್ಲಿ ವ್ಯತ್ಯಾಯವುಂಟಾದ ಕಾರಣ ಅನಾರೋಗ್ಯಕ್ಕೀಡಾದ ಸ್ವಾಮೀಜಿಯವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಸ್ವಾಮೀಜಿಯವರು ಚೇತರಿಸಿಕೊಳ್ಳುವ ಬದಲು ಮೃತಪಟ್ಟಿದ್ದಾರೆ.

ಶಿರೂರು ಸ್ವಾಮೀಜಿಯವರ ದೇಹದಲ್ಲಿ ವಿಷದ ಅಂಶ ಪತ್ತೆಯಾಗಿದೆ ಎಂಬುದನ್ನು ಆಸ್ಪತ್ರೆಯ ವೈದ್ಯಕೀಯ ಮೂಲಗಳು ಸ್ಪಷ್ಟಪಡಿಸಿವೆ. ಆಹಾರದಲ್ಲಿ ಸಹಜವಾದ, ಸಾಮಾನ್ಯವಾದ ವ್ಯತ್ಯಯವಾದಲ್ಲಿ ಅದು ಜೀವಹಾನಿಯಾಗುವಷ್ಟರ ಮಟ್ಟಿಗೆ ಆಗುವ ಸಾಧ್ಯತೆ ಖಂಡಿತಾ ಇಲ್ಲ. ಅದೇನಿದ್ದರೂ ವಾಂತಿ, ಭೇದಿ, ನಿತ್ರಾಣ ಇತ್ಯಾದಿಗಳಿಗೆ ಸೀಮಿತವಾಗಿರುತ್ತದೆಯೇ ಹೊರತು, ಜೀವಹಾನಿಯಾಗುವಷ್ಟರ ಮಟ್ಟಿಗೆ ಇರುವುದಿಲ್ಲ ಎಂಬುದು ವೈದ್ಯರ ಖಚಿತ ನುಡಿ.

ಈ ಹಿನ್ನೆಲೆಯಲ್ಲಿ ಮತ್ತು ಅಷ್ಠ ಮಠಾಧೀಶರೊಳಗೆ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿರುವ ಶೀತಲ ಸಮರಗಳು ಇತ್ತೀಚೆಗೆ ತೀವ್ರ ಸ್ವರೂಪ ಪಡೆದಿರುವುದರಿಂದ ಸಹಜವಾಗಿಯೇ ಶಿರೂರು ಸ್ವಾಮೀಜಿಯವರಿಗೆ ಅವರಿಗಾಗದವರು ಊಟದಲ್ಲಿ ವಿಷ ಬೆರೆಸಿ ಕೊಟ್ಟು ಹತ್ಯೆ ನಡೆಸಿರಬಹುದು ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಈ ಮಧ್ಯೆ, ಸ್ವಾಮೀಜಿಯವರ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಅವರು ಪೊಲೀಸರಿಗೆ ದೂರು ನೀಡಿದ್ದು, ಸಾವಿನಲ್ಲಿ ಕೆಲವೊಂದು ನಿಗೂಢತೆಗಳಿದ್ದು, ಸಂಶಯಗಳಿದ್ದು, ತನಿಖೆ ನಡೆಸಬೇಕು ಎಂದು ಕೋರಿಕೊಂಡಿರುವುದರಿಂದ, ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪೊಲೀಸರು ಶಿರೂರು ಸ್ವಾಮೀಜಿಗಳ ಸಾವಿನ ಪ್ರಕರಣವನ್ನು ಅಸಹಜ ಸಾವಿನ ಪ್ರಕರಣ ಎಂದು ಪ್ರಥಮ ವರ್ತಮಾನ ವರದಿ (ಎಫ್ಐಆರ್)ಯನ್ನು ದಾಖಲಿಸಿಕೊಮಡಿದ್ದಾರೆ.

ಶಿರೂರು ಸ್ವಾಮೀಜಿಯವರು ಇತ್ತೀಚೆಗೆ ಅಸೌಖ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ತಮ್ಮ ಮಠದ ಪಟ್ಟದ ದೇವರ ವಿಗ್ರಹಗಳನ್ನು ದಿನನಿತ್ಯದ ಪೂಜೆಗಾಗಿ ಸೋದೆ ಮಠಾಧೀಶರಲ್ಲಿ ನೀಡಿದ್ದರು. ಸೋದೆ ಮಠಾಧೀಶರು ಈ ವಿಗ್ರಹಗಳನ್ನು ಪರ್ಯಾಯ ಮಠಾಧೀಶರಿಗೆ ನೀಡಿ ಕೃಷ್ಣ ದೇವಸ್ಥಾನದಲ್ಲಿ ಪೂಜೆ ಮಾಡುವಂತೆ ಕೋರಿಕೊಂಡಿದ್ದರು.

ಈ ವಿಗ್ರಹಗಳನ್ನು ಶಿರೂರು ಸ್ವಾಮೀಜಿಯವರು ಮರಳಿ ಕೇಳಿದಾಗ, ಪಲಿಮಾರು ಹಾಗೂ ಸೋದೆ ಮಠಾಧೀಶರು ವಾಪಾಸು ನೀಡಲು ನಿರಾಕರಿಸಿದ್ದರು. ”ನೀವು ಶಿಷ್ಯನನ್ನು ಸ್ವೀಕರಿಸಬೇಕು, ಶಿಷ್ಯನನ್ನು ಸ್ವೀಕರಿಸಿದಲ್ಲಿ ಮಾತ್ರ ಪಟ್ಟದ ದೇವರ ವಿಗ್ರಹಗಳನ್ನು ಮರಳಿಸುತ್ತೇವೆ” ಎಂದು ಪರ್ಯಾಯ ಪಲಿಮಾರು-ಸೋದೆ ಸ್ವಾಮೀಜಿಗಳು ಸ್ಪಷ್ಟಪಡಿಸಿದ್ದರು. ಪೇಜಾವರ ಮಠದ ಪೀಠಾಧಿಪತಿಗಳಾದ ವಿಶ್ವೇಶ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ಪರ್ಯಾಯ ಪಲಿಮಾರು, ಸೋದೆ, ಕಾಣಿಯೂರು, ಕೃಷ್ಣಾಪುರ ಮತ್ತು ಅದಮಾರು ಮಠಾಧೀಶರು ಹಲವು ಸುತ್ತಿನ ಗುಪ್ತ ಸಭೆ ಸೇರಿ ಶಿರೂರು ಮಠಾಧೀಶರ ವಿರುದ್ಧ ಕೆಲವೊಂದು ನಿರ್ಣಯಗಳನ್ನು ತೆಗೆದುಕೊಂಡ ಹಿನ್ನೆಲೆಯಲ್ಲಿ ಶಿರೂರು ಸ್ವಾಮೀಜಿಗಳಿಗೆ ಅವರ ಪಟ್ಟದ ದೇವರ ವಿಗ್ರಹಗಳನ್ನು ಪಲಿಮಾರು, ಸೋದೆ ಮಠಾಧೀಶರು ಮರಳಿಸಿಲ್ಲ. ಆರು ಮಠಗಳ ಪೀಠಾಧೀಶರ ಈ ಸವಾಲಿಗೆ ಶಿರೂರು ಸ್ವಾಮೀಜಿಯವರು ಬಲವಾಗಿಯೇ ಸಡ್ಡು ಹೊಡೆದಿದ್ದರು. ಆರಂಭಿಕ ಹೆಜ್ಜೆಯಾಗಿ ಕೆಲವು ಮಠಾಧೀಶರ ಕರ್ಮಕಾಂಡಗಳನ್ನು ಹೊರಗೆಡಹಿದ್ದರು. ಇನ್ನಷ್ಟೂ ಕರ್ಮಕಾಂಡಗಳನ್ನು ಹೊರಗೆಡಹುವುದಾಗಿಯೂ ಹೇಳಿದ್ದರು. ಆರು ಮಠಾಧೀಶರ ವಿರುದ್ಧ ಕ್ರಿಮಿನಲ್ ಮೊಕದ್ದೆಮ ದಾಖಲಿಸುವುದಾಗಿಯೂ ಮುನ್ನೆಚ್ಚರಿಕೆ ನೀಡಿದ್ದರು.

ಅಷ್ಠ ಮಠಾಧೀಶರೊಳಗೆ ಇಂಥ ಸವಾಲು, ಪ್ರತಿ ಸವಾಲುಗಳೊಂದಿಗೆ ಬಹಿರಂಗ ಯುದ್ಧ ನಡೆಯುತ್ತಿರುವಾಗಲೇ ಶಿರೂರು ಸ್ವಾಮೀಜಿ ನಿಗೂಢವಾಗಿ ಸಾವನ್ನಪ್ಪಿರುವುದು ಮತ್ತು ಸ್ವಾಮೀಜಿಗಳ ದೇಹದಲ್ಲಿ ವಿಷದ ಅಂಶ ಪತ್ತೆಯಾಗಿರುವುದು ಇತ್ಯಾದಿ ಅನೇಕ ಕಾರಣಗಳಿಂದಾಗಿ ಶಿರೂರು ಸ್ವಾಮೀಜಿಗಳದು ಒಂದು ಸಹಜ ಸಾವಲ್ಲ, ಇದು ಅತ್ಯಂತ ವ್ಯವಸ್ಥಿತವಾಗಿ, ಪೂರ್ವ ನಿಯೋಜಿತವಾಗಿ ಷಡ್ಯಂತ್ರ ಹೆಣೆದು ನಡೆಸಿದ ಕೊಲೆ ಎಂಬ ಬಲವಾದ ಅನುಮಾನ ಸಾರ್ವಜನಿಕ ವಲಯದಲ್ಲಿ ಸಾರ್ವತ್ರಿಕವಾಗಿ ವ್ಯಕ್ತವಾಗಿದೆ.

ಈ ಎಲ್ಲಾ ಅನುಮಾನಗಳ ಕಾರಣಕ್ಕೆ, ಜೊತೆಗೆ ಕೆಲವೊಂದು ವಿಷಯಗಳು ಈಗಾಗಲೇ ಸ್ಪಷ್ಟವಾಗಿ ಬಹಿರಂಗಗೊಂಡಿರುವ ಕಾರಣಕ್ಕೆ ಶಿರೂರು ಸ್ವಾಮೀಜಿಗಳ ಅಸಹಜ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಿಷ್ಪಕ್ಷಪಾತವಾಗಿ ನಡೆಯುವ ಅಗತ್ಯ ಖಂಡಿತಾ ಇದೆ. ಶಿರೂರು ಸ್ವಾಮೀಜಿಗಳ ವಿರುದ್ಧ ಇರುವವರು ಭಾರೀ ಪ್ರಭಾವಶಾಲಿಗಳಾಗಿರುವುದರಿಂದ, ಸಿಐಡಿ, ಸಿಬಿಐ ತನಿಖೆಯಿಂದ ಈ ಪ್ರಕರಣದಲ್ಲಿ ನ್ಯಾಯ ಸಿಗಬಹುದು, ನ್ಯಾಯಯುತ ತನಿಖೆ ನಡೆಯಬಹುದು ಎಂದು ನಿಖರವಾಗಿ ಹೇಳಲು ಸಾಧ್ಯವೇ ಇಲ್ಲ. ಆದುದರಿಂದ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇರ ಉಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ನಡೆಸುವುದರಿಂದ ಮಾತ್ರ ಸತ್ಯದ ಹತ್ತಿರಕ್ಕೆ ಮುಟ್ಟಲು ಸಾಧ್ಯವಿದೆ. ಇಲ್ಲದೇ ಹೋದಲ್ಲಿ ಈ ಪ್ರಕರಣ ಸಹ ಹತ್ತರಲ್ಲಿ ಹನ್ನೊಂದನೇ ಪ್ರಕರಣದಂತೆ ಮುಚ್ಚಿ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಅಷ್ಠ ಮಠಗಳ ಇತಿಹಾಸದಲ್ಲಿ ಅಷ್ಠ ಮಠಗಳ ಪೀಠಾಧಿಪತಿಯೊಬ್ಬರು ನಿಗೂಢವಾಗಿ ಸಾವನ್ನಪ್ಪುತ್ತಿರುವುದು ಇದು ಮೊದಲನೆಯದ್ದೇನೂ ಅಲ್ಲ. ಮಠಗಳೊಳಗೆ ನಡೆದ ನಿಗೂಢ ಸಾವಿನ ಪ್ರಕರಣಗಳೂ ಹಲವಿವೆ. ಎಲ್ಲಾ ನಿಗೂಢ ಸಾವಿನ ಪ್ರಕರಣಗಳೂ ಅಷ್ಟೇ ನಿಗೂಢವಾಗಿ ಮುಚ್ಚಿಹಾಕಲ್ಪಟ್ಟಿವೆ. ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು, ಮಂತ್ರಿಗಳು ಇಲ್ಲಿನ ಸ್ವಾಮೀಜಿಗಳ ಬೇಕು ಬೇಡಗಳಿಗೆ ಸ್ಪಂದಿಸುವ ಸ್ವಾಭಿಮಾನ ರಹಿತರೂ, ಭ್ರಷ್ಟರೂ ಆಗಿರುವುದರಿಂದ ಇವರೆಲ್ಲಾ ಯಾವತ್ತೂ ಮಠಾಧೀಶರು ನಡೆಸಿದ ಅನ್ಯಾಯ, ಮೋಸ, ವಂಚನೆ, ಕ್ಗರಿಮಿನಲ್ಳ ಕೃತ್ಯಗಳ ವಿರುದ್ಧ ಧ್ವನಿ ಎತ್ತಿದವರಲ್ಲ, ಎತ್ತುವವರೂ ಅಲ್ಲ.

ಉಡುಪಿಯ ಮಠಾಧೀಶರು ಪರ್ಯಾಯ ಸರಕಾರದಂತೆ ಪ್ರಭಾವಶಾಲಿಗಳಾಗಿರುವುದರಿಂದ, ಪ್ರಸ್ತುತ ಇಲ್ಲಿನ ಮಠಾಧೀಶರೊಬ್ಬರೇ ನಿಗೂಢವಾಗಿ ಸಾವನ್ನಪ್ಪಿ, ಉಳಿದ ಆರು ಮಠಾಧೀಶರ ಮೇಲೆಯೇ ಸಂಶಯದ ತೂಗು ಕತ್ತಿ ಸುತ್ತುತ್ತಿರುವುದರಿಂದ, ಶಿರೂರು ಸ್ವಾಮೀಜಿಗಳ ಅಸಹಜ ಸಾವಿನ ಹಿನ್ನೆಲೆಯಲ್ಲಿರುವ ಗೋಮುಖ ವ್ಯಾಘ್ರಗಳು ಬಯಲಾಗಬೇಕಾದರೆ, ಅದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇರ ಎಸ್ತುವಾರಿಯಲ್ಲಿ ಎಸ್ ಐ ಟಿ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡರೆ ಮಾತ್ರ ನಿರೀಕ್ಷಿಸಬಹುದಷ್ಟೆ.

ಶಿರೂರು ಸ್ವಾಮೀಜಿಗಳು ಮಠಕ್ಕೆ ಸೇರಿದ ಬಹುಕೋಟಿ ಮೊತ್ತದ ಜಮೀನುಗಳ ಮಾರಾಟ, ಮಾರಾಟದಿಂದ ಲಭಿಸಿದ ಬಹುಕೋಟಿ ಹಣವನ್ನು  ಉದ್ಯಮಿಗಳಿಗೆ ಬಡ್ಡಿಗೆ ಸಾಲದ ರೂಪದಲ್ಲಿ ನೀಡುವುದೇ ಇತ್ಯಾದಿ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಕೂಡಾ ಇದೆ. ಇದು ಗುಟ್ಟಿನ ವಿಷಯವೇನೂ ಅಲ್ಲ.

27 ವರ್ಷಗಳ ಹಿಂದೆ ಒಂದು ಬಾರಿ ಇದೇ ಶಿರೂರು ಸ್ವಾಮೀಜಿಗಳು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದೂ ಇದೆ. ಈ ಸಂದರ್ಭದಲ್ಲಿ ಕಲ್ಸಂಕದ ಬಳಿ ಆಗ ಇದ್ದ, ಈಗ ಆ ಸ್ಥಳದಲ್ಲಿ ಇಲ್ಲದಿರುವ ಕ್ಲಿನಿಕ್ ಒಂದರಲ್ಲಿ ಸ್ವಾಮೀಜಿಗಳಿಂದ ವಿಷವನ್ನು ವಾಂತಿ ಮಾಡಿಸಿ ಸೂಕ್ತ ಚಿಕಿತ್ಸೆ ನೀಡಿ ಚೇತರಿಸಿಕೊಳ್ಳುವಂತೆ ಮಾಡಿದ ಘಟನೆಯೂ ನಡೆದಿರುವುದರಿಂದ (ಇದು ದಾಖಲಾಗದ ಪ್ರಕರಣ) ಈ ಎಲ್ಲಾ ಮಗ್ಗುಲಗಳಲ್ಲಿಯೂ ತನಿಖೆಯನ್ನು ವಿಸ್ತರಿಸುವ ಅಗತ್ಯವಿದೆ.

ಶಿರೂರು ಸ್ವಾಮೀಜಿಯವರನ್ನು ಪಟ್ಟದಿಂದ ಕೆಳಗಿಳಿಸಲೇಬೇಕೆಂದು ಹಠಕ್ಕೆ ಬಿದ್ದು ಇತ್ತೀಚೆಗೆ ಹತ್ತು ಹಲವಾರು ಸುತ್ತಿನ ಗುಪ್ತ ಸಮಾಲೋಚನೆಗಳನ್ನು ನಡೆಸಿರುವ ಉಳಿದ ಆರು ಮಠಾಧೀಶರೇ ಈ ಪ್ರಕರಣದಲ್ಲಿ ಆರೋಪಿಗಳಾಗಬೇಕೆಂಬ ಯಾವ ದುರುದ್ಧೇಶವೂ ಇಲ್ಲಿ ಸಲ್ಲದು. ಶಿರೂರು ಸ್ವಾಮೀಜಿಗಳ ಸಾವಿಗೆ ಅವರಿಗೆ ಆಗದವರು ವಿಷ ಉಣಿಸಿದ್ದೇ ಕಾರಣವೆಂದಾದರೆ, ಹೀಗೆ ವಿಷ ಕೊಟ್ಟವರು ಮತ್ತು ವಿಷ ಕೊಡಲು ಸುಪಾರಿ ನೀಡಿದವರು, ಷಡ್ಯಂತ್ರ ಹೆಣೆದವರು ಸೆರೆಮನೆ ಸೇರಿ ಶಿಕ್ಷೆಗೆ ಒಳಗಾಗಬೇಕು ಎಂಬುದಷ್ಟೇ ಇಲ್ಲಿ ಮುಖ್ಯವಾಗಿದೆ, ಆಗಬೇಕು. ಹೀಗೆ ಸೆರೆಮನೆ ಶಿಕ್ಷೆಗೆ ಗುರಿಯಾಗಬೇಕಾದವರು ಸ್ವಾಮೀಜಿಗಳೇ ಆಗಬೇಕೇಂದೇನೂ ಇಲ್ಲ. ಬಡ್ಡಿಗೆ ಸಾಲ ಪಡೆದವರೂ ಆಗಬಾರದೆಂದೇನೂ ಇಲ್ಲ. ಒಟ್ಟಿನಲ್ಲಿ ಇಲ್ಲಿ ಕೊಲೆ ಕೃತ್ಯ ನಡೆದಿದ್ದೇ ಹೌದಾದಲ್ಲಿ ಅಪರಾಧಿ ಯಾರೆಂದಾಗಬೇಕು ಎಂಬುದಷ್ಟೇ ಕಾಳಜಿಯಾಗಿದೆ, ಆಗಿರಬೇಕು.

ನಿಗೂಢವಾಗಿ ಸಾವನ್ನಪ್ಪಿದ ಸ್ವಾಮೀಜಿಗಳು ಸರಿ ಇರಲಿಲ್ಲ ಎಂಬ ಪ್ರಚಾರವನ್ನು ಈ ಹಿಂದಿನಿಂದಲೂ ಕೆಲವು ಸ್ವಾಮೀಜಿಗಳ ಸಹಿತ ಹಲವರು ಮಾಡುತ್ತಿದ್ದರು, ಈಗಲೂ ಇದನ್ನೇ ಹೇಳುತ್ತಿದ್ದಾರೆ. ಹಾಗೆ ನೋಡಿದರೆ, ಶಿರೂರು ಸ್ವಾಮೀಜಿಗಳಿಗಿಂತಲೂ ಕೆಳ ಮಟ್ಟದ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸ್ವಾಮೀಜಿಗಳು ಇಲ್ಲಿದ್ದಾರೆ. ಆದುದರಿಂದ, ಸತ್ತವರ ತಲೆಗೆ ನನ್ನದೂ ಒಂದು ಕಲ್ಲು ಇರಲಿ ಎಂಬಂತೆ ನಡೆದುಕೊಳ್ಳುವುದು ಸಮರ್ಥನೀಯವಲ್ಲ.

ಉಡುಪಿಯ ಪೊಲೀಸ್ ಅಧಿಕಾರಿಗಳು ದಕ್ಷತೆ ಮೆರೆಯಲು ಸಾಧ್ಯವಾದರೆ, ಯಾರ ಒತ್ತಡಕ್ಕೂ ಒಳಗಾಗದೆ ನಿಷ್ಪಕ್ಷಪಾತ ತನಿಖೆ ನಡೆಸುವ ಧೈರ್ಯ ಪ್ರದರ್ಶಿಸಿದ್ದೇ ಆದರೆ ಇದು ಸ್ವಾಗತಾರ್ಹವೇ ಆಗಿದೆ.

Leave a Reply

Your email address will not be published. Required fields are marked *