Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಲಾಲಾಜಿ ಮೆಂಡನ್ ಯಾವ ಕ್ಷೇತ್ರದ ಶಾಸಕರು ? ಓಟಿಗೆ ಕಾಪು, ಸದನದಲ್ಲಿ ಗುಬ್ಬಿ !

*ಶ್ರೀರಾಮ ದಿವಾಣ

# ಕರ್ನಾಟಕದ 15ನೇ ವಿಧಾನಸಭೆಯ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ಮೊದಲ ಅಧಿವೇಶನ ಇತ್ತೀಚೆಗೆ ಮುಕ್ತಾಯಗೊಂಡಿದೆ. ಹಲವು ಪ್ರಶ್ನೆಗಳು, ಉತ್ತರಗಳು, ವಿಚಾರಗಳು ಕಲಾಪದಲ್ಲಿ ಮಂಡನೆಯಾದುವು.

ರಾಜ್ಯದ ವಿಧಾನಸಭಾ ಕ್ಷೇತ್ರಗಳಿಂದ ಶಾಸಕರಾಗಿ ಚುನಾಯಿತರಾದವರ ಶಕ್ತಿ, ಸಾಮರ್ಥ್ಯ, ಕಾಳಜಿ ಇತ್ಯಾದಿಗಳೆಲ್ಲವೂ ಸ್ಪಷ್ಟವಾಗುವುದು, ಸಾಬೀತಾಗುವುದು ವಿಧಾನ ಮಂಡಲದಲ್ಲಿಯೇ ಆಗಿದೆ. ಎಷ್ಟು ಮಂದಿ ಶಾಸಕರು ತಮ್ಮ ಶಕ್ತಿ, ಸಾಮರ್ಥ್ಯ, ಕಾಳಜಿಗಳನ್ನು ಸಮರ್ಥವಾಗಿ ಪ್ರದರ್ಶಿಸಲು ಯಶಸ್ವಿಯಾದರು ಎಂಬುದನ್ನು ಪ್ರತೀ ಕ್ಷೇತ್ರದ ಮತದಾರರೂ ತಿಳಿದುಕೊಳ್ಳುವ ಅಗತ್ಯವಿದೆ. ಇದರಲ್ಲಿ ಎಷ್ಟು ಜನರಿಗೆ ಆಸಕ್ತಿ ಇದೆ ಎಂಬುದು ಗೊತ್ತಿಲ್ಲ.

ಎಷ್ಟು ಮಂದಿ ಶಾಸಕರು ವಿಧಾನ ಮಂಡಲದಲ್ಲಿ ಪ್ರಶ್ನೆಗಳನ್ನು ಕೇಳುತ್ತಾರೆ, ಇವರೆಲ್ಲ ಯಾವ ಯಾವ ಪ್ರಶ್ನೆಗಳನ್ನು ಕೇಳುತ್ತಾರೆ, ಕೇಳಿದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆಯೋ, ಸಿಕ್ಕಿದ ಉತ್ತರವಾದರೂ ಏನು, ಎಷ್ಟು ಪ್ರಶ್ನೆಗಳಿಗೆ ಉತ್ತರಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ, ಅದ್ಯಾಕೆ ಸಾಧ್ಯವಾಗಿಲ್ಲ, ಶಾಸಕರು ತಾವು ಯಾವ ಪ್ರಶ್ನೆಗಳನ್ನು ಕೇಳಬೇಕು ಎಂದು ಎಂದಾದರೂ ಕ್ಷೇತ್ರದ ಮತದಾರರಲ್ಲಿ ಕೇಳಿದ್ದಿದೆಯೋ ಇಂಥ ಹತ್ತು ಹಲವಾರು ಪ್ರಶ್ನೆಗಳಿವೆ, ಇಂಥ ಎಲ್ಲಾ ವಿಷಯಗಳನ್ನೂ ಪ್ರತೀಯೊಬ್ಬ ಶಾಸಕರೂ ಕ್ಷೇತ್ರದ ಮತದಾರರಿಗೆ ಸವಿವರವಾದ ಮಾಹಿತಿ ನೀಡುವ ಅಗತ್ಯವಿದೆ. ಕಾರಣ, ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ.

ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾದ ಲಾಲಾಜಿ ಆರ್. ಮೆಂಡನ್ ಅವರು ಎಷ್ಟು ಪ್ರಶ್ನೆಗಳನ್ನು ಸದನದಲ್ಲಿ ಕೇಳಲು ಉದ್ಧೇಶಿಸಿ ಪ್ರಶ್ನೆಗಳನ್ನು ವಿಧಾನಸಭೆಯ ಕಾರ್ಯದರ್ಶಿಗಳ ಮೂಲಕ ವಿಧಾನಸಭಾಧ್ಯಕ್ಷರಿಗೆ ಕಳುಹಿಸಿಕೊಟ್ಟರು ಎಂಬುದು ಗೊತ್ತಿಲ್ಲ. ಆದರೆ, ಲಭ್ಯ ಮಾಹಿತಿಯ ಪ್ರಕಾರ; ಕಾಪು ಶಾಸಕರು ಒಂದು ಪ್ರಶ್ನೆಯನ್ನು ಸದನದಲ್ಲಿ ಕೇಳಲು ಅನುಮತಿ ಕೋರಿ ವಿಧಾನಸಭಾಧ್ಯಕ್ಷರಿಗೆ ಸೂಚನೆ ಕಳುಹಿಸಿರುವುದು ಖಚಿತಪಟ್ಟಿದೆ.

ಕಾಪು ಶಾಸಕರು ಕೇಳಿರುವ ಈ ಒಂದು ಪ್ರಶ್ನೆ ಕಾಪು ಕ್ಷೇತ್ರಕ್ಕೆ ಸಂಬಂಧಿಸಿದ್ದಲ್ಲ ಎನ್ನುವುದು ಸ್ಪಷ್ಟವಾಗಿದೆ. ಕಾಪು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಳಬಹುದಾದ, ಕೇಳಲೇಬೇಕಾದ ಅನೇಕ ವಿಷಯಗಳಿತ್ತು. ಕಳೆದ ಸರಕಾರದ ಅವಧಿಯಲ್ಲಿ ಕಾಂಗ್ರೆಸ್ ಶಾಸಕರಾದ ವಿನಯ ಕುಮಾರ್ ಸೊರಕೆಯವರು ಬೆಳ್ಳೆ ಜನರ ಮತ್ತು ಗ್ರಾಮ ಪಂಚಾಯತ್ ನಿರ್ಣಯದ ವಿರುದ್ಧವಾಗಿ ನೂತನ ಕಾಪು ತಾಲೂಕಿಗೆ ಬೆಳ್ಳೆ ಗ್ರಾಪಂನ್ನು ಸೇರಿಸಿದ ಬಗ್ಗೆಯಾಗಲೀ, ನೂತನ ಕಾಪು ತಾಲೂಕಿಗೆ ಬೇಕಾದ ಯಾವುದೇ ವ್ಯವಸ್ಥೆ ಇನ್ನೂ ಸಹ ಆಗದೇ ಇರುವ ಬಗ್ಗೆ, ಸಿಬ್ಬಂದಿಗಳ ಕೊರತೆ, ತಾಲೂಕು ಮಟ್ಟದ ಕಚೇರಿಗಳು ಇನ್ನೂ ಕೂಡಾ ಆರಂಭಗೊಳ್ಳದಿರುವುದು, ಕಾಪು ತಾಲೂಕಿಗೆ ಸಂಬಂಧಿಸಿದ ಪಹಣಿಗಳ ವಿತರಣೆ ಮತ್ತು ಅರ್ಜಿಗಳ ಸ್ವೀಕರಿಸುವುದನ್ನು ಸ್ಥಗಿತಗೊಳಿಸಿದ ಬಗ್ಗೆ, ವಿಪರೀತ ಮಳೆಯಿಂದಾಗಿ ಆದ ಬೆಳೆ ಹಾನಿ, ಅದಾನಿ ವಿದ್ಯುತ್ ಕಂಪೆನಿ ಕಾಪು ಕ್ಷೇತ್ರದಲ್ಲಿಯೇ ಇದ್ದರೂ ಸಹ ಕಾಪು ಕ್ಷೇತ್ರಕ್ಕೆ ವಿದ್ಯುತ್ ಅಲಭ್ಯತೆ, ಪ್ರತೀ ದಿನ ಪದೇ ಪದೇ ವಿದ್ಯುತ್ ಕಣ್ಣಾಮುಚ್ಚಾಲೆಯಾಟ, ಸುಜ್ಲಾನ್ ಕಂಪೆನಿಯ ಮುಚ್ಚುಗಡೆ ಹೀಗೆ ಹತ್ತು ಹಲವಾರು ಸಮಸ್ಯೆಗಳು, ವಿಷಯಗಳು ಈ ಕ್ಷೇತ್ರದಲ್ಲಿ ರಾಶಿ ಬಿದ್ದಿವೆ.

ಇಂಥ ವಿಷಯಗಳು ನೂರಾರು ಇವೆ. ಇವುಗಳ ಪೈಕಿ ಕೆಲವನ್ನಾದರೂ ಆಯ್ದು ಕಾಪು ಕ್ಷೇತ್ರದ ಶಾಸಕರು ಸದನದಲ್ಲಿ ಪ್ರಶ್ನೆ ಕೇಳಬಹುದಿತ್ತು, ಕೇಳಬೇಕಾಗಿತ್ತು, ಕೇಳಲೇಬೇಕಾಗಿತ್ತು. ಆದರೆ, ಕಾಪು ಶಾಸಕರಿಗೆ ಕ್ಷೇತ್ರಕ್ಕೆ ಸಂಬಂದಪಟ್ಟಂತೆ ಯಾವ ಪ್ರಶ್ನೆಗಳನ್ನೂ ಸದನದಲ್ಲಿ ಕೇಳಬೇಕೆಂದು ಕಾಣಲೇ ಇಲ್ಲ, ಆಶ್ಚರ್ಯವಾಗುತ್ತದೆ, ವಿಷಾದವಾಗುತ್ತದೆ, ಖೇದವಾಗುತ್ತದೆ.

‘’ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಕಸಬಾ ಹೋಬಳಿ ಕರೆಗೋಡನಹಳ್ಳಿವ್ಯಾಪ್ತಿಯ ಜಮೀನಿನ ವಿಸ್ತೀರ್ಣದ ಸರ್ವೇ ಮತ್ತು ಉಪ ಸರ್ವೇ ಹಾಗೂ ಜಮೀನುಗಳ ವರ್ಗಾವಣೆಮತ್ತು ಮಾಲೀಕತ್ವದ ಬಗ್ಗೆ ಕಾರ್ಯವನ್ನು ಮಾಡುವ ಕುರಿತು’’, ಇದು ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ ಮೆಂಡನ್ ಕೇಳಿದ ಅಥವಾ ಕೇಳಲು ಉದ್ಧೇಶಿಸಿದ ಪ್ರಶ್ನೆ !

ಕಾಪು ಕ್ಷೇತ್ರದ ಶಾಸಕರು ಕೇಳಿದ, ಕೇಳಲುದ್ಧೇಶಿಸಿದ ಈ ಮೇಲಿನ ತುಮಕೂರಿಗೆ ಸಂಬಂಧಿಸಿದ ಪ್ರಶ್ನೆಯಿಂದ ಕಾಪು ಕ್ಷೇತ್ರಕ್ಕೆ, ಕಾಪು ಕ್ಷೇತ್ರದ ಮತದಾರರಿಗೆ ಆದ ಲಾಭವೇನು ಎನ್ನುವುದನ್ನು ಶಾಸಕ ಲಾಲಾಜಿಯವರೇ ಕ್ಷೇತ್ರದ ಜನರಿಗೆ ತಿಳಿಸಬೇಕು.

ಹತ್ತಿರದ ಕ್ಷೇತ್ರವಾದ ಉಡುಪಿ ಕ್ಷೇತ್ರದ ಶಾಸಕರಾದ ಕೆ.ರಘುಪತಿ ಭಟ್ಟರು ನೋಡಿ, ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಗೆ ಸಂಬಂಧಪಟ್ಟ ವಿಷಯಗಳನ್ನೇ ಸದನದಲ್ಲಿ ಕೇಳಿದ್ದಾರೆ. ಸಮಸ್ಯೆಯ ಪರಿಹಾರಕ್ಕೆ ಬೇಕಾದ ಕನಿಷ್ಟ ಪ್ರಯತ್ನವನ್ನಾದರೂ ಅವರು ಮಾಡಿದ್ದಾರೆ. ಇವರಂಥೆಯೇ ಉಳಿದ ಕ್ಷೇತ್ರಗಳ ಕೆಲ ಶಾಸಕರು ಸಹ ತಮ್ಮದೇ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಸದನದಲ್ಲಿ ಮಂಡಿಸಿದರು.

ಉಡುಪಿ ಶಾಸಕ ರಘುಪತಿ ಭಟ್ ಸಹಿತ ಉಳಿದ ಕ್ಷೇತ್ರಗಳ ಶಾಸಕರನ್ನು ನೋಡಿಯಾದರೂ ಕಾಪು ಶಾಸಕರು ತಾವು ಮಾಡಿದ ತಪ್ಪನ್ನು ಇನ್ನಾದರೂ ಅರ್ಥಮಾಡಿಕೊಳ್ಳಬೇಕಾಗಿದೆ. ಲಾಲಾಜಿಯವರು ತುಮಕೂರಿನ ಗುಬ್ಬಿ ಕ್ಷೇತ್ರದ ಶಾಸಕರಾಗಿ ಸದನದಲ್ಲಿ ಕೆಲಸ ಮಾಡುವ ಬದಲಾಗಿ ಮುಂದಿನ ದಿನಗಳಲ್ಲಾದರೂ, ತಮ್ಮನ್ನು ಓಟು ಕೊಟ್ಟು ಗೆಲ್ಲಿಸಿದ ಕಾಪು ಕ್ಷೇತ್ರದ ಶಾಸಕರಾಗಿ ಕೆಲಸ ಮಾಡಬೇಕಾಗಿದೆ. ಹೀಗೆ ಮಾಡುವ ದೊಡ್ಡ ಮನಸ್ಸನ್ನು ಅವರು ಇನ್ನಾದರೂ ಮಾಡಬೇಕಾಗಿದೆ.

Leave a Reply

Your email address will not be published. Required fields are marked *