Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯಿದೆ ಜಾರಿಯಾಗಿ 13 ವರ್ಷ ಕಳೆದರೂ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ನೇಮಕ ಮಾಡದ ಬೀದರ್ ಜಿಲ್ಲಾ ಸರಕಾರಿ ಆಸ್ಪತ್ರೆ !

ಪಿಯು ಅತಿಥಿ ಉಪನ್ಯಾಸಕರು ಇನ್ನೆಷ್ಟು ತಿಂಗಳು ಹಸಿದಿರಬೇಕು ?

ಮುಖ್ಯಮಂತ್ರಿಗಳಿಗೊಂದು ಬಹಿರಂಗ ಪತ್ರ

ಇವರಿಗೆ,
ಶ್ರೀ ಎಚ್.ಡಿ. ಕುಮಾರಸ್ವಾಮಿ,
ಮಾನ್ಯ ಮುಖ್ಯಮಂತ್ರಿಗಳು,
ಕರ್ನಾಟಕ ಸರಕಾರ

ಮಾನ್ಯರೆ,

ವಿಷಯ: ಪದವಿಪೂರ್ವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕವಾಗದೆ ಇರುವ ಬಗ್ಗೆ

ವಂದನೆಗಳು,

ರಾಜ್ಯದ ಸರಕಾರಿ ಪದವಿಪೂರ್ವ ಕಾಲೇಜುಗಳು ಶೈಕ್ಷಣಿಕ ಕಾರ್‍ಯಾರಂಭ ನಡೆಸಿ ತಿಂಗಳುಗಳು ಕಳೆದರೂ ಇನ್ನೂ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳಲ್ಲಿ ಕಾರ್‍ಯ ನಿರ್ವಹಿಸುವ ಅತಿಥಿ ಉಪನ್ಯಾಸಕರ ನೇಮಕವಾಗದಿರುವುದು ತೀರಾ ಖೇದಕರ. ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಅತಿಥಿ ಉಪನ್ಯಾಸಕರಿಬ್ಬರೂ ಸಮಸ್ಯೆಯಲ್ಲಿ ಸುಳಿಯಲ್ಲಿ ಸಿಲುಕಿ ಪರದಾಡುವಂತಾಗಿದೆ.

ಖಾಯಂ ಉಪನ್ಯಾಸಕರಿಲ್ಲದೆಡೆ ಖಾಯಂ ಉಪನ್ಯಾಸಕರಂತೆಯೇ ಎಲ್ಲ ಕರ್ತವ್ಯಗಳನ್ನು ನಿರ್ವಹಿಸುವ ಅತಿಥಿ ಉಪನ್ಯಾಸಕರು ಈ ವರೆಗೆ ನೇಮಕಗೊಳ್ಳದಿರುವುದು ಈ ವೃತ್ತಿಯನ್ನೇ ನಂಬಿರುವ ಸಾವಿರಾರು ಜನರ ಬಾಳನ್ನು ನರಕ ಮಾಡಿದೆ. ಈಗ ಬಾರದಿದ್ದರೆ ಮುಂದೆ ಕೆಲಸ ಇಲ್ಲದೆ ಹೋದೀತು ಎಂಬ ಭಯದಿಂದ ಹಾಗೂ ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಾರದು ಎಂಬ ಪವಿತ್ರ ಕರ್ತವ್ಯಪ್ರಜ್ಞೆಯಿಂದಾಗಿ ಪ್ರಸ್ತುತ ಅತಿಥಿ ಉಪನ್ಯಾಸಕರು ಅನಧಿಕೃತವಾಗಿ (ಕಾಲೇಜಿನ ಅಧಿಕೃತ ಅನಧಿಕೃತ ಆದೇಶ) ಯಾವುದೇ ವೇತನವಿಲ್ಲದೆ ಪಾಠ-ಪ್ರವಚನಗಳನ್ನು ನಡೆಸುತ್ತಿದ್ದಾರೆ. ಸಕಾಲಕ್ಕೆ ಅತಿಥಿ ಉಪನ್ಯಾಸಕರ ನೇಮಕ ಮಾಡಿದ್ದರೆ ಅವರ ಬದುಕಿಗೂ ಆಧಾರವಾಗುತ್ತಿತ್ತು, ವಿದ್ಯಾರ್ಥಿಗಳಿಗೂ ಉತ್ತಮ ಪಾಠ ನಡೆಯುತ್ತಿತ್ತು, ಕಾಲೇಜುಗಳ ಚಟುವಟಿಕೆಗಳೂ ಸಾಂಗವಾಗಿ ನೆರವೇರುತ್ತಿದ್ದವು.

ಸಕಾಲದಲ್ಲಿ ನೇಮಕ ಮಾಡಿದ್ದರೆ ಅತಿಥಿ ಉಪನ್ಯಾಸಕರಿಗೆ ಪಾಠ ಇರುವ ದಿನಗಳ ಸಂಬಳವಾದರೂ ದೊರೆಯುತ್ತಿತ್ತು. ಇವರಿಗೆ ರಜೆಯಲ್ಲಿ ಸಂಬಳ ಇಲ್ಲ. ಈಗ ಕೆಲವು ತಿಂಗಳು ಪಾಠ ಮಾಡಿದರೂ ಸಂಬಳ ಇಲ್ಲ. ಇನ್ನು ಉಳಿದ ಕೆಲವು ತಿಂಗಳ ಸಂಬಳದಿಂದ ಮಾನವ ಸಹಜ ಬದುಕು ನಿರ್ವಹಣೆ ಅತಿಥಿ ಉಪನ್ಯಾಸಕರಿಂದ ಸಾಧ್ಯವೇ? ಅತಿಥಿ ಉಪನ್ಯಾಸಕರಿಗೆ ಕೊಡುವ ಕನಿಷ್ಟ ಸಂಬಳದಲ್ಲಿ ಉಳಿತಾಯ ಮಾಡಿ ಸರಕಾರ ಸಾಧಿಸುವುದಾ ದರೂ ಏನು ? ಇಲಾಖೆ ಬಜೆಟ್ ಹೊಂದಿಸಿ ಏನು ಪ್ರಯೋಜನ ?

ಸಂಬಳವೂ ಇಲ್ಲದೆ-ಅತ್ತ ಅಧಿಕೃತ ನೇಮಕ ಆದೇಶವೂ ಇಲ್ಲದೆ ಹಸಿದ ಹೊಟ್ಟೆಯಲ್ಲಿ ಅನಿವಾರ್‍ಯತೆ-ಸೇವಾ ಬದ್ಧತೆಯ ಒಂದೇ ಕಾರಣಕ್ಕೆ ಮಾನವ ಸಹಜ ಹಕ್ಕನ್ನೂ ಪಣಕ್ಕಿಟ್ಟು ದುಡಿಯುತ್ತಿರುವ ಈ ಅತಿಥಿ ಉಪನ್ಯಾಸಕರು ನ್ಯಾಯಕ್ಕಾಗಿ ಹಂಬಲಿಸುತ್ತಿದ್ದಾರೆ. ಈ ದೈನ್ಯತೆಯ ಸ್ಥಿತಿಯಲ್ಲಿ ಅವರು ಎಷ್ಟು ಪ್ರಭಾವಶಾಲಿಯಾಗಿ ತಮ್ಮನ್ನೇ ತೊಡಗಿಸಿಕೊಂಡು ಪಾಠ ಮಾಡಲು ಸಾಧ್ಯ? ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಸಾಧ್ಯ?

ಆದುದರಿಂದ ಪ್ರಾಜ್ಞರಾದ ತಾವು ಅತಿಥಿ ಉಪನ್ಯಾಸಕರ ಸಮಸ್ಯೆಗೆ ಶೀಘ್ರ ಸ್ಪಂದಿಸಿ ಅವರಿಗೆ ಹಾಗೂ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕಾಗಿ ವಿನಂತಿ.

ಧನ್ಯವಾದಗಳು,

ಇಂತು ನೊಂದವರ ಪರ ತಮ್ಮ ಗಮನಸೆಳೆಯುತ್ತಿರುವ,

ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ                                                                ಶ್ರೀರಾಮ ದಿವಾಣ
ನಿಶಾಂತ್, ಚರ್ಚ್ ರೋಡ್,                                                                    ‘ಓಂ ಸಾಯಿ’, ನೆಲ್ಲಿಕಟ್ಟೆ
ಮೂಡುಬೆಳ್ಳೆ-೫೭೬ ೧೨೦                                                                    ಮೂಡುಬೆಳ್ಳೆ-೫೭೬ ೧೨೦
ಉಡುಪಿ ಜಿಲ್ಲೆ                                                                                     ಉಡುಪಿ ಜಿಲ್ಲೆ
ಮೊಬೈಲ್: ೯೮೪೪೬೪೦೦೧೧                                                              ಮೊಬೈಲ್: 8105749711.

ಮೂಡುಬೆಳ್ಳೆ,
೨೫/೦೭/೨೦೧೮

Leave a Reply

Your email address will not be published. Required fields are marked *