Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕಟೀಲಿನ ಕಣ್ಮಣಿ ಶ್ರೀನಿಧಿ ಆಸ್ರಣ್ಣ…

ಅಜಾತಶತ್ರು ಎಂದರೆ ಹೇಗಿರಬೇಕು?

# ಕೆಲವೊಂದು ಬಾರಿ ಮನಸ್ಸುಗಳನ್ನು ಹಿಂಡಿಹಾಕುವಂತಹ ಘಟನೆಗಳು ನಡೆದು ಹೋಗುತ್ತವೆ. ಅದು ದೈವ ನಿರ್ಣಯವೋ, ಆ ಕಾಯದ ಅಜಾಗರೂಕತೆಯೋ ಎಂಬುದೆಲ್ಲಾ ಎರಡನೆಯ ವಿಷಯ. ಒಟ್ಟಿನಲ್ಲಿ ಆಗಬಾರದ್ದು ಆಗಿ ಹೋಗುತ್ತದೆ. ಹೇಗಪ್ಪಾ ಸಹಿಸುವುದು? ಬೇಸರವಾಗಲು ಬಂಧುಗಳೇ ಆಗಬೇಕೆಂದಿಲ್ಲವಲ್ಲಾ… ರಕ್ತಸಂಬಂಧಕ್ಕಿಂತಲೂ ಮೀರಿದ ಸಂಬಂಧದ ಕೊಂಡಿಯೂ ಮನಸ್ಸನ್ನು ಬಂಧಿಸಿಬಿಡುತ್ತದೆ. ಹೌದು ಅಂತಹ ಕೊಂಡಿಯನ್ನು ನಿರ್ಮಿಸುವಲ್ಲಿ ಯಶಸ್ವಿಯಾದ ಕಟೀಲಿನ ಕಣ್ಮಣಿ ಶ್ರೀನಿಧಿ ಆಸ್ರಣ್ಣ. ಆತನ ಬೆನ್ನಿಗೆ ಒಂದು ಗಟ್ಟಿಯಾದ ಹಿಡಿತವಿತ್ತು, ಬಲವಿತ್ತು ಹಾಗೂ ಸಾಮರ್ಥ್ಯವೂ ಇತ್ತು. ಆದರೆ ಆ ಸಾಮರ್ಥ್ಯದ ಗತ್ತುಗಾರಿಕೆ ಆತನಲ್ಲಿ ಎಳ್ಳೆನಿತೂ ಇರಲಿಲ್ಲ ಎಂಬುದು ಇಲ್ಲಿ ಎಲ್ಲರೂ ಅರ್ಥಮಾಡಿಕೊಳ್ಳಬೇಕಾದ ವಿಚಾರ. ಆತ ಕೇವಲ ಆಸ್ರಣ್ಣ ಮನೆತನದ ಕುಡಿಯಾಗಿರಲಿಲ್ಲ. ಸಮಾಜದ ಒಲುಮೆಯ ಕುಡಿಯಾಗಿದ್ದ. ಆತನ ಹೆಸರಿನಲ್ಲಿದ್ದ ನಿಧಿ ಆತನ ವ್ಯಕ್ತಿತ್ವಕ್ಕೆ ಪೂರಕವಾಗಿ ನಿಂತಿತ್ತು. ಕಟೀಲು ಪರಿಸರದಲ್ಲಾಗಲಿ ಅಥವಾ ಹೊರಗಾಗಲಿ, ಆತ ಮಾತನಾಡಿಸದ ವ್ಯಕ್ತಿಯಿಲ್ಲ. ಯಾವ ಜಾಗದಲ್ಲಿ ಯಾವ ಪರಿಸ್ಥಿತಿಯಲ್ಲಿ ಇದ್ದರೂ ಎದುರು ಸಿಕ್ಕವರ ಜೊತೆ ನಲುಮೆಯ ಮಾತುಗಳನ್ನಾಡದೆ ಅವರನ್ನು ಕಳುಹಿಸುತ್ತಿರಲಿಲ್ಲ. ಪ್ರೀತಿ ಹುಟ್ಟುವುದು ಅಲ್ಲಿಯೇ ನೋಡಿ. ಮನುಷ್ಯನಿಗೆ ಮತ್ತೊಬ್ಬ ಮನುಷ್ಯನ ಮೇಲೆ ಪ್ರೀತಿ ಹುಟ್ಟಬೇಕಾದರೆ ಸಹಾಯವನ್ನೇ ಮಾಡಬೇಕೆಂದೇನಿಲ್ಲ, ಸದಾ ಜೊತೆಗೇ ಇರಬೇಕೆಂದೇನಿಲ್ಲ. ಒಂದು ಕ್ಷಣದ ಹೃದಯದ ಮಾತುಗಳು, ಒಂದಷ್ಟು ಪರಿಶುದ್ಧ ಮುಗುಳ್ನಗು ಸಾಕು. ಇವೆಲ್ಲವನ್ನೂ ಹೊಂದಿದ ಕಾರಣಕ್ಕೇ ಈತ ಎಲ್ಲರ ಪ್ರೀತಿಯ ಹುಡುಗ.

ಕಟೀಲು ದೇವಳದ ಜಾತ್ರಾ ಉತ್ಸವ, ನವರಾತ್ರಿ ಉತ್ಸವಗಳ ಒಂದಷ್ಟು ಪಾಲು ಚೆಂದ ಈತನಿಂದಲೇ…

ದೇವಿಗೆ ಈತನ ಚೆಂಡೆಯ ಪೆಟ್ಟುಗಳಲ್ಲಿಯೇ ಪ್ರೀತಿ. ಆ ಸೇವೆಗೆ ವ್ಯವಸ್ಥಿತ ಜನರಿದ್ದರೂ ಈತನ ಪೆಟ್ಟುಗಳಿಲ್ಲದೆ ಚೆಂಡೆ ಸುತ್ತು ಭಾವವಿಲ್ಲದ ಹಾಡಿನಂತೆ. ಎಲ್ಲಿಯ ತನಕದ ಒಲವು ಆ ಚೆಂಡೆಯ ಮೇಲೆ? ಭುಜದಲ್ಲಿ ಸ್ನಾಯುಸೆಳದ ತೊಂದರೆಯಿದ್ದರೂ ಚೆಂಡೆಯನ್ನು ಅದೇ ಹೆಗಲಿಗೇರಿಸಿ ಹೊಮ್ಮಿಸುವ ಠೇಂಕಾರ, ದೇವಿಯ ಮುಂದೆ ಆತನ ಸಹಜ ನಿಲುವು; ಇವೆಲ್ಲವೂ ಒಬ್ಬ ಸಾಮಾನ್ಯನಿಂದ ಮಾಡಬಹುದಾದ ಕಾರ್ಯಗಳಲ್ಲ. ಅದಕ್ಕೊಂದಿಷ್ಟು ಧೃಡತೆ ಬೇಕು, ಭಕ್ತಿ ಬೇಕು ಹೃದಯದಿಂದ ಮೂಡುವ ಉತ್ಸಾಹ ಬೇಕು. ಒಂದಲ್ಲ ಎರಡಲ್ಲ ಮೂರು ಪಂಕ್ತಿಗಳಾದರೂ ಸರಿ, ಅನ್ನಸಂತರ್ಪಣೆಯ ಕೊನೆಯವರೆಗೂ ಬೆನ್ನುಬಗ್ಗಿಸಿ ಬಳಸತೊಡಗಿದರೆ ಅದರಲ್ಲೇ ಆನಂದವನ್ನು ಹೊಂದುತ್ತಿದ್ದವನು. ದೇವಳದ ಪರಿಸರದಲ್ಲಿ ಹೃದಯಶ್ರೀಮಂತಿಕೆಯನ್ನು ಮೆರೆದವನು. ಅದೇ ಕಾರಣಕ್ಕೆ ಈತನೊಬ್ಬ ಬೆಳ್ಳಿನಕ್ಷತ್ರ.


ಆಡು ಮುಟ್ಟದ ಸೊಪ್ಪಿಲ್ಲ ಎಂಬ ಹಾಗೆ ಈತ ಮುಟ್ಟದ ಕ್ಷೇತ್ರಗಳಿವೆಯೇ ?

ಯಕ್ಷಗಾನದ ಉಭಯಾಂಗಗಳನ್ನೂ ಬಲ್ಲವನಾಗಿ ತನ್ನ ಬದುಕಿನ ಒಂದಷ್ಟು ಸಮಯಗಳನ್ನು ಅದಕ್ಕಾಗಿಯೇ ಅರ್ಪಿಸಿದ ಕಲಾವಿದ. ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕು ಬಾರಿ ಕೈಮೂಳೆ ಮುರಿದುಕೊಂಡರೂ ಮತ್ತೆ ಮತ್ತೆ ಕಬಡ್ಡಿಯ ಅಂಗಣದಲ್ಲಿ ಧೂಳೆಬ್ಬಿಸಿದ ದಿಟ್ಟ ಕ್ರೀಡಾಪಟು. ಶೈಕ್ಷಣಿಕ ಜೀವನದುದ್ದಕ್ಕೂ ಶಾಲಾನಾಯಕನಾಗಿ ವಿದ್ಯಾರ್ಥಿಗಳ ಹೃದಯಗೆದ್ದ ನಾಯಕ. ಕಲಿಯುವಿಕೆಯಲ್ಲಿಯೂ ಎತ್ತರದ ಸ್ಥಾನದಲ್ಲಿದ್ದು ಅಧ್ಯಾಪಕರ ಹೃದಯದಲ್ಲೂ ಎತ್ತರದ ಸ್ಥಾನವನ್ನು ಗಳಿಸಿದ ಆದರ್ಶ ವಿದ್ಯಾರ್ಥಿ. ಹೀಗೆ ಸಾಲು ಸಾಲು….

ಕಟೀಲಿನ ಜನತೆಯ ಒಲುಮೆಯ ಮಗ…

ಹೌದು ಎಲ್ಲರಿಗೂ ಅವರವರ ಮಕ್ಕಳಿದ್ದರೂ ಈತ ಕಟೀಲಿನ ಎಲ್ಲವರಿಗೂ ಮಗ. ಹಾಗಿತ್ತು ಆತನ ವರ್ಚಸ್ಸು. ಆತನಿಗೆ ಎಲ್ಲವರೂ ಬೇಕು. ಬದುಕಿನ ಉದ್ದಕ್ಕೂ ತನ್ನ ಸ್ಥಾನಮಾನವನ್ನು ಪಕ್ಕಕ್ಕೆ ಇಟ್ಟೇ ಬದುಕಿದಾತ. ಜಾತಿಧರ್ಮವನ್ನೂ ದೂರಕ್ಕಿಟ್ಟು ಸ್ನೇಹದಲ್ಲಿ ವಿಶ್ವಾಸಗಳಿಸಿದ ಜನರ ಬಂಧು.

ಆದರೆ ವಿಧಿ ಆತನನ್ನು ತುಸು ಬೇಗ ಸೆಳೆಯಿತು. ಇಲ್ಲದೇ ಹೋದರೆ ಆತನಿಂದಾಗಬೇಕಾದ ಕೆಲಸಗಳು ಸಾವಿರವಿತ್ತು. ಅದೇ ವಿಧಿ. ಆಗುವುದನ್ನು ತಪ್ಪಿಸಲು ಸಾಧ್ಯವೇ? ಇಂದು ಆತ ಹರಿಪಾದ ಸೇರಿ ನಮ್ಮನ್ನು ಭೌತಿಕವಾಗಿ ಅಗಲಿದ್ದಾನೆಯಾದರೂ ಆತನು ಎಲ್ಲವರಿಗೂ ಕೊಟ್ಟ ಪ್ರೀತಿ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ತುಂಬಿಟ್ಟ ನಿಧಿ. ಅದನ್ನು ಯಾರೂ ಅಗೆಯುವುದು ಬೇಡ. ಅದು ಹೃದಯದಲ್ಲೇ ಇರಲಿ. ಆ ನಿಧಿಯ ಸಂರಕ್ಷಣೆಯನ್ನು ಮಾಡುವ ಕರ್ತವ್ಯ ನಮ್ಮ ಮೇಲಿದೆ.

ಜೀವದ ಗೆಳೆಯನ ಜೊತೆ ಆಡಿ ಬೆಳೆದ ಆ ಸಂತಸದ ಕ್ಷಣಗಳು ಇನ್ನು ನೆನಪು. ಆತನ ಬಾಯಲ್ಲಿ ನನ್ನ ಹೆಸರನ್ನು ಕೇಳುವ ಭಾಗ್ಯ ಇನ್ನಿಲ್ಲ. ಅತ್ತು ಕಂಬನಿ ಭೌತಿಕವಾಗಿ ಬತ್ತಿದರೂ ಮಾನಸಿಕವಾಗಿ ಇನ್ನೂ ಬತ್ತಲಿಲ್ಲ. ಬತ್ತುವುದೂ ಇಲ್ಲ. ಸ್ನೇಹಕ್ಕೆ ಆತ ಕೊಟ್ಟ ಬಲವದು. ನನ್ನ ಹೃದಯದಲ್ಲಿ ಅದು ಚಿರ.

ನನ್ನ ಶ್ರೀನಿಧಿ ಸಮಾಜಕ್ಕೆ ಅಜಾತಶತ್ರು. ಹೆತ್ತವರ ಮುದ್ದಿನ ಮಗ. ಬಂಧುಗಳಿಗೆ ನಲುಮೆಯ ಬಂಧು. ನನಗೆ ರಕ್ತಸಂಬಂಧಕ್ಕಿಂತಲೂ ಮಿಗಿಲು. ಸ್ನೇಹಿತರಿಗೆ ಉತ್ತಮ ಸ್ನೇಹಿತ. ಆತನಿನ್ನು ಮಿನುಗುವ ನಕ್ಷತ್ರವಷ್ಟೇ.
ಏನು ಆಗಬೇಕೋ ಅದು ಆಗದೇ ಹೋಗಲು ಸಾಧ್ಯವಿಲ್ಲವಲ್ಲಾ. ಇವನ್ನೆಲ್ಲಾ ಹೇಳಿಕೊಳ್ಳದೆ ನನಗೆ ಸಮಾಧಾನವೂ ಇಲ್ಲ.

ಹೇಳಲು ಇನ್ನೂ ಇದೆ. ಅದು ನನ್ನೊಳಗೇ ಇರಲಿ.
ಈ ಮೌನ… ಹೇಳಿಕೊಳ್ಳಲಾಗದ್ದು.

ಕೊನೆಯ ಮಾತು,
ಆತನಿಲ್ಲದ ಕಟೀಲಿನಂಗಳ ಸಹಿಸಲಾಗದ್ದು.

ದೇವಿ ಸದ್ಗತಿಯನ್ನು ಕರುಣಿಸಲಿ ಎಂಬುದೊಂದೇ ಪ್ರಾರ್ಥನೆ

*ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು.

 

Leave a Reply

Your email address will not be published. Required fields are marked *