Realtime blog statisticsweb statistics
udupibits.in
Breaking News
ಉಡುಪಿ: ನೌಕರರಿಗೆ ಕಿರುಕುಳ ಆರೋಪ- ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ್ ಐತಾಳ್ ಅಮಾನತಿಗೆ ಶ್ರೀರಾಮ ದಿವಾಣ ಒತ್ತಾಯ

ಡಾ.ಅಶೋಕ್ ರಿಂದ ಸರಣಿ ಲೈಂಗಿಕ ಕಿರುಕುಳ: ಮಹಿಳಾ ನೌಕರರಿಂದ ಸಾಮೂಹಿಕ ದೂರು !  

ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಮಟ್ಟದ ಸರಕಾರಿ ಅಧಿಕಾರಿಯೊಬ್ಬರು ಹತ್ತಾರು ಮಹಿಳಾ ನೌಕರರಿಗೆ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡಿದ ಪ್ರಕರಣ ನಡೆದಿದ್ದು, ಅಧಿಕಾರಿ ವಿರುದ್ಧ ಬಹಳಷ್ಟು ಮಹಿಳೆಯರು ಲಿಖಿತ ದೂರು ಸಲ್ಲಿಸಿದ ಕಾರಣ ಇಲಾಖಾ ಮಟ್ಟದ ಆಂತರಿಕ ತನಿಖಾ ಪ್ರಕ್ರಿಯೆ ಆರಂಭಗೊಂಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್.ಸಿ.ಎಚ್. (reproductive child health) ವಿಭಾಗದ ಜಿಲ್ಲಾ ಮಟ್ಟದ ಕಾರ್ಯಕ್ರಮ ಅಧಿಕಾರಿ ಡಾ. ಎಚ್. ಅಶೋಕ್ ಎಂಬವರೇ ಮಹಿಳಾ ನೌಕರರಿಗೆ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡಿದ ಆರೋಪಿಗಳಾಗಿದ್ದಾರೆ.

ಡಾ. ಅಶೋಕ್ ಅವರು ಜಿಲ್ಲಾ ಮಟ್ಟದ ಅಧಿಕಾರಿಯಾಗಿರುವುದರಿಂದ ಇಲಾಖೆಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ನೌಕರರಿಗೆ ಆದೇಶ, ಸಲಹೆ, ಸೂಚನೆ ಕೊಡುವ, ಮಾರ್ಗದರ್ಶನ ಮಾಡುವ ಹೆಸರಿನಲ್ಲಿ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ದೂರಲಾಗಿದೆ.

ಡಾ.ಅಶೋಕ್ ಅವರು ಕಳೆದ ಕೆಲವು ಸಮಯಗಳಿಂದ ಈ ರೀತಿಯ ನೀಚ ಕೃತ್ಯವನ್ನು ನಡೆಸುತ್ತಿದ್ದರೆನ್ನಲಾಗಿದೆ. ಆದರೆ, ಮೊದ ಮೊದಲಿಗೆ ಸಂತ್ರಸ್ತರು ಯಾರೂ ಇದನ್ನು ಸಹಿಸಿಕೊಳ್ಳುತ್ತಿದ್ದರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಯ ವಿರುದ್ಧ ದೂರು ನೀಡಲು ಹಿಂದೇಟು ಹಾಕಿದ ಕಾರಣ, ವಿಷಯ ಬೆಳಕಿಗೆ ಬರಲಿಲ್ಲವೆಂದು ಹೇಳಲಾಗಿದೆ.

ಮಹಿಳಾ ನೌಕರರ ತಾಳ್ಮೆ, ಸಹನೆಯನ್ನು ದೌರ್ಬಲ್ಯ ಎಂದು ಭಾವಿಸಿದ ಡಾ.ಅಶೋಕ್ ಅವರು ತಮ್ಮ ನೀಚ ಕೃತ್ಯವನ್ನು ಮಿತಿ ಮೀರಿ ತೋರಿಸತೊಡಗಿದಾಗ, ಸಂತ್ರಸ್ತ ನೌಕರರು ಪರಸ್ಪರ ತಮ್ಮ ತಮ್ಮ ಅಳಲನ್ನು ಹಂಚಿಕೊಳ್ಳತೊಡಗಿದ್ದಾರೆ ಮತ್ತು ಅಂತಿಮವಾಗಿ ಎಲ್ಲರೂ ಒಗ್ಗಟ್ಟಾಗಿ ಲಿಖಿತವಾಗಿಯೇ ದೂರು ನೀಡಲು ನಿರ್ಧರಿಸಿದ್ದಾರೆ.

ಕೊನೆಗೆ, ಕೆಲವೊಂದಿಷ್ಟು ನೌಕರರು ಆರೋಗ್ಯ ಇಲಾಖೆಯ ಆತಂರಿಕ ದೂರು ನಿವಾರಣಾ ಸಮಿತಿಗೆ ದೂರು ಸಲ್ಲಿಸಿದ್ದಾರೆ. ದೂರು ಸಲ್ಲಿಸದ ಇನ್ನೂ ಹಲವರಿಗೆ ಡಾ.ಅಶೋಕ್ ಅವರು ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆನ್ನಲಾಗಿದ್ದು, ಇವರು ಅಂಜಿಕೆಯ ಕಾರಣ ದೂರು ನೀಡಲು ಮುಂದೆ ಬಂದಿಲ್ಲವೆನ್ನಲಾಗಿದೆ.

ಸಂತ್ರಸ್ತ ಮಹಿಳಾ ನೌಕರರು ನೀಡಿದ ದೂರಿನ ಆಧಾರದಲ್ಲಿ ಇಂದು (ಜುಲೈ 31, 2018) ಮಂಗಳೂರಿನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರೋಪಿ ಡಾ.ಅಶೋಕ್ ಹಾಗೂ ಸಂತ್ರಸ್ತ ಮಹಿಳಾ ನೌಕರರ ನಡುವೆ ಮುಖಾಮುಖಿ ತನಿಖೆ ನಡೆಯಲಿದೆ ಎಂದು ತಿಳಿದುಬಂದಿದೆ.

ಇಲಾಖಾ ಮಟ್ಟದಲ್ಲಿ ನ್ಯಾಯ ಸಿಗದೇ ಹೋದಲ್ಲಿ ಸಂತ್ರಸ್ತರು, ಪೊಲೀಸ್ ಇಲಾಖೆಗೆ ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. ಡಾ. ಅಶೋಕ್ ಅವರು ಮಂಗಳೂರಿನಲ್ಲಿ ಆರ್.ಸಿ.ಎಚ್. ನಲ್ಲಿ ಕಳೆದ ಎರಡು ವರ್ಷಗಳಿಂದ ಕರ್ತವ್ಯದಲ್ಲಿದ್ದಾರೆ. ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಮತ್ತು ಉಡುಪಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿದ್ದರು.

Leave a Reply

Your email address will not be published. Required fields are marked *