Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ ಮಾಡಿದವರಿಗೆ ದಂಡ, ಅರ್ಜಿದಾರರಿಗೆ ಪರಿಹಾರ ಕೊಡಿಸುವಲ್ಲಿ ರಾಜ್ಯ ಮಾಹಿತಿ ಆಯುಕ್ತರುಗಳ ಹಿಂದೇಟು: ಶ್ರೀರಾಮ ದಿವಾಣ ಆರೋಪ.

ಅತಿಥಿ ಉಪನ್ಯಾಸಕರ ಶೋಷಣೆ: ಪಿಯು ನಿರ್ದೇಶಕರಿಗೆ ಮಾನವ ಹಕ್ಕು ಆಯೋಗದ ಆದೇಶ

ಉಡುಪಿ: ರಾಜ್ಯದ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ udupibits.in ಸಂಪಾದಕ ಶ್ರೀರಾಮ ದಿವಾಣ ನೀಡಿದ ದೂರನ್ನು ದಾಖಲಿಸಿಕೊಂಡಿರುವ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು, ಮುಂದಿನ ಆರು ವಾರಗಳೊಳಗೆ ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಆಯೋಗಕ್ಕೆ ವರದಿ ಸಲ್ಲಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಆದೇಶಿಸಿದ್ದಾರೆ.

ಕಾಲೇಜು ಆರಂಭವಾಗಿ ಎರಡೂವರೆ ತಿಂಗಳು ಕಳೆದರೂ ಇನ್ನೂ ಸಹ ಅತಿಥಿ ಉಪನ್ಯಾಸಕರನ್ನು ಅಧಿಕೃತವಾಗಿ ನೇಮಕಾತಿ ಮಾಡದಿರುವುದು, ಅನಧಿಕೃತವಾಗಿ ನೇಮಕ ಮಾಡಿದಲ್ಲಿ ವೇತನ ನೀಡದಿರುವುದು, ಅತಿಥಿ ಉಪನ್ಯಾಸಕರನ್ನು ಶೋಷಣೆ ಮಾಡುತ್ತಿರುವ ಜೊತೆಗೆ ಮಕ್ಕಳಿಗೆ ಅನ್ಯಾಯ ಎಸಗಲಾಗುತ್ತಿದೆ ಎಂದು ಶ್ರೀರಾಮ ದಿವಾಣ ಅವರು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು.

ಸಮಸ್ಯೆ ಬಗ್ಗೆ udupibits.in ವಿಶೇಷ ಲೇಖನವನ್ನೂ ಪ್ರಕಟಿಸಿತ್ತು. ಮಾತ್ರವಲ್ಲ, ಮಾನವ ಹಕ್ಕು ಕಾರ್ಯಕರ್ತ ಶ್ರೀರಾಮ ದಿವಾಣ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಜಂಟಿಯಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬರೆದ ಬಹಿರಂಗ ಪತ್ರವನ್ನೂ ಪ್ರಕಟಿಸಿತ್ತು.

udupibits.in ನಲ್ಲಿ ಶ್ರೀರಾಮ ದಿವಾಣ ಬರೆದ ವಿಶೇಷ ಲೇಖನವನ್ನು ಕೆಳಗೆ ಕೊಡಲಾಗಿದೆ.

# ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ಇವುಗಳ ನಡುವೆ ಇರುವ ಸರಕಾರಿ ಪದವಿ ಪೂರ್ವ ಕಾಲೇಜುಗಳ ಅವ್ಯವಸ್ಥೆ ಬಗ್ಗೆ ಹೇಳುವವರು ಕೇಳುವರು ಇಲ್ಲದ ಶೋಚನೀಯ ಪರಿಸ್ಥಿತಿ ಕರ್ನಾಟಕದಲ್ಲಿ ಸೃಷ್ಟಿಯಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಗಳ ನಡುವೆ ಇರುವ ಪದವಿ ಪೂರ್ವ ಶಿಕ್ಷಣ ಇಲಾಖೆ ತ್ರಿಶಂಕು ನರಕವಾಗಿ ಪರಿಣಮಿಸಿರುವುದೇ ಪ್ರಸ್ತುತ ಉದ್ಭವಿಸಿರುವ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯ ತ್ರಿಶಂಕು ನರಕದ ಸ್ಥಿತಿಯನ್ನು ಇದೀಗ ನೇರವಾಗಿ ಅನುಭವಿಸುತ್ತಿರುವವರು ರಾಜ್ಯದ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರು. ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಪ್ರತ್ಯೇಕವಾಗಿ ನಿರ್ದೇಶಕರು ಇದ್ದರೂ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯನ್ನು ನೋಡಿಕೊಳ್ಳಲು ಒಬ್ಬರು ಮಂತ್ರಿಗಳು ಇದ್ದರೂ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೋಳನ್ನಾಗಲೀ, ಕೊರಗನ್ನಾಗಲೀ ಗಮನಿಸುವವರೇ ಇಲ್ಲದಂತಾಗಿದೆ. ಇವರುಗಳ ಕೊರಗಿಗೆ ಕೊರಗುವವರಾಗಲೀ, ಮರುಗುವವರಾಗಲೀ ಇಲ್ಲದಂತಾಗಿರುವುದು ದುರ್ದೈವವೇ ಸರಿ.

ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಕಷ್ಟಗಳನ್ನಾದರೂ ಕೇಳುವವರು ಇದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸಿಕ್ಷಕರನ್ನೂ ಕೇಳುವವರಿದ್ದಾರೆ. ಆದರೆ, ಇವುಗಳ ನಡುವೆ ಇರುವ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರದ ಗಮನ ಸೆಳೆಯುವ, ಶೋಷಣೆಯ ವಿರುದ್ಧ ಧ್ವನಿ ಎತ್ತುವ ಒಂದೇ ಒಂದು ಸಂಘಟನೆಯಾಗಲೀ, ಒಬ್ಬನೇ ಒಬ್ಬ ಜನಪ್ರತಿನಿಧಿಯಾಗಲೀ ರಾಜ್ಯದಲ್ಲಿ ಇಲ್ಲ ಎನ್ನುವುದು ದೌರ್ಭಾಗ್ಯವಲ್ಲದೆ ಮತ್ತೇನು ?

ರಾಜ್ಯದ ಪದವಿ ಪೂರ್ವ ಕಾಲೇಜುಗಳಿಗೆ ಇನ್ನೂ ಸಹ ಅತಿಥಿ ಉಪನ್ಯಾಸಕರ ನೇಮಕ ಪ್ರಕ್ರಿಯೆ ಆಗಿಲ್ಲ. ಪ್ರತೀ ವರ್ಷವೂ ನಡೆಸುವ ಒಂದು ಪ್ರಕ್ರಿಯೆ ಇದಾದರೂ, ಕ್ಲಪ್ತ ಸಮಯದಲ್ಲಿ ಈ ನೇಮಕಾತಿ ಪ್ರಕ್ರಿಯೆಯನ್ನು ನಡೆಸುವ ಕನಿಷ್ಟ ಕರ್ತವ್ಯವನ್ನು ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ ಆಡಳಿತಕ್ಕೆ ಬಂದ ಸರಕಾರವನ್ನು ಮುನ್ನಡೆಸುವ ಮಂತ್ರಿಯಾಗಲೀ, ಇಲಾಖಾಧಿಕಾರಿಗಳಾಗಲೀ ಪ್ರಾಮಾಣಿಕವಾಗಿ, ದಕ್ಷತೆಯಿಂದ, ಮುತುವರ್ಜಿವಹಿಸಿ ಮಾಡದೇ ಇರುವುದು ಸರಕಾರದ ಗಂಭೀರ ಪ್ರಮಾದವೂ ಹೌದು, ಕರ್ತವ್ಯಲೋಪವೂ ಹೌದು.

ಪದವಿ ಪೂರ್ವ ಕಾಲೇಜುಗಳಿಗೆ ಕಾಲೇಜು ಆರಂಭವಾಗಿ ಎರಡೂವರೆ ತಿಂಗಳು ಕಳೆದರೂ ಇನ್ನೂ ಸಹ ಅತೀ ಅಗತ್ಯವೂ, ಅನಿವಾರ್ಯವೂ ಆಗಿರುವ ಅತಿಥಿ ಉಪನ್ಯಾಸಕರ ನೇಮಕ ಪ್ರಕ್ರಿಯೆಯನ್ನು ಸರಕಾರ ಅಧಿಕೃತವಾಗಿ ಇನ್ನೂ ಮಾಡದಿರುವುದು ಒಂದು ಸಮಸ್ಯೆಯಾದರೆ, ಕಾಲೇಜು ಆರಂಭದಲ್ಲಿ ಪಠ್ಯದ ಬೋಧನೆಯಲ್ಲಿ ವಿಳಂಬ ಮಾಡಿದರೆ ಪರೀಕ್ಷೆ ಸಂದರ್ಭಕ್ಕಾಗುವಾಗ ಮಕ್ಕಳಿಗೆ ಪಠ್ಯ ಪೂರ್ಣಗೊಂಡಿರುವುದಿಲ್ಲ ಎಂಬ ಕಾರಣಕ್ಕೆ ಪ್ರಾಂಶುಪಾಲರು ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖಾಧಿಕಾರಿಗಳು ಅನಧಿಕೃತವಾಗಿ ಅತಿಥಿ ಉಪನ್ಯಾಸಕರನ್ನು ಕಾಲೇಜಿಗೆ ಕರೆಸಿಕೊಂಡು ಮಕ್ಕಳಿಗೆ ಪಾಠ ಮಾಡಿಸುತ್ತಿರುವುದು ಪ್ರತೀ ವರ್ಷದ ಒಂದು ಪ್ರಕ್ರಿಯೆಯಾಗಿ ನಡೆದುಕೊಂಡು ಬಂದಿದೆ.

ಉಪನ್ಯಾಸಕರಾಗಬೇಕೆಂಬ ಕನಸಿನೊಂದಿಗೆ, ಪದವಿ ಪಡೆದುಕೊಂಡು ಉಪನ್ಯಾಸಕರಾಗಲು ಬೇಕಾದ ಎಲ್ಲಾ ಅನುಭವವನ್ನು ದಕ್ಕಿಸಿಕೊಂಡು ಅತಿಥಿ ಉಪನ್ಯಾಸಕರಾಗಿರುವ ಬಡಪಾಯಿಗಳು ಪ್ರತೀ ವರ್ಷದ ಆಶಾವಾದದಂತೆ, ಬದುಕಿನ ಅನಿವಾರ್ಯತೆಯಲ್ಲಿ ಮತ್ತು ಮಕ್ಕಳ ಮೇಲಿನ ಪ್ರೀತಿಯೊಂದಿಗೆ ವೇತನವೇ ಇಲ್ಲದ ಸ್ಥಿತಿಯಲ್ಲಿ ಅತಿಥಿ ಉಪನ್ಯಾಸಕರೆಂಬ ಪಾತ್ರವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ.

ಅತಿಥಿ ಉಪನ್ಯಾಸಕರ ದಭರ್ಬಲ್ಯವನ್ನು ಚೆನ್ನಾಗಿಯೇ ಅರಿತುಕೊಂಡಿರುವ ಸರಕಾರ, ಬಡ ಪದವೀಧರ ಅತಿಥಿ ಉಪನ್ಯಾಸಕರನ್ನು ಜೀತದಾಳುಗಳಂತೆ, ಗುಲಾಮರಂತೆ ನಡೆಸಿಕೊಳ್ಳುತ್ತಿರುವುದು ಮಾತ್ರ ದುರಂತವೇ ಆಗಿದೆ. ಈ ಅತಿಥಿ ಉಪನ್ಯಾಸಕರು  ಉಳಿದ ಖಾಯಂ ಉಪನ್ಯಾಸಕರಿಗಿಂತ ಪಾಠ ಪ್ರವಚನಗಳಲ್ಲಾಗಲೀ, ಇತರ ಯಾವೊಂದು ಕಾರ್ಯನಿರ್ವಹಣೆಯಲ್ಲಾಗಲೀ ಯಾವುದರಲ್ಲೂ ಕಡಿಮೆ ಇಲ್ಲದಂತೆ ಖಾಯಂ ಉಪನ್ಯಾಸಕರಿಗೆ ಸರಿಸಮವಾಗಿ ಪದವಿ ಪೂರ್ವ ಕಾಲೇಜುಗಳಲ್ಲಿ ತಮ್ಮ ತಮ್ಮ ಪಾತ್ರವನ್ನು, ಕರ್ತವ್ಯವನ್ನು ನಿಭಾಯಿಸಿಕೊಂಡು ಮುಂದುವರಿಯುತ್ತಿರುವುದನ್ನು ಗಮನಿಸಿದರೆ ಗಮನಿಸಿದವರಿಗೆ ಯಾರಿಗೇ ಆದರೂ ಈ ಅತಿಥಿ ಉಪನ್ಯಾಸಕರ ಬಗ್ಗೆ ಅನುಕಂಪವೂ, ಸಹಾನುಭೂತಿಯೂ ಉಂಟಾಗದೇ ಇರಲು ಸಾಧ್ಯವೇ ಇಲ್ಲ.

ಅತಿಥಿ ಉಪನ್ಯಾಸಕರು ಇದುವರೆಗೂ ಸಂಘಟಿತರಾಗದೆ ಅಸಂಘಟಿತರಾಗಿಯೇ ಉಳಿದಿರುವುದು ಮತ್ತು ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಸಹಿತ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಇತರ ಯಾವುದೇ ಸಂಘಗಳಾಗಲೀ, ಶಾಸಕರಾಗಲೀ, ವಿಧಾನ ಪರಿಷತ್ತು ಸದಸ್ಯರಾಗಲೀ ಯಾರೂ ಕೂಡಾ ಬಡಪಾಯಿ, ಶೋಷಿತ, ನೊಂದ ಸರಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಕಟ-ಸಂಕಷ್ಟಗಳನ್ನು ಅರ್ಥ ಮಾಡಿಕೊಳ್ಳುವ ಕನಿಷ್ಟ ಪ್ರಯತ್ನವನ್ನೂ ಮಾಡದಿರುವುದು ಮತ್ತು ಅತಿಥಿ ಉಪನ್ಯಾಸಕರ ಕಂಠಕ್ಕೆ ಬಾಯಿಯಾಗದಿರುವುದು ವಿಷಾದನೀಯ.

ಪದವಿ ಪೂರ್ವ ಕಾಲೇಜುಗಳ ತರಗತಿಗಳು ಆರಂಭವಾಗಿ ತಿಂಗಳು ಕಳೆಯುತ್ತಾ ಬಂದರೂ, ಸರಕಾರ ಇನ್ನೂ ಸಹ ಅತಿಥಿ ಉಪನ್ಯಾಸಕರನ್ನು ಅಧಿಕೃತವಾಗಿ ನೇಮಕ ಮಾಡದಿರುವುದು ಒಂದೆಡೆಯಾದರೆ, ಅತಿಥಿ ಉಪನ್ಯಾಕರಿಂದ ಅನಧಿಕೃತವಾಗಿ ಕಾಲೇಜು ಆರಂಭದ ಲಾಗಾಯ್ತಿನಿಂದಲೇ ಮಕ್ಕಳಿಗೆ ಪಾಠ ಪ್ರವಚನ ಮಾಡಿಸುತ್ತಿರುವುದು ಇನ್ನೊಂದೆಡೆ. ಇವುಗಳ ಮಧ್ಯೆ, ಪ್ರತೀ ವರ್ಷವೂ ನೇಮಕಾತಿ ಪ್ರಕ್ರಿಯೆ ಮುಗಿದ ಬಳಿಕವೂ ವೇತನ ನೀಡುವಲ್ಲಿ ಸರಕಾರ ಅನ್ಯಾಯವೆಸಗುತ್ತಿರುವುದು ನಡೆಯುತ್ತಿದ್ದು, ಇದು ಸರಕಾರ ಅತಿಥಿ ಉಪನ್ಯಾಸಕರಿಗೆ ಎಸಗುತ್ತಿರುವ ಮಹಾಮೋಸವೇ ಆಗಿದೆ. ಇದೊಂದು ವಂಚನೆಯೆಂದರೂ ತಪ್ಪಾಗದು.

ಸರಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಕಾಲೇಜು ಆರಂಭವಾಗಿ ಎರಡೂವರೆ ತಿಂಗಳು ಕಳೆದರೂ ಇನ್ನೂ ಸಹ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡದೇ ಇರುವ ರಾಜ್ಯ ಸರಕಾರದ ಕ್ರಮ ಮಕ್ಕಳಿಗೆ ಮತ್ತು ಮಕ್ಕಳ ಪೋಷಕರಿಗೆ ಮಾಡುವ ಅನ್ಯಾಯವೂ ಹೌದು. ಹಾಡಹಗಲು, ನೇರಾನೇರ ಸರಕಾರ ಮಾಡುವ ಈ ಅನ್ಯಾಯಕ್ಕೆ ಕ್ಷಮೆಯೇ ಇಲ್ಲ.

ಒಬ್ಬ ಕೂಲಿ ಕಾರ್ಮಿಕನಿಗೆ ಸಿಗುವ ಸಂಪಾದನೆಯ ಅರ್ಧದಷ್ಟು ಸಂಪಾದನೆಯೂ ಒಬ್ಬ ಅತಿಥಿ ಉಪನ್ಯಾಸಕನಿಗೆ ಸಿಗದಿರುವುದು, ಕೊಡುವ ವೇತನವನ್ನೂ ಪ್ರತೀ ತಿಂಗಳು ನೀಡದೆ ವರ್ಷಕ್ಕೆರಡು ಬಾರಿ ಎರಡು ಕಂತುಗಳಲ್ಲಿ ವೇತನವನ್ನು ನೀಡುವ ಸರಕಾರದ ಅವೈಜ್ಞಾನಿಕ ಕ್ರಮ, ಹೀಗೆ ವರ್ಷಕ್ಕೆರಡು ಬಾರಿ ವೇತನ ನೀಡುವಾಗಲೂ ಕೆಲವು ತಿಂಗಳ ವೇತನವನ್ನು ನೀಡದೆ ವಂಚಿಸುವುದು ಇತ್ಯಾದಿ ಅನೇಕ ಅಸಮರ್ಥನೀಯ ಕ್ರಮಗಳನ್ನು ನೋಡಿದರೆ ಇವರ ಪಾಲಿಗೆ ಸರಕಾರ ಒಂದು ಸರಕಾರವಾಗಿ ನಡೆದುಕೊಳ್ಳಲು ವಿಫಲವಾಗಿದೆ ಎನ್ನುವುದು ನಿಸ್ಸಂಶಯ.

ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕನಿಷ್ಟ ಎರಡರಿಂದ ಗರಿಷ್ಟ ಐವರು ಅತಿಥಿ ಉಪನ್ಯಾಸಕರು ಇದ್ದು, ಇವರಲ್ಲಿ ಕೆಲವರು ಇಪ್ಪತ್ತಕ್ಕೂ ಅಧಿಕ ವರ್ಷಗಳಿಂದ ಯಾವುದೇ ರೀತಿಯ ಕನಿಷ್ಟ ಉದ್ಯೋಗ ಭದ್ರತೆಯೂ ಇಲ್ಲದೆ ಪ್ರಾಮಾಣಿಕವಾಗಿ ವಿದ್ಯಾರ್ಥಿಗಳಿಗೆ ನಿರಂತರವಾಗಿ ಬೋಧನೆ ಮಾಡುತ್ತಿದ್ದಾರೆ.

ಇಷ್ಟೆಲ್ಲಾ ಇದ್ದರೂ ಸರಕಾರ ರಾಜ್ಯದ ನೂರಾರು ಅತಿಥಿ ಉಪನ್ಯಾಸಕರನ್ನು ಹಾಗೂ ಸಾವಿರಾರು ಪದವಿ ಪೂರ್ವ ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು, ಇದರಿಂದಾಗಿ ಅತಿಥಿ ಉಪನ್ಯಾಸಕರು ಘನತೆ ಮತ್ತು ಗೌರವದಿಂದ ಬದುಕುವುದು ಕಷ್ಟಸಾಧ್ಯವಾಗಿ ಪರಿಣಮಿಸಿದೆ. ಇದೊಂದು ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ಪ್ರಕರಣವಾಗಿದೆ.

Leave a Reply

Your email address will not be published. Required fields are marked *