Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ ಮಾಡಿದವರಿಗೆ ದಂಡ, ಅರ್ಜಿದಾರರಿಗೆ ಪರಿಹಾರ ಕೊಡಿಸುವಲ್ಲಿ ರಾಜ್ಯ ಮಾಹಿತಿ ಆಯುಕ್ತರುಗಳ ಹಿಂದೇಟು: ಶ್ರೀರಾಮ ದಿವಾಣ ಆರೋಪ.

ಸಿಗರೇಟು, ಗಾಂಜಾ, ಮದ್ಯ ವ್ಯಸನದಂತೆ ಮೊಬೈಲ್ ಆನ್‌ಲೈನ್‌ಗೇಮ್ ವ್ಯಸನವಾಗುತ್ತಿದೆ: ಡಾ.ಪಿ.ವಿ.ಭಂಡಾರಿ ಕಳವಳ

ಉಡುಪಿ: ಮೊಬೈಲ್‌ಗಳಿಂದಾಗಿ ಒಳ್ಳೆಯದೂ ಇದೆ, ಕೆಟ್ಟದ್ದೂ ಇದೆ. ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಎನ್ನುವುದು ಮೊಬೈಲ್ ನ್ನು ಉಪಯೋಗಿಸುವವರಿಗೆ ಸ್ಪಷ್ಟವಾಗಿ ಗೊತ್ತಿರಬೇಕು. ಇಂದು ಅಗತ್ಯವಾಗಿ ಬೇಕಾಗಿರುವ ಕೆಟ್ಟದ್ದಾದ ಮೊಬೈಲ್ ಗಳಲ್ಲಿನ ಆನ್‌ಲೈನ್ ಗೇಮ್‌ಗಳು ಸಹ ಮದ್ಯವ್ಯಸನದಂತೆ ವ್ಯಸನವಾಗಿ ಪರಿಣಮಿಸಿದೆ. ಇದು ದುರಂತ ಎಂದು ಖ್ಯಾತ ಮನೋತಜ್ಞರಾದ ಡಾ.ಪಿ.ವಿ. ಭಂಡಾರಿ ಕಳವಳ ವ್ಯಕ್ತಪಡಿಸಿದರು.

ಆಗಸ್ಟ್ ೧೨ರಂದು ಉಡುಪಿಯ ಬೀಡಿನಗುಡ್ಡೆಯಲ್ಲಿ ನಡೆದ ‘ಜನಪರ ಚಿಂತನ ವೇದಿಕೆ’ಯ ಆಗಸ್ಟ್ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸಾಮಾಜಿಕ ಜಾಲತಾಣಗಳು: ಸಮಸ್ಯೆ ಮತ್ತು ಪರಿಹಾರ’ ಎಂಬ ವಿಷಯದಲ್ಲಿ ಅವರು ಮಾತನಾಡುತ್ತಿದ್ದರು.

ಆನ್‌ಲೈನ್ ಗೇಮ್ ವ್ಯಸನ ಯಾವ ವಯಸ್ಸಿನಲ್ಲೂ ಯಾರಿಗೆ ಬೇಕಾದರೂ ಬರಬಹುದು ಎಂದ ಅವರು ಉದಾಹರಣೆಗಳ ಸಹಿತ ವಿವರಿಸಿದರು. ಮೆದುಳನ್ನು ಆಕರ್ಷಿಸಬಲ್ಲ ನಿರ್ಧಿಷ್ಟ ಬಣ್ಣಗಳನ್ನು ಕೂಡಾ ಕೆಲವು ಕಂಪೆನಿಗಳು ಮೊಬೈಲ್ ಬಳಕೆ ಮಾಡುವವರನ್ನು ಸೆಳೆಯುವ ಸಲುವಾಗಿ ಆಯ್ಕೆ ಮಾಡಿಕೊಂಡು ಉಪಯೋಗಿಸುತ್ತವೆ. ಎಲ್ಲದರ ಪರಿಣಾಮವಾಗಿ ಗಾಂಜಾ, ಮದ್ಯ, ಸಿಗರೇಟಿನಂತೆ `ಸೈಕೋ ಆಕ್ಟಿವಿಟಿ’ಗೆ ಬೇಕಾದಂಥ ಗುಣವನ್ನು ಮೊಬೈಲ್ ಆನ್‌ಲೈನ್ ಗೇಮ್‌ಗಳ ಮೂಲಕ ಸೃಷ್ಟಿಸಲಾಗಿದೆ ಎಂದು ಡಾ.ಪಿ.ವಿ.ಭಂಡಾರಿ ತಿಳಿಸಿದರು.
ಮೊದಲು ಹೆತ್ತವರು, ಹಿರಿಯರು ಮೊಬೈಲ್ ಬಳಕೆ ಮಾಡುವುದನ್ನು ನಿರ್ಧಿಷ್ಟ ಸಮಯಕ್ಕೆ ನಿಗದಿಗೊಳಿಸಬೇಕು, ಹದಿನೆಂಟು ವಯಸ್ಸು ಆಗುವವರೆಗೆ ಮಕ್ಕಳು ವಾಟ್ಸಾಪ್, ಫೇಸ್‌ಬುಕ್ ಇತ್ಯಾದಿಗಳ ಕಡೆಗೆ ಗಮನ ಕೊಡದಂತೆ ನೋಡಿಕೊಳ್ಳಬೇಕು, ಪಠ್ಯಕ್ಕೆ ಪೂರಕವಾದ ಮಾಹಿತಿಗಳನ್ನು ತಿಳಿದುಕೊಳ್ಳಲು ಮಾತ್ರವೇ ಇರುವಂಥ ಪ್ರತ್ಯೇಕವಾದ ಗೂಗಲ್ ಗಳನ್ನು ಮೊಬೈಲ್‌ಗೆ ಅಳವಡಿಸಬೇಕು, ಹೆತ್ತವರು ಮಕ್ಕಳಿಗೆ ಬೇರೆಯೇ ಮೊಬೈಲ್ ತೆಗೆಸಿಕೊಡುವ ಬದಲು ತಮ್ಮಲ್ಲಿರುವ ಮೊಬೈಲ್‌ಗಳನ್ನು ಮಾತ್ರ ನಿರ್ಧಿಷ್ಟ ಸಮಯದಲ್ಲಿ ಮಕ್ಕಳಿಗೆ ನೀಡಬೇಕು, ಮಕ್ಕಳು ಮೊಬೈಲ್ ನಲ್ಲಿ ಏನನ್ನು ನೋಡುತ್ತಾರೆ, ನೋಡಿದ್ದಾರೆ ಎಂಬುದು ಹೆತ್ತವರ ಗಮನಕ್ಕೆ ಬರುವಂಥ ವ್ಯವಸ್ಥೆ ಇದ್ದು, ಇದನ್ನು ಹೆತ್ತವರು ತಮ್ಮ ಮೊಬೈಲ್ ಗಳಿಗೆ ಅಳವಡಿಸಬೇಕು ಎಂದು ಡಾ.ಭಂಡಾರಿ ಸಲಹೆ ನೀಡಿದರು.

ಇಂದಿನ ಮಕ್ಕಳಲ್ಲಿ ಸ್ವಂತ ಚಿಂತನೆ ಕಡಿಮೆಯಾಗಿದೆ. ಸುಳ್ಳನ್ನೇ ಸತ್ಯವೆಂದು ಬೇಗನೇ ನಂಬಿಬಿಡುತ್ತಾರೆ. ಪ್ರಶ್ನಿಸುವ, ಸತ್ಯವನ್ನು ತಿಳಿದುಕೊಳ್ಳುವ ಕಡೆಗೆ ಮಕ್ಕಳು ಗಮನಕೊಡಬೇಕು. ಉತ್ತಮ ಚಿಂತನೆಗಳ ಮೂಲಕ ಮಕ್ಕಳು ವೈಜ್ಞಾನಿಕ ಚಿಂತನೆಗಳನ್ನು ಮೈಗೂಡಿಸಿಕೊಲ್ಳಬೇಕು ಎಂದು ಡಾ.ಪಿ.ವಿ.ಭಂಡಾರಿ ಹೇಳಿದರು.

ಜನಪರ ಚಿಂತನ ವೇದಿಕೆಯ ಅಧ್ಯಕ್ಷರಾದ ಪ್ರಕಾಶ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷರಾದ ಶ್ರೀರಾಮ ದಿವಾಣ ಪ್ರಸ್ತಾವನೆಗೈದರು. ಅಕ್ಷತಾ ವಿಶ್ವನಾಥ್ ಸ್ವಾಗತಿಸಿದರು. ಸುಜಾತಾ ಪ್ರಕಾಶ ಪೂಜಾರಿ ವಂದನಾರ್ಪಣೆ ಸಲ್ಲಿಸಿದರು. ಸುಮಾ ಜಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕು. ಪಂಚಮಿ ಪ್ರಾರ್ಥನಾ ಗೀತೆ ಹಾಡಿದರು.

Leave a Reply

Your email address will not be published. Required fields are marked *