Realtime blog statisticsweb statistics
udupibits.in
Breaking News
ಉಡುಪಿ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಬೆಂಬಲಿಸಿ ವರದಿ ಪ್ರಕಟಿಸಿದ ಉದಯವಾಣಿ ವಿರುದ್ಧ ಶ್ರೀರಾಮ ದಿವಾಣರಿಂದ ಚುನಾವಣಾ ಆಯೋಗಕ್ಕೆ ದೂರು

ಬಾಲಕರ ಆದಾಯ ಪ್ರಮಾಣಪತ್ರ ಕೇಳಿದ ಬೇಜವಾಬ್ದಾರಿ ಸರಕಾರ !

ಉಡುಪಿ: ಮಗುವಿನ ಹೆಸರಲ್ಲಿ ಕುಟುಂಬದ ಇನ್‌ಕಂ ಸರ್ಟಿಫಿಕೇಟ್ (ಆದಾಯ ಪ್ರಮಾಣ ಪತ್ರ)ನ್ನು ಬಿಪಿಎಲ್ ಕಾರ್ಡಿಗೆ ಕಡ್ಡಾಯಗೊಳಿಸಿದ ರಾಜ್ಯ ಸರಕಾರದ ಅವೈಜ್ಞಾನಿಕ ಕ್ರಮದಿಂದಾಗಿ ಸಾರ್ವಜನಿಕರು ಮತ್ತೆ ತೊಂದರೆ ಅನುಭವಿಸುವಂತಾಗಿದೆಯಾದರೆ, ತಳ ಮಟ್ಟದ ಕಂದಾಯ ಇಲಾಖಾ ಅಧಿಕಾರಿಗಳು ಕೈಚೆಲ್ಲುವಂತಾಗಿದೆ.

ಬಿಪಿಎಲ್ ಪಡಿತರ ಚೀಟಿಗೆ 7 ವರ್ಷ ಹಾಗೂ ಮೇಲ್ಪಟ್ಟ ಮಕ್ಕಳ ಹೆಸರನ್ನು ಸೇರಿಸುವುದಕ್ಕಾಗಿ ಅರ್ಜಿ ಸಲ್ಲಿಸಿದರೆ, ಮಗುವಿನ ಹೆಸರಿನಲ್ಲಿ ಕುಟುಂಬದ ಆದಾಯ ಪ್ರಮಾಣಪತ್ರವನ್ನು ತನ್ನಿ ಎಂದು ವಾಪಸ್ ಕಳುಹಿಸಲಾಗುತ್ತಿದೆ. ಕುಟುಂಬವೇ ಬಡತನ ರೇಖೆಗಿಂತ ಕೆಳಗಿನ ವರಮಾನ ಹೊಂದಿರುವುದು ಸರಕಾರವೇ ನೀಡಿದ ಪ್ರಮಾಣಪತ್ರಗಳಿಂದ ಸ್ಪಷ್ಟವಾಗಿರುವಾಗ, ಕಾನೂನಿನಲ್ಲಿ ದುಡಿಯಲು ಹಾಗೂ ವ್ಯಾವಹಾರಿಕ ಅವಕಾಶವನ್ನೇ ಹೊಂದಿರದ ಮಗುವಿನ ಹೆಸರಿನಲ್ಲಿ ಮತ್ತೆ ತಂದೆ-ತಾಯಿ (ಕುಟುಂಬದ) ಆದಾಯ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿರುವ ಸರಕಾರದ ಕ್ರಮಕ್ಕೆ ಬಡಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಧಿಕಾರಿಗಳು ಎಸಿ ರೂಮಿನಲ್ಲಿ ಕುಳಿತು ತಯಾರಿಸುವ ಹೊಸ ಹೊಸ ಅರ್ಥವಿಲ್ಲದ ನಿಯಮಗಳನ್ನು ಸಭೆ-ಸಮಾರಂಭಗಳಿಗೇ ಸೀಮಿತವಾಗಿರುವ ಜನಪ್ರತಿನಿಧಿಗಳು ಪರಿಶೀಲಿಸುವ ಗೋಜಿಗೇ ಹೋಗದಿರುವುದು ಈ ಅರಾಜಕತೆಗೆ ಕಾರಣವಾಗಿದೆ.

ಹೊಸ ಸಾಫ್ಟ್‌ವೇರ್ ಅವಾಂತರ ರೇಶನ್ ಕಾರ್ಡ್‌ಗೆ ಹೆಸರು ಸೇರ್ಪಡೆಗೆ ಸಂಬಂಧಿಸಿದಂತೆ ಸರಕಾರ ಹೊಸ ಸಾಫ್ಟ್‌ವೇರನ್ನು ರಚಿಸಿದ್ದು, ಇದರಲ್ಲಿ 7 ವರ್ಷ ಮತ್ತು ಮೇಲ್ಪಟ್ಟ ಮಕ್ಕಳ ಹೆಸರನ್ನು ಸೇರ್ಪಡೆಗೊಳಿಸಬೇಕಾದರೆ ಮಗುವಿನ ಹೆಸರಿನಲ್ಲಿ ತಂದೆ-ತಾಯಿಯ ಆದಾಯ ಪ್ರಮಾಣಪತ್ರವನ್ನು ತರಬೇಕಿದೆ. ಬಾಲಕಾರ್ಮಿಕ ಪದ್ಧತಿ ನಿಷೇಧದಲ್ಲಿರುವಾಗ, ಮಕ್ಕಳಿಗೆ ದುಡಿಯಲು ಅವಕಾಶವಿಲ್ಲ. ಹಾಗಾಗಿ ಅವರಿಗೆ ಯಾವುದೇ ಆದಾಯವಿಲ್ಲ. ಕುಟುಂಬದ ಆದಾಯ ಪ್ರಮಾಣಪತ್ರವನ್ನು ಈ ಹಿಂದೆಯೇ ಸಲ್ಲಿಸಲಾಗಿದ್ದು ಕಾಲ ಕಾಲಕ್ಕೆ ಪರಿಶೀಲನೆ ನಡೆಸಲಾಗುತ್ತದೆ.

ಹೀಗಿರುವಾಗ ಮಗುವಿನ ಹೆಸರಿನಲ್ಲಿ ಪ್ರಮಾಣಪತ್ರ ಕೇಳುವುದು ಯಾವುದೇ ಪರಿಶೀಲನೆ ನಡೆಸದೆ ಹಾಗೂ ಪ್ರಾಯೋಗಿಕವಾಗಿ ಸಾಫ್ಟ್‌ವೇರ್ ಅನುಷ್ಠಾನದ ಬಗೆಗಿನ ಸಮಸ್ಯೆಗಳನ್ನು ಅವಲೋಕಿಸದ ಅಧಿಕಾರಿಗಳ ಬೇಜವಾಬ್ದಾರಿಯುತ ಕ್ರಮ ಎಂದು ಜನಸಾಮಾನ್ಯರು ಹಲುಬುವಂತಾಗಿದೆ. ಆದರೆ ಜನಪ್ರತಿನಿಧಿಗಳಿಗೆ ಈ ವಿಷಯಗಳು ಬಿದ್ದು ಹೋಗದಿರುವುದರಿಂದ ಮತ್ತು ಮತ ಹಾಕುವ ಜನರಿಗೂ ಜಾತಿ, ಮತ, ಹಣ, ಹೆಂಡವೇ ಮಾನದಂಡವಾಗಿರುವುದರಿಂದ ವ್ಯವಸ್ಥೆ ಸುಧಾರಿಸುವುದು ಸಾಧ್ಯವೇ ಇಲ್ಲ ಎಂಬಂತಾಗಿದೆ. ಅದಾಗ್ಯೂ ಸರಕಾರದ ಈ ಧೋರಣೆಯಿಂದ ಪ್ರಾಮಾಣಿಕವಾಗಿ ಬಿಪಿಎಲ್ ಸ್ಥಾನ ಹೊಂದಿರುವ ಬಡವರಿಗೆ ಸಂಕಷ್ಟ ಉಂಟಾಗಿದೆ.

ಅಡುಗೆಯೇ ಮಾಡದೆ ಊಟಕ್ಕೆ ಕರೆದ ಸರಕಾರ, ಸರಕಾರದ ಜನದ್ರೋಹಿ ನಡವಳಿಕೆಗಳಿಗೆ ಅದರಲ್ಲೂ ವಿಶೇಷವಾಗಿ ಹೆಚ್ಚಿನ ಆರ್ಥಿಕತೆ ಹೊಂದಿರುವ ಕಂದಾಯ ಇಲಾಖೆಯಲ್ಲಿನ ಬೇಜವಾಬ್ದಾರಿ ಬಗ್ಗೆ ವಿಶೇಷ ಸಂಚಿಕೆಗಳನ್ನೇ ಬಿಡುಗಡೆ ಮಾಡಬಹುದಾಗಿದೆ. ಮಾರ್ಚ್ ಒಂದರಿಂದ ಎಲ್ಲ ಬಗೆಯ ಭೂ ಪರಿವರ್ತನೆಗಳನ್ನು ಕಡ್ಡಾಯವಾಗಿ ಆನ್‌ಲೈನ್ ಮೂಲಕವೇ ಮಾಡಬೇಕೆಂದು ಆದೇಶ ಹೊರಡಿಸಿದ್ದ ಇಲಾಖೆ/ಸರಕಾರ, ಮೂರು ತಿಂಗಳು ಕಳೆದರೂ ಸಾಫ್ಟ್‌ವೇರ್ ಒದಗಿಸಿರಲಿಲ್ಲ. ಈ ವರೆಗೂ ಈ ಸಮಸ್ಯೆ ಬಗೆಹರಿದಿಲ್ಲ. ಸಾಫ್ಟ್‌ವೇರ್ ಸಿದ್ಧಗೊಳಿಸುವ ಮೊದಲೇ ಆದೇಶ ಹೊರಡಿಸಿದ ಇಲಾಖೆಯ ನಿರ್ಲಕ್ಷ್ಯ ಅಡುಗೆಯೇ ಮಾಡದೆ ಊಟಕ್ಕೆ ಕರೆದಂತಿತ್ತು.

ಆರ್‌ಟಿಸಿ ಬೇಕಾದರೆ ಹರಕೆ ಹೇಳಬೇಕು !

ಹೊಸ ತಾಲೂಕುಗಳಿಗೆ ಸಂಬಂಧಿಸಿದಂತೆ ತಿಂಗಳುಗಳು ಕಳೆದರೂ ಭೂಮಿ ಕೇಂದ್ರಗಳಲ್ಲಿ ಅರ್ಜಿ ಸ್ವೀಕಾರ ಮಾಡುತ್ತಿಲ್ಲ. ಆರ್‌ಟಿಸಿ ಸರಿಯಾಗಿ ದೊರೆಯದೆ ತಿಂಗಳುಗಳೇ ಕಳೆದಿವೆ. ಆರ್‌ಟಿಸಿ ಬಂದರೆ ಪುಣ್ಯವೆಂದು ಹರಕೆ ತೀರಿಸುವ ಪರಿಸ್ಥಿತಿ ಇದೆ. ಕಂದಾಯ ಇಲಾಖೆ ಐಆರ್‌ಟಿಸಿ ಒದಗಿಸಿದ್ದರೂ ಅದೂ ಪೇಮೆಂಟ್ ತೆಗೆದುಕೊಳ್ಳದೆ ಮತ್ತು ತಾಂತ್ರಿಕ ಸಮಸ್ಯೆಯಿಂದ ಕೈಗೊಡುತ್ತಿದೆ. ಆರ್‌ಆರ್‌ಟಿಯಲ್ಲಿ ಫೈಲುಗಳು ಕೊಳೆಯುತ್ತಿದ್ದು ಕಾಸು ಕೊಟ್ಟರಷ್ಟೇ ಫೈಲು ಮುಂದೆ ಹೋಗುತ್ತದೆ.

ಕಾಪು ತಹಶೀಲುದಾರರ ಕಚೇರಿಯಲ್ಲಿ ಮಾಹಿತಿ ಹಕ್ಕಿಗೆ ಉತ್ತರ ಪಡೆಯಲೂ ಜಿಲ್ಲಾಧಿಕಾರಿ ಬಳಿ ಹೋಗಬೇಕಿದೆ. ಜನರಿಂದ ತುಂಬಿತುಳುಕುವ ಕಾಪು ನೆಮ್ಮದಿ ಕೇಂದ್ರದಲ್ಲಿ ಕಾಲಿನ ಶಕ್ತಿ ಕಳೆದುಕೊಂಡವರು ತೆವಳುತ್ತಾ ಒಳಗೆ ಹೋಗಬೇಕಿದೆ. ಕನಿಷ್ಟ ವೀಲ್‌ಚೇರ್ ಒದಗಿಸುವ ಯೋಗ್ಯತೆಯನ್ನೂ ಇಲಾಖೆ ಹೊಂದಿಲ್ಲ. ‘ಅಡಚಣೆಗೆ ಸಹಕರಿಸಿ’ ಎಂಬ ಬೋರ್ಡುಗಳು ಕಂದಾಯ ಕಚೇರಿಗಳಲ್ಲಿ ಕಡ್ಡಾಯ ಎಂಬಂತೆ ಇವೆ.

ಜನರ ಸಮಸ್ಯೆಗೆ ಪ್ರತಿನಿಧಿಗಳ ನಿರ್ಲಕ್ಷ್ಯ; ಸರಕಾರಕ್ಕೆ ಬಿದ್ದು ಹೋಗಿಲ್ಲ !

ಸಾಮಾನ್ಯರಲ್ಲಿ ಸಾಮಾನ್ಯ ಜನರು ಅನುಭವಿಸುವ ಈ ಮೇಲಿನ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಯಾವುದೇ ಕಾಳಜಿ ವಹಿಸುವುದಿಲ್ಲ. ಸರಕಾರಕ್ಕೂ ಇದು ಬಿದ್ದು ಹೋಗಿಲ್ಲ. ಯಾಕೆಂದರೆ ದೊಡ್ಡ ಮಟ್ಟದ ಹೋರಾಟ ಸಂಘಟಿಸಲು ಈ ಜನವರ್ಗಕ್ಕೆ ಸಾಧ್ಯವಿಲ್ಲ. ಪ್ರತಿಭಟನೆ ಆಗದೆ ವಿಚಾರಗಳನ್ನು ಸರಕಾರದ ಮುಂದಿಡಲು ಮುಖ್ಯವಾಹಿನಿಯ ದೊಡ್ಡ ಮಾಧ್ಯಮಗಳಿಗೂ ಆಸಕ್ತಿಯಿಲ್ಲ.

Leave a Reply

Your email address will not be published. Required fields are marked *