Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಆಗಸ್ಟ್ 26: ಕಾಂತಾವರದಲ್ಲಿ ಡಾ.ಪದ್ಮನಾಭ ಭಟ್ಟರಿಂದ ‘ಪ್ರಜಾಧರ್ಮವಾಗಿ ಶರಣಧರ್ಮ’ ಉಪನ್ಯಾಸ

ಉಡುಪಿ: ಕಾರ್ಕಳ ತಾಲೂಕು ಕಾಂತಾವರದ ಅಲ್ಲಮ ಪ್ರಭು ಪೀಠದ 7ನೇ ವರ್ಷದ 80ನೇ ತಿಂಗಳ ‘ಅನುಭವದ ನಡೆ ಅನುಭಾವದ ನುಡಿ’ ಕಾರ್ಯಕ್ರಮವು ಆಗಸ್ಟ್ 26ರಂದು ಮಧ್ಯಾಹ್ನ 3 ಗಂಟೆಗೆ ಕಾಂತಾವರ ಕನ್ನಡ ಭವನದ ‘ಅಲ್ಲಮ ಪ್ರಭು ವೇದಿಕೆ’ಯಲ್ಲಿ ನಡೆಯಲಿದೆ.

ತಿಂಗಳ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯರಾದ ಡಾ.ಎಸ್.ಪದ್ಮನಾಭ ಭಟ್ ಅವರು ‘ಪ್ರಜಾಧರ್ಮವಾಗಿ ಶರಣ ಧರ್ಮ’ ಎಂಬ ವಿಷಯದಲ್ಲಿ ಉಪನ್ಯಾಸ ನಿಡಲಿದ್ದಾರೆ.

ದ.ಕ.ಜಿಲ್ಲೆಯ ಕಟೀಲು ಸಮೀಪದ ಎಕ್ಕಾರು ಮೂಲದವರಾದ ಡಾ.ಪ್ರೊ.ಪದ್ಮನಾಭ ಭಟ್ ಅವರು, ಎಕ್ಕಾರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನೂ, ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನೂ, ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪದವಿ, ಮಂಗಳೂರು ವಿಶ್ವವಿದ್ಯಾನಿಲಯದಿಂದ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿ ಪದವಿಯನ್ನೂ ಪಡೆದ ಸಾಧಕರು.

ಐಕಳದ ಪೊಂಪೈ ಕಾಲೇಜು ಮತ್ತು ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, ಬಳಿಕ ಶಿರ್ವದ ಸಂತ ಮೇರಿ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿ ಇತ್ತೀಚೆಗಷ್ಟೇ ನಿವೃತ್ತರಾದವರು.

ಯು.ಜಿ.ಸಿ.ಯಿಂದ ಕಿರು ಮತ್ತು ಬೃಹತ್ ಸಂಶೋಧನಾ ಅನುದಾನಕ್ಕೆ ಪಾತ್ರರಾಗಿರುವ ಡಾ.ಎಸ್.ಪದ್ಮನಾಭ ಭಟ್ ಅವರು, 25 ವರ್ಷಗಳ ಸುಧೀರ್ಘ ಸಂಶೋಧನಾ ಅನುಭವವನ್ನು ಹೊಂದಿರುವವರು. ಮುಂಬಯಿಯ ಜೆ.ಜೆ.ಟಿ. ವಿಶ್ವವಿದ್ಯಾಲಯ ಮತ್ತು ಹಂಪಿ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ಮಾರ್ಗದರ್ಶಕರಾಗಿ ಹತ್ತು ಮಂದಿ ಉಪನ್ಯಾಸಕರಿಗೆ ಎಂ.ಫಿಲ್ ಪದವಿಗೆ ಹಾಗೂ ಒಬ್ಬರಿಗೆ ಪಿ ಎಚ್.ಡಿ ಪದವಿ ಪಡೆಯಲು ಕಾರಣರಾದವರು ಇವರು.

ಇವರ 250ಕ್ಕೂ ಅಧಿಕ ಸಾಹಿತ್ಯಕ ಲೇಖನ ಮತ್ತು ಕಥೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ರಾಜಕೀಯ ಸಿದ್ಧಾಂತ ಮತ್ತು ರಾಜ್ಯಶಾಸ್ತ್ರದ ಕುರಿತಾಗಿ ಕನ್ನಡದಲ್ಲಿ 20 ಕೃತಿಗಳು ಮತ್ತು ಇಂಗ್ಲೀಷಿನಲ್ಲಿ 6 ಕೃತಿಗಳು ಪ್ರಕಟಗೊಂಡಿವೆ. 3 ಸಂಪಾದಿತ ಕೃತಿಗಳನ್ನು ಪ್ರಕಟಿಸಿರುವ ಡಾ.ಭಟ್ ಅವರ ತುಳು ಕೃತಿಯೂ ಪ್ರಕಟಗೊಂಡಿದೆ.

ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ 25ಕ್ಕೂ ಮಿಕ್ಕಿದ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿರುವ ಇವರು, ಆರು ವರ್ಷಗಳ ಕಾಲ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.)ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದವರು. ಮಂಗಳೂರು, ಮೂಡುಬಿದಿರೆ ಮತ್ತು ಬೆಳ್ತಂಗಡಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನಗಳಲ್ಲಿ ಹಾಗೂ ಅಖಿಲ ಭಾರತ ತುಳು ಸಾಹಿತ್ಯ ಸಮ್ಮೇಳನದಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿ ಯಶಸ್ವಿಯಾದವರು ಪ್ರೊ.ಪದ್ಮನಾಭ ಭಟ್ ಅವರು.

ಕರ್ನಾಟಕ ಸಾಹಿತ್ಯ ಪರಿಷತ್, ಮಂಗಳೂರು ವಿಶ್ವವಿದ್ಯಾನಿಲಯ ಉಪನ್ಯಾಸಕರ ಸಂಘ, ಅಂತಾರಾಷ್ಟ್ರೀಯ ರಾಜ್ಯಶಾಸ್ತ್ರ ಸಂಘ, ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಉಜಿರೆ ಎಸ್.ಡಿ.ಎಂ. ಕಾಲೇಜಿನ ಅಧ್ಯಯನ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿರುವ ಡಾ.ಎಸ್.ಪದ್ಮನಾಭ ಭಟ್ ಅವರು, ಮಂಗಳೂರು ವಿಶ್ವವಿದ್ಯಾನಿಲಯ ರಾಜ್ಯ ಶಾಸ್ತ್ರ ಪರೀಕ್ಷಾ ಮಂಡಳಿಯ ಮುಖ್ಯಸ್ಥರಾಗಿ ಮತ್ತು ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ದುಡಿದವರು. ಪ್ರಸ್ತುತ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೈದಿಕ, ವಾಸ್ತು, ಜ್ಯೋತಿಷ್ಯ ಮತ್ತು ಜಲ ಪರಿಶೋಧನೆ ಇತ್ಯಾದಿ ಕ್ಷೇತ್ರಗಳಲ್ಲಿಯೂ ಆಸಕ್ತರಾಗಿರುವ ಡಾ.ಪದ್ಮನಾಭ ಭಟ್ ಅವರು ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿದ್ದಾರೆ.

Leave a Reply

Your email address will not be published. Required fields are marked *