Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ ಮಾಡಿದವರಿಗೆ ದಂಡ, ಅರ್ಜಿದಾರರಿಗೆ ಪರಿಹಾರ ಕೊಡಿಸುವಲ್ಲಿ ರಾಜ್ಯ ಮಾಹಿತಿ ಆಯುಕ್ತರುಗಳ ಹಿಂದೇಟು: ಶ್ರೀರಾಮ ದಿವಾಣ ಆರೋಪ.

ಅಂಚೆ ಕಚೇರಿಗಳಲ್ಲಿ ಪೋಸ್ಟಲ್ ಆರ್ಡರ್ ಅಲಭ್ಯತೆ: ಮೋದಿ ಸರಕಾರದಿಂದ ಭ್ರಷ್ಟ ವ್ಯವಸ್ಥೆಯ ರಕ್ಷಣೆಗೆ ಪರೋಕ್ಷ ಹುನ್ನಾರ ?

ಉಡುಪಿ: ಮಾಹಿತಿ ಹಕ್ಕು ಅಧಿನಿಯಮ-2005ರ ಬಗ್ಗೆ ವ್ಯಾಪಕ ಪ್ರಚಾರ, ಜನಜಾಗೃತಿ ಕಾರ್ಯಕ್ರಮಗಳ ಜೊತೆಗೆ ಅಧಿನಿಯಮವನ್ನು ಸಬಲಗೊಳಿಸಬೇಕಾದ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ, ಇದೀಗ ಕಾಯಿದೆಗೆ ತಿದ್ದುಪಡಿ ಮಾಡಲು ಮುಂದಾಗುವುದರೊಂದಿಗೆ ಕಾಯಿದೆಯನ್ನು ಸದುಪಯೋಗ ಪಡಿಸುವವರಿಗೆ ತೊಂದರೆ ಕೊಡುವ ದುರುದ್ಧೇಶದಿಂದ ಇಂಡಿಯನ್ ಪೋಸ್ಟಲ್ ಆರ್ಡರ್ (ಐಪಿಒ)ಗಳನ್ನು ಮುದ್ರಿಸದೆ ಪರೋಕ್ಷವಾಗಿ ಭ್ರಷ್ಟಾಚಾರವನ್ನು ಪೋಷಿಸಲು ಮುಂದಾಗಿದೆಯೇ, ಜನದ್ರೋಹಿಯಾಗುತ್ತಿದೆಯೇ ಎಂಬ ಭಾವನೆ ಮಾಹಿತಿ ಹಕ್ಕು ಕಾರ್ಯಕರ್ತರ ಮನದಲ್ಲಿ ಮೂಡಿದೆ.

ಕಳೆದ ವರರ್ಷದ ವರೆಗೆ ಉಪ ಅಂಚೆ ಕಚೇರಿಗಳಲ್ಲಿ ಸಹ ಇಂಡಿಯನ್ ಪೋಸ್ಟಲ್ ಆರ್ಡರ್ ಲಭ್ಯವಾಗುತ್ತಿತ್ತು. ಆದರೆ, ಕಳೆದ ಕೆಲವು ತಿಂಗಳುಗಳಿಂದ ಉಪ ಅಂಚೆ ಕಚೇರಿಗಳಲ್ಲಿ ಇವುಗಳು ಲಭ್ಯವಾಗುವುದನ್ನು ಸ್ಥಗಿತಗೊಳಿಸಲಾಯಿತು. ಪ್ರಸ್ತುತ, ಜಿಲ್ಲಾ ಪ್ರಧಾನ ಅಂಚೆ ಕಚೇರಿಗಳಲ್ಲೂ ಇಂಡಿಯನ್ ಪೋಸ್ಟಲ್ ಆರ್ಡರ್ ಗಳು ಲಭ್ಯವಿಲ್ಲದಂತಾಗಿದೆ.

ಮಾಹಿತಿ ಹಕ್ಕು ಅರ್ಜಿಗಳನ್ನು ಸಲ್ಲಿಸಬೇಕಾದರೆ ಇವುಗಳ ಜೊತೆಗೆ ಹತ್ತು ರೂಪಾಯಿಗಳ ಚೆಕ್ ಅಥವಾ ಡಿಡಿ ಅಥವಾ ಇಂಡಿಯನ್ ಪೋಸ್ಟಲ್ ಆರ್ಡರ್ ಲಗ್ತೀಕರಿಸುವುದು ಅಗತ್ಯವಾಗಿದೆ. ಚೆಕ್ ಅಥವಾ ಡಿ.ಡಿ.ಗಿಂತ ಇಂಡಿಯನ್ ಪೋಸ್ಟಲ್ ಆರ್ಡರ್ ಗಳನ್ನು ಅಂಚೆ ಕಚೇರಿಗಳಿಂದ ಪಡೆದುಕೊಂಡು ಮಾಹಿತಿ ಹಕ್ಕು ಅರ್ಜಿಗೆ ಲಗ್ತೀಕರಿಸಿ ಸಂಬಂಧಿಸಿದ ಕಚೇರಿಗಳಿಗೆ ಸಲ್ಲಿಸುವುದು ಸುಲಭವೂ, ಸರಳವೂ ಆಗಿತ್ತು.

ಅರ್ಜಿದಾರರು ಕೋರಿದ ಮಾಹಿತಿ ಅಥವಾ ದಾಖಲೆಗಳನ್ನು ಸಂಬಂಧಪಟ್ಟ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಅರ್ಜಿದಾರರಿಗೆ ನೀಡಲು ಸಿದ್ದರಿದ್ದಾಗ ಮಾಹಿತಿ ಅಥವಾ ದಾಖಲೆಗಳಿಗೆ ಎಷ್ಟು ಬೇಕೋ ಅಷ್ಟು ಮೊತ್ತವನ್ನು ಇಂಡಿಯನ್ ಪೋಸ್ಟಲ್ ಆರ್ಡರ್ ಮೂಲಕ ಸಲ್ಲಿಸುವುದು ಸುಲಭದ ದಾರಿಯಾಗಿದೆ.

ಇವುಗಳಿಗೆ ಮಾತ್ರವಲ್ಲ, ಬೇರೆ ಬೇರೆ ವಿಷಯಗಳಲ್ಲಿಯೂ ಒಬ್ಬ ಅರ್ಜಿದಾರ ಸರಕಾರಕ್ಕೆ ಹಣ ಪಾವತಿಸುವ ಅಗತ್ಯವಿದ್ದಾಗ ಅಗತ್ಯ ಮೊತ್ತವನ್ನು ಇಂಡಿಯನ್ ಪೋಸ್ಟಲ್ ಆರ್ಡರ್ ಮೂಲಕ ಪಾವತಿಸಲು ಅನುಕೂಲವಾಗುತ್ತಿತ್ತು.

ಆದರೆ, ಇದೀಗ ಎಲ್ಲವೂ ತಲೆಕೆಳಗಾಗಿದೆ. ಜನರು ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ. ಐಪಿಒ ಅಲಭ್ಯತೆಯಿಂದಾಗಿ ಸಾರ್ವಜನಿಕರು ಆರ್ಥಿಕ ನಷ್ಟವನ್ನೂ ಅನುಭವಿಸುವಂತಾಗಿದೆ.

ನರೇಂದ್ರ ಮೋದಿ ಪ್ರಧಾನಿಯಾದ ಬೆನ್ನಿಗೆ, ”ನನ್ನ ಗಮನಕ್ಕೆ ತಾರದೆ ಏನನ್ನೂ ಮಾಡಬಾರದು” ಎಂದು ಪ್ರತೀ ಇಲಾಖೆಗಳ ಪ್ರಧಾನ ಕಾರ್ಯದರ್ಶಿಯವರಿಗೂ ಆದೇಶಿಸಿದ್ದರು ಎಂಬುದು ಈಗಾಗಲೇ ಬಹಿರಂಗಗೊಂಡ ಸತ್ಯ. ಈ ಕಾರಣದಿಂದಾಗಿ, ಮೋದಿ ಸಂಪುಟದಲ್ಲಿನ ಬಹುತೇಕ ಮಂತ್ರಿಗಳೂ ‘ನಾಮ್ ಕೇ ವಾಸ್ತೆ ಮಂತ್ರಿಗಳು’ ಅಥವಾ ‘ರಬ್ಬರ್ ಸ್ಟಾಂಪ್ ಮಂತ್ರಿಗಳು’ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ.

ಆದುದರಿಂದ, ಇಂಡಿಯನ್ ಪೋಸ್ಟಲ್ ಆರ್ಡರ್ ಗಳ ಅಲಭ್ಯತೆಗೆ, ಕೊರತೆಗೆ ಪ್ರಧಾನಿ ನರೇಂದ್ರ ಮೋದಿಯೇ ಹೊಣೆಯಾಗುತ್ತಾರೆ. ಭ್ರಷ್ಟ ವ್ಯವಸ್ಥೆಯನ್ನು ರಕ್ಷಿಸಲು ಪ್ರಧಾನಿ ಮೋದಿ ಐಪಿಒಗಳನ್ನು ಬೇಕಾದಷ್ಟು ಪ್ರಮಾಣದಲ್ಲಿ ಮುದ್ರಿಸದೇ ಇರಲು ಅಂಚೆ ಇಲಾಖೆಗಯ ಅಧಿಕಾರಿಗಳಿಗೆ ಮೌಖಿಕ ಆದೇಶಗಳನ್ನೇನಾದರೂ ಮಾಡಿರಬಹುದ ಎಂಬ ಸಂಶಯಗಳು ಸಹಜವಾಗಿಯೇ ಮೂಡಲು ಕಾರಣವಾಗಿದೆ.

Leave a Reply

Your email address will not be published. Required fields are marked *