Realtime blog statisticsweb statistics
udupibits.in
Breaking News
ಉಡುಪಿ: ಅಂಚೆ ಕಚೇರಿಗಳಲ್ಲಿ ಇಂಡಿಯನ್ ಪೋಸ್ಟಲ್ ಆರ್ಡರ್ ಅಲಭ್ಯತೆ- ಸಮಸ್ಯೆ ಪರಿಹರಿಸಲು ಮಾಹಿತಿ ಹಕ್ಕು ಕಾರ್ಯಕರ್ತರಿಂದ ಪ್ರಧಾನಿಗೆ ಪತ್ರ

ಸರಣಿ ಲೈಂಗಿಕ ಕಿರುಕುಳ: ಡಾ.ಅಶೋಕ್ ವಿರುದ್ಧ ಜಿಲ್ಲಾಧಿಕಾರಿಗೆ ತನಿಖಾ ವರದಿ ಸಲ್ಲಿಕೆ  

ಉಡುಪಿ: ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್.ಸಿ.ಎಚ್ ವಿಭಾಗದ ಅಧಿಕಾರಿಯಾಗಿ ಡಾ.ಎಚ್. ಅಶೋಕ್ ಅವರು ಇಲಾಖೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹತ್ತಾರು ಮಂದಿ ಮಹಿಳಾ ನೌಕರರಿಗೆ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಜಿಲ್ಲಾ ಆರೋಗ್ಯಾಧಿಕಾರಿಯವರು ಡಾ.ಅಶೋಕ್ ವಿರುದ್ಧದ ಆರೋಪಗಳು ತನಿಖೆಯಲ್ಲಿ ಖಚಿತಪಟ್ಟಿದೆ ಎಂದು ಜಿಲ್ಲಾಧಿಕಾರಿಯವರಿಗೆ ತನಿಖಾ ವರದಿ ಸಲ್ಲಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್.ಸಿ.ಎಚ್. (reproductive child health) ವಿಭಾಗದ ದ.ಕ. ಜಿಲ್ಲಾ ಮಟ್ಟದ ಕಾರ್ಯಕ್ರಮ ಅಧಿಕಾರಿಯಾಗಿರುವ ಡಾ. ಅಶೋಕ್ ಅವರು ತಮ್ಮ ಕೈಕೆಳಗೆ ಕರ್ತವ್ಯ ಸಲ್ಲಿಸುತ್ತಿದ್ದ ಮಹಿಳಾ ನೌಕರರಿಗೆ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ ಗಂಭೀರ ಪ್ರಕರಣವೊಂದು ತಿಂಗಳ ಹಿಂದೆ ಮಹಿಳಾ ನೌಕರರು ಸಾಮೂಹಿಕವಾಗಿ ತಮ್ಮ ಮೇಲಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸುವ ಮೂಲಕ ಬೆಳಕಿಗೆ ಬಂದಿತ್ತು.

ಡಾ. ಅಶೋಕ್ ಅವರು ಜಿಲ್ಲಾ ಮಟ್ಟದ ಅಧಿಕಾರಿಯಾಗಿರುವುದರಿಂದ ಇಲಾಖೆಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ನೌಕರರಿಗೆ ಆದೇಶ, ಸಲಹೆ, ಸೂಚನೆ ಕೊಡುವ, ಮಾರ್ಗದರ್ಶನ ಮಾಡುವ ಹೆಸರಿನಲ್ಲಿ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ದೂರಲಾಗಿದೆ.

ಡಾ.ಅಶೋಕ್ ಅವರು ಕಳೆದ ಕೆಲವು ಸಮಯಗಳಿಂದ ಈ ರೀತಿಯ ನೀಚ ಕೃತ್ಯವನ್ನು ನಡೆಸುತ್ತಿದ್ದರೆನ್ನಲಾಗಿದೆ. ಮೊದ ಮೊದಲಿಗೆ ನೌಕರರು ಇದನ್ನು ಸಹಿಸಿಕೊಳ್ಳುತ್ತಿದ್ದರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಯ ವಿರುದ್ಧ ದೂರು ನೀಡಲು ಹಿಂದೇಟು ಹಾಕುತ್ತಿದ್ದರು. ಆದರೆ, ಡಾ.ಅಶೋಕ್ ಅವರು ತಮ್ಮ ಈ ನೀಚ ಕೃತ್ಯವನ್ನು ದಿನದಿಂದ ದಿನಕ್ಕೆ ಹೆಚ್ಚು ಮಾಡಿದಾಗ ನೊಂದ ಮಹಿಳಾ ನೌಕರರು ಪರಸ್ಪರ ವಿಷಯವನ್ನು ಹಂಚಿಕೊಂಡರು ಮತ್ತು ಅಂತಿಮವಾಗಿ ಮೇಲಾಧಿಕಾರಿಗಳಿಗೆ ಈ ಸಂಬಂಧ ದೂರು ನೀಡಲು ನಿರ್ಧರಿಸಿದರು.

ಸಂತ್ರಸ್ತ ಮಹಿಳಾ ನೌಕರರು ನೀಡಿದ ದೂರಿನ ಆಧಾರದಲ್ಲಿ ಜುಲೈ 31ರಂದು ಮಂಗಳೂರಿನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಆರೋಪಿ ಡಾ.ಅಶೋಕ್ ಹಾಗೂ ಸಂತ್ರಸ್ತ ಮಹಿಳಾ ನೌಕರರ ವಿಚಾರಣೆ ತನಿಖೆ ನಡೆಸಿದ್ದು, ಮಹಿಳಾ ನೌಕರರು ನೀಡಿದ ದೂರಿನಲ್ಲಿನ ವಿಷಯಗಳು ಮೇಲ್ನೋಟಕ್ಕೆ ಖಚಿತವಾದವು ಹಾಗೂ ಬಳಿಕ ಡಿಎಚ್ಓ ಅವರು ಈ ಬಗ್ಗೆ ಜಿಲ್ಲಾ ಆಂತರಿಕ ದೂರು ನಿವಾರಣಾ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿಯವರಿಗೆ ತಮ್ಮ ತನಿಖಾ ವರದಿಯನ್ನು ಸಲ್ಲಿಸಿದರು.

ಸಂತ್ರಸ್ತರಿಗೆ, ಮನೆಯವರಿಗೆ ಒತ್ತಡ !

ತಮ್ಮ ವಿರುದ್ಧ ದೂರು ಸಲ್ಲಿಕೆಯಾಗಿ ತನಿಖೆ ಆರಂಭವಾಗುತ್ತಲೇ, ಡಾ.ಅಶೋಕ್ ಅವರು ದೂರುದಾರ ಮಹಿಳೆಯರ ಮನೆಯ ಹಿರಿಯರನ್ನು ಸಂಪರ್ಕಿಸಿ ಅವರ ಕಾಲು ಹಿಡಿದು ದೂರು ಹಿಂಪಡೆಯಬೇಕೆಂದು ಒತ್ತಡ ಹಾಕಿದ, ಅಮಿಷ ಒಡ್ಡಿದ ವಿದ್ಯಾಮಾನಗಳೂ ನಡೆದಿತ್ತು. ಮಾತ್ರವಲ್ಲ, ಕೆಲವು ಮಂದಿ ಡಾ.ಅಶೋಕ್ ಬೆಂಬಲಿಗ ವೈದ್ಯರು ಸಹ ಸಂತ್ರಸ್ತರನ್ನು ಭೇಟಿಯಾಗಿ ಡಾ.ಅಶೋಕ್ ವಿರುದ್ಧದ ದೂರನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಡ ಹೇರಿದ ಘಟನೆಯೂ ನಡೆದಿದೆ. ಆದರೆ, ಸಂತ್ರಸ್ತರು ಯಾರ, ಯಾವುದೇ ರೀತಿಯ ಒತ್ತಡ, ಪ್ರಭಾವ, ಅಮಿಷಗಳಿಗೂ ಬಲಿಯಾಗದೆ ಧೈರ್ಯ ಪ್ರದರ್ಶಿಸಿದ್ದು, ಡಿಎಚ್ಓ ವಿಚಾರಣೆಯ ಸಮಯದಲ್ಲಿ ತಮ್ಮ ಲಿಖಿತ ಹೇಳಿಕೆಯನ್ನೇ ಪುನರುಚ್ಚರಿಸಿದ್ದರು.

ಡಿಎಚ್ಓ ನೀಡಿದ ತನಿಖಾ ವರದಿಯ ಆಧಾರದಲ್ಲಿ ಜಿಲ್ಲಾಧಿಕಾರಿಗಳು ಡಾ.ಅಶೋಕ್ ವಿರುದ್ಧ ಯಾವ ಕ್ರಮ ಜರುಗಿಸಿದ್ದಾರೆ ಎಂಬ ಮಾಹಿತಿ ಇನ್ನಷ್ಟೇ ಲಭಿಸಬೇಕಾಗಿದೆ.

Leave a Reply

Your email address will not be published. Required fields are marked *