Realtime blog statisticsweb statistics
udupibits.in
Breaking News
ಉಡುಪಿ: ಅಂಚೆ ಕಚೇರಿಗಳಲ್ಲಿ ಇಂಡಿಯನ್ ಪೋಸ್ಟಲ್ ಆರ್ಡರ್ ಅಲಭ್ಯತೆ- ಸಮಸ್ಯೆ ಪರಿಹರಿಸಲು ಮಾಹಿತಿ ಹಕ್ಕು ಕಾರ್ಯಕರ್ತರಿಂದ ಪ್ರಧಾನಿಗೆ ಪತ್ರ

ರೆಡ್ ಕ್ರಾಸ್ ನಿಂದ ಹಣ ಸಂಗ್ರಹ: ಕಾಲೇಜು ಮಕ್ಕಳ ದುರುಪಯೋಗಕ್ಕೆ ಅಸಮಾಧಾನ

ಉಡುಪಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಹೆಸರಿನಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ದುರುಪಯೋಗಪಡಿಸಿಕೊಂಡು ಕಳೆದೆರಡು ದಿನಗಳಿಂದ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವ ವಿದ್ಯಾಮಾನ ಉಡುಪಿ ಜಿಲ್ಲೆಯ ವಿವಿಧೆಡೆಗಳಲ್ಲಿ ನಡೆಯುತ್ತಿದ್ದು, ಇದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇರಳ ಮತ್ತು ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಜಲಪ್ರಳಯದಿಂದಾಗಿ ಸಂತ್ರಸ್ತರಾದವರಿಗೆ ನೀಡುವ ಉದ್ಧೇಶದಿಂದ ರೆಡ್ ಕ್ರಾಸ್ ಸಂಸ್ಥೆಯು ನಿಧಿ ಸಂಗ್ರಹ ಕಾರ್ಯವನ್ನು ನಡೆಸುತ್ತಿದೆ. ರೆಡ್ ಕ್ರಾಸ್ ನ ಈ ಕಾರ್ಯಕ್ಕೆ ರೆಡ್ ಕ್ರಾಸ್ ಸಂಸ್ಥೆಯ ಅಧಿಕೃತರು ವಿವಿಧ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎನ್ನಲಾಗಿದೆ.

ಕಾಲೇಜು ತರಗತಿಯ ಅವಧಿಯಲ್ಲಿ ವಿದ್ಯಾರ್ಥಿಗಳನ್ನು ಹಣ ಸಂಗ್ರಹಿಸಲು ಉಪಯೋಗಿಸುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆಯೊಂದಿಗೆ, ಗಣ್ಯರು ಎನ್ನಿಸಿಕೊಂಡವರು ಇರುವ ರೆಡ್ ಕ್ರಾಸ್ ಸಂಸ್ಥೆಯು ತಮ್ಮ ಸಂಸ್ಥೆಯ ಕಾರ್ಯಕ್ರಮವನ್ನು ತಾವೇ ಸ್ವತಹಾ ಬೀದಿಗಿಳಿದು ಮಾಡುವ ಬದಲು ಕಾಲೇಜು ವಿದ್ಯಾರ್ಥಿಗಳನ್ನು ದುರುಪಯೋಗಪಡಿಸಿಕೊಂಡು ಮಾಡುವುದು ಮತ್ತು ಬಳಿಕ ತಾವೇ ಮಾಡಿದ್ದು ಎಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೆಡ್ ಕ್ರಾಸ್ ಸಂಸ್ಥೆಯ ಪ್ರಮುಖರೊಬ್ಬರ ಮೇಲೆ ವಿವಿಧ ಅವ್ಯವಹಾರಗಳ ಆರೋಪಗಳು ಕಳೆದು ಕೆಲವು ವರ್ಷಗಳಿಂದ ಕೇಳಿ ಬರುತ್ತಿದ್ದು, ಇಂಥವರ ನೇತೃತ್ವದಲ್ಲಿ ನಡೆಯುವ ಸಂಸ್ಥೆಗೆ ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರಿಂದ ಸಂಗ್ರಹಿಸಿ ಕೊಡುವ ಲಕ್ಷಾಂತರ ರೂಪಾಯಿಗಳನ್ನು ಸಂಸ್ಥೆಯು ಪ್ರಾಮಾಣಿಕವಾಗಿ ಸದುಪಯೋಗಪಡಿಸಿಕೊಳ್ಳಬಹುದೇ ಎಂಬ ಅನುಮಾನಗಳನ್ನೂ ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

ರೆಡ್ ಕ್ರಾಸ್ ಸಂಸ್ಥೆಯ ಸೂಚನೆಯನ್ನು ಹಿಂದೆ ಮುಂದೆ ಯೋಚಿಸದೆ ಕಾಲೇಜು ಪ್ರಾಂಶುಪಾಲರು ಶಿರಾಸಾವಹಿಸಿಕೊಂಡು ತಮ್ಮ ತಮ್ಮ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮೂಲಕ ಜಾರಿಗೊಳಿಸಲು ಮುಂದಾಗುತ್ತಿರವುದಕ್ಕೆ ಸಮರ್ಥನೆಗಳಿಲ್ಲ ಎಂದು ಸಾರ್ವಜನಿಕರು ತಿಳಿಸಿದ್ದು, ಈ ಬಗ್ಗೆ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ ಕಾಲೇಜು ವಿದ್ಯಾರ್ಥಿಗಳ ದುರುಪಯೋಗವನ್ನು ತಡೆಗಟ್ಟಬೇಕು ಎಂಬ ಮನವಿಯನ್ನು ಸಾರ್ವಜನಿಕರು ಮಾಡಿಕೊಂಡಿದ್ದಾರೆ.

ರೆಡ್ ಕ್ರಾಸ್ ಸಂಸ್ಥೆಯು ವಿದ್ಯಾರ್ಥಿಗಳ ಮೂಲಕ ಸಂಗ್ರಹಿಸಿದ ಹಣದ ವಿವರವನ್ನು ಕೂಡಲೇ ಬಹಿರಂಗಪಡಿಸಬೇಕು ಎಂದು ಸಾರ್ವಜನಿಕರು udupibiots.in ಮೂಲಕ ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *