Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ತುಳು ರಾಜ್ಯ ಹೋರಾಟಕ್ಕೆ ಮುನ್ನುಡಿ ಬರೆದ ತುಳು ಲಿಪಿ ಕಲಿಕಾ ಶಿಕ್ಷಕಿ ವಿದ್ಯಾಶ್ರೀ ಎಸ್.

# ಸತ್ಕಾರ್ಯ ಚಿಂತನೆಯ ತುಡಿತದೊಂದಿಗೆ ಪ್ರೋತ್ಸಾಹ ಮತ್ತು ಆಸಕ್ತಿಯಿದ್ದರೆ ಯಾವುದೇ ಕಾರ್ಯದ ಸಾಧನೆ ಯಶಸ್ವಿಯಾಗಿ ನಡೆಸಬಹುದು. ಇಲ್ಲಿ ಗಂಡು ಹೆಣ್ಣೆಂಬ ಬೇಧವಿಲ್ಲ. ಇಚ್ಛಾ ಶಕ್ತಿ ಮುಖ್ಯ. ಅಂತೆಯೇ ತುಳು ರಾಜ್ಯದ ಹೋರಾಟಕ್ಕೆ ಮುನ್ನುಡಿ ಬರೆದ ಪ್ರಥಮ ಮಹಿಳಾ ಹೋರಾಟಗಾರ್ತಿಯಾಗಿ ಹಿರಿಯ ತುಳುವ ಹೋರಾಟಗಾರರಿಂದ ಪ್ರೀತಿಯಿಂದ ತುಳುವಪ್ಪೆ ಎಂದು ಕರೆಯಿಸಿಕೊಂಡು, ತುಳು ಸಂಸ್ಕ್ರತಿಯ  ಅಭಿಮಾನದೊಂದಿಗೆ ತುಳು ಭಾಷೆಯ ಬಗೆಗಿನ ಅಪಾರ ಆಸಕ್ತಿಯಿಂದ ಅದರ ಲಿಪಿಯ ಬಗೆಗೆ ವಿಶೇಷ ಆಸಕ್ತಿ ವಹಿಸಿ ಅದನ್ನು ಆಸಕ್ತ ಜನರಿಗೆ ಕಲಿಸಬೇಕೆಂಬ ಅಧಮ್ಯ ಉತ್ಸಾಹದಿಂದ ಪ್ರಪ್ರಥಮ ತುಳು ಲಿಪಿ ಕಲಿಕಾ ಶಿಕ್ಷಕಿಯಾಗಿ ಗುರುತಿಸಿಕೊಂಡಿರುವವರೇ ಶ್ರೀಮತಿ ವಿದ್ಯಾಶ್ರೀ ಎಸ್.

ದ.ಕ.ಜಿಲ್ಲೆ ಪುತ್ತೂರು ತಾಲೂಕು  ಪಡುಮಲೆಯ ಲಕ್ಷ್ಮೀನಾರಾಯಣ ರೈ ಹಾಗೂ ಯಶೋದಾ ದಂಪತಿಗಳ ಪ್ರಥಮ ಪುತ್ರಿಯಾಗಿ 1992 ಜೂನ್ 1 ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಬಡಗನ್ನೂರು, ಪದವಿ ಪೂರ್ವ ಶಿಕ್ಷಣವನ್ನು ಕುಂಬ್ರದಲ್ಲಿ, ನಂತರ ಬೆಂಗಳೂರಿನಲ್ಲಿ ಬಿ.ಎಸ್ಸಿ ಇನ್ ಮಲ್ಟಿಮೀಡಿಯ ಟೆಕ್ನೊಲಜೀಸ್ ಪದವಿಯನ್ನು ಪಡೆದರು. ಬಳಿಕ ಉದ್ಯೋಗವನ್ನು ಸೇರಿದರು. ಆದರೆ ತಾಯ್ನಾಡಿನ ಸೆಳೆತ ಅವರನ್ನು ಬಿಡಲಿಲ್ಲ. ಕೆಲಸ ತ್ಯಜಿಸಿದರು. ತುಳು ಭಾಷೆಯ ಮೇಲಿನ ಕಾಳಜಿಯಿಂದ ಡಾ.ಎಸ್.ಆರ್. ವಿಘ್ನರಾಜ್ ಅವರ ಮಾರ್ಗದರ್ಶನದಲ್ಲಿ ತುಳು ಲಿಪಿಯ ಅಧ್ಯಯನ ಹಾಗೂ ತಾಳೆಯೋಲೆಗಳನ್ನು ನಿರರ್ಗಳವಾಗಿ ಓದಲು, ಬರೆಯಲು ಕಲಿತರು.

ತಾನು ಕಲಿತದ್ದನ್ನು ಇತರರಿಗೂ ತಿಳಿಸಬೇಕೆಂಬ ಸದುದ್ದೇಶದಿಂದ ತುಳು ಲಿಪಿಯನ್ನು ಕಲಿಸಲು ಮುಂದಾದರು. ತುಳು ಭಾಷೆಯ ಬಗೆಗೆ ಜನರಲ್ಲಿ ಆಸಕ್ತಿ ಬೆಳೆಸುವಲ್ಲಿ ಇವರ ಶ್ರಮ ಮೆಚ್ಚುವಂತದ್ದು. ಇದಕ್ಕೆ ಸಾಕ್ಷಿ ಎನ್ನುವಂತೆ ಸಾರ್ವಜನಿಕರಿಗಾಗಿ ಮತ್ತು ವಿದ್ಯಾರ್ಥಿಗಳಿಗಾಗಿ ತುಳು ಕಲಿಕಾ ಕಾರ್ಯಾಗಾರಗಳನ್ನು ನಡೆಸಿಕೊಟ್ಟಿರುತ್ತಾರೆ. ಇವರ ಮೊದಲ ತುಳು ಕಲಿಕಾ ತರಗತಿಯು 2013 ಜೂನ್ ತಿಂಗಳಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ ನಡೆದು ತದನಂತರದ ದಿನಗಳಲ್ಲಿ ಮಂಗಳೂರಿನ ಕೆಲವು ಕಾಲೇಜುಗಳಲ್ಲಿ, ಕಾರ್ಕಳ, ಕಾಸರಗೋಡು, ಬದಿಯಡ್ಕ, ಉಪ್ಪಳ, ಮಧೂರು, ಬೆಂಗಳೂರಿನ ಮಲ್ಲೇಶ್ವರಂ, ಚಾಮರಾಜಪೇಟೆ, ರಘುವನಹಳ್ಳಿ ಇತ್ಯಾದಿ ಸ್ಥಳಗಳಲ್ಲಿ ನಡೆಸಿರುತ್ತಾರೆ. ಆಕಾಶವಾಣಿಯ ‘ತುಳುಭಾಷಾ ವೈವಿಧ್ಯೊಲು’ ಎಂಬ ಭಾಷಣದಲ್ಲಿ ತುಳುಭಾಷೆಯ ಸೊಗಡನ್ನು ತುಳುವರ ಮನೆ ಮನದಲ್ಲಿ ಮುಟ್ಟುವಂತೆ ಮಾಡಿದ್ದಾರೆ. ಪ್ರಸ್ತುತ ತುಳು ಕಲಿಕೆಯ ಆಸಕ್ತಿದಾರರಿಗೆ ಸಾಮಾಜಿಕ ಜಾಲತಾಣ, ವಾಟ್ಸ್ಯಾಪ್ ಮೂಲಕವೂ ಕಲಿಸುತ್ತಿದ್ದಾರೆ.

ಸಾಮಾಜಿಕ ಕಳಕಳಿಯ ಇವರು ತನ್ನನ್ನು ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಹಲವಾರು ಯುವಜನ ಮೇಳದಲ್ಲಿ ಭಾಗವಹಿಸಿರುವುದಲ್ಲದೆ, ಶ್ರೀ ದೇಯಿ ಯುವತಿ ಮಂಡಲದ ಮಾಜಿ ಕಾರ್ಯದರ್ಶಿ, ಪಡುಮಲೆ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮಾಜಿ ಜೊತೆ ಕಾರ್ಯದರ್ಶಿಯಾಗಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ 2004 ರಿಂದ 2008-09 ರವರೆಗೆ ಜ್ಞಾನ ವಿಕಾಸ ಸಂಯೋಜಕಿಯಾಗಿ ಕಾರ್ಯನಿರ್ವಹಿಸಿರುತ್ತಾರೆ.

ಇತ್ತೀಚಿಗೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಸ್ವತಂತ್ರ ತುಳುನಾಡು ಪಕ್ಷದ ಪ್ರಥಮ ಮಹಿಳಾ ಅಭ್ಯರ್ಥಿಯಾಗಿ ಚುನಾವಣೆಗೂ ಸ್ಪರ್ಧಿಸಿದ್ದರು. ಇಲ್ಲಿ ಪರಾಭವಗೊಂಡರೂ ಮುಂದೆ ಸಮಾಜ ಸೇವಾ ಕೈಂಕರ್ಯವು ನಿಲ್ಲದು ಎನ್ನುತ್ತಾರೆ.

ಇದರೊಂದಿಗೆ ತುಳು ಭಾಷೆಯ ಬಗೆಗಿನ ಅಧ್ಯಯನ ಅಗಾಧ ಜ್ಞಾನವು ಇವರಿಗಿದೆ. ಹಲವಾರು ಸಂಘಟನೆಗಳ ಸಹಕಾರದೊಂದಿಗೆ ತುಳು ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಹಕ್ಕೊತ್ತಾಯ ಮಾಡಿರುವವರಲ್ಲಿ ಇವರೂ ಓರ್ವರಾಗಿದ್ದಾರೆ. ತುಳುನಾಡ್ ಟ್ರಸ್ಟ್ (ರಿ.) ಇದರ ಟ್ರಸ್ಟಿಯಾಗಿ ಹಾಗೂ ಸಂಚಾಲಕಿಯಾಗಿ ಸಮಾಜಮುಖಿ ಚಿಂತನೆಯ ಕಾರ್ಯಗಳನ್ನು ಹಮ್ಮಿಕೊಂಡಿರುತ್ತಾರೆ. ಇದರೊಂದಿಗೆ ತುಳು ಭಾಷೆಯ ವ್ಯಾಮೋಹ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಯುವಜನತೆಗೆ ತುಳು ಭಾಷೆಯ ಬಗೆಗೆ ಅಭಿಮಾನ ಮೂಡುವಲ್ಲಿ ತುಳು ಲಿಪಿಟ್ ಎನ್ನ ಪುದರ್ ( ತುಳು ಲಿಪಿಯಲ್ಲಿ ನನ್ನ ಹೆಸರು) ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದರು.

ಸಾಹಿತ್ಯದ ಬಗ್ಗೆ ಅಭಿರುಚಿ ಇರುವ ವಿದ್ಯಾಶ್ರೀಯವರು ಕನ್ನಡ, ತುಳು ಭಾಷೆಯಲ್ಲಿ ಕಥೆ, ಕವನ, ನಾಟಕ, ಲೇಖನ ಬರೆಯುತ್ತಿರುತ್ತಾರೆ. ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿರುತ್ತಾರೆ. ಇವರು ಮೊಟ್ಟ ಮೊದಲ ತುಳು ಲಿಪಿಯ ‘ಬರವು ಸರವು’ ಎಂಬ ಅಂತರ್ಜಾಲ ಪತ್ರಿಕೆಯನ್ನು ಆರಂಭಿಸಿರುತ್ತಾರೆ. ತುಳುನಾಡ್ ಟ್ರಸ್ಟ್‌ (ರಿ.) ಇದರ ವತಿಯಿಂದ ‘ನಂದಲ’ ಎಂಬ ದ್ವೈ ಮಾಸಿಕ ಪತ್ರಿಕೆಯ ಸಂಪಾದಕರೂ ಆಗಿದ್ದಾರೆ. ಅಲ್ಲದೆ ಇವರ ನೇತೃತ್ವದಲ್ಲಿ ಇತ್ತೀಚಿಗೆ ಭಾರೀ ಪ್ರಚಾರ ಪಡೆದ ‘ತುಳುವೆರೆನ ಕಾಲಕೊಂದೆ’ ಎಂಬ ತುಳು ಲಿಪಿಯ ಕ್ಯಾಲೆಂಡರ್ ಬಹುಜನರಿಂದ ಖರೀದಿಸಲ್ಪಟ್ಟಿದೆ. ಇದಲ್ಲದೆ ತುಳು ಲಿಪಿ ಬ್ಯಾಗ್, ಸನ್ಮಾನ ಪತ್ರ, ನಾಮಫಲಕ, ಮದುವೆ ಹಾಗೂ ಇತರ ಕಾರ್ಯಕ್ರಮಗಳ ಕರೆಯೋಲೆಯನ್ನು ತುಳು ಲಿಪಿಯಲ್ಲಿ ಮುದ್ರಿಸಿಕೊಡುವ ಕಾರ್ಯವನ್ನು ವಿದ್ಯಾಶ್ರೀಯವರು ಮಾಡುತ್ತಿದ್ದಾರೆ. ನಾಡಿನ ಬರಹಗಾರರು, ಕಲಾಪೋಷಕರು, ಹೋರಾಟಗಾರರು  ಇತ್ಯಾದಿ ವ್ಯಕ್ತಿಗಳ ಒಡನಾಡಿತನ ಇವರನ್ನು ಮತ್ತಷ್ಟು ಸಾಧಿಸುವಲ್ಲಿ ಪ್ರೇರೇಪಿಸಿತು ಎಂದರೆ ತಪ್ಪಾಗಲಾರದು. ಕಳವು ಗಣ್ಯರಿಗೆ ತುಳು ಲಿಪಿಯನ್ನು ಕಲಿಸಿದ ಹೆಮ್ಮೆ ಇವರದು.

ವಿದ್ಯಾಶ್ರೀಯವರ ತುಳು ಭಾಷೆಯ ಸೇವೆಗಾಗಿ ಕರಾವಳಿ ಕಲಾ ಪ್ರತಿಷ್ಠಾನ ಬೆಂಗಳೂರು ಇವರಿಂದ ಸನ್ಮಾನ, ಮುದ್ರಾಡಿಯಲ್ಲಿ ಜರಗಿದ ಅಖಿಲ ಭಾರತ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟ್ರ ಮಟ್ಟದ ಗೌರವ ಪ್ರಶಸ್ತಿಯಾದ  ‘ಕರ್ನಾಟಕ ಸಂಘ ರತ್ನ’ ಪಡೆದಿರುತ್ತಾರೆ. 2017 ರಲ್ಲಿ ಪಿಲಿಕುಳದಲ್ಲಿ ಜರಗಿದ ‘ತುಳುನಾಡೋಚ್ಛಯ’ದಲ್ಲಿ ‘ತುಳುನಾಡೋಚ್ಛಯ ಪ್ರಶಸ್ತಿ’ಗೂ ಪಾತ್ರರಾಗಿರುತ್ತಾರೆ. ತುಳು ಭಾಷೆಗಾಗಿ ಇವರ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಈ ಬಾರಿ ಕರ್ನಾಟಕ ಸರಕಾರದ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆಯನ್ನಾಗಿ ಆಯ್ಕೆ ಮಾಡಿರುತ್ತಾರೆ. ಇದು ಇವರ ಸೇವೆಗೆ ಸಂದ ಗೌರವವಾಗಿದೆ.

ತುಳು ಭಾಷೆಯ ಉಳಿವಿಗಾಗಿ ಇವರ ಶ್ರಮ ಶ್ಲಾಘನೀಯ. ಇವರ ಪರಿಶ್ರಮಕ್ಕೆ ಶಕ್ತಿಯಾಗಿ ಪತಿಯಾದ ಜಿ. ವಿ. ಎಸ್. ಉಳ್ಳಾಲ್ ಸಹಕಾರವಿದೆ. ಆ ಮೂಲಕ ತುಳುವ ಸಿರಿ ವಿದ್ಯಾಶ್ರೀಯವರು ಇತರ ಹೆಣ್ಣು ಮಕ್ಕಳಿಗೂ ಮಾದರಿ. ನಾವೆಲ್ಲರೂ ಒಟ್ಟಾಗಿ ನಮ್ಮ ಮಾತೃ ಭಾಷೆಯನ್ನು ಉಳಿಸುವ ಹೊಣೆ ನಮ್ಮದಾಗಿದೆ. ಆ ಮೂಲಕ ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದ ಸೇರಲು ನಾವೆಲ್ಲ ಸಂಘಟಿತ ಪ್ರಯತ್ನ ಮಾಡೋಣ.

* ದೀಪಕ್ ಕೆ. ಬೀರ, ಪಡುಬಿದ್ರಿ

Leave a Reply

Your email address will not be published. Required fields are marked *