Realtime blog statisticsweb statistics
udupibits.in
Breaking News
ಉಡುಪಿ: ನೌಕರರಿಗೆ ಕಿರುಕುಳ ಆರೋಪ- ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ್ ಐತಾಳ್ ಅಮಾನತಿಗೆ ಶ್ರೀರಾಮ ದಿವಾಣ ಒತ್ತಾಯ

ಸರಕಾರಿ ಆಸ್ಪತ್ರೆ ಖಾಸಗಿಗೆ ಹಸ್ತಾಂತರಿಸದಂತೆ ಸಚಿವರಿಗೆ ಮನವಿ

ಉಡುಪಿ: ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಭಾಗವಾದ, ಹಾಜಿ ಅಬ್ದುಲ್ಲಾ ಸ್ಮಾರಕ ಸರಕಾರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯನ್ನು ಖಾಸಗಿ ಉದ್ಯಮಿಯ ಒಡೆತನದ ಬಿ.ಆರ್.ಸಂಸ್ಥೆಗೆ ಹಸ್ತಾಂತರಿಸಬಾರದು ಎಂದು ಒತ್ತಾಯಿಸಿ ಇಂದು (ಸೆ.29) ಬೆಳಗ್ಗೆ ಉಡುಪಿ ಪ್ರವಾಸಿ ಬಂಗಲೆಯಲ್ಲಿ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಎಸ್. ಪಾಟೀಲ್ ಅವರನ್ನು ಭೇಟಿಯಾದ ಖ್ಯಾತ ಮನೋತಜ್ಙರಾದ ಡಾ.ಪಿ.ವಿ.ಭಂಡಾರಿ ನೇತೃತ್ವದ ನಿಯೋಗ ಮನವಿ ಸಲ್ಲಿಸಿತು.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಉದ್ಧೇಶದಿಂದ ಬೆಂಗಳೂರಿನಿಂದ ವಿಮಾನದಲ್ಲಿ ಬಜಪೆಗೆ ಬಂದು, ಬಜಪೆಯಿಂದ ಉಡುಪಿಗೆ ಕಾರಿನಲ್ಲಿ ಬಂದು ಪ್ರವಾಸಿ ಬಂಗಲೆಯಲ್ಲಿ ತಂಗಿದ್ದ ಸಚಿವರನ್ನು ಡಾ.ಪಿ.ವಿ.ಭಂಡಾರಿ ನೇತೃತ್ವದ ನಿಯೋಗ ಭೇಟಿಯಾಗಿ ಮನವಿ ಸಲ್ಲಿಸಿತ್ತು. ನಿಯೋಗದಲ್ಲಿ ಯೋಗೀಶ್ ಶೇಟ್, ಮನ್ನಾ, ನಾಗರಾಜಮೂರ್ತಿ, ಚಂದ್ರಶೇಖರ ಶೆಟ್ಟಿ ಮೊದಲಾದವರಿದ್ದರು. ಉಡುಪಿ ಕ್ಷೇತ್ರದ ಶಾಸಕರಾದ ಕೆ.ರಘುಪತಿ ಭಟ್ ಹಾಗೂ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಹಾದಾನಿ ಖಾನ್ ಬಹಾದ್ದೂರ್ ಹಾಜಿ ಅಬ್ದುಲ್ಲಾ ಸಾಹೇಬ್ ಅವರು ಬಡವರಿಗೆ ಉಚಿತವಾಗಿ ಚಿಕಿತ್ಸೆ ಲಭ್ಯವಾಗಬೇಕು ಎಂಬ ಸದುದ್ಧೇಶದಿಂದ ಆಸ್ಪತ್ರೆ ನಿರ್ಮಿಸುವ ಸಲುವಾಗಿ ಕೆಲವೊಂದು ನಿರ್ಧಿಷ್ಟ ಶರತ್ತುಗಳೊಂದಿಗೆ ದಾನ ಮಾಡಿದ ಭೂಮಿಯಲ್ಲಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆ ಕಳೆದ ಅನೇಕ ವರ್ಷಗಳಿಂದ ಕಾರ್ಯವೆಸಗುತ್ತಿತ್ತು. ಈ ಆಸ್ಪತ್ರೆಯನ್ನು ಕೋಟಿ ಬೆಲೆ ಬಾಳುವ ಜಮೀನು ಸಹಿತವಾಗಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಬಿ.ಆರ್.ಸಂಸ್ಥೆಗೆ ಹಸ್ತಾಂತರ ಮಾಡಿತ್ತು.

ಈಗಾಗಲೇ 200 ಹಾಸಿಗೆಗಳ ಆಸ್ಪತ್ರೆ ಕಾರ್ಯ ಆರಂಭಿಸಿದ್ದು, ಇದರ ಸಂಪೂರ್ಣ ಹಿಡಿತ ಸರಕಾರದ ವಶದಲ್ಲಿರಬೇಕು ಮತ್ತು ಮುಂದೆ ನಿರ್ಮಿಸಲು ಹೊರಟಿರುವ 400 ಹಾಸಿಗೆಗಳ ಆಸ್ಪತ್ರೆಯಲ್ಲಿಯೂ ಉಚಿತ ಚಿಕಿತ್ಸೆ ಒದಗಿಸಬೇಕು ಹಾಗೂ ಸೆಪ್ಟೆಂಬರ್ 28ರಂದು ಈಗಿರುವ ಮಹಿಳೆಯರ ಆಸ್ಪತ್ರೆಯನ್ನು ವರ್ಗಾಯಿಸಿ  ಆರೋಗ್ಯ ಇಲಾಖೆ ಹೊರಡಿಸಿದ ಆದೇಶವನ್ನು ಹಿಂತೆಗೆದುಕೊಳ್ಳಬೇಕು ಎಂದು ನಿಯೋಗವು ಸಚಿವರನ್ನು ಆಗ್ರಹಿಸಿತು.

ಅಜ್ಜರಕಾಡು ಆಸ್ಪತ್ರೆಗೆ ಭೇಟಿ ಎಂಬ ಪ್ರಹಸನ

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲ ಉದ್ಧೇಶದಿಂದ ಬೆಂಗಳೂರಿನಿಂದ ಉಡುಪಿಗೆ ಆಗಮಿಸಿದ ಸಚಿವ ಶಿವಾನಂದ ಪಾಟೀಲ್ ಅವರು ಅದಕ್ಕೂ ಮೊದಲು ಅಜ್ಜರಕಾಡಿನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದರು. ಖಾಸಗಿ ಕಾರ್ಯಕ್ರಮಕ್ಕೆ ಬಂದು ಹೋಗಲು ತಗಲುವ ವೆಚ್ಚವನ್ನು ಸರಕಾರದ ಕರ್ಚು ವೆಚ್ಚದ ಕಡತಕ್ಕೆ ವರ್ಗಾಯಿಸುವುದಕ್ಕಾಗಿಯೇ ಸಚಿವರು ಅಜ್ಜರಕಾಡು ಆಸ್ಪತ್ರೆಗೆ ಭೇಟಿ ನೀಡಿದರು ಎಂಬ ಸಂಶಯ ಈ ಸಂದರ್ಭದಲ್ಲಿ ವ್ಯಕ್ತವಾಯಿತು.

ಸರಕಾರಿ ಮಕ್ಕಳ ಮತ್ತು ಮಹಿಳೆಯರ ಆಸ್ಪತ್ರೆಯನ್ನು ಖಾಸಗಿ ಉದ್ಯಮಿಗೆ ಹಸ್ತಾಂತರಿಸಿದ ಬಳಿಕ ಖಾಸಗಿ ಉದ್ಯಮಿ ನಡೆಸುತ್ತಿರುವ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ನೂತನ ಆಸ್ಪತ್ರೆಯಲ್ಲಿ ಉತ್ತಮ ರೀತಿಯಲ್ಲಿ ಚಿಕಿತ್ಸೆ ಲಭ್ಯವಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುವ ಕಾರ್ಯ ಸಚಿವರಿಮದ ಆಗಬೇಕಾಗಿತ್ತು. ಆದರೆ, ಸಚಿವರು ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಗೆ ಭೆಟಿ ನೀಡದಿರುವುದು ಅನುಮಾನಕ್ಕೆ ಕಾರಣವಾಯಿತು.

ರೋಗಿಗಳ ವಾರ್ಡ್ ಕಡೆಗೆ ಕಣ್ಣು ಹಾಯಿಸದ ಸಚಿವರು

ಬೆಳಗ್ಗೆ ಗಂಟೆ 10.15ಕ್ಕೆ ಅಜ್ಜರಕಾಡು ಆಸ್ಪತ್ರೆಯ ಒಳಹೊಕ್ಕ ಸಚಿವ ಶಿವಾನಂದ ಪಾಟೀಲರು, 10.30ಕ್ಕೆ ಆಸ್ಪತ್ರೆಯಿಂದ ನಿರ್ಗಮಿಸಿದರು. ಆಶ್ಚರ್ಯವೆಂದರೆ, ಸಚಿವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಬ್ಬರೇ ಒಬ್ಬರನ್ನೂ ಕಂಡು ಮಾತಾಡಿಸುವ ಕನಿಷ್ಟ ಕಾಳಜಿಯನ್ನು ತೋರಿಸಲಿಲ್ಲ. ಬದಲಾಗಿ ಆಸ್ಪತ್ರೆ ಭೇಟಿ ಎಂಬ ಪ್ರಹಸನವನ್ನಷ್ಟೇ ಪ್ರದರ್ಶಿಸಿದರು.

ಅಹವಾಲು ಸಲ್ಲಿಸಲು ಮುಂದಾದ ರೋಗಿಗೆ ತಡೆ

ಆಸ್ಪತ್ರೆಗೆ ಸಚಿವರು ಬಂದಿರುವುದನ್ನು ಗಮನಿಸಿದ ರೋಗಿಯೊಬ್ಬರು ಸಚಿವರ ಮುಂದೆ ರೋಗಿಗಳ ಕಷ್ಟ ಮತ್ತು ತನಗಾಗುತ್ತಿರುವ ಹಿಂಸೆಯನ್ನು ತೋಡಿಕೊಳ್ಳುವ ಸಲುವಾಗಿ ಸಚಿವರ ಹತ್ತಿರಕ್ಕೆ ಪ್ರಯತ್ನಿಸುತ್ತಿರುವಂತೆಯೇ ಇದನ್ನು ಗಮನಿಸಿದ ಆಸ್ಪತ್ರೆಯ ಅಧೀಕ್ಷಕರು ರೋಗಿ ಮುಂದಕ್ಕೆ ಹೋಗುವುದಕ್ಕೆ ತಡೆಯೊಡ್ಡಿ ಹಿಂದಕ್ಕೆ ಕರೆದುಕೊಂಡು ಬಂದು ವಾರ್ಡ್ ಗೆ ಕರೆದೊಯ್ದು ಆಸ್ಪತ್ರೆ ಅಧಿಕೃತರನ್ನು ರಕ್ಷಿಸಿಕೊಂಡ ಪ್ರಸಂಗವೂ ಈ ಸಂದರ್ಭದಲ್ಲಿ ನಡೆಯಿತು.

 

 

 

 

Leave a Reply

Your email address will not be published. Required fields are marked *