Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ನವೆಂಬರ್ 11: ಅಂಕೋಲಾದಲ್ಲಿ ‘ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ’ ಪ್ರದಾನ,

ಉಡುಪಿ: ಉತ್ತರ ಕನ್ನಡ ಜಿಲ್ಲೆ ಅಂಕೋಲಾದ ಡಾ.ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನ (ರಿ) ಕೊಡಮಾಡುವ 2018ನೇ ಪ್ರತಿಷ್ಠಿತ ‘ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ’ಗೆ ಶ್ರೀಮತಿ ಕಾವ್ಯ ಕಡಮೆ ನಾಗರಕಟ್ಟೆ ಅವರ ‘ಜೀನ್ಸ್ ತೊಟ್ಟ ದೇವರು’ ಕವನ ಸಂಕಲನ ಆಯ್ಕೆಯಾಗಿದೆ ಎಂದು ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯದರ್ಶಿ, ಲೇಖಕ, ಪ್ರಕಾಶಕ ವಿಷ್ಣು ನಾಯಕರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಹ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಕಡಮೆಯವರಾದ ಕಾವ್ಯ ಕಡಮೆ ಅವರು ಲೇಖಕಿ ಸುನಂದಾ ಕಡಮೆ ಹಾಗೂ ಕವಿ ಪ್ರಕಾಶ ದಂಪತಿಗಳ ಪುತ್ರಿ. ಪ್ರಸ್ತುತ ಪತಿಯೊಂದಿಗೆ ಅಮೇರಿಕಾದಲ್ಲಿ ನೆಲೆಸಿದ್ದಾರೆ. ಪ್ರಶಸ್ತಿಯು ಪ್ರಶಸ್ತಿ ಫಲಕ, ಸನ್ಮಾನದ ಜೊತೆಗೆ ನಗದು ಹತ್ತು ಸಾವಿರ ರೂಪಾಯಿಗಳನ್ನು ಒಳಗೊಂಡಿದೆ.

ಡಾ.ರಮ್ಜಾನ್ ದರ್ಗಾ, ಡಾ.ಎಚ್.ಎಸ್. ಅನುಪಮಾ ಹಾಗೂ ಸುಬ್ರಾಯ ಮತ್ತಿಹಳ್ಳಿ ಅವರು ಪ್ರಶಸ್ತಿಯ ತೀರ್ಪುಗಾರರಾಗಿದ್ದರು. ಮೂರು ಸುತ್ತಿನ ನಿರ್ಣಯಗಳ ಕೊನೆಯಲ್ಲಿ ಅಂತಿಮ ಸುತ್ತಿನ ಮೂವರು ನಿರ್ಣಾಯಕರ ನಿರ್ಣಯದ ಹಿನ್ನೆಲೆಯಲ್ಲಿ ‘ಜೀನ್ಸ್ ತೊಟ್ಟ ದೇವರು’ ಸಂಕಲನ ಪ್ರಶಸ್ತಿಗೆ ಆಯ್ಕೆಯಾಗಿದೆ. ಇದು ಕಾವ್ಯ ಅವರ ೨ನೇ ಕವನ ಸಂಕಲನವಾಗಿದೆ. ಕಳೆದ ೩೫ ವರ್ಷಗಳಿಂದ ಹಲವು ವಿಧಾಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಡಾ/ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನವು ಪ್ರತಿ ಎರಡು ವರ್ಷಗಳಿಗೊಮ್ಮೆ,ಎರಡು ವರ್ಷಗಳ ಅವಧಿಯಲ್ಲಿ ಪ್ರಥಮ ಮುದ್ರಣದ ಕೃತಿಗಳನ್ನು ಮಾನದಂಡವಾಗಿಟ್ಟುಕೊಂಡು ಈ ಪ್ರಶಸ್ತಿಯನ್ನು ನೀಡುತ್ತಿದೆ.

ನವೆಂಬರ್ 11: ಪ್ರಶಸ್ತಿ ಪ್ರದಾನ

ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 11ರಂದು ಪೂರ್ವಾಹ್ನ 11 ಗಂಟೆಗೆ ಅಂಕೋಲಾದ ಶಾಂತಾದುರ್ಗಾ ದೇವಸ್ಥಾನ ಬಳಿಯ ಗಂಗಾದೇವಿ ತೊರ್ಕೆ ಸಭಾಭವನದಲ್ಲಿ ನಡೆಯಲಿದೆ. ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹಿರಿಯ ನಟ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮೂಸೂರು ರಂಗಾಯಣದ ಮಾಜಿ ನಿರ್ದೇಶಕ ಡಾ.ಬಿ.ವಿ.ರಾಜಾರಾಮ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸುಬ್ರಾಯ ಮತ್ತಿಹಳ್ಳಿ ಕೃತಿ ಪರಿಚಯ ಮಾಡಿಕೊಡಲಿದ್ದಾರೆ. ಪ್ರತಿಷ್ಠಾನದ ಅಧ್ಯಕ್ಷ, ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಅಮ್ಮೆಂಬಳ ಆನಂದ ಅವರು ಉಪಸ್ಥಿತರಿರುವರು.

ಸುಮತೀಂದ್ರ ನಾಡಿಗ, ಪ್ರೊ. ಚಂದ್ರಶೇಖರ ಪಾಟೀಲ, ಡಾ.ಎಚ್.ಎಸ್. ಶಿವಪ್ರಕಾಶ್, ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ. ಜಯಂತ ಕಾಯ್ಕಿಣಿ, ಆನಂದ ಝಂಜರವಾಡ, ಜಿ.ಕೆ.ರವೀಂದ್ರ ಕುಮಾರ, ಚ. ಸರ್ವಮಂಗಳ, ಡಾ. ಎಚ್.ಎಲ್. ಪುಷ್ಟ, ಡಿ.ಬಿ. ರಜಿಯಾ, ಎಂ.ಎಸ್. ಶೇಖರ್, ಡಾ. ಎಚ್.ಎಸ್. ವೆಂಕಟೇಶಮೂರ್ತಿ, ಜರಗನಹಳ್ಳಿ ಶಿವಶಂಕರ, ಆರೀಫ್ ರಾಜಾ, ಜಿ.ಎಸ್. ಅವಧಾನಿ, ಕೆ.ಪಿ. ಮೃತ್ಯುಂಜಯ, ಸುಬ್ಬು ಹೊಲೆಯಾರ, ಶ್ರೀನಿವಾಸ ಉಡುಪ ಹಾಗೂ ಡಾ. ನಾ. ಮೊಗಸಾಲೆ ಇವರುಗಳ ಕವನ ಸಂಕಲನಗಳು ‘ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ’ಗೆ ಪಾತ್ರವಾಗಿದೆ ಎಂದು ವಿಷ್ಣು ನಾಯಕ ಅವರು ತಿಳಿಸಿದ್ದಾರೆ.

‘ಮುಖ್ಯಮಂತ್ರಿ’ ನಾಟಕ

ಸಭಾ ಕಾರ್ಯಕ್ರಮದ ಬಳಿಕ ಖ್ಯಾತ ಚಿತ್ರನಟ ‘ಮುಖ್ಯಮಂತ್ರಿ’ ಚಂದ್ರು ಮುಖ್ಯ ಪಾತ್ರದಲ್ಲಿ ಅಭಿನಯಿಸಲಿರುವ ‘ಮುಖ್ಯಮಂತ್ರಿ’ ನಾಟಕ ಪ್ರದರ್ಶನ ನಡೆಯಲಿದೆ.

 

Leave a Reply

Your email address will not be published. Required fields are marked *