Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮರಳನ್ನು ರಾಷ್ಟ್ರೀಯ ಸಂಪತ್ತೆಂದು ಘೋಷಿಸಿ, ಮರಳುದಂಧೆಗೆ ಕಡಿವಾಣ ಹಾಕಲು ಒತ್ತಾಯ

ಉಡುಪಿ: ಮರಳನ್ನು ನೈಸರ್ಗಿಕ ಸಂಪತ್ತು ಎಂದು ಪರಿಗಣಿಸಿ ಮರಳು ಸಂಗ್ರಹ, ಸಾಗಾಣಿಕೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕಾನೂನು ಕ್ರಮ ಜಾರಿಗೊಳಿಸುವ ಮೂಲಕ ಮರಳು ದಂಧೆಗೆ ಕಡಿವಾಣ ಹಾಕಬೇಕು ಎಂದು ‘ಉಡುಪಿ ಜಿಲ್ಲಾ ಹಿತರಕ್ಷಣಾ ವೇದಿಕೆ’ಯು ಉಡುಪಿ ಜಿಲ್ಲಾಡಳಿತ, ಮುಖ್ಯಮಂತ್ರಿಗಳು, ಗಣಿ ಮತ್ತು ಭೂವಿಜ್ಞಾನ ಸಚಿವರು, ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಅಕ್ಟೋಬರ್ 31ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮೇರಿ ಪ್ರಿಯಾಂಕ ಫ್ರಾನ್ಸಿಸ್ ಅವರನ್ನು ಭೇಟಿಯಾದ ಉಡುಪಿ ಜಿಲ್ಲಾ ಹಿತರಕ್ಷಣಾ ವೇದಿಕೆಯ ನಿಯೋಗ, ಈ ಸಂಬಂಧದ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿತು. ವೇದಿಕೆಯ ಸಂಚಾಲಕರಾದ ಭಾಸ್ಕರ ಶೆಟ್ಟಿ ಕಡೆಕಾರ್, ಪರಿಸರಪರ ಹೋರಾಟಗಾರರಾದ ಪ್ರೇಮಾನಂದ ಕಲ್ಮಾಡಿ, ವಿನಯಚಂದ್ರ ಸಾಸ್ತಾನ, ಸಾಮಾಜಿಕ ಕಾರ್ಯಕರ್ತರಾದ ಶ್ರೀರಾಮ ದಿವಾಣ ಹಾಗೂ ಜನಪರ ಚಿಂತನ ವೇದಿಕೆಯ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ ನಿಯೋಗದಲ್ಲಿದ್ದರು.

ಮನವಿಯ ಪೂರ್ಣ ಪಾಠ

ಮರಳು ನೈಸರ್ಗಿಕ ಸಂಪತ್ತು. ಇದು ಶ್ರೀ ಸಾಮಾನ್ಯ ಬಳಕೆದಾರನ ಮೂಲಭೂತ ವಸತಿ ಸೌಕರ್‍ಯಕ್ಕೆ ಮತ್ತು ಇನ್ನಿತರ ಅವಶ್ಯಕತೆ, ಖಾಸಗಿ, ವಾಣಿಜ್ಯ, ಕೈಗಾರಿಕಾ ಹಾಗೂ ಸರಕಾರಿ ಉದ್ದೇಶದ ಎಲ್ಲಾ ಅಭಿವೃದ್ದಿ ಕಾರ್‍ಯಗಳಿಗೆ ಬೇಕು ಎಂಬುದರಲ್ಲಿ ಎರಡು ಮಾತಿಲ್ಲ.
ಜಿಲ್ಲಾಡಳಿತ ಮರಳನ್ನು ನೈಸರ್ಗಿಕ ಸಂಪತ್ತು ಎಂದು ಪರಿಗಣಿಸಿ ಮರಳು ಸಂಗ್ರಹ, ಸಾಗಾಣಿಕೆ ಮತ್ತು ಮಾರಾಟಕ್ಕೆ ಕಟ್ಟುನಿಟ್ಟಿನ ಕಾನೂನು ಕ್ರಮ ಜಾರಿಗೊಳಿಸುವ ಮೂಲಕ ಮರಳು ದಂಧೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸುತ್ತದೆ. ಅಲ್ಲದೆ ಮರಳುಗಾರಿಕೆ ನೀತಿಯನ್ನುರೂಪಿಸುವ ಸಲುವಾಗಿ ವೇದಿಕೆಯು ಈ ಕೆಳಗಿನ ಸಲಹೆ ಸೂಚನೆಗಳನ್ನು ನೀಡಲು ಬಯಸುತ್ತಿದೆ.

2011ರ ಜನವರಿ 11ರ ಸಿಆರ್‌ಝಡ್ ಅಧಿಸೂಚನೆ ಪ್ರಕಾರ ಮರಳುಗಾರಿಕೆ ನಿಷೇಧಿತ ಚಟುವಟಿಕೆ. ಮರಳುಗಾರಿಕೆಯಿಂದ ಜೀವನ ನಡೆಸುತ್ತಿದ್ದಾರೆಂಬ ಮನವಿಗೆ ಸ್ಪಂದಿಸಿ, ಮರಳು ದಿಬ್ಬಗಳಿದ್ದರೆ ಮಾನವ ಪರಿಶ್ರಮದಿಂದ ತೆರವುಗೊಳಿಸಲು ರಾಜ್ಯದ ಪ್ರಸ್ತಾವನೆ ಮೇರೆಗೆ ಕೇಂದ್ರ ಪರಿಸರ ಇಲಾಖೆ ಸೂಚನೆ ನೀಡಿದೆ.

ಕೇಂದ್ರ ಪರಿಸರ ಇಲಾಖೆ ಸೂಚನೆಯಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ 7 ಸದಸ್ಯರ ಸಮಿತಿ ರಚಿಸಿ ಉಪಗ್ರಹ, ಜಿಪಿಎಸ್ ಆಧರಿಸಿ ಮರಳು ದಿಬ್ಬ ಗುರುತಿಸಿ ಮರಳುಗಾರಿಕೆ ನಡೆಸಲು ಸಿಆರ್‌ಝಡ್ ರಾಜ್ಯ ಪ್ರಾಧಿಕಾರ ಅಧಿಕಾರ ನೀಡಿರುತ್ತದೆ. ಆ ಪ್ರಕಾರ ಜಿಲ್ಲಾಧಿಕಾರಿಯವರು ಜಿಲ್ಲಾ ಮಟ್ಟದ ಸಭೆಯನ್ನು ಸಿಆರ್‌ಝಡ್ ನಿಯಮದಂತೆ ನಡೆಸಿ ಸಭೆಯ ನಡಾವಳಿಯಂತೆ ಮರಳುಗಾರಿಕೆಯನ್ನು ಅನುಷ್ಠಾನ ಮಾಡತಕ್ಕದ್ದು, ಇದು ಅನುಷ್ಠಾನವಾಗದಿದ್ದಲ್ಲಿ ನಿಯಮಾನುಸಾರ ಜಿಲ್ಲಾಧಿಕಾರಿ ನೇತೃತ್ವದ ಏಳು ಜನರ ಸಮಿತಿಯೇ ಕಾನೂನು ಕ್ರಮಕ್ಕೆ ಹೊಣೆಯಾಗಬೇಕಾಗುತ್ತದೆ.

2011ರ ಜೂನ್ 9ರಂದು ಕೇಂದ್ರ ಪರಿಸರ ಸಚಿವಾಲಯವು ಮೀನುಗಾರಿಕಾ ಬೋಟುಗಳಿಗೆ ಸಂಚರಿಸಲು ತೊಂದರೆಯಾದರೆ ಮಾತ್ರ ಅಂತಹ ಮರಳು ದಿಬ್ಬಗಳನ್ನು ತೆರವುಗೊಳಿಸಲು ಸೂಚಿಸಿತು. ಅಧಿಕೃತವಾಗಿ ದಿಬ್ಬಗಳನ್ನು ಎನ್‌ಐಟಿಕೆ ಗುರುತಿಸಬೇಕಾಗಿರುವುದರಿಂದ ಸದ್ಯದ ಕಾನೂನು ಪಾಲಿಸಬೇಕಾದ ಅನಿವಾರ್‍ಯತೆ ಜಿಲ್ಲಾಧಿಕಾರಿಯವರದ್ದು. ಜಿಲ್ಲಾಡಳಿತದ ಮುಖ್ಯಸ್ಥರಾಗಿ ಮತ್ತು ಅದಕ್ಕೆ ಹೊಣೆಗಾರರಾಗಿರುತ್ತಾರೆ. ಈ ಕರ್ತವ್ಯವನ್ನು ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ 7 ಜನರ ಸಮಿತಿ ಸಭೆ ಕರೆದು ಸೂಕ್ತ ನಿರ್ಧಾರ ತೆಗೆದುಕೊಂಡು ಮಾಡತಕ್ಕದ್ದಾಗಿರುವುದರಿಂದ, ಸೂಕ್ತ ಕ್ರಮ ನಿರ್ವಹಿಸದಿದ್ದಲ್ಲಿ ಜಿಲ್ಲಾಧಿಕಾರಿಗಳು ಕಾನೂನು ಕ್ರಮಕ್ಕೆ ಗುರಿಯಾಗಲಿದ್ದಾರೆ.

2017ರ ಫೆಬ್ರವರಿ 27ರಂದು ಮೀನುಗಾರಿಕೆ ದೋಣಿಗಳು ಹೋಗಲು ತೊಂದರೆಯಾದರೆ ಮಾತ್ರ ಮೀನುಗಾರರ ಜೀವನಕ್ಕೆ ಅನುವು ಮಾಡಲು ಅಂತಹ ಮರಳು ದಿಬ್ಬಗಳನ್ನು ತೆರವುಗೊಳಿಸಲು ಲೈಸನ್ಸ್ ನೀಡಬಹುದೆಂದು ರಾಷ್ಟ್ರೀಯ ಹಸಿರು ಪೀಠ ತೀರ್ಪು ನೀಡಿದೆ. ಇದು ಮರಳು ತೆರವುಗೊಳಿಸಲು ವಿನಾ ಮರಳುಗಾರಿಕೆಗಲ್ಲ ಎಂದು ಸ್ಪಷ್ಟಪಡಿಸಿದೆ.

ಆದ್ದರಿಂದ, ಅನಿವಾರ್ಯ ಕಾರಣಕ್ಕಾಗಿ ತೆರವುಗೊಳಿಸಿದ ಮರಳನ್ನು ವಸತಿ ಇನ್ನಿತರ ಉದ್ದೇಶಕ್ಕೆ ಬಳಕೆ ಮಾಡುತ್ತಿರುವ ಕಾರಣದಿಂದ ಮರಳುಗಾರಿಕೆ ಹುಟ್ಟಿಕೊಂಡಿದೆ. ಆದರೆ ಮರಳಿಗೆ ಅಭಿವೃದ್ಧಿಯ ಹೆಸರಿನಲ್ಲಿ ವಿಪರೀತ ಬೇಡಿಕೆ ಇರುವುದರಿಂದ ಸ್ಥಾಪಿತ ಹಿತಾಸಕ್ತಿಗಳು ಇಂದು ಮರಳುಗಾರಿಕೆಯನ್ನು ಅಕ್ರಮವಾಗಿ ನಡೆಸುವ ಕಾರಣದಿಂದ ಮರಳು, ಮರಳು ದಂಧೆಯಾಗಿ ಬಿಟ್ಟಿದೆ. ಆ ಕಾರಣದಿಂದ ಯಾವುದೇ ರಾಜಕೀಯ ಪಕ್ಷಗಳು ಮರಳು ರಾಷ್ಟ್ರೀಯ ಸಂಪತ್ತು, ಅದು ನ್ಯಾಯಯುತವಾಗಿ ಪ್ರತಿಯೊಬ್ಬ ಬಳಕೆದಾರನಿಗೆ ನಿಯಮಾನುಸಾರ ದೊರಕಬೇಕೆಂಬ ಉದ್ಧೇಶದಿಂದ ಜಿಲ್ಲಾಡಳಿತವನ್ನು ಬೆಂಬಲಿಸಬೇಕಾಗಿದೆ.

ಇಂದು ಮರಳು ಉದ್ಯಮವನ್ನು ಬೆಂಬಲಿಸಿ ಜಿಲ್ಲಾಡಳಿತ ಕಾನೂನಾತ್ಮಕವಾಗಿ ಕರ್ತವ್ಯ ನಿರ್ವಹಿಸಲು ಅಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ತಮಗೆ ದತ್ತವಾದ ಅಧಿಕಾರ ಬಳಸಿ ಕಾನೂನು ಪ್ರಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡು ಮರಳುಗಾರಿಕೆ ಉದ್ಯಮ ನಡೆಸುವವರ ಮತ್ತು ಅದಕ್ಕೆ ಸಂಬಂಧಿಸಿದವರ ಹಾಗೂ ಇವರಿಗೆ ಸಂವಿಧಾನದ ಆಶಯದಲ್ಲಿ ರಚಿಸಲ್ಪಟ್ಟ ಕಾನೂನನ್ನು ಪಾಲಿಸದ ಜನ ಪ್ರತಿನಿಧಿಗಳ, ರಾಜಕಾರಣಿಗಳ ಒತ್ತಡಕ್ಕೆ ಮಣಿಯದೆ ಕರ್ತವ್ಯ ನಿರ್ವಹಿಸಬೇಕು. ಈ ಬಗ್ಗೆ ಸರಕಾರಕ್ಕೆ ಕೂಡಾ ವರದಿ ನೀಡಬೇಕು. ಸರಕಾರ ಮಟ್ಟದಲ್ಲಿ ಅಗತ್ಯ ಕಾನೂನು ಸರಳೀಕರಣವಾಗಬೇಕಾದಲ್ಲಿ ಚರ್ಚಿಸಿ ಸೂಕ್ತ ಕಾನೂನು ಮಾರ್ಪಾಡು ಮಾಡಲಿ.

2018ರ ಮೇ 31ರ ವರೆಗೆ ಒಟ್ಟು 608610 ಮೆಟ್ರಿಕ್ ಟನ್ ಮರಳು ತೆಗೆಯಲಾಗಿದೆ ಎಂದು ಜಿಲ್ಲಾಧಿಕಾರಿಯವರು ಪತ್ರಿಕಾ ಹೇಳಿಕೆಯಲ್ಲಿ ಈಗಾಗಲೇ ಉಲ್ಲೇಖ ಮಾಡಿದ್ದಾರೆ. ಆದರೆ ಇದರಿಂದ ಸರಕಾರಕ್ಕೆ ಎಷ್ಟು ಆದಾಯ ಸಂಗ್ರಹಿಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿಲ್ಲ.
2017ರಲ್ಲಿ ಅಕ್ರಮ ಮರಳುಗಾರಿಕೆಯಾಗುತ್ತಿರುವ ಬಗ್ಗೆ ದೂರು ಬಂದಿರುವುದನ್ನು ತಡೆಯಲು ಹೋದ ಜಿಲ್ಲಾಧಿಕಾರಿಯವರ ಮೇಲೆ ಹಲ್ಲೆ ನಡೆದಿದ್ದು, ಆ ಸಂದರ್ಭದಲ್ಲಿಯೂ ಹಲ್ಲೆ ನಡೆಸಿದ ಅಕ್ರಮ ಮರಳು ದಂಧೆಕೋರರ ಮೇಲೆ ಕಾನೂನು ಕ್ರಮ ಜರಗಿಸಬೇಕೆಂದು ನಮ್ಮ ವೇದಿಕೆಯ ಸದಸ್ಯರು ಆಗಿನ ರಾಜ್ಯದ ಮುಖ್ಯಮಂತ್ರಿಯವರಿಗೆ ಲಿಖಿತ ದೂರನ್ನು ವೈಯಕ್ತಿಕ ನೆಲೆಯಲ್ಲಿ ನೀಡಿರುತ್ತಾರೆ. ಆದರೆ ಇಂದು ಮರಳು ದಂಧೆಯನ್ನು ಬೆಂಬಲಿಸಿ ಹೋರಾಟ ನಡೆಯುತ್ತಿರುವುದರಿಂದ ನಾವು ಸಾರ್ವಜನಿಕ ಹಿತಾಸಕ್ತಿಯಡಿಯಲ್ಲಿ ಒಗ್ಗೂಡಿ ‘ಉಡುಪಿ ಜಿಲ್ಲಾ ಹಿತರಕ್ಷಣಾ ವೇದಿಕೆ’ ರಚಿಸಿ ಹೋರಾಟವನ್ನು ಮುಂದುವರಿಸುತ್ತಿದ್ದೇವೆ.

ಅಕ್ರಮ ಮರಳುಗಾರಿಕೆ 10 ವರ್ಷಗಳಲ್ಲಿ ರೂ. 14,500 ಕೋಟಿಯಷ್ಟು ನಡೆದಿದೆಎಂದು ಲೋಕಾಯುಕ್ತರ ವರದಿ ದೃಢಪಡಿಸಿದೆ. ಇದನ್ನು ಬಿಜೆಪಿ ಉಡುಪಿ ಜಿಲ್ಲಾ ಘಟಕದ ವಕ್ತಾರ ಕಟಪಾಡಿ ಶಂಕರ ಪೂಜಾರಿಯವರೇ ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಆದ್ದರಿಂದ ಅಕ್ರಮ ಮರಳುಗಾರಿಕೆ ನಡೆದ ಬಗ್ಗೆ ಸಾಕಷ್ಟು ಪುರಾವೆಗಳು ಇದ್ದರೂ ಸರಕಾರ ಆತ್ಮಾವಲೋಕನ ಮಾಡಿಕೊಂಡು ಒಂದು ಪಕ್ಷದವರು ಮರಳು ದಂಧೆಗೆ ಬೆಂಬಲಿಸಿ ಮಾಡುವ ಸ್ಥಾಪಿತ ಹಿತಾಸಕ್ತಿಗಳ ಕೈವಾಡ ಇರುವ ಹೋರಾಟಕ್ಕೆ ಅಂಕುಶ ಹಾಕುವ ದೃಷ್ಟಿಯಿಂದ ಮರಳುಗಾರಿಕೆ ಬಗ್ಗೆ ಜಿಲ್ಲಾಧಿಕಾರಿಯವರು ಕಾನೂನಾತ್ಮಕವಾಗಿ ತೆಗೆದುಕೊಳ್ಳುತ್ತಿರುವ ಕ್ರಮಗಳಿಗೆ ಸರಕಾರ ಬೆಂಬಲವಾಗಿ ನಿಂತು ಶ್ರೀ ಸಾಮಾನ್ಯನಿಗೂ ಅನುಕೂಲವಾಗುವ ದೃಷ್ಟಿಯಿಂದ ಮರಳು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಿ ಆ ಸಂಪತ್ತನ್ನು ಉಳಿಸಲು ತಜ್ಞರ ವರದಿಯಂತೆ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸುವ ಅಗತ್ಯವಿದೆ.

ಬೇನಾಮಿ ಮರಳುಗಾರಿಕೆ ಪರವಾನಿಗೆಗೆ ಅವಕಾಶ ನೀಡದೆ, ಮರಳುಗಾರಿಕೆಯಲ್ಲಿ ತೊಡಗಿರುವ ಅನುಭವಿ ಕಾರ್ಮಿಕರನ್ನು ಆಯ್ಕೆಮಾಡಿ ಅವರಿಗೆ ಪರವಾನಿಗೆ ನೀಡಬೇಕು. ಇಲ್ಲದಿದ್ದಲ್ಲಿ ಮರಳು ಸಾಗಾಟಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಪರಿಸರದಲ್ಲಿ ವಾಸಿಸುತ್ತಿರುವವರಿಗೆ ಪರವಾನಿಗೆ ನೀಡುವ ಮೂಲಕ ಬೇನಾಮಿ ಮರಳು ದಂಧೆಕೋರ ಉದ್ಯಮಿಗಳಿಗೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇದರಿಂದಾಗಿ ನೈಜ ಕಾರ್ಮಿಕ ಮತ್ತು ಸ್ಥಳೀಯ ನಿವಾಸಿಗಳಿಗೆ ಉದ್ಯೋಗಾವಕಾಶ ನೀಡಿದಂತಾಗುತ್ತದೆ ಮತ್ತು ಮರಳು ತೆರವುಗೊಳಿಸಿ ಸಂಗ್ರಹಿಸುವ ಕಾರ್ಮಿಕರಿಗೆ ಗುರುತು ಚೀಟಿ ನೀಡಿ ಸರಕಾರ ಇತರ ಕಾರ್ಮಿಕರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಜಿಲ್ಲಾಡಳಿತ ನೀಡಬೇಕು. ಕಾರ್ಮಿಕರ ಕಲ್ಯಾಣ ಯೋಜನೆ ಜಾರಿಗೊಳಿಸಲಿ.

ಸಿಆರ್‌ಝಡ್ ಪ್ರದೇಶದಲ್ಲಿ ಮರಳು ಲಭ್ಯತೆಯ ಬಗ್ಗೆ ಎನ್‌ಐಟಿಕೆ ತಜ್ಞರಿಂದ ಆಧುನಿಕ ತಂತ್ರಜ್ಞಾನ ಬಳಸಿ ದಿಬ್ಬಗಳನ್ನು ಗುರುತಿಸಬೇಕು.
ಒಂದೇ ಪ್ರದೇಶದಲ್ಲಿ ಆಳವಾಗಿ ಮರಳು ತೆಗೆಯುವುದರಿಂದ ಜಲಚರಗಳಿಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ, ನದಿ ಹರಿವಿಗೂ ಅಡಚಣೆಯಾಗುವುದರಿಂದ ಮರಳು ಸಂಗ್ರಹ ಮಾಡುವಾಗ ಆಧುನಿಕ ತಂತ್ರಜ್ಞಾನ ಬಳಸುವ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಮೂಲಕ ಪ್ರಾಕೃತಿಕ ವಿಕೋಪ, ಪರಿಸರ ಸಂರಕ್ಷಣೆ ಮಾಡುವ ಹೊಣೆಗಾರಿಕೆ ಜಿಲ್ಲಾಡಳಿತ ವಹಿಸತಕ್ಕದ್ದು.

ಮರಳುಗಾರಿಕೆಯನ್ನು ಬೆಳಿಗ್ಗೆ 6 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ನಿರ್ವಹಿಸಬೇಕು. ಇದನ್ನು ಕಾರ್ಮಿಕರ ಹಿತದೃಷ್ಟಿಯಿಂದ ಕಡ್ಡಾಯಗೊಳಿಸಬೇಕು. ಮರಳುಗಾರಿಕೆಯನ್ನು ಪರಿಸರ ಹಾನಿಯಾಗುವ ದೃಷ್ಟಿಯಿಂದ ಮಾನವ ಶ್ರಮ ಉಪಯೋಗಿಸಿ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಯಂತ್ರ, ಯಾಂತ್ರೀಕೃತ ಬೋಟು ಬಳಸಬಾರದು. ಇದನ್ನು ಉಲ್ಲಂಘಿಸಿದ ಪರ್ಮಿಟ್‌ದಾರನ ಪರವಾನಿಗೆಯನ್ನು ರದ್ದುಪಡಿಸಲು ಕ್ರಮ ತೆಗೆದುಕೊಳ್ಳತಕ್ಕದ್ದು.

ಸೇತುವೆ ಸಹಿತ ಕಟ್ಟಡಗಳ 200 ಮೀ.ನಿಂದ 500 ಮೀ. ವರೆಗಿನ ಪ್ರದೇಶವನ್ನು ಸುರಕ್ಷಿತ ಎಂದು ಘೋಷಿಸಿ ಮರಳುಗಾರಿಕೆ ನಿಷೇಧಿಸಬೇಕು. ಗುರುತಿಸಲಾಗಿರುವ ಮರಳು ಬ್ಲಾಕ್‌ಗಳಿಗೆ ಸ್ಪಷ್ಟ ಗುರುತು ಮಾಡಿ ಅದನ್ನು ಮಾತ್ರ ಹಂಚಿಕೆ ಮಾಡಬೇಕು. ಇಲ್ಲಿಂದ ಸಾಗಿಸುವ ಮರಳು ಲೋಡ್‌ಗಳನ್ನು ದಾಖಲೀಕರಣ ಮಾಡಬೇಕು. ಇದರಿಂದ ಮರಳಿನ ಸ್ಪಷ್ಟ ಲೆಕ್ಕ ಸಿಗಲಿದೆ. ಈ ಎಲ್ಲಾ ಅಂಶಗಳು ವರದಿಯಲ್ಲಿ ಹೇಳುವುದರಿಂದ ಕಟ್ಟುನಿಟ್ಟಾಗಿ ಪಾಲಿಸಿ ಮರಳು ನೀತಿ ಜಾರಿಗೆ ತರಬೇಕು. ಈ ಬಗ್ಗೆ ಪಂಚಾಯತ್ ಮಟ್ಟದಲ್ಲಿ ಕೂಡಾ ಅಧಿಕಾರಿಯನ್ನು ನೇಮಿಸಬಹುದು.

ಸಿಆರ್‌ಝಡ್ ಮತ್ತು ನಾನ್‌ ಸಿಆರ್‌ಝಡ್ ಪ್ರದೇಶದಲ್ಲಿ ಹೊಸದಾಗಿ ಮರಳು ದಿಬ್ಬ/ ಬ್ಲಾಕ್‌ಗಳನ್ನು ಗುರುತಿಸಿ ಅನುಮೋದನೆ ಪಡೆದು ಒಂದೇ ಬಾರಿಗೆ ಸಾರ್ವಜನಿಕರಿಗೆ ಮರಳು ದೊರೆಯುವಂತೆ ಜಿಲ್ಲಾಧಿಕಾರಿಯವರು ಸಮರೋಪಾದಿಯಲ್ಲಿ ಸ್ಥಳೀಯ ಮಟ್ಟದಿಂದ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಬಳಸಿ ಕರ್ತವ್ಯ ನಿರ್ವಹಿಸಬೇಕು.

ಮರಳುಗಾರಿಕೆ ಸಮಿತಿಯವರ ಬೇಡಿಕೆಯಂತೆ ಕಾನೂನು ಸರಳೀಕರಣವಾಗಬೇಕೆಂದು ಆಗ್ರಹಿಸುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸರಕಾರ ಮಟ್ಟದಲ್ಲಿ ಕ್ರಮ ತೆಗೆದುಕೊಳ್ಳಲು ಪತ್ರ ಬರೆದಿರುವುದು ಶ್ಲಾಘನೀಯವಾಗಿದೆ. ಜನಪ್ರತಿನಿಧಿಗಳು, ಕಾರ್ಮಿಕರು, ಮರಳು ಸಾಗಾಟ ಮಾಡುವ ಗುತ್ತಿಗೆದಾರರು ಮರಳುಗಾರಿಕೆ ನೀತಿ ಸರಳೀಕರಣಕ್ಕೆ ಸರಕಾರವನ್ನು ಒತ್ತಾಯಿಸಲು ಕ್ರಮ ತೆಗೆದುಕೊಳ್ಳುವುದರಿಂದ ಸಮಸ್ಯೆ ಶೀಘ್ರ ಪರಿಹಾರವಾಗಲು ಸಾಧ್ಯ.

ಮರಳುಗಾರಿಕೆಯಿಂದ ಸಂಗ್ರಹವಾಗುವ ರಾಯಧನ ಸ್ಥಳೀಯಾಡಳಿತ ಸಂಸ್ಥೆಗೂ ಹಂಚಿಕೆ ಮಾಡಿದಲ್ಲಿ ಸ್ಥಳೀಯಾಡಳಿತ ಸಂಸ್ಥೆಯು ಆರ್ಥಿಕವಾಗಿ ಸಶಕ್ತವಾಗಬಹುದು. ಪರಿಸರ ಸೂಕ್ಷ್ಮ ಪ್ರದೇಶವನ್ನು ಕೇಂದ್ರ ಹಾಗೂ ರಾಜ್ಯ ಸರಕಾರದ ಸುತ್ತೋಲೆಯಂತೆ ತಜ್ಞರ ವರದಿ ಆಧಾರದಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಪರಿಶೀಲಿಸಿ ಗುರುತಿಸಲು ಕ್ರಮಕೈಗೊಳ್ಳಬೇಕು. ಸಿಆರ್‌ಝಡ್ ಮತ್ತು ನಾನ್‌ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಗುರುತಿಸಿದ ಮರಳು ದಿಬ್ಬಗಳ ಪಟ್ಟಿ, ಪರಿಸರ ಸೂಕ್ಷ್ಮ ಪ್ರದೇಶಗಳ ಪಟ್ಟಿ ಹಾಗೂ ನಕಾಶೆಯನ್ನು ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿ ಮತ್ತು ಸ್ಥಳೀಯವಾಗಿ ಕೂಡಾ ಪ್ರಕಟಿಸಬೇಕು.

ಈ ಮೇಲಿನ ಎಲ್ಲಾ ಅಂಶಗಳನ್ನು ಜಿಲ್ಲಾಡಳಿತ ಗಮನಿಸಿ ಜಿಲ್ಲಾದ್ಯಂತ ಮರಳುಗಾರಿಕೆಗೆ ಸಂಬಂಧಿಸಿ ತುರ್ತು ಕ್ರಮ ಕೈಗೊಂಡು ಯಾವುದೇಕಾರಣಕ್ಕೂ ರಾಜಕಾರಣಿಗಳ, ಜನಪ್ರತಿನಿಧಿಗಳ, ಭ್ರಷ್ಟ ಅಧಿಕಾರಿಗಳ ಹಾಗೂ ಮರಳು ದಂಧೆಕೋರ ಉದ್ಯಮಿಗಳ ಒತ್ತಾಯಕ್ಕೆ ಮಣಿಯದೆ ಕಾನೂನಾತ್ಮಕವಾಗಿ ಕ್ರಮ ಜರುಗಿಸಿ ಪ್ರತಿಯೊಬ್ಬ ಶ್ರೀ ಸಾಮಾನ್ಯ ಮರಳು ಬಳಕೆದಾರನಿಗೆ ರಾಷ್ಟ್ರೀಯ ಸಂಪತ್ತು ಮರಳು ಸರಕಾರ ನಿಗಧಿ ಪಡಿಸಿದ ಯೋಗ್ಯ ಬೆಲೆಗೆ ಸಿಗುವಂತಾಗಲಿ. ಕಾನೂನಾತ್ಮಕವಾಗಿ ಮತ್ತು  ಜನಪರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲಾಡಳಿತಕ್ಕೆ ‘ಉಡುಪಿ ಜಿಲ್ಲಾ ಹಿತರಕ್ಷಣಾ ವೇದಿಕೆ’ಯು ಬೆಂಬಲ ನೀಡುತ್ತದೆ.

* ಭಾಸ್ಕರ ಶೆಟ್ಟಿ ಕಡೆಕಾರ್, ಪ್ರೇಮಾನಂದ ಕಲ್ಮಾಡಿ, ವಿನಯಚಂದ್ರ ಸಾಸ್ತಾನ, ಶ್ರೀರಾಮ ದಿವಾಣ, ಪ್ರಕಾಶ್ ಪೂಜಾರಿ.

Leave a Reply

Your email address will not be published. Required fields are marked *